Site icon Vistara News

Vishwakarma Jayanti | ಬ್ರಾಹ್ಮಣರಿಗಿಂತಲೂ ವಿಶ್ವಕರ್ಮ ಸಮಾಜದವರು ಮೇಲು: ಕೆ.ಪಿ. ನಂಜುಂಡಿ

mys vishwakarma 2

ಮೈಸೂರು: ನಾವು ವಿಶ್ವಕರ್ಮ ಸಮುದಾಯದವರು ಬ್ರಾಹ್ಮಣರು ಎಂದು ಅಂದುಕೊಂಡಿದ್ದೇವೆ.‌ ನಾವು ಬ್ರಾಹ್ಮಣರಲ್ಲ, ಬ್ರಾಹ್ಮಣರಿಗಿಂತಲೂ ಮೇಲಿದ್ದೇವೆ ಎಂದು ವಿಶ್ವಕರ್ಮ ಸಮುದಾಯ ಮುಖಂಡ, ವಿಧಾನ ಪರಿಷತ್‌ ಸದಸ್ಯ ಕೆ.ಪಿ. ನಂಜುಂಡಿ ಹೇಳಿದರು.

ಹೆಗ್ಗಡದೇವನಕೋಟೆಯಲ್ಲಿ ಗುರುವಾರ (ಅ.೨೭) ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವಬ್ರಾಹ್ಮಣ ಒಂದು ಸಮುದಾಯ ಎಂಬ ಕಾರಣಕ್ಕೆ ಬ್ರಾಹ್ಮಣ ಸಮುದಾಯವೆಂದು ಅಂದುಕೊಳ್ಳಬೇಕಿಲ್ಲ. ನಮ್ಮದು ಬುಡಕಟ್ಟು ಸಂಸ್ಕೃತಿ ಎಂದು ಹೇಳಿದರು.

ಜಯಂತಿ ಮೂಲಕ ಸಮುದಾಯದ ಅಭಿವೃದ್ಧಿ ಆಗಲಿದೆ ಎಂದು ಅಂದುಕೊಂಡರೆ ನಾವು ಮೂರ್ಖರು. ನಾನು 24 ವರ್ಷದಿಂದ ಸಮುದಾಯದ ಸಂಘಟನೆಯಲ್ಲಿ ತೊಡಗಿದ್ದೇನೆ. ಸ್ವಾಮೀಜಿ ಅವರು 24 ವರ್ಷದ ಹಿಂದಿನ ಭಾಷಣವನ್ನು ಈಗಲೂ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಧ್ವನಿಯನ್ನು ಗಟ್ಟಿಯಾಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ | Vishwakarma Jayanti | ಬ್ರಾಹ್ಮಣರಿಗೆ ಮೀಸಲಾತಿ ಕೊಟ್ಟಿದ್ದು ಸಂವಿಧಾನ ವಿರೋಧಿ ನೀತಿ: ಸಿದ್ದರಾಮಯ್ಯ

ವಿಶ್ವಕರ್ಮ ಸಮುದಾಯದವರಿಗೆ ರಾಜಕೀಯ ಗೊತ್ತಿಲ್ಲ. ಸಂವಿಧಾನದಲ್ಲಿ ಏನಿದೆ ಎಂದೂ ಓದಿಕೊಂಡಿಲ್ಲ. ಪ್ರಜಾಪ್ರಭುತ್ವದ ಅವಕಾಶವನ್ನು ಬಳಕೆ ಮಾಡಿಕೊಳ್ಳದೆ ಇದ್ದರೆ ಸಾಮಾಜಿಕ ನ್ಯಾಯದಿಂದ ಅನ್ಯಾಯಕ್ಕೆ ಒಳಪಡುತ್ತೇವೆ. ಎಲ್ಲ ಸಮುದಾಯಗಳೂ ಮೀಸಲಾತಿ ಬೇಕು ಎಂದು ಕೇಳುತ್ತಿವೆ. ವಿಶ್ವಕರ್ಮ ಸಮುದಾಯದಲ್ಲಿ
41 ಪಂಗಡಗಳಿವೆ. ಆಚಾರಿ, ಅಕ್ಕಸಾಲಿಗ ಸೇರಿದಂತೆ ಹಲವಾರು ಸಂಘಟನೆಯವರಿದ್ದಾರೆ. ನಮ್ಮದು ಬುಡಕಟ್ಟು ಸಂಸ್ಕೃತಿ. ನಮ್ಮ ಸಮಾಜ ಕುಲಶಾಸ್ತ್ರ ಅಧ್ಯಯನ ಆಗುತ್ತಿದೆ. ನಮ್ಮ ಸಮುದಾಯ 2A ಅಡಿಯಲ್ಲಿರುವ 102 ಸಮುದಾಯಗಳ ನಡುವೆ ಇದೆ. ನಾವು ಎಸ್‌ಟಿಗೆ ಸೇರಬೇಕು. ನಮಗೆ ಮೀಸಲಾತಿ ಬೇಕು. ಇಲ್ಲವಾದರೆ ರಘು ಆಚಾರ್ ಬಿಟ್ಟು ಬೇರೆ ಯಾರೂ ಎಂಎಲ್‌ಎ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.

Vishwakarma Jayanti

ಪರಿಶಿಷ್ಟ ವರ್ಗಕ್ಕೆ ಸೇರಿಸಿ- ನಂಜುಂಡಿ
ಸಮಾಜ ಉಳಿಯಬೇಕಾದರೆ ಮೀಸಲಾತಿ ಪಡೆಯಬೇಕು. 8 ವರ್ಷದ ಹೋರಾಟದ ಫಲವಾಗಿ ವಿಶ್ವಕರ್ಮ ನಿಗಮ, ಜಯಂತಿ ಜಾರಿಯಾಗಿದೆ. ಸಮಾಜ ಇದ್ದರೆ ಸ್ವಾಮೀಜಿ, ನಾವೇ ಇಲ್ಲ ಎಂದರೆ ಸ್ವಾಮೀಜಿಯೂ ಇರುವುದಿಲ್ಲ. ಗೌಡ ಸಮುದಾಯದ ಸ್ವಾಮೀಜಿಯವರನ್ನು ಗಮನಿಸಬೇಕು. ಪಂಚಮಸಾಲಿಗಳು 2ಎ ಮಾಡಿ ಎಂದು ಕೇಳುತ್ತಿದ್ದಾರೆ. ಹಿಂದು ಧರ್ಮದಲ್ಲಿ ಒಳಮೀಸಲಾತಿ ಮಾಡಲು ಸಾಧ್ಯವಿಲ್ಲ. ನಮಗೆ ಅರ್ಹತೆ ಇದ್ದು, ನಮ್ಮನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂದು ಕೆ.ಪಿ.ನಂಜುಂಡಿ ಹೇಳಿದರು.

ಫ್ಯೂಚರ್ ಮುಖ್ಯಮಂತ್ರಿ ಸಿದ್ದರಾಮಯ್ಯ- ರಘು ಆಚಾರ್‌
ಲಕ್ಷ್ಮೀ-ಸರಸ್ವತಿ ಒಟ್ಟಿಗೆ ಇರುವುದಿಲ್ಲ. ನಮ್ಮ ಸಮುದಾಯಕ್ಕೆ ಸರಸ್ವತಿ ಒಲಿದಿದ್ದಾಳೆ. ಆದರೆ, ಲಕ್ಷ್ಮಿ ಒಲಿಯಲಿಲ್ಲ. ನಾನು, ಕೆ.ಪಿ.ನಂಜುಂಡಿ ವಿಧಾನಸೌಧಕ್ಕೆ ಹೋಗುವುದು ಮುಖ್ಯವಲ್ಲ. ಸಿದ್ದರಾಮಯ್ಯ ಅವರಂತಹ ನಾಯಕರು ವಿಧಾನಸಭೆಗೆ ಹೋಗಬೇಕು. ಡಿ.ದೇವರಾಜ ಅರಸು ನಂತರ ಸಣ್ಣಪುಟ್ಟ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿದವರು ಸಿದ್ದರಾಮಯ್ಯ ಮಾತ್ರ. ಫ್ಯೂಚರ್ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್ ಹೇಳಿದರು.

ಇದನ್ನೂ ಓದಿ | JDS Pancharatna Yatre | SC-ST ಮೀಸಲಾತಿ ವಿಚಾರದಲ್ಲಿ ಎಚ್‌ಡಿಕೆ ʼಸಿಎಂ ಹೆಣ್ಣೆದೆʼ ಪ್ರಸ್ತಾಪಿಸಿದ್ದು ಏಕೆ?

ಕೆಲವರು ರಾಜಕೀಯಕ್ಕೆ ಭಾಷಣ ಮಾಡುತ್ತಾರೆ. ನಾನು ಮನಸಾರೆ ಮಾತನಾಡುತ್ತಿದ್ದೇನೆ. ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ. ನಾನು ವಿಧಾನಸಭೆಗೆ ಹೋಗುಬೇಕು ಅನ್ನೋದು ನನಗೆ ಮುಖ್ಯವಲ್ಲ. ಸಣ್ಣಪುಟ್ಟ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡಿ ಎಂದು ರಘು ಆಚಾರ್ ಹೇಳಿದರು.

ದೇವರಿಗೆ ರೂಪ ಕೊಟ್ಟವರು- ವಿಶ್ವಕರ್ಮರು
ನಾವು ದೇವರನ್ನು ನೋಡಿಲ್ಲ. ಆದರೆ, ದೇವರಿಗೆ ರೂಪ ಕೊಟ್ಟಿದ್ದು ವಿಶ್ವಕರ್ಮ ಸಮುದಾಯದವರು. ವಿಶ್ವಕರ್ಮ ಸಮುದಾಯಕ್ಕೆ ಕಲ್ಪನಾ ಶಕ್ತಿ ಇದೆ. ಶಿವ, ಕೃಷ್ಣ‌ನ ಮೂರ್ತಿಗಳನ್ನು ಕೆತ್ತಿ ಇದೇ ದೇವರ ರೂಪ ಎಂದು ತೋರಿಸಿಕೊಟ್ಟಿದ್ದಾರೆ. ರೈತರೊಂದಿಗೆ ಒಡನಾಡಿಯಾಗಿ ಕೆಲಸ ಮಾಡಿದ ಸಮುದಾಯದವರು, ನೇಗಿಲು, ನೊಗ, ಗುದ್ದಲಿ ಮಾಡಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದರು.

ವಿಶ್ವಕರ್ಮ ಪೀಠಾಧ್ಯಕ್ಷ ಶ್ರೀ ಅನಂತ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಅನಿಲ್ ಚಿಕ್ಕಮಾದು, ಎಂಎಲ್‌ಸಿ ಡಾ.ತಿಮ್ಮಯ್ಯ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ಇದನ್ನೂ ಓದಿ | SCST ಮೀಸಲಾತಿ | ಕಾಕಾ ಕಾಲೇಲ್ಕರ್‌ ಸಮಿತಿಯಿಂದ ಮಂಡಲ್‌ವರೆಗೆ BJP ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ

Exit mobile version