Site icon Vistara News

Viral News: ನಿಮ್ಮ ಕಿರುಕುಳ, ಒತ್ತಡ ನಿಭಾಯಿಸುವ ಮಂತ್ರ ಕಲಿಯಲು ರಜೆ ಕೊಡಿ: ಪೊಲೀಸ್‌ ಅಧಿಕಾರಿ ಪತ್ರ!

DYSP letter

#image_title

ಬೆಂಗಳೂರು: ಒಂದು ರಜೆ ಪಡೆಯಲು (Application for leave) ಏನೇನು ತಂತ್ರಗಳನ್ನು ಪ್ರಯೋಗ ಮಾಡಲಾಗುತ್ತದೆ ಎನ್ನುವುದು ಕಲ್ಪನೆಗೂ ಮೀರಿದ ಸಂಗತಿ. ಅದರ ಜತೆಗೆ ಜನರು ಯಾವ ಯಾವ ಕಾರಣಕ್ಕೆ ರಜೆ ಬಯಸುತ್ತಾರೆ ಎನ್ನುವುದು ಕೂಡಾ ಊಹೆಗೆ ನಿಲುಕದ್ದು. ಇಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ರಜೆ ಕೋರಿ ತಮ್ಮ ಮೇಲಧಿಕಾರಿಗೆ ಬರೆದ ಪತ್ರದಲ್ಲಿ ಅತ್ಯಂತ ಕುತೂಹಲಕಾರಿ ಕಾರಣವನ್ನು (Viral news) ನೀಡಿದ್ದಾರೆ.

ಡಿವೈಎಸ್‌ಪಿ (deputy superintendent of police) ಆಗಿರುವ ಅಧಿಕಾರಿಯೊಬ್ಬರು ಒಂದು ತಿಂಗಳು ರಜೆ ಕೋರಿ ಎಸ್ಪಿಗೆ ಒಂದು ಪತ್ರ ಬರೆಯುತ್ತಾರೆ. ಆದರೆ, ಎಸ್‌ಪಿ ಒಂದು ತಿಂಗಳು ಆಗುವುದಿಲ್ಲ. ಐದು ದಿನ ರಜೆ ಮಂಜೂರು ಮಾಡುತ್ತಾರೆ. ಇದರಿಂದ ಸಿಟ್ಟಿಗೇಳುವ ಡಿವೈಎಸ್‌ಪಿ ಮೇಲಧಿಕಾರಿಗೆ ಎರಡನೇ ಪತ್ರ ಬರೆಯುತ್ತಾರೆ. ಅದರಲ್ಲಿ ತಾನು ಒಂದು ತಿಂಗಳು ರಜೆ ಯಾಕೆ ಬೇಕು ಎನ್ನುವುದನ್ನು ಸವಿವರವಾಗಿ ಬರೆದಿದ್ದಾರೆ. ಈ ಪತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ನನಗೆ ರಜೆ ಬೇಕಾಗಿರುವುದು ನಿಮ್ಮ ಒತ್ತಡ, ಕಿರುಕುಳದಿಂದ ಮುಕ್ತಿ ಪಡೆದು ಜನರಿಗೆ ಸಹಾಯವಾಗುವಂತೆ ಕೆಲಸ ಮಾಡಲು ಎಂದು ಅಧಿಕಾರಿ ಪತ್ರದಲ್ಲಿ ಬರೆದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಪತ್ರವೂ ಕುತೂಹಲಕಾರಿಯಾಗಿದೆ.

ಮೊದಲು ಪತ್ರವನ್ನು ಓದಿ, ಬಳಿಕ ಅಧಿಕಾರಿ ಯಾರು ಎಂದು ಹೇಳ್ತೇವೆ..

ಉಲ್ಲೇಖ-1 ರ ಪ್ರಕಾರ ನನಗೆ 30 ದಿನಗಳ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದೆ. ಉಲ್ಲೇಖ-2 ರ ಪ್ರಕಾರ ನೀವು 5 ದಿನಗಳ ಪರಿವರ್ತಿತ ರಜೆಯನ್ನು ಮಾತ್ರ ಮಂಜೂರು ಮಾಡಿದ್ದು, ಉಳಿದ 25 ದಿನಗಳ ರಜೆ ಮಂಜೂರು ಮಾಡಲು ತಮಗಿದ್ದ ತೊಂದರೆ, ತೊಡಕು, ಅಸಹಾಯಕತೆ ಅಥವಾ ಅನಿವಾರ್ಯತೆ ಬಗ್ಗೆ ತಿಳಿಸದೇ ಇರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ನೀವು ಕಣ್ತಪ್ಪಿನಿಂದ 5 ದಿನ ಪರಿವರ್ತಿತ ರಜೆ ಮಂಜೂರು ಮಾಡಿದ್ದೀರೋ ಅಥವಾ ಉದ್ದೇಶಪೂರ್ವಕವಾಗಿಯೇ ರಜೆಯನ್ನು ತಡೆ ಹಿಡಿದಿದ್ದೀರೋ ಅಥವಾ ನನ್ನ ಖಾತೆಯಲ್ಲಿ ರಜೆ ಇಲ್ಲವೋ, ಇದ್ಯಾವುದನ್ನು ಸ್ಪಷ್ಟವಾಗಿ ನಮೂದಿಸದೇ ಮತ್ತೊಮ್ಮೆ ತಾವು ತಮ್ಮ ನಿರ್ಲಕ್ಷ್ಯ ಆಡಳಿತದ ವೈಖರಿಯನ್ನು ಪ್ರದರ್ಶಿಸಿದ್ದೀರಿ ಎಂದು ನನಗೆ ಅನ್ನಿಸುತ್ತಿದೆ.

ನಾನು ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದು, ಆ ಕಾರಣಗಳನ್ನು ವಿವರಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಇಲ್ಲವೆಂದು ಈ ಮೊದಲು ಭಾವಿಸಿದ್ದೆ. ಆದರೆ ಈಗ ಆ ಕಾರಣಗಳನ್ನು ತಿಳಿಸುವ ಅನಿವಾರ್ಯತೆಯನ್ನು ತಾವು ಸೃಷ್ಟಿಸಿದ್ದೀರಿ, ನಿಮ್ಮ ಆಡಳಿತವು ತಾರತಮ್ಯ, ಕಿರುಕುಳ, ಸುಳ್ಳು, ಮೋಸದಿಂದ ಕೂಡಿದ್ದು, ನೀವು ನನ್ನ ಮಾನಸಿಕ ನೆಮ್ಮದಿಯನ್ನು ಸತತವಾಗಿ ಕದಡುತ್ತಾ ಬಂದಿದ್ದೀರಿ, ನಿಮ್ಮ ಈ ರೀತಿಯ ವರ್ತನೆಯು ಹೀಗೆ ಮುಂದುವರೆದು, ನಿಮ್ಮ ಆಧೀನದಲ್ಲಿ ಇದೇ ಪರಿಸ್ಥಿತಿಯಲ್ಲಿ ನಾನು ಕೆಲಸ ಮುಂದುವರೆಸಿದಲ್ಲಿ, ನನಗೆ ಮಾನಸಿಕ ಕ್ಷೋಭೆ ಅಥವಾ ಖಿನ್ನತೆಗೆ ಒಳಗಾಗುವ ಸಂಭವ ಇರುವುದರಿಂದ ಕೆಲಕಾಲಮಟ್ಟಿಗಾದರೂ ನಿಮ್ಮ ಕಿರುಕುಳದಿಂದ ದೂರವಾಗಿ ಮನಸ್ಸಿಗೆ ಶಾಂತಿ ಸಧೃಡತೆ ಪಡೆಯುವ ಉದ್ದೇಶಕ್ಕಾಗಿ ನನಗೆ ಯೋಗ, ಧ್ಯಾನ, ಪ್ರಾರ್ಥನೆಯಂತಹ ನಮ್ಮ ಸಂಸ್ಕೃತಿಯ ಸಂಸ್ಕಾರಗಳನ್ನು ರೂಢಿಸಿಕೊಳ್ಳಲು ಅವಶ್ಯಕತೆ ಇರುವುದರಿಂದ 30 ದಿನಗಳ ರಜೆ ಕೋರಿದ್ದನು.

ಸಂಘರ್ಷಕ್ಕೆ ಆಸ್ಪದವಿಲ್ಲದಂತೆ ಮತ್ತು ನಿಮ್ಮ ಕಿರುಕುಳವನ್ನು ನಿಭಾಯಿಸಿ, ಸಾರ್ವಜನಿಕರಿಗೆ ಅನ್ಯಾಯವಾಗದಂತೆ ನನ್ನ ಮಾನಸಿಕ ಸ್ಥಿತಿಯನ್ನು ಸ್ಥಿಮಿತದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಲು ನನಗೆ ಯೋಗ, ಧ್ಯಾನ, ಪ್ರಾರ್ಥನೆಯಂತಹ ಮಾರ್ಗೋಪಾಯಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ತಾವು ನನ್ನ ಖಾತೆಯಲ್ಲಿದ್ದ 30 ದಿನಗಳ ರಜೆಯನ್ನು ಮಂಜೂರು ಮಾಡಲು ಮತ್ತೊಮ್ಮೆ ಕೋರುತ್ತೇನೆ. ಒಂದು ವೇಳೆ ನೀವು ರಜೆ ಮಂಜೂರು ಮಾಡದೇ 5 ದಿನಕ್ಕೆ ಹಿಂದಿರುಗಿ ಬಂದು ಕೆಲಸ ಮಾಡಬೇಕು ಎಂಬ ಆಶಯ ಮತ್ತು ಉದ್ದೇಶ ನಿಮ್ಮದಾಗಿದ್ದರೆ, ಈ ಪತ್ರ ತಲುಪಿದ 3 ದಿನಗಳ ಒಳಗಾಗಿ ತಾವು ನನಗೆ ಜ್ಞಾಪನ ನೀಡಲು ಕೋರಲಾಗಿದೆ.

ಒತ್ತಡದ ಪರಿಸ್ಥಿತಿಯಲ್ಲಿಯೂ ನಾನು ಕರ್ತವ್ಯ ಮಾಡುವುದು ಅನಿವಾರ್ಯವಾಗಿದ್ದಲ್ಲಿ ನನ್ನ ಒತ್ತಡ ನಿಭಾಯಿಸುವಿಕೆಯು ಮಿತಿ ಮೀರಿ ಹೋದಲ್ಲಿ ಅದರಿಂದ ಮುಂದೆ ಸಾರ್ವಜನಿಕರಿಗಾಗಲಿ ಅಥವಾ ಅಧೀನ ಸಿಬ್ಬಂದಿಗಾಗಲಿ ಅಥವಾ ನಿಮ್ಮೊಂದಿಗಾಗಲಿ, ಅವಘಡಗಳು, ಅಚಾತುರ್ಯಗಳು ನಡೆದಲ್ಲಿ ತಮ್ಮದೇ ಜವಾಬ್ದಾರಿ ಎಂದು ಭಾವಿಸಿ ಎಲ್ಲ ಜವಬ್ದಾರಿಗಳನ್ನು ತಾವು ಹೊತ್ತುಕೊಂಡಿದ್ದಲ್ಲಿ ನಾನು ನಿಮ್ಮ ಒತ್ತಡದ ನಡುವೆಯೂ ಕೆಲಸ ಮಾಡಬಲ್ಲೆ, ಯಾವುದೇ ಅಚಾತುರ್ಯಕ್ಕೆ ಅವಘಡಗಳಿಗೆ ನಾನು ಹೊಣೆಗಾರನಾಗಲಾರೆ. ಆದ್ದರಿಂದ ತಮ್ಮ ನಿರ್ಧಾರವನ್ನು ಜೂನ್​ 22ರ ಒಳಗೆ ತಿಳಿಸಿದಲ್ಲಿ ಆ ಪ್ರಕಾರ ಕರ್ತವ್ಯಕ್ಕೆ ಬರುತ್ತೇನೆ. ಇಲ್ಲವಾದಲ್ಲಿ ನಾನು ಜೂ. 19ರಿಂದ ರಜೆಯ ಮೇಲೆ ತೆರಳುತ್ತಿದ್ದು, ನನ್ನ ಉಲ್ಲೇಖಿತ-1 ರ ಮನವಿಯಂತೆ ನನಗೆ 30 ದಿನಗಳ ರಜೆ ಮಂಜೂರು ಮಾಡುತ್ತೀರಿ ಎಂಬ ನಂಬಿಕೆಯ ಮೇಲೆ ಹೊರಡುತ್ತಿದ್ದೇನೆ.

ಒಂದು ತಿಂಗಳ ನಂತರ ಸದೃಢ ಮನಸ್ಸಿನೊಂದಿಗೆ ನಿಮ್ಮ ಒತ್ತಡ, ಕಿರುಕುಳವನ್ನು ನಿಭಾಯಿಸುವ ಶಾಂತಿ ಮಂತ್ರವನ್ನು ಕಲಿತು ಬರುವ ವಿಶ್ವಾಸದಲ್ಲಿದ್ದೇನೆ. ಇದನ್ನೆಲ್ಲ ಕಲಿತರೂ ಮತ್ತೊಮ್ಮೆ ಕಷ್ಟವಾದಲ್ಲಿ ಮುಂದಿನ ಕಾರ್ಯಕ್ರಮ -ಕಾಲಾಯ ತಸ್ಮೈ ನಮಃ-

=========

ಇದು ಡಿವೈಎಸ್‌ಪಿ ಒಬ್ಬರು ಎಸ್ಪಿಗೆ ಬರೆದ ಪತ್ರ. ಈ ಪತ್ರವನ್ನು ಬರೆದವರು ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಉಪವಿಭಾಗದ ಡಿವೈಎಸ್ಪಿ ಕಾಶಿ ಗೌಡ ಅವರು. ಅವರು ಬಳ್ಳಾರಿಯ ಪೊಲೀಸ್​ ಅಧೀಕ್ಷಕರಿಗೆ ಬರೆದ ಪತ್ರ ಇದಾಗಿದೆ.

ಕಾಶಿ ಗೌಡ ಅವರು ಈ ಉತ್ತಮ ಪೊಲೀಸ್‌ ಅಧಿಕಾರಿ, ಶಿಸ್ತಿನ ಸಿಪಾಯಿ ಎಂದೇ ಹೆಸರಾಗಿದ್ದಾರೆ. ತಮ್ಮ ಹಕ್ಕಿನ ವಿಚಾರದಲ್ಲಿ ಇನ್ನಷ್ಟು ಬಿಗುವಾಗಿದ್ದಾರೆ. ಆದರೆ, ಇದೇ ರೀತಿ ಉಳಿದ ಅಧಿಕಾರಿಗಳು ಕೂಡಾ ಬೇರೆ ಬೇರೆ ಕಾರಣ ಕೊಟ್ಟು ತಿಂಗಳುಗಟ್ಟಲೆ ರಜೆ ಕೇಳಿದರೆ ಏನು ಕಥೆ ಎನ್ನುವುದು ಎಸ್ಪಿಯವರ ಕಳವಳ. ಕಾಶಿ ಗೌಡ ಅವರು ಈ ಹಿಂದೆ ಹಂಪಿಯಲ್ಲಿ ಡಿವೈಎಸ್‌ಪಿ ಆಗಿದ್ದಾಗ ಪೊಲೀಸರ ಕಲೆಕ್ಷನ್‌ ವಿಷಯದಲ್ಲಿ ಮುಕ್ತವಾಗಿ ಮಾತನಾಡಿದ ಒಂದು ಆಡಿಯೊ ವೈರಲ್‌ ಅಗಿ ಸದ್ದು ಮಾಡಿತ್ತು.

ಇದನ್ನೂ ಓದಿ : Video Viral: ಮನೆಯಾಕೆ ಅಡುಗೆ ಡಬ್ಬಿಗೆ ಕೈ ಇಟ್ಟಳು; ಹಿಂದಿದ್ದ ನಾಗಪ್ಪ ಬುಸ್‌ ಅಂದುಬಿಟ್ಟ!

Exit mobile version