ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಶಿಕಾರಿಪುರ ಹಾಗೂ ವರುಣ ಕ್ಷೇತ್ರಗಳ ಜತೆಗೆ ಮತ್ತೊಂದು ಕ್ಷೇತ್ರವನ್ನು ಹುಡುಕುತ್ತಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಹೇಳುವ ಮೂಲಕ ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರವನ್ನು ಹೊರಹಾಕಿದ್ದಾರೆ. ಇವರ ಈ ಹೇಳಿಕೆ ರಾಜ್ಯ ಬಿಜೆಪಿ ಸೇರಿದಂತೆ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಮಾಚಹಳ್ಳಿ ಗ್ರಾಮದಲ್ಲಿ ಶಿವಕುಮಾರ ಸ್ವಾಮೀಜಿ ಪುತ್ಥಳಿಯನ್ನು ಉದ್ಫಾಟಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ತಮ್ಮ ಕ್ಷೇತ್ರ ಹುಡುಕಾಟದ ಬಗ್ಗೆ ಪ್ರಸ್ತಾಪ ಮಾಡಿದರು. ತಾವು ಶಿಕಾರಿಪುರ, ವರುಣ ಸೇರಿದಂತೆ ಇನ್ನೂ ಒಂದು ಕ್ಷೇತ್ರವನ್ನು ಹುಡುಕುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ತಮ್ಮನ್ನು ಉಸ್ತುವಾರಿಯನ್ನಾಗಿಸೋದು ಪಕ್ಷದ ನಿರ್ಧಾರವಾಗಿರುತ್ತದೆ. ಆದರೆ ಪಕ್ಷದ ಎಲ್ಲ ಕಾರ್ಯಕರ್ತರು ಯೋಧರಂತೆ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಿ ಹೆಚ್ಚು ಶಾಸಕರನ್ನು ಈ ಭಾಗದಲ್ಲಿ ಆಯ್ಕೆ ಮಾಡಲು ಹುಮ್ಮಸ್ಸಿನಿಂದ ಇದ್ದಾರೆ. ಕೆ.ಆರ್. ಪೇಟೆಯಲ್ಲಿ ಗೆದ್ದಾಗಲೇ ಜಿಲ್ಲೆಯು ಜೆಡಿಎಸ್ ಭದ್ರಕೋಟೆ ಅಲ್ಲ ಎಂಬುದನ್ನು ತೋರಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Karnataka Election : ನಡ್ಡಾ ಕೈಯಲ್ಲಿ ವೈಯಕ್ತಿಕ ಕೈಪಿಡಿ ಬಿಡುಗಡೆ ಮಾಡಿಸಿಕೊಂಡ ಸುಕುಮಾರ ಶೆಟ್ಟಿ; ಅರುಣ್ ಸಿಂಗ್ ತರಾಟೆ
ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಿಂತ ಹೆಚ್ಚು ಸ್ಥಾನ ಗೆಲ್ಲುವಂತೆ ಗುರಿ ಇಟ್ಟುಕೊಂಡಿದ್ದೇವೆ. ಜಿಲ್ಲೆಯ ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಧಿಕ್ಕರಿಸಿದ್ದಾರೆ. ಹಾಗಾಗಿ ನಾವು ಜಿಲ್ಲೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದೇವೆ. ಇಂದು ಶಿವಕುಮಾರ ಮಹಾಸ್ವಾಮಿಗಳ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ನಾಳೆ (ಫೆ. ೨೧) ಮಂಡ್ಯದಲ್ಲಿ ಯುವ ಸಮಾವೇಶ ನಡೆಯುತ್ತಿದೆ. ಈ ರೀತಿಯ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜನೆ ಮಾಡಲಾಗಿದೆ. ಮಂಡ್ಯದಿಂದಲೇ ಇದು ಪ್ರಾರಂಭವಾಗುತ್ತಿದೆ. ಕೆ.ಆರ್. ಪೇಟೆಯಲ್ಲಿ ಜನ ಆಶೀರ್ವಾದ ಮಾಡಿದಾಗಲೇ ಜನ ಎರಡೂ ಪಕ್ಷವನ್ನು ಧಿಕ್ಕರಿಸಿದ್ದಾರೆ ಎಂದು ತಿಳಿಸಿದರು.
ನನಗೆ ರಾಜಕೀಯ ಸ್ಥಾನಕ್ಕಿಂತ ಜನರು ಹೃದಯದಲ್ಲಿ ಕೊಡುವ ಸ್ಥಾನ ಶ್ರೇಷ್ಠ. ತಂದೆಯ ರಾಜಕೀಯ ಜೀವನದಿಂದ ನಾನು ಸಾಕಷ್ಟು ತಿಳಿದಿದ್ದೇನೆ. ರಾಜಕೀಯದಲ್ಲಿ ಸಾಧನೆಗೆ ತಾಯಂದಿರ ಆಶೀರ್ವಾದ ಮುಖ್ಯ. ಗ್ರಾಮದಲ್ಲಿ ಪರಮ ಪೂಜ್ಯರ ಪ್ರತಿಮೆ ಅನಾವರಣ ನನ್ನ ಕೈಯಲ್ಲಿ ಆಗಿದ್ದು ನನ್ನ ಪುಣ್ಯ ಎಂದು ವಿಜಯೇಂದ್ರ ಹೇಳಿದರು.
ನನ್ನ ತಂದೆಯ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ. ರೈತರ ಬಗ್ಗೆ ಅವರಿಗೆ ಕಳಕಳಿ ಇದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಲ್ಲದೆ, ಅವರಿಗೇ ಪ್ರತ್ಯೇಕ ಬಜೆಟ್ ಕೊಟ್ಟಿದ್ದರು. ರಾಜ್ಯದ ಅಭಿವೃದ್ಧಿಗಾಗಿ ಬಿಎಸ್‌ವೈ ಸಿಎಂ ಆಗಬೇಕು ಎಂಬ ಕನಸಿನೊಂದಿಗೆ, ಅಭಿವೃದ್ಧಿ ಪಥದಲ್ಲಿ ರಾಜ್ಯ ಸಾಗಬೇಕು ಎಂಬ ನಿಟ್ಟಿನಲ್ಲಿ ನಾರಾಯಣಗೌಡ ಅವರು ರಾಜೀನಾಮೆ ಕೊಟ್ಟರು. ಇನ್ನು ನಿಮ್ಮ ಕ್ಷೇತ್ರದ ಮುಖಂಡ ಡಾ.ಇಂದ್ರೇಶ್ ಒಳ್ಳೆಯ ಸಮಾಜ ಸೇವಕರಾಗಿದ್ದಾರೆ. ಇಂತಹವರ ಮೇಲೆ ಕ್ಷೇತ್ರದ ಜನರ ಆಶೀರ್ವಾದ ಸದಾ ಇರಲಿ ಎಂದು ವಿಜಯೇಂದ್ರ ಹೇಳಿದರು.
ಸಚಿವ ನಾರಾಯಣಗೌಡ ಹಾಗೂ ಮೇಲುಕೋಟೆ ಬಿಜೆಪಿ ಮುಖಂಡ ಡಾ.ಇಂದ್ರೇಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಮಾಚಹಳ್ಳಿಯ ಸ್ವಾಮಿ ಎಂಬುವವರಿಂದ ಹಳ್ಳಿಕಾರ್ ತಳಿಯ ಗೂಳಿಯನ್ನು ಇದೇ ವೇಳೆ ವಿಜಯೇಂದ್ರ ಅವರಿಗೆ ಕೊಡುಗೆಯಾಗಿ ನೀಡಲಾಯಿತು.
ಇದನ್ನೂ ಓದಿ: ನಾನೇ ಪೂಜೆ ಮಾಡುತ್ತೇನೆಂದ ಅರ್ಚಕನಿಗೆ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು; ಏನಿದು ಬಸವಣ್ಣ ದೇವಸ್ಥಾನ ವಿವಾದ?
ಸಚಿವ ನಾರಾಯಣಗೌಡ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ನಾನು ಏಳೇಳು ಕೆಜಿ ಕಡಿಮೆ ಆಗುತ್ತಿದ್ದೆ. ಆದರೆ ನನ್ನ ಚುನಾವಣೆಯಲ್ಲಿ ಎರಡು ಕೆಜಿಯೂ ಕಡಿಮೆಯಾಗಲಿಲ್ಲ. ನಮ್ಮ ಜಿಲ್ಲೆಯವರು ಸಿಎಂ ಆಗುತ್ತಾರೆ ಎಂಬುದಕ್ಕೆ ನಾನು ಮನಃಪೂರ್ವಕವಾಗಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದೆ. ನನ್ನನ್ನು ಗೆಲ್ಲಿಸಲು ವಿಜಯೇಂದ್ರ ಅವರು ಎರಡು ತಿಂಗಳು ತಂತ್ರ ಹೂಡಿದ್ದರು. ಅವರು ಚುನಾವಣೆ ಉಸ್ತುವಾರಿ ಹೊತ್ತಿದ್ದರಿಂದ ನನ್ನ ತೂಕ ಕಡಿಮೆಯಾಗಲಿಲ್ಲ. ಎಲ್ಲ ಜವಾಬ್ದಾರಿ ಅವರ ಮೇಲೆಯೇ ಇತ್ತು ಎಂದು ಹೇಳಿದರು.