Site icon Vistara News

ವಿಸ್ತಾರ ಸಂಪಾದಕೀಯ: ಕಾವೇರಿ ಜಲ ಬಿಕ್ಕಟ್ಟು; ಪ್ರತಿಬಾರಿ ಕರ್ನಾಟಕದ ಮೇಲೆ ಒತ್ತಡ ಏಕೆ?

Cauvery Water

ಮಿಳುನಾಡಿಗೆ (Tamil Nadu) ಹದಿನೈದು ದಿನಗಳವರೆಗೆ ಪ್ರತೀ ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ (Karnataka) ಆದೇಶ ನೀಡಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿದ ಆದೇಶವನ್ನೇ ಅದು ಎತ್ತಿಹಿಡಿದಿದೆ. ಇದರೊಂದಿಗೆ ಕರ್ನಾಟಕ ನೀರು ಬಿಡಲೇಬೇಕಾದ ಒತ್ತಡಕ್ಕೆ ಒಳಗಾಗಿದೆ. ಆಗಸ್ಟ್ 10ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ 10000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿತ್ತು. ಆದರೆ ಈ ಆದೇಶವನ್ನ ವಿರೋಧಿಸಿ, ಅವತ್ತು ನಡೆದಿದ್ದ ಸಭೆಯನ್ನು ತಮಿಳುನಾಡು ಬಹಿಷ್ಕರಿಸಿತ್ತು. ಅದಾದ ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ನಡುವೆ ಸುಪ್ರೀಂ ಕೋರ್ಟ್‌ ಕಾವೇರಿ ಪೀಠವೊಂದನ್ನು ಸ್ಥಾಪನೆ ಮಾಡಿದ್ದಲ್ಲದೆ, ಕಾವೇರಿ ಪ್ರಾಧಿಕಾರದಲ್ಲಿ ವಿವಾದವನ್ನು ತೀರ್ಮಾನ ಮಾಡಿಕೊಂಡು ಬನ್ನಿ ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ಮುಂದೂಡಿತ್ತು. ಸೋಮವಾರ ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕವು ಮುಂದಿನ 15 ದಿನಗಳ ಕಾಲ ದಿನಕ್ಕೆ 5 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂದು ಸೂಚಿಸಿತ್ತು. ಮಂಗಳವಾರ ನಡೆದ ಪ್ರಾಧಿಕಾರದ ಸಭೆ ಇದನ್ನು ಎತ್ತಿ ಹಿಡಿದಿದೆ(vistara Editorial).

ಆದರೆ ರಾಜ್ಯ ಸರ್ಕಾರ ಈ ಆದೇಶವನ್ನು ತಕ್ಷಣಕ್ಕೆ ಪಾಲಿಸಬೇಕಾಗಿಲ್ಲ. ಸೆಪ್ಟೆಂಬರ್‌ 1ರಂದು ಸುಪ್ರೀಂ ಕೋರ್ಟ್‌ನ ಕಾವೇರಿ ಪೀಠದಲ್ಲಿ ನಡೆಯಲಿರುವ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ತನ್ನ ನಿಲುವನ್ನು ಸ್ಪಷ್ಟಪಡಿಸಬಹುದಾಗಿದೆ. ಆದರೆ ಕಾವೇರಿ ಬಿಕ್ಕಟ್ಟು ಪ್ರತಿವರ್ಷ ಉಲ್ಬಣಗೊಂಡಾಗಲೂ ಉಭಯ ರಾಜ್ಯಗಳಲ್ಲಿ ಎಂಥ ಪರಿಸ್ಥಿತಿ ಉಂಟಾಗುತ್ತದೆ ಎಂದು ಗೊತ್ತಿರುವವರಿಗೆ ಇಂಥ ತೀರ್ಪುಗಳು ತಂದೊಡ್ಡಬಹುದಾದ ಸಂಕಷ್ಟದ ಅರಿವಿದ್ದೇ ಇದೆ. ಈಗಾಗಲೇ ಕೃಷ್ಣರಾಜಸಾಗರ ಅಣೆಕಟ್ಟು ನೀರಾವರಿ ಹೊಂದಿರುವ ಮಂಡ್ಯ ಹಾಗೂ ಶ್ರೀರಂಗಪಟ್ಟಣದ ರೈತರು ಆತಂಕಿತರಾಗಿದ್ದಾರೆ. ಕಾವೇರಿ ಪ್ರಾಧಿಕಾರದ ಆದೇಶದ ವಿರುದ್ಧ ಮಂಡ್ಯದ ರೈತರು ಸಿಟ್ಟಿಗೆದ್ದಿದ್ದಾರೆ. ʻʻಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು. ನೀರು ಬಿಟ್ಟಿದ್ದೇ ಆದರೆ ಉಗ್ರ ಹೋರಾಟ ಮಾಡುತ್ತೇವೆʼʼ ಎಂದಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಆತಂಕ ಸಹಜವಾದದ್ದೇ. ಯಾಕೆಂದರೆ ಕೆಆರ್‌ಎಸ್‌ನಲ್ಲಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ. ಈ ವರ್ಷ ಮುಂಗಾರು ಆರಂಭದಲ್ಲೂ ಮಳೆಯಾಗಲಿಲ್ಲ. ಮಧ್ಯೆ ಒಂದು ತಿಂಗಳ ಕಾಲ ಮುಂಗಾರು ಚುರುಕಾಯಿತು. ಆದರೆ ನಿರೀಕ್ಷಿತ ಮಳೆಯಾಗಲಿಲ್ಲ. ಹೀಗಾಗಿ ಕೆಆರ್‌ಎಸ್‌ ತುಂಬಿಕೊಂಡಿಲ್ಲ. ಹೀಗಾಗಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕು ಎಂಬ ಆದೇಶವನ್ನು ಪಾಲಿಸುವುದು ಕಷ್ಟ ಸಾಧ್ಯ.

ವಾಸ್ತವ ಸ್ಥಿತಿಗತಿ ನೋಡಿದರೆ ಆಗಸ್ಟ್‌ 29ರಂದು ಅಣೆಕಟ್ಟಿನಲ್ಲಿ ಇದ್ದ ನೀರು 24.27 ಟಿಎಂಸಿ. ಇದರಲ್ಲಿ 4.40 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿರುವುದರಿಂದ ಬಳಕೆಗೆ ಯೋಗ್ಯವಿರುವುದು ಕೇವಲ 20 ಟಿಎಂಸಿ. ಈಗ ಡ್ಯಾಂನಿಂದ 2293 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಪ್ರಾಧಿಕಾರದ ಆದೇಶದಂತೆ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ಹದಿನೈದು ದಿನಗಳ ವರೆಗೆ ಹರಿಸಿದ್ದೇ ಆದರೆ ಒಟ್ಟು 6.25 ಟಿಎಂಸಿ ನೀರು ಬಿಡಬೇಕು. ಆದರೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೆಆರ್‌ಎಸ್‌ನಲ್ಲಿನ ನೀರಿನ ಪ್ರಮಾಣ ತಳ ಹಿಡಿಯುವುದು ಗ್ಯಾರಂಟಿ. ರಾಜ್ಯದಲ್ಲಿ ಬೆಳೆ ನೀರಾವರಿಗೂ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ. ಇದನ್ನು ಸರ್ಕಾರ ಸಮರ್ಥವಾಗಿ ವಿವರಿಸಿದರೆ ಮಾತ್ರ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಬಹುದು. ಇಲ್ಲವಾದರೆ ಅಲ್ಲೂ ನೀರು ಬಿಡುಗಡೆಯ ಇದೇ ಆದೇಶವೇ ಮರುಕಳಿಸಬಹುದು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ನೀರಜ್‌ ಸಾಧನೆ ಎಲ್ಲ ಕ್ರೀಡೆಗಳ ಪ್ರೋತ್ಸಾಹಕ್ಕೆ ಮೂಲವಾಗಲಿ

ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿನ ಪ್ರಕಾರ ವರ್ಷಕ್ಕೆ 177 ಟಿಎಂಸಿ ನೀರನ್ನು ರಾಜ್ಯ ತಮಿಳುನಾಡಿಗೆ ಹರಿಸಬೇಕು. ವಿಶೇಷವಾಗಿ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಿನ ನೀರು ಬಿಡುಗಡೆ ಆಗಬೇಕು. ಈ ಹಿನ್ನೆಲೆಯಲ್ಲಿ ತಮಿಳುನಾಡು ಪ್ರತಿನಿತ್ಯ 24000 ಕ್ಯೂಸೆಕ್ ನೀರು ಕೇಳಿತ್ತು. ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಈಗಾಗಲೇ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ಪ್ರಗತಿಯ ಹಂತದಲ್ಲಿದೆ. ತಮಿಳುನಾಡಿನ ಆಡಳಿತಗಾರರು ತಮ್ಮ ಹಕ್ಕೊತ್ತಾಯವನ್ನು ದೊಡ್ಡ ಗಂಟಲಿನಲ್ಲಿ ಪದೇ ಪದೇ ಕೂಗಾಡಿ ಪಡೆಯುವುದಕ್ಕೆ ಖ್ಯಾತರಾಗಿದ್ದಾರೆ. ಸಮರ್ಥ ನ್ಯಾಯವಾದಿಗಳನ್ನೂ ಇಟ್ಟುಕೊಂಡಿದ್ದಾರೆ. ಕರ್ನಾಟಕವೂ ತನ್ನ ವಾದವನ್ನು ಸಮರ್ಥವಾಗಿಯೇ ಮಂಡಿಸಿದೆ. ಆದರೆ ಸಾಮಾನ್ಯವಾಗಿ, ನೀರು ಇಟ್ಟುಕೊಂಡು ಬಿಡದೇ ಹೋದವರೇ ಖಳನಾಯಕರಾಗಿ ಕಾಣಿಸುತ್ತಾರೆ. ನೀರಿದ್ದೂ ಬಿಡುತ್ತಿಲ್ಲ ಎಂಬುದು ಅವರ ಪೂರ್ವಾಗ್ರಹವಾಗಿರುತ್ತದೆ. ಆದರೆ ಆಂತರಿಕ ಸ್ಥಿತಿ ನಮಗೆ ಮಾತ್ರ ಗೊತ್ತಿರುತ್ತದೆ. ಇದನ್ನು ನಿಷ್ಪಕ್ಷಪಾತವಾಗಿ ತೀರ್ಮಾನ ಮಾಡುವ ಪರಿಶೀಲನಾ ಸಮಿತಿ ಅಗತ್ಯವಿದೆ. ಕರ್ನಾಟಕಕ್ಕೆ ಭೇಟಿ ನೀಡಿ ಅಣೆಕಟ್ಟಿನ ಹಾಗೂ ನೀರಾವರಿ ಪ್ರದೇಶದ ಸ್ಥಿತಿಗತಿ ಪರಿಶೀಲಿಸಿದರೆ ನೀರು ಎಷ್ಟು ಬಿಡಬಹುದು ಎಂಬುದು ಗೊತ್ತಾದೀತು. ಇಲ್ಲವಾದರೆ ಕರ್ನಾಟಕಕ್ಕೆ ಅನ್ಯಾಯ ಖಾತ್ರಿ. ಇದನ್ನು ಕರ್ನಾಟಕ ಸಮರ್ಥವಾಗಿ ಸುಪ್ರೀಂ ಕೋರ್ಟ್‌ನ ಮುಂದೆ ಮಂಡಿಸಬೇಕಿದೆ. ಅದು ನಮ್ಮ ಆಡಳಿತಗಾರರು ಹಾಗೂ ನ್ಯಾಯಾಂಗ ಪರಿಣತರಿಂದ ಸಾಧ್ಯವಾಗಲಿ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version