Site icon Vistara News

ವಿಸ್ತಾರ ವಿಶ್ಲೇಷಣೆ | ಮೂರನೇ ಶಕ್ತಿಕೇಂದ್ರ ಆಗಲಿದ್ದಾರ ಮಲ್ಲಿಕಾರ್ಜುನ ಖರ್ಗೆ?: ಯಾವ ಬಣಕ್ಕೆ ಲಾಭ, ಯಾರಿಗೆ ನಷ್ಟ?

congress to organise scst aikyata samavesha in january

ರಮೇಶ ದೊಡ್ಡಪುರ ಬೆಂಗಳೂರು
ಎಐಸಿಸಿ ಅಧ್ಯಕ್ಷ (Congress President) ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆದಿದ್ದ ಚುನಾವಣೆಯ ಫಲಿಂತಾಶ ಹೊರ ಬಿದ್ದಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರ ಜತೆಗೇ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಮೂರನೇ ಶಕ್ತಿ ಕೇಂದ್ರ ಉದಯವಾಯಿತೇ ಎಂಬ ಮಾತುಗಳೂ ಕೇಳಿಬರುತ್ತಿವೆ.

ಕಳೆದ 22 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಮನೆತನ ಹೊರತಾದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾದಂತಾಗಿದೆ. ಇದು ರಾಷ್ಟ್ರಮಟ್ಟದ ವಿಚಾರವಾದರೆ, ಎಸ್‌. ನಿಜಲಿಂಗಪ್ಪ ಅವರ ನಂತರ ಕಾಂಗ್ರೆಸ್‌ ಅಧ್ಯಕ್ಷರಾದ ಎರಡನೇ ಕನ್ನಡಿಗ ಎಂಬ ಹೆಗ್ಗಳಿಕೆಗೂ ಖರ್ಗೆ ಪಾತ್ರರಾಗಿದ್ದಾರೆ. ಇದು ಒಟ್ಟಾರೆ ಕರ್ನಾಟಕ ಕಾಂಗ್ರೆಸ್‌ನ ವಿಚಾರವಾದರೆ, ಮುಂಬರುವ ವಿಧಾನಸಭೆಯ ಮೇಲೆ ಪರಿಣಾಮ ಬೀರುತ್ತದೆ.

ಈಗಾಗಲೆ ರಾಜ್ಯ ಕಾಂಗ್ರೆಸ್‌ನಲ್ಲಿ ಕನಿಷ್ಟ ಎರಡು ಬಣಗಳಿರುವುದು ಸ್ಪಷ್ಟವಾಗಿದೆ. ಮೂಲ ಕಾಂಗ್ರೆಸಿಗರಲ್ಲಿ ಬಹಳಷ್ಟು ಜನರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಜತೆಗಿದ್ದಾರೆ. ಕೆಲ ಮೂಲ ಕಾಂಗ್ರೆಸಿಗರ ಜತೆಗೆ ಹೊರಗಿನಿಂದ ಬಂವರೆಲ್ಲರೂ ಸಿದ್ದರಾಮಯ್ಯ ಬೆನ್ನಿಗಿದ್ದಾರೆ. ಇದು ಕಾಂಗ್ರೆಸ್‌ ಪಕ್ಷಕ್ಕೆ ಉಪಯುಕ್ತ ಎಂಬ ವ್ಯಾಖ್ಯಾನವನ್ನು ಕೆಲವರು ಮಾಡುತ್ತಿದ್ದಾರೆ.

ಒಂದೆಡೆ ಸಿದ್ದರಾಮಯ್ಯ, ಮತ್ತೊಂದೆಡೆ ಡಿ.ಕೆ. ಶಿವಕುಮಾರ್‌ ಬಣ ಇರುವುದರಿಂದ ಕಾಂಗ್ರೆಸ್‌ ಪಕ್ಷದಲ್ಲಿ ಸ್ಪರ್ಧಾತ್ಮಕತೆ ಏರ್ಪಡುತ್ತದೆ. ಯಾರ ಕಡೆಯವರು ಹೆಚ್ಚಿನ ಶಾಸಕರಾಗುತ್ತಾರೆಯೋ ಅವರು ಸಿಎಂ ಆಗುತ್ತಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಹೆಚ್ಚು ಶಾಸಕರು ತಮ್ಮ ಬೆಂಬಲಕ್ಕೆ ಇದ್ದರೆ ತಮ್ಮನ್ನೇ ಹೈಕಮಾಂಡ್‌ ಸಹ ಸಿಎಂ ಎಂದು ಘೋಷಿಸುತ್ತದೆ ಎಂದು ಇಬ್ಬರಿಗೂ ಎನ್ನಿಸುತ್ತದೆ. ಹಾಗಾಗಿ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಂಡುಬರಲು ಎಲ್ಲರೂ ಪ್ರಯತ್ನಿಸುತ್ತಾರೆ ಎಂದು ಕೆಲ ಕಾಂಗ್ರೆಸಿಗರು ಥಿಯರಿ ಹರಿಬಿಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಇತಿಹಾಸ ಹಾಗಿಲ್ಲ.

ಒಬ್ಬ ನಾಯಕನಿಗೆ ಟಿಕೆಟ್‌ ನೀಡಿದರೆ ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ಬೆಂಬಲ ನೀಡುವುದಿಲ್ಲ. ಸುಮ್ಮನೆಯೂ ಕೂರುವುದಿಲ್ಲ. ಟಿಕೆಟ್‌ ಸಿಕ್ಕವನನ್ನೇ ಸೋಲಿಸಲು ಪ್ರತಿಪಕ್ಷಗಳೊಂದಿಗೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಕೈ ಜೋಡಿಸಿದ ಉದಾಹರಣೆಗಳೂ ಇವೆ. ಎಲ್ಲಕ್ಕಿಂತ ಹೆಚ್ಚಾಗಿ, ಮುಂದೆ ತಮ್ಮ ಸಿಎಂ ಕುರ್ಚಿಗೆ ಅಡ್ಡವಾಗಬಹುದು ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರನ್ನೇ ಸಿದ್ದರಾಮಯ್ಯ ಸೋಲಿಸಿದರು ಎಂಬ ಮಾತು ಕಾಂಗ್ರೆಸ್‌ನಲ್ಲಿ ಹಾಸುಹೊಕ್ಕಾಗಿದೆ. ಹೀಗಾಗಿ, ಇಬ್ಬರ ಬಣದಿಂದ ಪಕ್ಷಕ್ಕೆ ಲಾಭವಾಗುತ್ತದೆ ಎಂಬ ಥಿಯರಿಯನ್ನು ನಂಬಲು ಯಾವುದೇ ಪುರಾವೆ, ಕಾಂಗ್ರೆಸ್‌ ಮಟ್ಟಿಗಂತೂ ಇಲ್ಲ.

ಅಲ್ಲಲ್ಲಿ ಘರ್ಷಣೆ

ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಭವ್ಯ ಕಾರ್ಯಕ್ರಮವಾಗಿ ಆಯೋಜನೆ ಮಾಡಿದಾಗ ಎರಡೂ ಬಣಗಳ ನಡುವೆ ಸಂಘರ್ಷ ಮಿತಿ ಮೀರಿತ್ತು. ನಾಯಕರ ಮಟ್ಟದಲ್ಲಿ ಪರೋಕ್ಷ ಯುದ್ಧದಂತೆಯೇ ಇದ್ದ ಭಿನ್ನಾಭಿಪ್ರಾಯ ಕಾರ್ಯಕರ್ತರ ಮಟ್ಟಕ್ಕೂ ಇಳಿದಿದೆ. ಕಾರ್ಯಕರ್ತರನ್ನು ಸಂಘಟಿಸುವ ಸಲುವಾಗಿ ಕಳೆದ ತಿಂಗಳು ಕೋಲಾರದ ಕಾಂಗ್ರೆಸ್‌ ಭವನದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾಜಿ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಹಾಗೂ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಬೆಂಬಲಿಗರ ನಡುವೆ ತಿಕ್ಕಾಟ ನಡೆದಿತ್ತು. ಗದ್ದಲ ಹೆಚ್ಚಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ಕೆಲ ಕಾರ್ಯಕರ್ತರು ವೇದಿಕೆಯ ಮೇಲೇರಿ ಪ್ರತಿಭಟನೆ ನಡೆಸಿದ್ದರು. ಹಾಸನದಲ್ಲಿ ಸ್ವಾತಂತ್ರ್ಯ ನಡಿಗೆ ಆಯೋಜಿಸುವ ಸಂಬಂಧ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಗದ್ದಲ ಏರ್ಪಟ್ಟಿತ್ತು.

ಇಬ್ಬರನ್ನೂ ಒಂದು ಮಾಡಲು ರಾಹುಲ್‌ ಗಾಂಧಿ ಹರಸಾಹಸ ಪಡುತ್ತಿದ್ದಾರೆ ಎಂಬುದು, ದಾವಣಗೆರೆಯಲ್ಲಿ ಸಿದ್ದರಾಮೋತ್ಸವದ ಸಂದರ್ಭದಲ್ಲಿ ಕಂಡುಬಂದಿತ್ತು. ಇಬ್ಬರೂ ಪರಸ್ಪರ ತಬ್ಬಿಕೊಳ್ಳಿ ಎಂದು ಕೈಸನ್ನೆ ಮಾಡಿದ್ದನ್ನು ಇಡೀ ದೇಶವೇ ನೋಡಿತ್ತು. ಇದೀಗ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಆಯೋಜಿಸಿರುವ ಯಾತ್ರೆಯಲ್ಲೂ ಈ ಯತ್ನವನ್ನು ರಾಹುಲ್‌ ಮುಂದುವರಿಸಿದ್ದಾರೆ. ಇದೆಲ್ಲದರ ನಡುವೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತಟಸ್ಥರ ಬೆಂಬಲ ಸಿಗಬಹುದೇ?

ಕಾಂಗ್ರೆಸ್‌ನಲ್ಲಿ ಅನಿವಾರ್ಯವಾಗಿ ಎರಡು ಬಣವಾಗಿದೆ. ಆದರೆ ಅಸಲಿಗೆ ಮೂರನೇ ಬಣ ಇದ್ದೇ ಇದೆ. ಅತ್ತ ಸಿದ್ದರಾಮಯ್ಯ ಅವರ ಜತೆಗೂ ಗುರುತಿಸಿಕೊಳ್ಳಲು ಇಷ್ಟಪಡದೇ, ಇತ್ತ ಡಿ.ಕೆ. ಶಿವಕುಮಾರ್‌ ಅವರನ್ನು ಕಿರಿಯ ವಯಸ್ಸು, ಆಕ್ರಮಣಕಾರಿ ನಡವಳಿಕೆಯಿಂದಾಗಿ ಒಪ್ಪಿಕೊಳ್ಳಲಾಗದ ಅನೇಕ ಹಿರಿಯ, ಮೂಲ ಕಾಂಗ್ರೆಸಿಗರು ಇದ್ದಾರೆ. ಆದರೆ ಅವರು ಇದೀಗ ಇರುವ ಇಬ್ಬರು ನಾಯಕರಲ್ಲಿ ಒಬ್ಬರನ್ನು ಅನಿವಾರ್ಯವಾಗಿ ಒಪ್ಪಿಕೊಡು ಸುಮ್ಮನಿದ್ದಾರೆ.

ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದು ಇಂತಹ ಅನೇಕರಿಗೆ ನಿರೀಕ್ಷೆಯನ್ನು ಗರಿಗೆದರಿಸಿದೆ. ಖರ್ಗೆ ಅವರ ಬೆನ್ನಿಗೆ ನಿಂತರೆ, ಹಿರಿಯರೊಂದಿಗೆ ಇದ್ದಂತೆಯೂ ಆಗುತ್ತದೆ, ಪಕ್ಷಕ್ಕೆ ನಿಷ್ಠೆಯನ್ನೂ ತೋರಿದಂತೆ ಆಗುತ್ತದೆ. ಹೀಗಾಗಿ ನಿಧಾನವಾಗಿ ಖರ್ಗೆ ಪರ ವಾಲುವ ಸಾಧ್ಯತೆಗಳಿವೆ. ಈ ರೀತಿ ಆದರೆ ಡಿ.ಕೆ. ಶಿವಕುಮಾರ್‌ ಅವರಿಗೆ ಹೆಚ್ಚು ನಷ್ಟವಾಗುತ್ತದೆ.

ದಲಿತ ಎಂಬ ಪ್ಲಸ್‌ ಪಾಯಿಂಟ್‌

ಖರ್ಗೆ ಏನೇ ಎಂದರೂ ಮೂಲ ಕಾಂಗ್ರೆಸಿಗರ ಪರ ನಿಲ್ಲುತ್ತಾರೆ ಎನ್ನುವುದು ಶತಃಸಿದ್ಧ. ಇದು ನೇರವಾಗಿ ಸಿದ್ದರಾಮಯ್ಯ ಅವರಿಗೆ ನೆಗೆಟಿವ್‌ ಆಗಬಹುದು. ತಾನು ದಲಿತರ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ಖರ್ಗೆ ಅವರ ವಿರುದ್ಧ ಹೋಗಲು ಸಾಧ್ಯವಾಗುವುದಿಲ್ಲ. ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ಬೇಡಿಕೆ ಅನೇಕ ದಿನಗಳಿಂದಲೂ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್‌ನಲ್ಲಿ ದಲಿತರೊಬ್ಬರು ಸಿಎಂ ಅಭ್ಯರ್ಥಿ ಆಗುವುದು ದೂರದ ಮಾತು. ಬಿಜೆಪಿಯಲ್ಲಿ ಅನೇಕ ಎಸ್‌ಸಿಎಸ್‌ಟಿ ಮುಖಂಡರು ಇದ್ದಾರಾದರೂ ಸಿಎಂ ಅಭ್ಯರ್ಥಿಯಾಗಿ ಪರಿಗಣಿಸುವಷ್ಟು ಸಂಘಟನೆಯಲ್ಲಿ, ಸಂಘ ಪರಿವಾರದ ವಿಚಾರಗಳನ್ನು ಒಪ್ಪಿಕೊಂಡಿರುವವರು ಕಾಣುತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ ಪಕ್ಷ ಮಾತ್ರವೇ ದಲಿತ ಸಿಎಂ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಖರ್ಗೆ ಅವರ ಪರವಾಗಿ ದಲಿತ ಸಮುದಾಯ ನಿಲ್ಲಬಹುದು. ಹೀಗಾದರೆ ಸಿದ್ದರಾಮಯ್ಯ ಅವರ ಶಕ್ತಿ ಕುಂದುವ ಸಾಧ್ಯತೆಯಿದೆ ಎಂಬ ಚರ್ಚೆಗಳು ಪಕ್ಷದಲ್ಲಿ ನಡೆಯುತ್ತಿವೆ.

ಖರ್ಗೆ ಮನಸ್ಸು ಮಾಡುತ್ತಾರ?

ಖರ್ಗೆ ಅವರ ಆಯ್ಕೆಯಿಂದ ರಾಜ್ಯದ ಮೂಲ ಕಾಂಗ್ರೆಸಿಗರಲ್ಲಿ, ದಲಿತದಲ್ಲಿ ನಿರೀಕ್ಷೆ ಚಿಗುರಿದೆ. ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ ಆಗಿರುವುದರಿಂದ ಸಿದ್ದರಾಮಯ್ಯ ಬಣಕ್ಕೆ ನಷ್ಟವಾಗುತ್ತದೆಯೇ? ಡಿ.ಕೆ. ಶಿವಕುಮಾರ್‌ ಹೆಚ್ಚು ಪೆಟ್ಟು ತಿನ್ನುತ್ತಾರ? ಎನ್ನುವ ಚರ್ಚೆ ಇದೆ. ಆದರೆ ಇದೆಲ್ಲ ಚರ್ಚೆಗಳಲ್ಲಿ ಯಾವುದೇ ಸಂಭವಿಸಬೇಕಾದರೂ ಅದು ಖರ್ಗೆ ಅವರ ನಡೆಯನ್ನು ಆಧರಿಸಿದೆ.

ಖರ್ಗೆ ಹೇಳಿಕೇಳಿ ಪಕ್ಷ ನಿಷ್ಠರು. ಪಕ್ಷ ನಿಷ್ಠರು ಎಂದರೆ ನೆಹರೂ ಕುಟುಂಬದ ನಿಷ್ಠರು. ಇದೇ ಕಾರಣಕ್ಕೆ ಕಾಂಗ್ರೆಸ್‌ನ ಮೊದಲ ಕುಟುಂದ ಅಭ್ಯರ್ಥಿಯಾಗಿ ಭರ್ಜರಿ ಅಂತರದಲ್ಲಿ ಜಯಿಸಿದ್ದಾರೆ. ಕರ್ನಾಟಕದಲ್ಲಿ ಪವರ್‌ ಸೆಂಟರ್‌ ಆಗಲು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಸಿರು ನಿಶಾನೆ ತೋರುತ್ತಾರ? ಎನ್ನುವುದು ಮೊದಲ ಪ್ರಶ್ನೆ. ಸ್ವತಃ ಯಾವುದೇ ಬಣ ಘರ್ಷಣೆಯಲ್ಲಿ ಕಾಣಿಸಿಕೊಳ್ಳದ ಖರ್ಗೆ, ಒತ್ತಡ ತಂತ್ರಕ್ಕೆ ಮುಂದಾಗದ ಖರ್ಗೆ ತಾವಾಗಿಯೇ ಇನ್ನೊಂದು ಪವರ್‌ ಸೆಂಟರ್‌ ಆಗಲು ಮುಂದಾಗುತ್ತಾರೆ ಎಂದು ನಿರೀಕ್ಷಿಸುವಂತಿಲ್ಲ. ಹಾಗಾಗಿ, ಕಾಂಗ್ರೆಸ್‌ನ ನಿಜವಾದ ಹೈಕಮಾಂಡ್‌ ಏನು ಹೇಳುತ್ತದೆ ಎನ್ನುವುದರ ಆಧಾರದಲ್ಲಿ ಕರ್ನಾಟಕದಲ್ಲಿ ಮೂರನೇ ಪವರ್‌ ಸೆಂಟರ್‌ ಸೃಜನೆ, ಅದರಿಂದ ಉಳಿದೆರಡು ಬಣಗಳ ಮೇಲಿನ ಪರಿಣಾಮ ಕಾಣಿಸಲಿದೆ.

ಇದನ್ನೂ ಓದಿ | ಮಲ್ಲಿಕಾರ್ಜುನ ಖರ್ಗೆಗೆ ತಮ್ಮ ನಿವಾಸದಲ್ಲಿ ಭೇಟಿಗೆ ಅವಕಾಶ ಕೊಡದ ಸೋನಿಯಾ ಗಾಂಧಿ; ಶಿಷ್ಟಾಚಾರ ಪಾಲಿಸಿದ ಮಾಜಿ ಅಧ್ಯಕ್ಷೆ

Exit mobile version