ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 17 ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಸೋಮವಾರ ಲೋಕಾಯುಕ್ತ ದಾಳಿ (Lokayukta Raid) ನಡೆದಿದೆ. ಬೆಂಗಳೂರು, ತುಮಕೂರು, ಮಂಡ್ಯ, ಚಿತ್ರದುರ್ಗ ಸೇರಿ ಒಟ್ಟು 69ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದ ಮೆಗಾ ರೇಡ್‌ನಲ್ಲಿ ನಗದು, ಚಿನ್ನ, ಬೆಳ್ಳಿ, ಆಸ್ತಿ ಪತ್ರಗಳು ಸೇರಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಕೈಯಿಟ್ಟ ಕಡೆಯೆಲ್ಲಾ ಕಂತೆ ಕಂತೆ ನೋಟುಗಳು, ಸರಿಯಾದ ದಾಖಲೆಗಳಿಲ್ಲದ ಚಿನ್ನಾಭರಣಗಳು ಕಂಡುಬಂದಿವೆ. ಒಬ್ಬೊಬ್ಬ ಅಧಿಕಾರಿಯ ಬಳಿಯೂ ಸರಿಯಾದ ಲೆಕ್ಕವಿಲ್ಲದ ಕೋಟ್ಯಂತರ ರೂಪಾಯಿ ನಗದು ಮನೆಯಲ್ಲೇ ಇತ್ತು. ಈ ಅಧಿಕಾರಿಗಳಲ್ಲಿ ಬಿಬಿಎಂಪಿ, ಅರಣ್ಯ ಇಲಾಖೆ, ಕಂದಾಯ ಅಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿಗಳು ಹೀಗೆ ಎಲ್ಲ ವಿಭಾಗದವರೂ ಇದ್ದಾರೆ. ಭ್ರಷ್ಟಾಚಾರಕ್ಕೆ ಯಾವುದೇ ಗಡಿಗಳಿಲ್ಲ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ.
ಸರ್ಕಾರಿ ವ್ಯವಸ್ಥೆಯಲ್ಲಿ ದಿನೇದಿನೆ ಭ್ರಷ್ಟಾಚಾರ ಮಿತಿ ಮೀರುತ್ತಿರುವುದಕ್ಕೆ ಇದು ಸಾಕ್ಷಿ. ಈಗ ದಾಳಿ ನಡೆದಿರುವುದು ಮತ್ತು ಬೆಳಕಿಗೆ ಬಂದಿರುವುದು ಭ್ರಷ್ಟ ಲೋಕದ ಅಣುವಿನಷ್ಟು ಮಾತ್ರವೇ ಇರಬಹುದು. ಇನ್ನಷ್ಟು ದಾಳಿಗಳು ನಡೆಯಬೇಕು; ಸಿಕ್ಕಿಬಿದ್ದ ಭ್ರಷ್ಟರಿಗೆ ಶಿಕ್ಷೆಯೂ ಆಗಬೇಕು. ಒಂಬುಡ್ಸ್‌ಮನ್‌ಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ, ಭ್ರಷ್ಟಾಚಾರದ ಬಗ್ಗೆ ದೂರು ನೀಡುವವರು, ಮಾಹಿತಿ ಕೊಡುವವರು ಕೂಡ ಚುರುಕಾಗುತ್ತಾರೆ. ಶಿಕ್ಷೆಯೂ ಖಾತ್ರಿಯಾಗುವುದಾದರೆ, ಯಾರದೇ ಭಯವಿಲ್ಲದೆ ಮಾಹಿತಿ ಕೊಡುತ್ತಾರೆ. ಕೈತುಂಬ ಸಂಬಳ, ಮನೆ, ಕಾರು ಇತ್ಯಾದಿ ಸಕಲ ಸೌಲಭ್ಯವನ್ನು ಸರ್ಕಾರ ನೀಡಿದಾಗಲೂ ಈ ಅಧಿಕಾರಿಗಳು ಜನಸಾಮಾನ್ಯರ ಲಂಚದ ಹಣಕ್ಕೆ ಕೈ ಚಾಚಿ ಹಣ, ಆಸ್ತಿಪಾಸ್ತಿ ಕೂಡಿ ಹಾಕುತ್ತಿರುವುದು ನಾಚಿಕೆಗೇಡು. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವುದು ಈಗ ವ್ಯಂಗ್ಯದ ಸಂಗತಿಯಾಗಿಬಿಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಸಣ್ಣಪುಟ್ಟ ಕೆಲಸಕ್ಕೂ, ಮರಣ ಪ್ರಮಾಣ ಪತ್ರ ಪಡೆಯಲೂ ಪರದಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಮಗುವಿನ ಮುಖ ತೋರಿಸಲೂ ಹಣ ಕೀಳುವುದು, ಹೆಣ ಕೂಡ ಕೊಡದಿರುವುದು ಸಾಮಾನ್ಯವಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಂಬುದು ಒಂದು ವಿಚಾರವೇ ಅಲ್ಲ ಎಂಬಂತೆ ಜನ ಹೊಂದಿಕೊಳ್ಳತೊಡಗಿರುವುದು ಅಸಹಾಯಕತೆಯಿಂದಲೇ ಹೊರತು, ಮನಸ್ಫೂರ್ತಿಯಿಂದ ಅಲ್ಲ. ಈ ಭ್ರಷ್ಟ ವ್ಯವಸ್ಥೆ ಕೊನೆಗೊಳ್ಳುವುದು ಯಾವಾಗ?
ಲೋಕಾಯುಕ್ತ ದಾಳಿಗಳನ್ನೇನೋ ನಡೆಸುತ್ತದೆ. ಆದರೆ ಶಿಕ್ಷೆಯ ಪ್ರಮಾಣ ಅದೇ ಪ್ರಮಾಣದಲ್ಲಿ ಆಗುವುದಿಲ್ಲ. ಬಲೆಗೆ ಬಿದ್ದು ಸಸ್ಪೆಂಡ್ ಆದ ಅಧಿಕಾರಿಗಳು ಕೆಲವೇ ತಿಂಗಳಲ್ಲಿ ಮತ್ತೆ ನೇಮಕವಾಗಿ ಪ್ರಮೋಷನ್ ಪಡೆದು ಮೆರೆಯುತ್ತಾರೆ. ಲೋಕಾಯುಕ್ತವು ಮುಖ್ಯಮಂತ್ರಿ, ಯಾವುದೇ ಸಚಿವ ಅಥವಾ ಕಾರ್ಯದರ್ಶಿ, ರಾಜ್ಯ ಶಾಸಕಾಂಗದ ಸದಸ್ಯ ಅಥವಾ ಯಾವುದೇ ಇತರ ಸಾರ್ವಜನಿಕ ಸೇವಕರ ಮೇಲಿನ ಭ್ರಷ್ಟಾಚಾರದ ಆರೋಪವನ್ನು ತನಿಖೆ ಮಾಡಬಲ್ಲ ಅಧಿಕಾರವನ್ನು ಹೊಂದಿದೆ. ತಪ್ಪಿತಸ್ಥರೆಂದು ಕಂಡುಬಂದರೆ ಅಂಥವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬಹುದು. ಅಗತ್ಯವಿದ್ದರೆ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಉಲ್ಲೇಖಿಸಬಹುದು. ಆದರೆ ಇವರು ಶಿಕ್ಷೆ ಘೋಷಿಸುವ ಅಧಿಕಾರವನ್ನು ಹೊಂದಿಲ್ಲ. ಶಿಕ್ಷೆಯಾಗದೇ ಹೋದರೆ ದಾಳಿಗಳನ್ನು ನಡೆಸಿಯೂ ಪ್ರಯೋಜನವಿಲ್ಲ. ಹೀಗಾಗಿ ಲೋಕಾಯುಕ್ತ ಸಂಸ್ಥೆ ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ದಾಳಿ ಮಾಡಿದರೆ ಸಾಲದು. ನಿರಂತರವಾಗಿ ದಾಳಿ ನಡೆಸಿ ಲಂಚಕೋರ ಅಧಿಕಾರಿಗಳನ್ನು ಬಲೆಗೆ ಹಾಕಬೇಕು. ದೃಢವಾದ ಸಾಕ್ಷಿಗಳನ್ನು ಕಲೆಹಾಕಿ, ಪ್ರಕರಣದ ಬೆನ್ನುಹತ್ತಿ ಶಿಕ್ಷೆ ಕೊಡಿಸುವುದು ಲೋಕಾಯುಕ್ತಕ್ಕೆ ಸಾಧ್ಯವಾಗಬೇಕು. ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆದರೆ, ಸರ್ಕಾರಿ ವ್ಯವಸ್ಥೆ ಮುಂದೆ ಅಂಥ ಭ್ರಷ್ಟಾಚಾರ ನಡೆಸಲು ಅಂಜುತ್ತದೆ. ಜನಸಾಮಾನ್ಯರು ಕೂಡ ಭ್ರಷ್ಟತೆಯನ್ನು ಪ್ರಶ್ನಿಸಲು, ದೂರು ಕೊಡಲು ಮುಂದೆ ಬರುತ್ತಾರೆ.