Site icon Vistara News

Karnataka Election 2023: ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡ ಪರ ವಿಜಯೇಂದ್ರ ಭರ್ಜರಿ ಪ್ರಚಾರ; ವರುಣ ಕ್ಷೇತ್ರದ ಬಗ್ಗೆ ಮೌನ

Vijayendra campaigns for Narayana Gowda in KR Pet, Silence on Varuna constituency

ಮಂಡ್ಯ: ಕೆ.ಆರ್.ಪೇಟೆಯಲ್ಲಿ 2019ರ ಉಪ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅರಳಿಸಲು ಅಖಾಡಕ್ಕೆ ಧುಮುಕಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಹೊರವಲಯದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ವಿಜಯೇಂದ್ರ ಭಾಗವಹಿಸಿದ್ದರು. ಅವರಿಗೆ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ, ಸೇಬಿನ‌ ಹಾರ ಹಾಕಿ ಭರ್ಜರಿ ಸ್ವಾಗತ ಕೋರಿದ್ದಾರೆ.

ಸಮಾವೇಶದಲ್ಲಿ ಬಿ.ವೈ. ವಿಜಯೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ ಕೆ.ಆರ್.ಪೇಟೆ ಮೂಲಕ ಬಿಜೆಪಿ ವಿಜಯ ಪತಾಕೆ ಹಾರಿಸಲಾಗಿತ್ತು. ಆ ವಿಜಯ ಪತಾಕೆ ಈ ಬಾರಿಯೂ ಮುಂದುವರಿಯಲಿದೆ. ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಬಿಜೆಪಿ ಜಗತ್ತಿನಲ್ಲೇ ಅತಿದೊಡ್ಡ ಪಕ್ಷವಾಗಿದೆ. ಕಾರ್ಯಕರ್ತರು ನಮ್ಮ ಪಕ್ಷದ ಶಕ್ತಿಯಾಗಿದ್ದು,
ಈ ಬಾರಿ ಹೆಚ್ಚು ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಅಭ್ಯರ್ಥಿಗಳ ಪಟ್ಟಿಯಲ್ಲಿ ಹಿರಿಯರನ್ನು ಕೈ ಬಿಟ್ಟಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪಕ್ಷದ ಹಿರಿಯರು ಎಲ್ಲ ರೀತಿಯಲ್ಲೂ ಚಿಂತನೆ ಮಾಡಿಯೇ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರಲಿದೆ. ಹಿರಿಯರು ಎಲ್ಲ ಅಸಮಾಧಾನಿತರ ಜತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Karnataka Election: ಪಕ್ಷ ಬಿಟ್ಟಿದ್ದು ದುಃಖವಾಗಿದೆ ಎಂದ ಸಿಎಂ ಬೊಮ್ಮಾಯಿ; ನಾನೇನು ಕಣ್ಣೀರು ಒರೆಸಲೇ ಎಂದ ಲಕ್ಷ್ಮಣ ಸವದಿ

ಇದನ್ನೂ ಓದಿ | Karnataka Election: ಪಕ್ಷ ಬಿಟ್ಟಿದ್ದು ದುಃಖವಾಗಿದೆ ಎಂದ ಸಿಎಂ ಬೊಮ್ಮಾಯಿ; ನಾನೇನು ಕಣ್ಣೀರು ಒರೆಸಲೇ ಎಂದ ಲಕ್ಷ್ಮಣ ಸವದಿ

ಪಕ್ಷ ನಿರ್ಧಾರ ಮಾಡಿದರೆ ವರುಣದಲ್ಲಿ ಪ್ರಚಾರ ಮಾಡುವೆ

ವಿ. ಸೋಮಣ್ಣ ಎರಡು‌ ಕ್ಷೇತ್ರದಲ್ಲಿ ಚುನಾವಣೆಗೆ ಒಲ್ಲದ ಮನಸ್ಸಿನಿಂದ‌ ನಿಂತಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿರುವ ವಿಜಯೇಂದ್ರ, ಬೇರೆ ಪ್ರಶ್ನೆ ಇದ್ದರೆ ಕೇಳಣ್ಣ, ಪಕ್ಷ ನಿರ್ಧಾರ ಮಾಡಿ ಹೇಳಿದರೆ, ಯಾವ ಕ್ಷೇತ್ರಕ್ಕೆ ಬೇಕಾದರೂ ಹೋಗಿ ಚುನಾವಣಾ ಪ್ರಚಾರ ಮಾಡುತ್ತೇನೆ. ರಾಜ್ಯಾದ್ಯಂತ ಎಷ್ಟು ಕ್ಷೇತ್ರ ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

2018 ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಳಿಕ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಆದರೆ, ಇತ್ತೀಚೆಗೆ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ನಾರಾಯಣಗೌಡ ತಳ್ಳಿಹಾಕಿದ್ದರು.

ಇದನ್ನೂ ಓದಿ | BJP Karnataka: ಬಿ.ಎಲ್‌. ಸಂತೋಷ್‌ ಬಗ್ಗೆ ಗೌರವವಿದೆ ಎಂದ ಲಕ್ಷ್ಮಣ ಸವದಿ: ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮತ್ತೆ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಕೆ.ಸಿ.ನಾರಾಯಣಗೌಡಗೆ ಟಿಕೆಟ್‌ ನೀಡಲಾಗಿದೆ. ಹೀಗಾಗಿ ಅವರು ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಲು ಕಸರತ್ತು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ಸಮಾವೇಶ, ಸಭೆಗಳನ್ನು ನಡೆಸುತ್ತಿದ್ದು, ಈಗ ಬಿ.ವೈ. ವಿಜಯೇಂದ್ರ ಅವರನ್ನು ಕರೆಸಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

Exit mobile version