Site icon Vistara News

ವಿಸ್ತಾರ ಸಂಪಾದಕೀಯ | ಸಿದ್ದೇಶ್ವರ ಶ್ರೀಗಳು ಪ್ರವಚನ ಮೂಲಕ ನಮ್ಮೊಂದಿಗೆ ಸದಾ ಇರಲಿದ್ದಾರೆ

“ನಡೆದಾಡುವ ದೇವರುʼʼ ಶ್ರೀ ಸಿದ್ದೇಶ್ವರ ಶ್ರೀಗಳು ದೇಹತ್ಯಾಗ ಮಾಡಿದ್ದಾರೆ. ಸೀದಾ-ಸಾದಾ, ಸರಳ, ಸುಂದರ ಅಧ್ಯಾತ್ಮಿಕ ಜೀವನದ ಮೂಲಕ ಜನಮನದ ಮೇಲೆ ಗಾಢ ಪ್ರಭಾವ ಬೀರಿದ ಅವರು ಉಪನ್ಯಾಸ, ಅಂಕಣ ಮತ್ತು ಕೃತಿಗಳ ಮೂಲಕ ಅಸಂಖ್ಯಾತ ಜನರ ಮನಸ್ಸಿಗೆ ಸಾಂತ್ವನ ನೀಡಿದ ಮಹಾಗುರು.

ಗದುಗಿನ ಶಿವಾನಂದ ಶ್ರೀಗಳ ಪರಂಪರೆಗೆ ಸೇರಿದ ವಿಜಯಪುರದ ಜ್ಞಾನಯೋಗಾಶ್ರಮ ಮುಖ್ಯಸ್ಥರಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಾವಿರಾರು ಹಳ್ಳಿಗಳಲ್ಲಿ ಸಂಚರಿಸಿ ಜ್ಞಾನದಾಸೋಹ ನೀಡಿದವರು. ಭಗವದ್ಗೀತೆ, ಪತಂಜಲಿ ಯೋಗ, ಜಾಬಲಿ, ಕಪಿಲ, ಪರಾಶರಾದಿ ಋಷಿಗಳ ಸಂಹಿತೆಗಳೊಂದಿಗೆ, ವೇದ, ಉಪನಿಷತ್ತು, ಶರಣರ ವಚನಗಳು, ಬೈಬಲ್‌, ಕುರಾನ್‌, ಸಂಸ್ಕೃತ ನಾಟಕಗಳು, ಪಾಶ್ಚಿಮಾತ್ಯ ತತ್ವಜ್ಞಾನಿಗಳು, ವಿಜ್ಞಾನಿಗಳ ಬದುಕಿನ ಅಪರೂಪದ ಘಟನಾವಳಿಗಳನ್ನು ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಸಣ್ಣಪುಟ್ಟ ಕತೆಗಳ ಮೂಲಕ ಪ್ರವಚನ ನೀಡುತ್ತಿದ್ದರು. ವೇದ ಸಾರವನ್ನು ಸೊಗಸಾಗಿ ವಿವರಿಸುತ್ತಿದ್ದರು. ಜ್ಞಾನದಾಸೋಹವೇ ಅವರ ಕಾಯಕವಾಗಿತ್ತು.
ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ ಶರಣ ಪರಂಪರೆಯ ಸ್ವಾಮೀಜಿಗಳಲ್ಲಿ ಅಗ್ರಸ್ಥಾನ ಪಡೆದಿದ್ದರು.

ಅವರ ಪ್ರವಚನಗಳು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿರುತ್ತಿದ್ದವು. ವಚನಗಳನ್ನು, ಸುಭಾಷಿತ, ನೀತಿಕತೆಗಳನ್ನು ಪ್ರಸ್ತುತ ಸಮಾಜದಲ್ಲಿನ ವಾಸ್ತವ ಸಂಗತಿಗಳಿಗೆ ಹೋಲಿಸಿ ಮಾತನಾಡುತ್ತಿದ್ದರು. ಇವರ ಮಾತುಗಳು ಜನಸಾಮಾನ್ಯರಿಗೆ ಮಾತ್ರವಲ್ಲ, ಅಡಳಿತಗಾರರಿಗೆ, ನೀತಿ ನಿರೂಪಕರಿಗೆ ಮಹತ್ವದ್ದಾಗಿದ್ದವು. ಶರಣರ ವಚನಗಳ ಮಹತ್ವದ ಕುರಿತು ಇವರು ಇಂಗ್ಲಿಷ್‌ನಲ್ಲಿ ನೀಡುತ್ತಿದ್ದ ಪ್ರವಚನಗಳು, ದೇಶ-ವಿದೇಶಗಳ ಜನರನ್ನು ಆಕರ್ಷಿಸಿತ್ತು. ವಚನ ಪರಂಪರೆಯ ವಿಸ್ತಾರದ ಹರಿವಿನ ಓಟಕ್ಕೆ ಪೂಜ್ಯ ಶ್ರೀಗಳು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ವಚನಗಳ ಕುರಿತ ಅವರ ಕೃತಿಗಳು ಕನ್ನಡ ಸಾರಸ್ವತ ಲೋಕದ ಬಹುದೊಡ್ಡ ಆಸ್ತಿಯಾಗಿವೆ.

ಹಣ ಮತ್ತು ವಸ್ತುಗಳ ಮೇಲೆ ಆಸೆ ಹುಟ್ಟಬಾರದು ಎಂದು ತಾವು ಧರಿಸುವ ಉಡುಪುಗಳಿಗೆ ಅವರು ಜೇಬು ಕೂಡಾ ಇಟ್ಟುಕೊಂಡಿರುತ್ತಿರಲಿಲ್ಲ. ಅವರಿಗೆ ಆಧ್ಯಾತ್ಮವೆಂಬುದು ಬೋಧನೆಯ ವಸ್ತುವಲ್ಲ. ಸರಳ ಸಹಜ ಬದುಕಿನ ದೈನಂದಿನ ನಡೆಯಾಗಿತ್ತು. ತಾವು ಮೃತ ಪಟ್ಟಮೇಲೆ ತಮ್ಮ ಸ್ಮಾರಕವಿರಬಾರದೆಂದು ವಿಲ್‌ ಬರೆದಿಟ್ಟ ಮಹಾತ್ಮರು.

ಈ ಕಾಲಘಟ್ಟದಲ್ಲಿ ನಾವು ಇಬ್ಬರು ಮಹಾತ್ಮರನ್ನು ಕಳೆದುಕೊಂಡಿದ್ದೇವೆ. ಶತಾಯುಶಿಗಳಾಗಿದ್ದ ಪರಮಪೂಜ್ಯ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಯವರು ಒಬ್ಬರಾದರೆ ಇನ್ನೊಬ್ಬರು ಜ್ಞಾನಯೋಗಾಶ್ರಮ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಇಬ್ಬರೂ ತಮ್ಮ ಸರಳತೆ, ಸಮಾಜದೆಡೆಗಿನ ಪ್ರೀತಿಯಿಂದಾಗಿಯೇ ಅಪಾರ ಭಕ್ತರನ್ನು ಹೊಂದಿದವರು. ಬದುಕಿದ್ದಷ್ಟೂ ದಿನ ಪ್ರತಿ ಕ್ಷಣವೂ ಮನುಕುಲದ ಏಳಿಗೆಗಾಗಿ ಮಿಡಿದವರು.

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಕೇವಲ ತಾವು ಓದಿದ್ದನ್ನು ಸರಳವಾಗಿ ವಿವರಿಸುತ್ತಾರೆ ಎಂಬ ಕಾರಣಕ್ಕಷ್ಟೇ ಅವರ ಪ್ರವಚನಗಳು ಪ್ರಸಿದ್ಧಿಯಾಗಿರಲಿಲ್ಲ. ಅವರಿದ್ದಲ್ಲಿ ದೈವಿಕ ವಾತಾವರಣ ಸೃಷ್ಟಿಯಾಗುತ್ತಿತ್ತು. ಬದುಕಿನ ಜಂಜಾಟದಲ್ಲಿ ಸಿಕ್ಕವರಿಗೆ ಸಾಂತ್ವನವಿರುತ್ತಿತ್ತು. ಕೆಳಕ್ಕೆ ಬಿದ್ದವರನ್ನು ಮೇಲಕ್ಕೆತ್ತಿ, ಬೆಚ್ಚನೆಯ ಅಪ್ಪುಗೆಯಲ್ಲಿ ಕೈಹಿಡಿದು ನಡೆಸುವ ಮಾನವೀಯ ಸಂಬಂಧಗಳಿರುತ್ತಿತ್ತು. ಹೀಗಾಗಿಯೇ ಅವರು ಹೋದಲ್ಲಿ, ಬಂದಲ್ಲಿ ಜನ ಸೇರುತ್ತಿದ್ದರು, ಅವರಿಗೆ ದೇವರ ಸ್ಥಾನವನ್ನೇ ನೀಡಿದ್ದರು.

ಯಾರು ಏನೇ ನೀಡಿದರು ಅದನ್ನೆಲ್ಲಾ ನಯವಾಗಿಯೇ ತಿರಸ್ಕರಿಸುತ್ತಾ ಬಂದಿದ್ದ ಸಿದ್ದೇಶ್ವರ ಶ್ರೀಗಳು ತಮಗೆ ಗೌರವ ಪೂರ್ವಕವಾಗಿ ಸಲ್ಲಿಕೆಯಾಗಿದ್ದ ಪದ್ಮ ಪ್ರಶಸ್ತಿಗಳಿಂದ ಹಿಡಿದು ಎಲ್ಲ ಪ್ರಶಸ್ತಿ-ಪುರಸ್ಕಾರಗಳನ್ನು ನಿರಾಕರಿಸಿದ್ದರು. ಎಲ್ಲವನ್ನು ಬೇಡ ಬೇಡವೆನ್ನುತ್ತಲೇ ಎಲ್ಲರಿಗೂ ಬೇಕಾದವರಾಗಿ, ಸಮಾಜದ ಮಾರ್ಗದರ್ಶಕರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಈ ಹೊತ್ತಿನ ಬಹುದೊಡ್ಡ ಆಧ್ಯಾತ್ಮಿಕ ಸಾಧಕ, ಸಂತ ಎಂದರೆ ತಪ್ಪಾಗಲಾರದು.

“ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು, ಸಾವೆಂಬುದು ಸಯವಲ್ಲ” ಎಂದಿದ್ದರು ಬಸವಣ್ಣನವರು. ಶರಣರಿಗೆ ಸಾವಿಲ್ಲ, ಅವರು ಸಾವಿಗೆ ಹೆದರದವರು. ಎಂದೆಂದಿಗೂ ಶರಣರು ಅಮರರು. ಹೀಗಾಗಿ ಶರಣರು ‘ಮರಣವೇ ಮಾಹಾನವಮಿ’ ಎಂದಿದ್ದಾರೆ. ಹಾಗಾಗಿ ಶ್ರೀಗಳು ನಮ್ಮೊಂದಿಗೆ ಸದಾ ಇರಲಿದ್ದಾರೆ.

ಇದನ್ನೂ ಓದಿ | Siddheshwar Swamiji | ನಡೆದಾಡುವ ದೇವರ ದೇಹಾಂತ್ಯ, ಕಂಬನಿ ಮಿಡಿದ ಪ್ರಧಾನಿ ನರೇಂದ್ರ ಮೋದಿ

Exit mobile version