Site icon Vistara News

Viral Video : ಬುಲೆಟ್‌ ಬೈಕಲ್ಲಿ ರಿವಾಲ್ವರ್ ಹಿಡಿದು ಯುವಕರ ಶೋಕಿ, ಇಬ್ಬರು ಪುಂಡರ ಅರೆಸ್ಟ್‌

Dangerous reels in hasan

ಹಾಸ‌ನ: ಹಾಸನದ (Hasana News) ಪ್ರಮುಖ ರಸ್ತೆಗಳಲ್ಲಿ ಇಬ್ಬರು ಯುವಕರು ಬುಲೆಟ್‌ ಬೈಕ್‌ನಲ್ಲಿ ರಿವಾಲ್ವರ್‌ (Revolver) ಹಿಡಿದು ಶೋಕಿ ನಡೆಸಿದ ವಿದ್ಯಮಾನ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಕೆಲವು ದಿನಗಳ ಹಿಂದಷ್ಟೇ ಇಲ್ಲಿ ಯುವಕರ ತಂಡವೊಂದು ವೀಲಿಂಗ್‌ ನಡೆಸುತ್ತಿದ್ದ ದೃಶ್ಯ ಭಯ ಹುಟ್ಟಿಸಿತ್ತು. ಅಡ್ಡಾದಿಡ್ಡಿ ಬೈಕ್‌ ಓಡಿಸಿ ಕಂಡಕಂಡವರಿಗೆ ಡಿಕ್ಕಿ ಹೊಡೆದು ಅಪಾಯಕ್ಕೆ ಸಿಲುಕಿಸುವ ಭಯಾನಕ ವರ್ತನೆಗಳ ನಡುವೆ ಈಗ ರಿವಾಲ್ವರ್‌ ಹಿಡಿದು ಓಡಾಟ ನಡೆಸುತ್ತಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ (Social Media) ವೈರಲ್‌ (Viral video) ಆಗಿದೆ. ಈ ಸಂಬಂಧ ಇಬ್ಬರು ಪುಂಡರನ್ನು ಅರೆಸ್ಟ್‌ ಮಾಡಲಾಗಿದೆ.

ಹಾಸನದ ರಿಂಗ್‌ ರೋಡ್‌, ಆರ್‌. ಸಿ. ರೋಡ್‌. 80 ಅಡಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಈ ರೀತಿಯ ಹುಚ್ಚಾಟ ನಡೆದಿದೆ. ಬುಲೆಟ್‌ ಬೈಕ್‌ನಲ್ಲಿ ಒಬ್ಬ ಡ್ರೈವ್‌ ಮಾಡುತ್ತಿದ್ದರೆ ಇನ್ನೊಬ್ಬ ರಿವಾಲ್ವರ್‌ನ್ನು ಕೈಯಲ್ಲಿ ಹಿಡಿದುಕೊಂಡು ಶೂಟ್‌ ಮಾಡುವಂತೆ ಆಕ್ಷನ್‌ ಮಾಡುತ್ತಾನೆ. ಬೈಕನ್ನು ಅಡ್ಡಾದಿಡ್ಡಿಯಾಗಿ ಓಡಿಸುವ ಇವರು ಕಾರು, ಮತ್ತಿತರ ವಾಹನಗಳನ್ನು ಓವರ್‌ಟೇಕ್‌ ಮಾಡಿ ಅವರನ್ನೂ ಬೆದರಿಸುವ ರೀತಿಯಲ್ಲಿ ವರ್ತಿಸುತ್ತಾರೆ. ಕೆಲವೊಮ್ಮೆ ಬೈಕನ್ನು ಒಂದು ಭಾಗಕ್ಕೆ ಸಂಪೂರ್ಣವಾಗಿ ಬಾಗಿಸಿ ನೆಲಕ್ಕೆ ಗುಂಡು ಹೊಡೆಯುವಂತೆ ಆಕ್ಟ್‌ ಮಾಡುತ್ತಾರೆ.

ರೀಲ್ಸ್‌ಗೆ ಬಳಸಿದ ಬೈಕ್‌

ಕೆಎ-13 EK-5679 ನಂಬರ್‌ನ ಬುಲೆಟ್ ಬೈಕ್‌ನಲ್ಲಿ ಹಾಡಹಗಲೇ ಈ ರೀತಿ ಪುಂಡಾಟ ನಡೆಸುವ ಯುವಕರ ಹಾವಳಿ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಜನನಿಬಿಡ ಪ್ರದೇಶದಲ್ಲಿ ಗನ್ ಹಿಡಿದು ಅತಿರೇಕದ ವರ್ತನೆ ತೋರಿರುವ ಯುವಕರು, ರಸ್ತೆಯಲ್ಲಿ ಮನಬಂದಂತೆ ಓಡಾಡುವ ವಿಡಿಯೊಗಳು‌ ಜನರಲ್ಲಿ ಆತಂಕ ಮೂಡಿಸಿವೆ.

ಇಂಥ ಯುವಕರ ಪುಂಡಾಟಕ್ಕೆ ಬ್ರೇಕ್‌ ಹಾಕಬೇಕು, ಈ ರೀತಿ ಕ್ರೌರ್ಯ ಮತ್ತು ಭಯ ಹುಟ್ಟಿಸುವವವರ ಮೇಲೆ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕರು, ವಯಸ್ಸಾದವರು, ಮಕ್ಕಳ ಮೇಲೆ ಈ ಘಟನೆಗಳು ದೊಡ್ಡ ಪರಿಣಾಮ ಬೀರುತ್ತಿದ್ದು, ಅಪಾಯಕ್ಕೆ ಮೊದಲೇ ಎಚ್ಚೆತ್ತುಕೊಳ್ಳಬೇಕು. ಅನಾಹುತಗಳು ಸಂಭವಿಸುವ ಮುನ್ನ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯ ಮಾಡಿದ್ದರು.

ಈ ನಡುವೆ, ಅವರು ಬಳಸಿರುವ ಗನ್ ನಕಲಿಯೋ ಅಥವಾ ಅಸಲಿಯೋ ಎಂಬುದರ ತನಿಖೆಗೆ ಒತ್ತಾಯ ಮಾಡಲಾಗಿತ್ತು.

ಇಬ್ಬರು ಯುವಕರ ಬಂಧನ

ಈ ನಡುವೆ, ಸಾರ್ವಜನಿಕರ ಆತಂಕದ ಬಗ್ಗೆ ಕಳಕಳಿ ಮತ್ತು ಕಾಳಜಿಯನ್ನು ಪ್ರದರ್ಶಿಸಿದ ಹಾಸನ ಎಸ್‌ಪಿ ಹರಿಶಂಕರ್‌ ಅವರು ತುರ್ತು ಕಾರ್ಯಾಚರಣೆ ನಡೆಸಿ ರಿವಾಲ್ವರ್‌ ಹಿಡಿದು ಪುಂಡಾಟ ನಡೆಸಿದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಇದು ಒರಿಜಿನಲ್‌ ಅಲ್ಲ, ಎಲ್ಲಾ ರೀಲ್ಸ್‌ಗಾಗಿ

ಪೊಲೀಸರು ನಡೆಸಿರುವ ತನಿಖೆಯಲ್ಲಿ ಗೊತ್ತಾದ ಪ್ರಕಾರ, ಇವರು ರೌಡಿಗಳೇನೂ ಅಲ್ಲ. ಬದಲಾಗಿ ರೀಲ್ಸ್‌ಗಾಗಿ ಈ ರೀತಿ ಶೋಕಿ ಮಾಡಿದ್ದಾರೆ. ಇದರಲ್ಲಿ ಬಳಸಿರುವ ರಿವಾಲ್ವರ್‌ ಕೂಡಾ ಅಸಲಿಯಲ್ಲ. ಅದು ನಕಲಿ ಗನ್‌ ಎಂದು ಹಾಸನ ಎಸ್ಪಿ ಹರಿರಾಂ‌‌ ಶಂಕರ್‌ ಸ್ಪಷ್ಟನೆ ನೀಡಿದ್ದಾರೆ.

ಆದರೆ, ಈ ರೀತಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ, ಸಾರ್ವಜನಿಕ ಶಾಂತಿ ಭಂಗ ಮಾಡುವುದು ಅಪರಾಧ ಎಂಬ ನೆಲೆಯಲ್ಲಿ ಅವರ ಮೇಲೆ ಕೇಸು ದಾಖಲಿಸಲಾಗಿದೆ.

ಈ ನಡುವೆ, ಈ ಪ್ರಕರಣ ಸಣ್ಣ ಮಟ್ಟಿಗೆ ರಾಜಕೀಯ ತಿರುವನ್ನೂ ಪಡೆದುಕೊಂಡಿತ್ತು. ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಬೆಂಬಲಿಗರು ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿ ಈ ರೀತಿಯ ಹುಚ್ಚಾಟಗಳು ಹೆಚ್ಚಾಗಿವೆ ಎಂಬಂತೆ ಬಿಂಬಿಸಿದ್ದರು. ಈ ವಿಡಿಯೊವನ್ನು ಹಾಸನದ ಹಾಲಿ ಶಾಸಕ ಎಚ್.ಪಿ. ಸ್ವರೂಪ್‌ಗೆ ಟ್ಯಾಗ್‌ ಮಾಡಿದ್ದರು.

ಇದನ್ನೂ ಓದಿ: Viral Video: ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿದ ನದಿ; ಆತಂಕದ ಮಧ್ಯೆಯೇ ಕಾರಣ ಹೇಳಿದ ಬಿಯರ್​ ಫ್ಯಾಕ್ಟರಿ

Exit mobile version