ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿನಾಯಕ ದಾಮೋದರ ಸಾವರ್ಕರ್ (Vinayak Damodar Savarkar) ಕಾರ್ಯಕ್ರಮಕ್ಕೆ ದಿಢೀರನೆ ಅನುಮತಿ ನಿರಾಕರಿಸಿ ಗೇಟ್ ಬಂದ್ ಮಾಡಿದ ಘಟನೆ ನಡೆದಿದೆ.
ಸಾವರ್ಕರ್ ಪ್ರತಿಷ್ಠಾನದಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮದ ನಿಮಿತ್ತ ಮಕ್ಕಳಿಗೆ ಚಿತ್ರಕಲೆ, ರಕ್ತದಾನ ಶಿಬಿರ ಹಾಗೂ ಛದ್ಮವೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಶಸ್ತಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಲೇಖಕ ಡಾ. ಎಸ್.ಎಲ್. ಭೈರಪ್ಪ ಭಾಗವಹಿಸುವವರಿದ್ದರು. ಸಂಶೋಧಕ ವಿಕ್ರಂ ಸಂಪತ್ ಅವರಿಗೆ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭಾಗವಹಿಸುವವರಿದ್ದರು.
ಆದರೆ ವಿವಿಗೆ ಮಕ್ಕಳು ಹಾಗೂ ಕುಟುಂಬದವರು ಆಗಮಿಸಿದಾಗ ಗೇಟ್ ಬಂದ್ ಆಗಿತ್ತು. ಎಷ್ಟು ಹೊತ್ತು ಕಾದರೂ, ಕೇಳಿದರೂ ಗೇಟನ್ನು ಸಿಬ್ಬಂದಿ ತೆಗೆದಯಲಿಲ್ಲ. ಸಮಯ ಮೀರುತ್ತಿದ್ದರಿಂದ ಗೇಟ್ ಬಳಿಯೇ ಕುಳಿತು ಚಿತ್ರ ರಚನೆ ಆರಂಭಿಸಿದರು. ಯಾವುದೇ ಕಾರಣಕ್ಕೆ ಅವಕಾಶ ನೀಡಬಾರದು ಎಂದು ನಿರ್ಧರಿಸಿದ್ದ ಅಧಿಕಾರಿಗಳು ಗೇಟ್ ಮುಂಭಾಗದಲ್ಲಿ ಪೊಲೀಸ್ ತುಕಡಿಯನ್ನೂ ನಿಯೋಜಿಸಿದ್ದರು.
ಈ ವೇಳೆಗೆ ಮೈಸೂರಿನಾದ್ಯಂತ ಸುದ್ದಿ ಹರಡಿ ಇನ್ನೇನು ಪರಿಸ್ಥಿತಿ ಬಿಗಡಾಯಿಸಲು ಆರಂಭವಾಗಿತ್ತು. ಸಾವರ್ಕರ್ ಪರ ಘೋಷಣೆಗಳನ್ನು ಸಾರ್ವಜನಿಕರು ಕೂಗುತ್ತ, ಹೆಚ್ಚೆಚ್ಚು ಜನರು ಜಮಾವಣೆ ಆಗಲು ಆರಂಭವಾಯಿತು. ಈ ಸಂದರ್ಭದಲ್ಲಿ ಎಚ್ಚೆತ್ತ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಾರೆ. ಈ ವೇಳೆಗೆ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಸಹ ಆಗಮಿಸಿದರು.
ಆದರೆ, ಕಾಂಗ್ರೆಸ್ ಸರ್ಕಾರವು ಸಾವರ್ಕರ್ ಕಾರ್ಯಕ್ರಮದ ಕುರಿತು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ನೆರೆದವರು ಆಕ್ರೋಶ ಹೊರಹಾಕಿದರು. ನಂತರ ಕಾರ್ಯಕ್ರಮ ಆರಂಭವಾಯಿತು.
ರಾಜ್ಯಪಾಲರ ಮಧ್ಯಸ್ಥಿಕೆ:
ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಒಂದು ವಾರದೊಳಗೆ ಸಾವರ್ಕರ್ ಕಾರ್ಯಕ್ರಮ ರದ್ದು ಮಾಡುವ ದಾರ್ಷ್ಟ್ಯವನ್ನು ಈ ಸರ್ಕಾರ ತೋರಿದೆ. ಮಾತು ಮಾತಿಗೆ ಸಂವಿಧಾನ, ಪ್ರಜಾಪ್ರಭುತ್ವ ಅಂತ ಕಾಂಗ್ರೆಸ್ ಮಾತನಾಡುತ್ತೆ. ಆದರೆ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ದಾರ್ಷ್ಟ್ಯ ಶುರು ಮಾಡಿದೆ. ಸಾವರ್ಕರ್ ಹೆಸರಿನ ಕಾರ್ಯಕ್ರಮಕ್ಕೆ ಅನುಮತಿ ರದ್ದು ಮಾಡಲಾಗಿತ್ತು. ರಾಜ್ಯಪಾಲರ ಮಧ್ಯಪ್ರವೇಶದಿಂದ ಅನುಮತಿ ಸಿಕ್ಕಿದೆ. ಇದಕ್ಕೆ ಎಸ್.ಎಲ್.ಭೈರಪ್ಪ, ವಿಕ್ರಂ ಸಂಪತ್, ನಾನು ಭಾಗವಹಿಸಿರುವುದು ಕಾರಣ ಎಂದು ಆಕ್ರೋಶ ಹೊರಹಾಕಿದರು.