Site icon Vistara News

SBI: ಉಡುಪಿಯ ವಿನಯ್‌ ತೋನ್ಸೆಗೆ ಒಲಿದ ಎಸ್‌ಬಿಐ ಎಂಡಿ ಹುದ್ದೆ

vinay m tonse

ಹೊಸದಿಲ್ಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (State Bank of India – SBI) ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಉಡುಪಿಯ ವಿನಯ್ ಎಂ. ತೋನ್ಸೆ (Vinay M Tonse) ಅವರನ್ನು ಕೇಂದ್ರ ಸರ್ಕಾರ ಸೋಮವಾರ ನೇಮಿಸಿದೆ.

ಇದಕ್ಕೆ ಮೊದಲು, ವಿನಯ್‌ ತೋನ್ಸೆ ಅವರು ಎಸ್‌ಬಿಐನಲ್ಲಿ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸರ್ಕಾರಿ ಸ್ವಾಮ್ಯದ ಎಸ್‌ಬಿಐಯ ಹಿರಿಯ ಹುದ್ದೆಗೆ ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೋ (ಎಫ್ಎಸ್ಐಬಿ) ಇವರ ಹೆಸರನ್ನು ಸೆಪ್ಟೆಂಬರ್‌ನಲ್ಲಿ ಶಿಫಾರಸು ಮಾಡಿದೆ.

FSIB ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ನಿರ್ದೇಶಕರನ್ನು ಶಿಫಾರಸು ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಸ್ವಾಮಿನಾಥನ್ ಜಾನಕಿರಾಮನ್ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಆಗಿ ನೇಮಕಗೊಂಡ ನಂತರ ಈ ಹುದ್ದೆ ತೆರವಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ನಾಲ್ಕು ವ್ಯವಸ್ಥಾಪಕ ನಿರ್ದೇಶಕರು ಮತ್ತು ಒಬ್ಬ ಅಧ್ಯಕ್ಷರು ನಿರ್ವಹಿಸುತ್ತಾರೆ.

ವಿನಯ್ ಅವರ ಅಜ್ಜ ತೋನ್ಸೆ ನಾರಾಯಣ ಅವರು ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದರು. ಕಿನ್ನಿ ಮುಲ್ಕಿ ನಿವಾಸಿ ತಂದೆ ಮುರಳೀಧರ ರಾವ್ ಕಂದಾಯ ಇಲಾಖೆ, ಸಣ್ಣ ಉಳಿತಾಯ ಮತ್ತು ಲಾಟರಿ ಇಲಾಖೆ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಅವರ ತಾಯಿ ಕೃಷ್ಣಾ ಬಾಯಿ. ಬೆಂಗಳೂರಿನ ರಾಜಾಜಿನಗರ, ಇಂದಿರಾ ನಗರದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಸೈಂಟ್‌ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಬಿಕಾಂ, ಸೆಂಟ್ರಲ್ ಕಾಲೇಜಿನಿಂದ ಎಂಕಾಂ ಪದವಿ ಪಡೆದಿದ್ದಾರೆ.

ರಾಜ್ಯ ಮಿನಿ ಒಲಿಂಪಿಕ್ಸ್‌ನಲ್ಲಿ ಬಿಲ್ವಿದ್ಯೆಯಲ್ಲಿ ಚಿನ್ನ, ಬೆಳ್ಳಿ ಪದಕ ಪಡೆದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರ ತಿನಿಧಿಸಿದ್ದಾರೆ. ಅವರು 1988ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಪ್ರೊಬೇಷನರಿ ಅಧಿಕಾರಿಯಾಗಿ ಸೇರಿದರು. ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 30 ವರ್ಷಗಳಿಗೂ ಹೆಚ್ಚು ಕಾಲದ ಅವರ ವೃತ್ತಿಜೀವನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಮುಖ ಕಾರ್ಯಯೋಜನೆಗಳನ್ನು ಮುನ್ನಡೆಸಿದ್ದಾರೆ. ಕಾರ್ಪೊರೇಟ್ ಕ್ರೆಡಿಟ್, ಖಜಾನೆ, ಚಿಲ್ಲರೆ ಮತ್ತು ಅಂತಾರಾಷ್ಟ್ರೀಯ ಬ್ಯಾಂಕಿಂಗ್‌ನಂತಹ ವಾಣಿಜ್ಯ ಬ್ಯಾಂಕಿಂಗ್‌ನ ಅನುಭವ ಹೊಂದಿದ್ದಾರೆ.

ಅವರ ನೇಮಕಾತಿಗೆ ಮೊದಲು, ಎಫ್ಎಸ್ಐಬಿ ಆಗಸ್ಟ್‌ನಲ್ಲಿ ಎಸ್‌ಬಿಐನ ಉನ್ನತ ಹುದ್ದೆಗಾಗಿ 13 ಅಭ್ಯರ್ಥಿಗಳನ್ನು ಸಂದರ್ಶಿಸಿತ್ತು. ಅವರ ಕಾರ್ಯಕ್ಷಮತೆ, ಅವರ ಒಟ್ಟಾರೆ ಅನುಭವ ಮತ್ತು ಅಸ್ತಿತ್ವದಲ್ಲಿರುವ ನಿಯತಾಂಕಗಳನ್ನು ಗಮನದಲ್ಲಿಟ್ಟುಕೊಂಡು, ವಿನಯ್ ಎಂ. ತೋನ್ಸೆ ಅವರನ್ನು ಎಸ್‌ಬಿಐನಲ್ಲಿ ಎಂಡಿ ಹುದ್ದೆಗೆ ಮಂಡಳಿ ಶಿಫಾರಸು ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿಯಿಂದ ಅನುಮೋದನೆ ಪಡೆದ ನಂತರ ನೇಮಕಾತಿಯನ್ನು ದೃಢಪಡಿಸಲಾಗಿದೆ. ಎಫ್ಎಸ್ಐಬಿಯ ನೇತೃತ್ವವನ್ನು ಸಿಬ್ಬಂದಿ ಮತ್ತು ತರಬೇತಿ
ಇಲಾಖೆಯ (ಡಿಒಪಿಟಿ) ಮಾಜಿ ಕಾರ್ಯದರ್ಶಿ ಭಾನು ಪ್ರತಾಪ್ ಶರ್ಮಾ ವಹಿಸಿದ್ದಾರೆ. ಹಿಂದಿನ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನ ಮಾಜಿ ಅಧ್ಯಕ್ಷ ಮತ್ತು ಎಂಡಿ ಅನಿಮೇಶ್ ಚೌಹಾನ್, ಆರ್‌ಬಿಐ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ದೀಪಕ್ ಸಿಂಘಾಲ್, ಹಿಂದಿನ ಐಎನ್‌ಜಿ ವೈಶ್ಯ ಬ್ಯಾಂಕ್‌ನ ಮಾಜಿ ಎಂಡಿ ಶೈಲೇಂದ್ರ ಭಂಡಾರಿ ಅವರು ಮಂಡಳಿಯ ಇತರ ಸದಸ್ಯರು.

ಇದನ್ನೂ ಓದಿ: Job Alert: ಎಸ್‌ಬಿಐಯ 5,280 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Exit mobile version