Site icon Vistara News

Vijayapura News : ಕೇಂದ್ರದಲ್ಲಿ ಬರಲಿದೆಯೇ ಸಮ್ಮಿಶ್ರ ಸರ್ಕಾರ?; ಕತ್ನಳ್ಳಿ ಕಾರ್ಣಿಕದ ಭವಿಷ್ಯ ನುಡಿ ಏನು?

Vijayapura news Kathnalli Karnika Bhavishya

ವಿಜಯಪುರ: ಲೋಕಸಭಾ ಚುನಾವಣೆಯ ಹೊತ್ತಲ್ಲಿ ಕತ್ನಳ್ಳಿ ಕಾರ್ಣಿಕ ಭವಿಷ್ಯ (Kathnalli Karnika Bhavishya) ನುಡಿಯಲಾಗಿದೆ. ಪ್ರತಿ ಯುಗಾದಿ ಜಾತ್ರೆಯಲ್ಲಿ ವಿಜಯಪುರ (vijayapura News) ಜಿಲ್ಲೆಯ ಕತ್ನಳ್ಳಿಯ ಕಾಲಜ್ಞಾನಿ ಚಕ್ರವರ್ತಿ ಸದಾಶಿವ ಅಜ್ಜನವರ ಮಠದಲ್ಲಿ ಭವಿಷ್ಯ ನುಡಿಯಲಾಗುತ್ತದೆ.

ಕತ್ನಳ್ಳಿ ಸದಾಶಿವ ಮಠದ ಶಿವಯ್ಯ ಅಜ್ಜ ಕೆಂಪು ವಸ್ತ್ರ ತೊಟ್ಟು ರಾಜಕೀಯ ಭವಿಷ್ಯ ನುಡಿದಿದ್ದಾರೆ. ಒಗಟಿನ ರೂಪದಲ್ಲಿ ಭವಿಷ್ಯ ನುಡಿದಿರುವ ಅವರು ನಾಲ್ಕು ರೇಸಿ ಬಂಡಿಗಳಿವೆ, ಅವು ಈಗ ಮುಂದೆ ಹೊರಟಿವೆ. ತ್ಯಾಗಿ, ಯೋಗಿ, ಭೋಗಿ, ರೋಗಿ ಈ ಯಾವ ಗಾಡಿಯಲ್ಲಿ ಕುಳಿತು ಸ್ಪರ್ಧೆ ಗೆಲ್ಲುತ್ತೀರಿ ನೋಡಿ ಎಂದಿದ್ದಾರೆ.

ದೈತ್ಯ ಕಂಪನಿ ಗಂಟು ಬಿದ್ದೈತಿ.. ದೈತ್ಯ ಕಂಪನಿ ದೈತ್ಯರ ರಾಜಕೀಯ ಆಳಬೇಕು ಎಂದು ಗಂಟು ಬಿದೈತಿ. ತಮ್ಮ ಕಡೆಯಿಂದ ಆಗದೇ ಹೋದರೆ ಮಿಕ್ಸ್ ಬಾಜಿ (ಸಮ್ಮಿಶ್ರ) ಮಾಡಲು ಗಂಟು ಬಿದ್ದಿದೆ ಎಂದು ಭಾರೀ ಅಚ್ಚರಿಯ ಕಾರ್ಣಿಕ ನುಡಿಯಲಾಗಿದೆ. ಯಾರಿಗೆ ಮತ ಹಾಕುತ್ತೀರಿ ಎಂಬುದು ನಿಮಗೆ ಬಿಟ್ಟಿದ್ದು, ಸರಿಯಾದ ನಿರ್ಧಾರ ಮಾಡಿ ಎಂದಿದ್ದಾರೆ.

ಇದನ್ನೂ ಓದಿ: Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ಮಳೆಗಾಗಿ ಒಂಟಿ ಕಾಲಲ್ಲಿ ನಿಂತ ಪರಮಶಿವ

ಈಗಾಗಲೇ ಬರದಿಂದ ಕಂಗೆಟ್ಟ ಜನರಿಗೆ ಕತ್ನಳ್ಳಿ ಭವಿಷ್ಯದಲ್ಲಿ ಆಘಾತಕಾರಿಯಾಗಿದೆ. ಮಳೆಗಾಗಿ ಶಿವನೇ ಒಂಟಿ ಕಾಲಲ್ಲಿ ತಪಸ್ಸಿಗೆ ನಿಂತಿದ್ದಾನೆ. ನೀರಿಗಾಗಿ ಇನ್ನಷ್ಟು ಪರದಾಟವಿದೆ ಎಂದು ಶಿವಯ್ಯ ಅಜ್ಜ ಸೂಕ್ಷ್ಮವಾಗಿ ಭವಿಷ್ಯ ಬಿಚ್ಚಿಟ್ಟಿದ್ದಾರೆ. ನೀರಿಗಾಗಿ ಈ ಹಿಂದೆ ಯುದ್ಧವೇ ನಡೆಯುತ್ತೆ ಎಂದಿದ್ದೆ. ಈಗ ಸಣ್ಣದಾಗಿ ಶುರುವಾಗಿದೆ. ಮುಂದೆ ಬೇಸಿಗೆ ಬರಲಿದೆ. ಈ ಬೇಸಿಗೆ ಯಾರನ್ನ ಕೂಡಿಸುತ್ತೊ.. ಅಗಲಿಸುತ್ತೋ ನೋಡಬೇಕು. ಮಳೆಗಾಗಿ ಶಿವನೇ ತಪ್ಪಸ್ಸಿಗೆ ನಿಂತಿದ್ದಾನೆ, ಸದ್ಯ ಕಷ್ಟ ಇದೆ, ಆದರೆ ಮುಂದೆ ಮಳೆ ಸಿಗಲಿದೆ ಎಂದಿದ್ದಾರೆ.

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

ಧಾರವಾಡ: ಯುಗಾದಿ ಹಬ್ಬದಂದು (Ugadi 2024) ವಿವಿಧ ಜಿಲ್ಲೆಗಳಲ್ಲಿ ವಿಭಿನ್ನ ರೀತಿಯ ಆಚರಣೆಗಳು ನಡೆಯುತ್ತವೆ. ಧಾರವಾಡದಲ್ಲಿ (Dharvada bombe bhavishya) ಬೊಂಬೆ ಭವಿಷ್ಯದ ಆಚರಣೆ ಮನೆ ಮಾತಾಗಿದೆ. ಇಲ್ಲಿ ನುಡಿಯಲಾಗುವ ಭವಿಷ್ಯದ ಬಗ್ಗೆ ಜನರಿಗೆ ವಿಶೇಷ ಆಸಕ್ತಿಯೂ ಇದೆ. ಅದರಂತೆ ವರ್ಷವಿಡೀ ಭವಿಷ್ಯದ ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತದೆ. ಈ ಬಾರಿ ಕೇಂದ್ರ ಮತ್ತು ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಧಾರವಾಡದ ಗೊಂಬೆ ಭವಿಷ್ಯ ನುಡಿದಿದೆ. ಈ ಪ್ರಕಾರ ಕೇಂದ್ರದಲ್ಲಿ ನರೇಂದ್ರ ಮೋದಿ (Narendhra modi) ಅವರೇ ಈ ಬಾರಿಯೂ ದೇಶದ ಪ್ರಧಾನಮಂತ್ರಿ (Prime minster) ಆಗಲಿದ್ದಾರೆ ಎಂದು ಬೊಂಬೆ ಭವಿಷ್ಯ ಹೇಳಿದೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡ ಹನುಮನಕೊಪ್ಪದಲ್ಲಿ ಈ ಬೊಂಬೆ ಭವಿಷ್ಯ ನಡೆದುಕೊಂಡು ಬಂದಿದೆ. ಕಳೆದ ವರ್ಷ ಗೊಂಬೆ ಭವಿಷ್ಯದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿತ್ತು. ಅದರಂತೆ ರಾಜ್ಯದ ಜನರು ಬಿಜೆಪಿ ಬದಲು ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಸಿಂಹಾಸನ ಏರಿದರು.

ಈ ಗ್ರಾಮದಲ್ಲಿ ಪ್ರತಿ ವರ್ಷವೂ ಯುಗಾದಿ ದಿನ ಭವಿಷ್ಯ ನುಡಿಯಲಾಗುತ್ತದೆ. ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇಲ್ಲಿನ ಭವಿಷ್ಯ ನಿಜವಾಗುತ್ತದೆ ಎಂದೇ ಹೇಳಲಾಗಿದೆ. ಹೀಗಾಗಿ ಈ ವರ್ಷದ ಭವಿಷ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಲೋಕಸಭಾ ಚುನಾವಣೆ ಇರುವುದರಿಂದ ಈ ಬಾರಿ ಯಾರು ಅಧಿಕಾರದ ಪಟ್ಟವನ್ನು ಹಿಡಿಯುತ್ತಾರೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: Gold Rate Today: ಯುಗಾದಿ ದಿನ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ; ಬೆಳ್ಳಿ ದರ ಹೆಚ್ಚಳ ಮುಂದುವರಿಕೆ; ಹೀಗಿದೆ ಇಂದು ಮಾರುಕಟ್ಟೆ

ಯುಗಾದಿ ಅಮವಾಸ್ಯೆಯಂದು ಹಳ್ಳದಲ್ಲಿ ಕಟ್ಟಲಾಗುವ ಫಲದಿಂದ ಮಾರನೆ ದಿನ ಬೆಳಗ್ಗೆ ಅಂದರೆ ಯುಗಾದಿ ಹಬ್ಬದಂದು ಬಂದು ನೋಡಿದಾಗ ರಾಜಕೀಯ, ಮಳೆ, ಬೆಳೆ ಹಾಗೂ ರೈತರ ಭವಿಷ್ಯ ನಿರ್ಧಾರವಾಗಲಿದೆ. ಪ್ರಸಕ್ತ ವರ್ಷ ಕೇಂದ್ರ ಹಾಗೂ ರಾಜ್ಯ ನಾಯಕರ ಬೊಂಬೆಗೆ ಯಾವುದೇ ಪೆಟ್ಟಾಗಿಲ್ಲ. ಇದರಿಂದ ಯಾವುದೇ ಬದಲಾವಣೆ ಇಲ್ಲ ಎಂಬ ಮುನ್ಸೂಚನೆ ನೀಡಿದೆ. ಈಶಾನ್ಯ ದಿಕ್ಕಿಗೆ ಇಡಲಾಗಿದ್ದ ರಾಜಕೀಯ ಮೂರ್ತಿಗೆ ಯಾವುದೇ ಪೆಟ್ಟಾಗಿಲ್ಲ. ಇದರಿಂದ ಯಾವುದೇ ಬದಲಾವಣೆಯಾಗದು ಎಂದು ತಿಳಿದುಬಂದಿದೆ.

ಮುಂಗಾರಿಗೆ ಅಲ್ಪ, ಹಿಂಗಾರಿಗೆ ಮಳೆಯೇ ಇಲ್ಲ

ಇನ್ನು ಗೊಂಬೆ ಭವಿಷ್ಯದಲ್ಲಿ ಈ ವರ್ಷ ಮುಂಗಾರು ಮಳೆ ಅಲ್ಪ ಪ್ರಮಾಣದಲ್ಲಿ ಇರಲಿದೆ. ಹಿಂಗಾರಿಗೆ ಮಳೆಯು ಕೈಕೊಡುವ ಸಾಧ್ಯತೆ ಇದೆ ಎಂದು ಬೊಂಬೆಯು ಮುನ್ಸೂಚನೆ ನೀಡಿದೆ. ಬೆಳೆಗಳಿಗೆ ವರ್ಷಾಂತ್ಯದಲ್ಲಿ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ.

ಏನಿದು ಗೊಂಬೆ ಭವಿಷ್ಯ?

ಯುಗಾದಿಯ ಹಿಂದಿನ ದಿನವಾದ ಅಮವಾಸ್ಯೆಯಂದು ರಾತ್ರಿ ಗೊಂಬೆಗಳ ಪ್ರತಿಷ್ಠಾಪನೆ ನಡೆಯುತ್ತದೆ. ನಾಲ್ಕು ದಿಕ್ಕುಗಳಿಗೂ ನಾಲ್ಕು ಗೊಂಬೆಗಳನ್ನು ಗ್ರಾಮಸ್ಥರು ಪ್ರತಿಷ್ಠಾಪನೆ ಮಾಡುತ್ತಾರೆ. ಗ್ರಾಮದ ಹಳ್ಳದ ದಂಡೆಯಲ್ಲಿ ಈ ಪ್ರತಿಷ್ಠಾಪನೆ ನಡೆಯುತ್ತಿತ್ತು. ಪಾಡ್ಯದ ದಿನ ನಸುಕಿನ ಜಾವ ಈ ಸ್ಥಳಕ್ಕೆ ಬಂದು ಹಿರಿಯರು ಗೊಂಬೆಗಳನ್ನು ಅವಲೋಕಿಸುತ್ತಾರೆ. ಆಯಾ ದಿಕ್ಕಿನ ಗೊಂಬೆಯ ಪರಿಸ್ಥಿತಿ ಆಧರಿಸಿ ರಾಜಕೀಯ ಭವಿಷ್ಯವನ್ನು ನುಡಿಯಲಾಗುತ್ತದೆ.

ಗೊಂಬೆಯ ಅಂಗಾಂಗಗಳಿಗೆ ಧಕ್ಕೆಯಾದರೆ ನಾಯಕತ್ವ ಹೋಗುತ್ತದೆ ಎಂಬುದು ಸಾಮಾನ್ಯ ಭವಿಷ್ಯ. ಈ ಬಾರಿ ರಾಜಕೀಯದಲ್ಲಿ ಗೊಂಬೆಗೆ ಯಾವುದೇ ಧಕ್ಕೆಯಾಗಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂಬ ಭವಿಷ್ಯ ನುಡಿಯಲಾಗಿದೆ. 1936ರಿಂದ ಬೊಂಬೆ ಭವಿಷ್ಯ ನಡೆದುಕೊಂಡ ಬಂದಿದ್ದು, ಅನೇಕ ಭವಿಷ್ಯಗಳು ನಿಜವಾದ ಉದಾಹರಣೆಗಳಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version