ರಾಜ್ಯಾದ್ಯಂತ ನಕಲಿ ಆಸ್ಪತ್ರೆಗಳು (Fake Hospitals), ಕ್ಲಿನಿಕ್‌ಗಳು, ಪ್ರಯೋಗಾಲಯಗಳು ಹಾಗೂ ನಕಲಿ ವೈದ್ಯರ (Fake Doctors) ವಿರುದ್ಧ ಕೊನೆಗೂ ಆರೋಗ್ಯ ಇಲಾಖೆಯು (Health Department) ಸಮರ ಸಾರಿರುವುದು ಜನ ನಿಟ್ಟುಸಿರು ಬಿಡುವ ಸಂಗತಿಯಾಗಿದೆ. ರಾಜ್ಯದ (Karnataka) ಹಲವೆಡೆ ಕಾರ್ಯನಿರ್ವಹಿಸುತ್ತಿದ್ದ ಸುಮಾರು 1,093 ನಕಲಿ ಕ್ಲಿನಿಕ್‌ಗಳು, ಲ್ಯಾಬ್‌ಗಳಿಗೆ ಬೀಗ ಜಡಿದಿರುವುದು ಸ್ವಾಗತಾರ್ಹ ಕ್ರಮವಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಪದವಿ ಪ್ರಮಾಣಪತ್ರ ಪಡೆಯುವುದು, ಪರವಾನಗಿ ಇಲ್ಲದೆ, ನೋಂದಣಿ ಮಾಡಿಸಿಕೊಳ್ಳದೆ, ವೈದ್ಯಕೀಯ ಪದವಿ ಸೇರಿ ಅರ್ಹ ವಿದ್ಯಾರ್ಹತೆಯೇ ಇಲ್ಲದೆ ಕ್ಲಿನಿಕ್‌ಗಳನ್ನು ತೆರೆದುಕೊಂಡು, ಭ್ರೂಣ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ಸೇರಿ ಹತ್ತಾರು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸಾವಿರಾರು ದೂರುಗಳ ಬಳಿಕ ಆರೋಗ್ಯ ಇಲಾಖೆಯು ಬೀಗ ಜಡಿದಿರುವುದು ಸಕಾರಾತ್ಮಕ ಕ್ರಮವಾಗಿದೆ.
ಕಳೆದ ವರ್ಷಾಂತ್ಯಕ್ಕೆ 1,775 ನಕಲಿ ವೈದ್ಯರನ್ನು ಪತ್ತೆ ಮಾಡಲಾಗಿದೆ. ಈಗಲೂ ಸಾವಿರಾರು ನಕಲಿ ವೈದ್ಯರು ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿಯೇ ಸುಮಾರು 54 ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಯು ಮುಟ್ಟುಗೋಲು ಹಾಕಿಕೊಂಡಿದೆ. 24 ನಕಲಿ ಕ್ಲಿನಿಕ್‌ಗಳ ವೈದ್ಯರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ. ಕೋರ್ಟ್‌ನಲ್ಲಿ 143 ಪ್ರಕರಣಗಳು ದಾಖಲಾಗಿವೆ. ಇವೆಲ್ಲ ಆತಂಕಕಾರಿ ಬೆಳವಣಿಗೆಗಳಾಗಿದ್ದು, ಸಂಪೂರ್ಣವಾಗಿ ನಕಲಿ ವೈದ್ಯರ ಜಾಲವನ್ನು ಭೇದಿಸಬೇಕಾಗಿದೆ. ಈ ದಿಸೆಯಲ್ಲಿ ಆರೋಗ್ಯ ಇಲಾಖೆಯು ಮೊದಲ ಹೆಜ್ಜೆ ಇರಿಸಿರುವುದು ಶ್ಲಾಘನೀಯವಾಗಿದೆ.
ಕೆಲ ತಿಂಗಳ ಹಿಂದಷ್ಟೇ ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ-ಹಾಡ್ಯ ಗ್ರಾಮದ ಕಬ್ಬಿನಗದ್ದೆಯ ಮಧ್ಯಭಾಗದಲ್ಲಿದ್ದ ‘ಆಲೆಮನೆʼಯಲ್ಲಿ ಭ್ರೂಣಲಿಂಗ ಪತ್ತೆಯ ದೊಡ್ಡ ದಂಧೆಯೇ ಬಯಲಾಗಿದ್ದು ಕರ್ನಾಟಕವನ್ನೇ ಬೆಚ್ಚಿಬೀಳಿಸಿತ್ತು. ಹುಳ್ಳೇನಹಳ್ಳಿ ಗ್ರಾಮದ ನಯನ್ ಮತ್ತು ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ನವೀನ್ ಎಂಬಿಬ್ಬರು ಭಾವ ಹಾಗೂ ಬಾಮೈದುನರು ಆಲೆಮನೆಯನ್ನು ಬಾಡಿಗೆಗೆ ಪಡೆದು ಪಕ್ಕದಲ್ಲೇ ಸಣ್ಣದಾದ ಶೆಡ್ ನಿರ್ಮಿಸಿ ಸ್ಕ್ಯಾನಿಂಗ್ ನಡೆಸುತ್ತಿದ್ದರು. ಮತ್ತೊಂದು ಗ್ಯಾಂಗ್ ಮಧ್ಯವರ್ತಿಗಳ ಸಹಾಯದಿಂದ ಗರ್ಭಿಣಿಯರನ್ನು ಸಂಪರ್ಕಿಸಿ, ಬಳಿಕ ಬೆಂಗಳೂರಿನಿಂದ ತಮ್ಮ ಖಾಸಗಿ ವಾಹನಗಳಲ್ಲಿ ಕರೆದುಕೊಂಡು ಹೋಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿತ್ತು. ಅಲ್ಲಿ ಭ್ರೂಣ ಹೆಣ್ಣು ಎನ್ನುವುದು ತಿಳಿದರೆ, ಮೈಸೂರಿಗೆ ಕರೆದುಕೊಂಡು ಬಂದು ಗರ್ಭಪಾತ ಮಾಡಿಸಲಾಗುತ್ತಿತ್ತು. ಇಲ್ಲಿ ಸುಮಾರು 900 ಭ್ರೂಣಗಳನ್ನು ಹತ್ಯೆ ಮಾಡಲಾಗಿತ್ತು ಎಂಬ ಸಂಗತಿಯೇ ಎಲ್ಲರನ್ನೂ ತಲೆತಗ್ಗಿಸುವಂತೆ ಮಾಡುತ್ತವೆ. ಇಂತಹ ಪ್ರಕರಣಗಳು ನಾಗರಿಕ ಸಮಾಜಕ್ಕೆ ಮಾರಕವಾಗಿವೆ.
ಆರೋಗ್ಯ ಇಲಾಖೆಯೇನೋ ನಕಲಿ ಆಸ್ಪತ್ರೆಗಳಿಗೆ ಬೀಗ ಜಡಿದಿದೆ. ಒಂದಷ್ಟು ಆಸ್ಪತ್ರೆಗಳಿಗೆ ದಂಡ ವಿಧಿಸಲಾಗಿದೆ. ಆದರೆ, ಕೆಲ ತಿಂಗಳಲ್ಲಿ ನಕಲಿ ವೈದ್ಯರು ದಂಡ ಕಟ್ಟಿ, ಮತ್ತದೆ ನಕಲಿ ದಾಖಲೆ ಸೃಷ್ಟಿಸಿ, ಯಾರ ಭಿಡೆ, ಅಡ್ಡಿ-ಆತಂಕವಿಲ್ಲದೆ ನಕಲಿ ಆಸ್ಪತ್ರೆಗಳನ್ನು ತೆರೆದುಕೊಂಡು ಹಣ ಗಳಿಸಲು ಆರಂಭಿಸುತ್ತಾರೆ. ಭ್ರೂಣಲಿಂಗ ಪತ್ತೆ, ಹೆಣ್ಣು ಭ್ರೂಣದ ಹತ್ಯೆ, ಜನರಿಗೆ ಬೇಕಾಬಿಟ್ಟಿ ಚಿಕಿತ್ಸೆ ನೀಡುವುದು, ಹಣ ವಂಚಿಸುವುದು ಸೇರಿ ಹತ್ತಾರು ಅಕ್ರಮಗಳು ನಡೆಯುತ್ತವೆ. ಹಾಗಾಗಿ, ಆರೋಗ್ಯ ಇಲಾಖೆಯು ಆರಂಭ ಶೂರತ್ವ ಪ್ರದರ್ಶಿಸಬಾರದು. ನಿರಂತರವಾಗಿ ನಕಲಿ ವೈದ್ಯರ ಮೇಲೆ, ಪರವಾನಗಿಯನ್ನೇ ಇಲ್ಲದೆ ನಡೆಸುವ ಕ್ಲಿನಿಕ್‌ಗಳ ಮೇಲೆ ನಿಗಾ ಇಡಬೇಕು. ನಕಲಿ ವೈದ್ಯರನ್ನು ಜೈಲಿಗೆ ಕಳುಹಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು. ಭಾರಿ ಪ್ರಮಾಣದಲ್ಲಿ ದಂಡ ವಿಧಿಸಬೇಕು. ಶಾಶ್ವತವಾಗಿ ನಕಲಿ ಆಸ್ಪತ್ರೆಗಳನ್ನು ಮುಚ್ಚಿಸಬೇಕು. ಜನರಲ್ಲಿ ಇವುಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇಷ್ಟೆಲ್ಲ ಕ್ರಮಗಳನ್ನು ದೀರ್ಘಾವಧಿಗೆ ತೆಗೆದುಕೊಂಡಾಗ ಮಾತ್ರ ನಕಲಿ ವೈದ್ಯರು, ನೋಂದಣಿಯಾಗದ ಆಸ್ಪತ್ರೆಗಳ ಹಾವಳಿ ತಪ್ಪುತ್ತದೆ. ಜನರು ಕೂಡ ನಿಟ್ಟುಸಿರು ಬಿಡುತ್ತಾರೆ. ಹೆಣ್ಣು ಭ್ರೂಣಗಳು ಜನಿಸಲು, ಅದೇ ಹೆಣ್ಣುಮಕ್ಕಳು ಸಮಾಜಕ್ಕೆ ಬೆಳಕಾಗಲು ಕಾರಣವಾಗುತ್ತದೆ. ಇಷ್ಟೆಲ್ಲ ಕ್ರಮಗಳನ್ನು ಆರೋಗ್ಯ ಇಲಾಖೆಯು ತೆಗೆದುಕೊಳ್ಳಲಿ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಹೆಣ್ಣು ಭ್ರೂಣ ಹತ್ಯೆ ತಡೆ ಕಾರ್ಯಪಡೆ ಶೀಘ್ರ ಜಾರಿಯಾಗಲಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ