ಬೆಂಗಳೂರು: ವಿಮ್ಸ್ ಐಸಿಯುವಿನಲ್ಲಿ (Vims Bellary) ಕೆಲವು ರೋಗಿಗಳು ಮೃತಪಟ್ಟಿರುವ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ವಾದ-ಪ್ರತಿವಾದಗಳು ದಾಖಲಾಗುತ್ತಿವೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನಡುವೆ ಮಾತಿನ ಸಮರ ನಡೆದಿದೆ. ಈ ಮೂಲಕ ಪ್ರಕರಣ ಮತ್ತಷ್ಟು ಜಟಿಲಗೊಂಡಿದೆ.
ವಿದ್ಯುತ್ ವ್ಯತ್ಯಯದಿಂದ ರೋಗಿಗಳು ಮೃತಪಟ್ಟಿಲ್ಲ ಎಂದು ಸದನದಲ್ಲಿ ಸಚಿವ ಶ್ರೀರಾಮುಲು ಸುಳ್ಳು ಹೇಳಿದ್ದಾರೆ. ಹಾಗಿದ್ದರೆ ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರವನ್ನು ಏಕೆ ಘೋಷಣೆ ಮಾಡಿದರು? ಸಮಿತಿಯನ್ನು ಯಾಕೆ ರಚಿಸಿದರು? ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಲ್ಲದೆ, “ಐವರು ಮೃತಪಟ್ಟಿದ್ದರೂ ಸಚಿವ ಸುಧಾಕರ್ ವಿಮ್ಸ್‌ಗೆ ಯಾಕೆ ಭೇಟಿ ನೀಡಲಿಲ್ಲ” ಎಂದೂ ಕೇಳಿದ್ದಾರೆ. ಅಲ್ಲದೆ, ಸರ್ಕಾರಿ ಪ್ರಾಯೋಜಿತ ಕೊಲೆ ಎಂದೂ ಮೂದಲಿಸಿರುವುದು ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ | Vims Bellary | ಸಚಿವ ಸುಧಾಕರ್ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ; ಸೋಮಶೇಖರ ರೆಡ್ಡಿ ವಾಗ್ದಾಳಿ
ಸಮಿತಿ ವರದಿ ಬಂದ ಮೇಲೆ ಸದನದಲ್ಲಿ ಮಂಡಿಸುವೆ
ವಿಮ್ಸ್ ದುರಂತ ಬಹಳ ನೋವು ತಂದಿದೆ. ಪ್ರಕರಣ ಏನೇ ಇದ್ದರೂ ಸಾವು ಸಾವೇ. ದುರಂತದ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ. ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದೆ. ಸಮಿತಿ ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಯ ಮಾಹಿತಿಯನ್ನಿಟ್ಟುಕೊಂಡು ನಾನು ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಬೆಸ್ಕಾಂನವರ ಅಭಿಪ್ರಾಯವನ್ನೂ ತೆಗೆದುಕೊಳ್ಳುತ್ತಿದ್ದೇವೆ. ಸಮಸ್ಯೆ ಇದ್ದಿದ್ದರಿಂದಲೇ ರೋಗಿಗಳು ವೆಂಟಿಲೇಟರ್‌ನಲ್ಲಿದ್ದರು. ಆದರೆ, ಘಟನೆಗೆ ಇದೇ ಕಾರಣ ಎಂದು ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ. ಸಮಿತಿಯ ವರದಿ ಬಂದ ಮೇಲೆ ಸದನದಲ್ಲಿ ಮಂಡಿಸುತ್ತೇನೆ ಎಂದು ಸುಧಾಕರ್ ತಿಳಿಸಿದರು.
ಸಿದ್ದರಾಮಯ್ಯ ಜವಾಬ್ದಾರಿಯು ಹೇಳಿಕೆ ಕೊಡಲಿ
ನಾಯಕರಾದವರು ಜವಾಬ್ದಾರಿಯಿಂದ ಮಾತಾಡಬೇಕು. ಸಿದ್ದರಾಮಯ್ಯ ಸರ್ಕಾರ ನಡೆಸಿದವರು. ನನ್ನ ಗಮನಕ್ಕೆ ಬಂದ ಕೂಡಲೇ ತನಿಖೆಗೆ ಸೂಚಿಸಿದ್ದೇನೆ. ಮೃತರ ಕುಟುಂಬಕ್ಕೆ ಈಗಾಗಲೇ ಸಿಎಂ ಪರಿಹಾರ ಘೋಷಿಸಿದ್ದಾರೆ. ಮುಂದೆ ಯಾವುದೇ ಆಸ್ಪತ್ರೆಯಲ್ಲಿ ಇಂತಹ ಅವಘಡ ಆಗದಂತೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಸರ್ಕಾರಿ ಪ್ರಾಯೋಜಿತ ಕೊಲೆ ಎಂಬ ಸಿದ್ದರಾಮಯ್ಯ ಹೇಳಿಕೆ ನೋವು ತಂದಿದೆ. ಇದು ಒಬ್ಬ ನಾಯಕರು ಹೇಳುವ ಮಾತಲ್ಲ. 2017ರಲ್ಲಿ ಸಿದ್ದರಾಮಯ್ಯ ಕೆಪಿಎಂಇ ಕಾಯ್ದೆ ತರಲು ಹೊರಟಿದ್ದಾಗ ವೈದ್ಯರು ಮೂರು ದಿನ ಡಿಸ್ಪೆನ್ಸರಿ ಬಂದ್ ಮಾಡಿದ್ದಾಗ ಎಷ್ಟು ಜನ ಸಾವಾಗಿದ್ದರು? ೭೦-೮೦ ಜನರ ಸಾವಾಗಿತ್ತು. ಇದಕ್ಕೆ ಸಿದ್ದರಾಮಯ್ಯ ಜವಾಬ್ದಾರಿ ಅಂತ ನಾನು ಹೇಳಬಹುದಾ? ಸ್ಪೀಕರ್ ಅನುಮತಿ ಕೊಟ್ಟರೆ ಸದನದಲ್ಲಿ ಇದನ್ನು ಪ್ರಸ್ತಾಪ ಮಾಡುತ್ತೇನೆ ಎಂದು ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
ನಾಳೆ ಬಳ್ಳಾರಿಗೆ ಭೇಟಿ ನೀಡುವೆ
ಭಾನುವಾರ (ಸೆ.೧೭) ಬೆಳಗ್ಗೆ ನಾನು ಬಳ್ಳಾರಿಗೆ ಭೇಟಿ ಕೊಡುತ್ತಿದ್ದೇನೆ. ಆಸ್ಪತ್ರೆಗೆ ಭೇಟಿ ಕೊಟ್ಟು ಘಟನೆಗೆ ಏನು ಕಾರಣ ಎಂದು ಮಾಹಿತಿ ಕಲೆಹಾಕುತ್ತೇನೆ. ಇದು ಬಹಳ ಸೂಕ್ಷ್ಮ ವಿಚಾರವಾಗಿದ್ದರಿಂದ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ನಿರ್ದೇಶಕರ ನೇಮಕ ಬಗ್ಗೆ ರೆಡ್ಡಿ ತಿಳಿದುಕೊಳ್ಳಲಿ
ಶಾಸಕ ಸೋಮಶೇಖರ ರೆಡ್ಡಿ ನಿರ್ದೇಶಕರ ನೇಮಕಾತಿ ವಿಚಾರದ ಬಗ್ಗೆ ಮಾತಾಡಿದ್ದಾರೆ. ವಿಮ್ಸ್ ನಿರ್ದೇಶಕರ ನೇಮಕ ನಿಯಮದಂತೆ ಆಗಿದೆ. ಸಮಿತಿಯ ಮೂಲಕ ನಿರ್ದೇಶಕರ ನೇಮಕ ಆಗಲಿದೆ. ಅರ್ಹರನ್ನು ಸಂದರ್ಶನದ ಮೂಲಕ ಸಮಿತಿ ನೇಮಿಸುತ್ತದೆ. ಸರ್ಕಾರದ ನಿಬಂಧನೆಗಳ ಅನ್ವಯ ನೇಮಕ ಆಗುತ್ತದೆ. ನಿರ್ದೇಶಕರನ್ನು ಸುಧಾಕರ್ ನೇಮಕ ಮಾಡಿಲ್ಲ. ಈ ಬಗ್ಗೆ ಬೇಕಿದ್ದರೆ ಆನಂದ್ ಸಿಂಗ್, ಶ್ರೀರಾಮುಲು, ಕರುಣಾಕರ್ ಇದ್ದಾರೆ. ಅವರ ಬಳಿಯೇ ಸೋಮಶೇಖರ ರೆಡ್ಡಿ ಕೇಳಿಕೊಳ್ಳಲಿ. ಅವರು ಜವಾಬ್ದಾರಿಯಿಂದ ಮಾತಾಡಬೇಕಾಗುತ್ತೆ ಎಂದು ಸುಧಾಕರ್ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | Vims Bellary | ಶವಪರೀಕ್ಷೆ ವರದಿ ಪರಿವೀಕ್ಷಣೆ, ಪ್ರತ್ಯೇಕ ವಿಚಾರಣೆ, ಸತತ 9 ತಾಸು ತನಿಖೆ; ಅಸಲಿ ಸತ್ಯವೇನು?