ರಾಮನಗರ: ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಅನಧಿಕೃತ ಪ್ರಾರ್ಥನಾಲಯ ನಿರ್ಮಿಸಿ ಮತಾಂತರಕ್ಕೆ ಪ್ರಚೋದನೆ (Religious Conversion) ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ಕಣ್ವ ರಸ್ತೆಯಲ್ಲಿರೋ ಮಿಶ್ರಾ ಫಾಮ್ ಹೌಸ್ ನಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಅಲ್ಲಿಗೆ ಹೋಗಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.
ಕ್ರೈಸ್ತ ಮುಖಂಡ ಡೇವಿಡ್ ಎಂಬವರಿಗೆ ಸೇರಿದ ಫಾರ್ಮ್ ಹೌಸ್ ಇದಾಗಿದ್ದು, ಇಲ್ಲಿ ನಿತ್ಯ ನೂರಾರು ಮಂದಿ ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಫಾರ್ಮ್ ಹೌಸ್ ಮುಂಭಾಗ ಜಮಾಯಿಸಿ ಪ್ರತಿಭಟಿಸಿದರು.
ನೂರಾರು ಮಂದಿಯನ್ನು ಕರೆತಂದು ಸಾಮೂಹಿಕ ಪ್ರಾರ್ಥನೆ ನಡೆಸುತ್ತಿರುವುದರಿಂದ ಪಕ್ಕದ ಶಾಲೆ ಮತ್ತು ನಿವಾಸಿಗಳಿಗೆ ಕಿರಿಕಿರಿ ಆಗುತ್ತದೆ ಎನ್ನುವುದು ಒಂದು ವಾದವಾದರೆ, ಡೇವಿಡ್ ಅವರು ಮತಾಂತರಕ್ಕೆ ಉತ್ತೇಜನ ಕೊಡುತ್ತಿದ್ದಾರೆ ಎನ್ನುವುದು ಇನ್ನೊಂದು ಆರೋಪ. ಹೀಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಕ್ರೈಸ್ತ ಮುಖಂಡನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಫಾರ್ಮ್ ಹೌಸ್ ಮುಂಭಾಗ ಜನರು ಜಮಾಯಿಸಿದ ವೇಳೆ ವಾಗ್ವಾದ ನಡೆದಿದೆ. ಡೇವಿಡ್ ಅವರು ತಾನು ಜನರ ನೋವು, ಸಂಕಟಗಳನ್ನು ಕೇಳಿ ಸಾಂತ್ವನ ಹೇಳುತ್ತಿರುವುದಾಗಿಯೂ, ಈ ಕಾರಣಕ್ಕೆ ಜನ ಬರುತ್ತಿರುವುದಾಗಿಯೂ ಬಂದವರಿಗೆ ಮನವರಿಕೆ ಮಾಡಲು ಯತ್ನಿಸಿದರು. ಆದರೆ, ಜನರ ಆಕ್ಷೇಪ ಕಡಿಮೆಯಾಗಿಲ್ಲ.
ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂಬಂಧ ದೂರು ದಾಖಲಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಇದನ್ನೂ ಓದಿ | Supreme Court | ಮತಾಂತರ ತಡೆಗೆ ಕಠಿಣ ಕ್ರಮ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ