Site icon Vistara News

Karnataka Election 2023: ತುಮಕೂರಲ್ಲಿ ವಿಜಯೇಂದ್ರ, ಪರಮೇಶ್ವರ್‌ ಭೇಟಿ; ಪರಂ ಆಶೀರ್ವಾದ ಪಡೆದ ಬಿಎಸ್‌ವೈ ಪುತ್ರ

Vijayendra Parameshwara meet in Tumakuru BSY son receives Parameshara blessings Karnataka Election 2023 updates

ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗೆ ಗರಿಗೆದರುತ್ತಿವೆ. ಟಿಕೆಟ್‌ ಘೋಷಣೆ, ಟಿಕೆಟ್‌ ವಂಚಿತರಿಂದ ಭಿನ್ನಮತ, ಪಕ್ಷಾಂತರ ಹೀಗೆ ನಾನಾ ರೀತಿಯ ರಾಜಕೀಯ ನಡೆಗಳನ್ನು ಕಾಣಬಹುದಾಗಿದೆ. ಇದರ ನಡುವೆ ವಿರೋಧಿ ಪಕ್ಷಗಳ ನಾಯಕರನ್ನು ಚುನಾವಣೆ ವೇಳೆ ಬದ್ಧ ವೈರಿಯಂತೆಯೇ ನೋಡಲಾಗುತ್ತದೆ. ಈ ಎಲ್ಲದರ ನಡುವೆ ಅಪರೂಪದ ಘಳಿಗೆಗೆ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಎಡೆಯೂರು ಸಾಕ್ಷಿಯಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕಾಂಗ್ರೆಸ್‌ ಮುಖಂಡ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ಭೇಟಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಚಿವ ನಾರಾಯಣ ಗೌಡ ಅವರ ಪರ ಪ್ರಚಾರ ನಡೆಸಿ, ಅಲ್ಲಿಂದ ತೆರಳಿದ ಬಿ.ವೈ. ವಿಜಯೇಂದ್ರ ಅವರು ತುಮಕೂರಿನ ಕಡೆಗೆ ಹೊರಟಿದ್ದರು. ಅಲ್ಲದೆ, ಎಡೆಯೂರಿಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ದೊರಕಿತ್ತು. ಈ ವಿಷಯ ತಿಳಿದ ಡಾ. ಜಿ. ಪರಮೇಶ್ವರ್ ಅವರು ಎಡೆಯೂರಿಗೆ ಬಂದಿದ್ದಾರೆ ಎನ್ನಲಾಗಿದೆ.

ಆಪ್ತ ಭೇಟಿ, ಸಿದ್ಧದಲಿಂಗೇಶ್ವರನಿಗೆ ಪೂಜೆ

ಎಡೆಯೂರು ಸಿದ್ಧಲಿಂಗೇಶ್ವರ ದೇವರ ಸನ್ನಿಧಿಗೆ ಬಿ.ವೈ. ವಿಜಯೇಂದ್ರ ಆಗಮಿಸಿದ್ದರು. ಆಗ ಅಲ್ಲಿಗೆ ಬಂದಿದ್ದ ಡಾ. ಜಿ. ಪರಮೇಶ್ವರ್‌ ಅವರು ವಿಜಯೇಂದ್ರ ಅವರನ್ನು ಬರಮಾಡಿಕೊಂಡರು. ಉಭಯ ನಾಯಕರು ಎಡೆಯೂರು ಸಿದ್ಧದಲಿಂಗೇಶ್ವರನಿಗೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Karnataka Elections: ಕೈ ತೊರೆದು ತೆನೆ ಹೊತ್ತ ಚೈತ್ರಾ ಕೊಠಾರಕರ್; ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷೆ

ಕಾಲಿಗೆ ಬಿದ್ದ ವಿಜಯೇಂದ್ರ

ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿದ ನಾಯಕರು, ಕೆಲವು ಕಾಲ ರಾಜಕೀಯ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದರು. ಈ ವೇಳೆ ದೇವಸ್ಥಾನದಲ್ಲಿ ತಮಗೆ ಸನ್ಮಾನಿಸಲು ತಂದ ಶಾಲನ್ನು ಪಡೆದ ಪರಮೇಶ್ವರ್‌ ಅವರು ಅದನ್ನು ವಿಜಯೇಂದ್ರ ಅವರಿಗೆ ಹೊದಿಸಿ ಗೌರವಿಸಿದರು. ಈ ವೇಳೆ ವಿಜಯೇಂದ್ರ ಅವರು ಪರಮೇಶ್ವರ್‌ ಕಾಲಿಗೆ ಬಿದ್ದು ನಮಸ್ಕರಿಸಿದರು. ಆಗ ಪರಮೇಶ್ವರ್‌ ಸಹ ಒಳ್ಳೆಯದಾಗಲಿ ಎಂದು ಆಶೀರ್ವದಿಸುವ ಮೂಲಕ ಶುಭ ಹಾರೈಸಿದರು.

Exit mobile version