ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನೀಡಿರುವ ಮಾರ್ಗಸೂಚಿಗಳಲ್ಲಿ ಇರುವುದಕಿಂತಲೂ ಐದು ಪಟ್ಟು ಕೆಟ್ಟದಾದ ಗಾಳಿಯನ್ನು ಬೆಂಗಳೂರಿನವರು ಉಸಿರಾಡುತ್ತಿದ್ದಾರೆ ಎಂದು ಗ್ರೀನ್ಪೀಸ್ ಇಂಡಿಯಾ ಸಂಸ್ಥೆ ತನ್ನ ಇತ್ತೀಚಿನ ವಾಯು ಮಾಲಿನ್ಯದ ವರದಿಯಲ್ಲಿ ಹೇಳಿತ್ತು. ʼಸ್ಪೇರ್ ದಿ ಏರ್ʼ ಎಂಬ ಶೀರ್ಷಿಕೆಯ ಈ ವರದಿಯು ಸೆಪ್ಟೆಂಬರ್ 2021ರಿಂದ ಸೆಪ್ಟೆಂಬರ್ 2022 ರವರೆಗಿನ ಡೇಟಾವನ್ನು ವಿಶ್ಲೇಷಿಸಿದೆ. ಬೆಂಗಳೂರಿನಲ್ಲಿ ವಾರ್ಷಿಕ ಸರಾಸರಿ PM2.5 ಸಾಂದ್ರತೆಯು 29.01 μg/m3 (ಮೈಕ್ರೋಗ್ರಾಂ/ಘನ ಮೀಟರ್) ಎಂದು ಕಂಡುಬಂದಿದೆ. ಇದು WHO ನಿಗದಿಪಡಿಸಿದ ಸುರಕ್ಷಿತ ಮಟ್ಟಗಳಿಗಿಂತ (5 µg/m3) 5.8 ಪಟ್ಟು ಹೆಚ್ಚಾಗಿದೆ. ಅಂದರೆ ರಾಜಧಾನಿ ಬೆಂಗಳೂರಿನಲ್ಲಿ ನೆಮ್ಮದಿಯ ಉಸಿರಾಟಕ್ಕೂ ಇನ್ನು ಮುಂದೆ ಕಷ್ಟವಾಗಲಿದೆ. ಮಾನದಂಡಕ್ಕಿಂತ ಐದು ಪಟ್ಟು ವಿಷ ಗಾಳಿಯನ್ನು ಜನರು (Air Pollution) ಸೇವಿಸುತ್ತಿದ್ದಾರೆ. ಇದು ಚಿಂತೆಗೆ ಕಾರಣವಾಗುವ ಸಂಗತಿ(Vistara Editorial).
ದಿನದಿಂದ ದಿನಕ್ಕೆ ನಗರದ ಹಲವು ಭಾಗಗಳಲ್ಲಿ ಗಣನೀಯ ಮಟ್ಟದಲ್ಲಿ ವಾಯು ಹದಗೆಡುತ್ತಿದೆ. ದಿಢೀರ್ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಉಸಿರಾಡಲು ಕಷ್ಟದ ಸ್ಥಿತಿ ಬರಬಹುದೆಂಬ ಆತಂಕವನ್ನು ಹಲವು ವರದಿಗಳು ಎಚ್ಚರಿಸಿವೆ. ನಿತ್ಯ ಇದೇ ಕಲುಷಿತ ಗಾಳಿಯನ್ನು ಸೇವಿಸುತ್ತಿರುವವವರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಅಲರ್ಟ್ ಆಗಿದ್ದು, ನಗರದಲ್ಲಿ ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಹಲವು ಅಭಿಯಾನಗಳನ್ನು ಮಾಡಲು ಮುಂದಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿರುವ ಶಾಂತ ತಿಮ್ಮಯ್ಯ ಮಾಹಿತಿ ನೀಡಿದ್ದಾರೆ. ವಾಹನಗಳ ದಟ್ಟಣೆ, ರಸ್ತೆಯ ಧೂಳು, ನಿರ್ಮಾಣ ಹಂತದ ಕಟ್ಟಡಗಳ ಧೂಳಿನಿಂದ ನಗರದ ಕೆಲವು ಪ್ರದೇಶಗಳಲ್ಲಿ ಅತಿಯಾದ ಕೆಟ್ಟ ಮಾಲಿನ್ಯ ದಾಖಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ, ಜಯನಗರ, ಹೆಬ್ಬಾಳದಲ್ಲಿ ಅತಿ ಕೆಟ್ಟಗಾಳಿ ದಾಖಲಾಗುತ್ತಿದೆ. ನಗರದಲ್ಲಿ 14 ಕಡೆ ಮಾಲಿನ್ಯ ಪ್ರಮಾಣ ಗುರುತಿಸುವ ಮಾಪಕಗಳನ್ನು ಅಳವಡಿಸಿದೆ. ನಗರದ ಮಾಲಿನ್ಯ ಪ್ರಮಾಣ ಮಾಡಲು ಪಿಸಿಬಿ ಮುಂದಾಗಿದೆ. ಆದರೂ ಹಲವು ಭಾಗಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಎಚ್ಎಸ್ಆರ್ ಲೇಔಟ್, ಸಿಲ್ಕ್ ಬೋರ್ಡ್, ಕೆಂಗೇರಿ, ಕಸ್ತೂರಿ ನಗರ, ಶಾಲಿನಿ ಗ್ರೌಂಡ್ ಬಳಿ ಮಾಲಿನ್ಯ ಹೆಚ್ಚಿದೆ. ಟ್ರಾಫಿಕ್ ಜಾಮ್, ಹೆಚ್ಚಾಗುತ್ತಿರುವ ಕಾರ್ಖಾನೆಗಳಿಂದಲೂ ಕೆಟ್ಟ ಗಾಳಿ ನಗರವನ್ನು ಆವರಿಸಿಕೊಳ್ಳುತ್ತಿದೆ.
ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ ದಕ್ಷಿಣ ಏಷ್ಯಾದಲ್ಲಿ ಪ್ರತಿ ವ್ಯಕ್ತಿಯ ಜೀವಿತಾವಧಿ ಐದು ವರ್ಷಗಳಿಗಿಂತಲೂ ಕಡಿಮೆಯಾಗುತ್ತಿದೆ ಎಂದು ಇತ್ತೀಚೆಗೆ ಚಿಕಾಗೋ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆ (EPIC) ನೀಡಿರುವ ವರದಿಯಲ್ಲಿ ಹೇಳಿತ್ತು. 2013ರಿಂದೀಚೆಗೆ ವಿಶ್ವದ ಮಾಲಿನ್ಯದಲ್ಲಿ ಸುಮಾರು 59%ನಷ್ಟು ಹೆಚ್ಚಳಕ್ಕೆ ಭಾರತ ಕಾರಣವಾಗಿದೆ ಎಂದು ವರದಿ ದೂರಿದೆ. ಇತ್ತೀಚೆಗೆ ಸ್ವಿಡ್ಜರ್ಲ್ಯಾಂಡ್ನ ಐಕ್ಯು ಏರ್ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ವಾಯು ಗುಣಮಟ್ಟ ವರದಿಯಲ್ಲಿಯೂ ಭಾರತದ ಕಳಪೆ ವಾಯು ಗುಣಮಟ್ಟವನ್ನು ಎತ್ತಿ ಹೇಳಿತ್ತು. ಅದು 2022ರ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿ ಮಾಡಿದ್ದು, ಅದರಲ್ಲಿರುವ ವಿಶ್ವದ 50 ನಗರಗಳ ಪಟ್ಟಿಯಲ್ಲಿ ಭಾರತದ 39 ನಗರಗಳು ಇದ್ದವು. ಭಾರತ 2022ರಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ವಿಶ್ವದ 8ನೇ ದೇಶವೆಂದು ಗುರುತಿಸಿಕೊಂಡಿತ್ತು. ಈ ಅಂಕಿ ಸಂಖ್ಯೆಗಳೆಲ್ಲಾ ನಮಗೆ ಎಚ್ಚರಿಕೆಯ ಗಂಟೆಯಾಗಿವೆ.
ಈ ಸಂಪಾದಕೀಯನ್ನೂ ಓದಿ: ವಿಸ್ತಾರ ಸಂಪಾದಕೀಯ: ‘ಸ್ಪಿನ್ ಸರ್ದಾರ್’ ಬಿಷನ್ ಸಿಂಗ್ ಬೇಡಿ ಕೊಡುಗೆ ಸ್ಮರಣೀಯ
ಸಾರಿಗೆ ವಲಯ, ಕೈಗಾರಿಕಾ ಘಟಕಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು, ಕಸ, ತ್ಯಾಜ್ಯ ಸುಡುವುದು ಮುಂತಾದವು ವಾಯು ಮಾಲಿನ್ಯದ ಮುಖ್ಯ ಮೂಲಗಳು. ವಿಶ್ವ ಆರೋಗ್ಯ ಸಂಸ್ಥೆ 2021ರಲ್ಲಿ ಬಿಡುಗಡೆ ಮಾಡಿದ್ದ ಮಾರ್ಗಸೂಚಿಗಳ ಅನ್ವಯ, ನಾವು ಇರುವ ಪರಿಸರದ ಪ್ರತಿ ಕ್ಯುಬಿಕ್ ಮೀಟರ್ ಪ್ರದೇಶದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಪಿಎಂ 2.5 ಸೂಕ್ಷ್ಮಾಣು ಕಣಗಳ ಪ್ರಮಾಣ 5 ಮೈಕ್ರೋಗ್ರಾಂಗಿಂತ ಹೆಚ್ಚಿಗೆ ಇರಬಾರದು. ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು. ನಾವೇ ನೋಡುತ್ತಿರುವಂತೆ, ಒಂದೆರಡು ದಶಕಗಳ ಹಿಂದೆ ಉದ್ಯಾನವನಗಳ ಪಟ್ಟಣವಾಗಿದ್ದ, ಕೆರೆಗಳ ನಗರಿಯಾಗಿದ್ದ, ನಿವೃತ್ತರ ಸ್ವರ್ಗವೆನಿಸಿದ್ದ, ಸಮಶೀತೋಷ್ಣ ವಾತಾವರಣ ಹೊಂದಿದ್ದ ಬೆಂಗಳೂರು ಇಂದು ಗಿಜಿಗುಟ್ಟುವ ಟ್ರಾಫಿಕ್, ಕೆರೆಗಳ ಒತ್ತುವರಿಯ, ವಿಲೇವಾರಿಯಾಗದ ಕಸದ ರಾಶಿಗಳನ್ನು ಹೊಂದಿದ, ಮುಗಿಯದ ರಸ್ತೆ ಕಾಮಗಾರಿಗಳಿಂದ ಸದಾ ಏಳುತ್ತಿರುವ ಧೂಳಿನ ಸ್ವರ್ಗವಾಗಿದೆ. ಹದತಪ್ಪಿದ ಅಧಿಕಾರಶಾಹಿ, ಅಂಕೆಯೇ ಇಲ್ಲದ ರಿಯಲ್ ಎಸ್ಟೇಟ್ ಮಾಫಿಯಾ, ಧನದಾಹದ ಜನಪ್ರತಿನಿಧಿಗಳಿಂದಾಗಿ ನರಕವಾಗುತ್ತಿದೆ. ಇದನ್ನು ತಡೆಯದಿದ್ದರೆ ಅಪಾಯ ಕಾದಿದೆ.
ವಾಯುಮಾಲಿನ್ಯದಿಂದ ಪ್ರತಿ ವರ್ಷ ಜಗತ್ತಿನಲ್ಲಿ 24 ಲಕ್ಷ ಜನ ಸಾಯುತ್ತಿದ್ದಾರೆ ಎಂದು ಡಬ್ಲ್ಯುಎಚ್ಒ ತಿಳಿಸಿತ್ತು. ಒಂದು ವರ್ಷದಲ್ಲಿ ವಿಶ್ವದಾದ್ಯಂತ ಸಂಭವಿಸುವ ಸಾವುಗಳಲ್ಲಿ, ರಸ್ತೆ ಅಪಘಾತಗಳಿಗಿಂತಲೂ ವಾಯುಮಾಲಿನ್ಯದಿಂದ ಆಗುವ ಸಾವುಗಳೇ ಹೆಚ್ಚಂತೆ. ನಾನಾ ಬಗೆಯ ಕ್ಯಾನ್ಸರ್ಗಳು, ಹೃದಯ ಕಾಯಿಲೆಗಳು, ಮಕ್ಕಳಿಗೂ ಕಾಡುವ ಅಸ್ತಮಾ ಇವೆಲ್ಲವೂ ಮಾಲಿನ್ಯದ ಕೊಡುಗೆಗಳೇ ಆಗಿವೆ. ಸರ್ಕಾರ ಮತ್ತು ನಾಗರಿಕ ಸಮಾಜ ಇವೆರಡೂ ಎಚ್ಚರಗೊಂಡರೆ ಮಾತ್ರ ಮಾಲಿನ್ಯ ತಗ್ಗಿಸಿ, ಮುಂದಿನ ತಲೆಮಾರನ್ನು ಅನಾರೋಗ್ಯದ ಕೂಪದಿಂದ ರಕ್ಷಿಸಲು ಸಾಧ್ಯ. ಇದಕ್ಕೆ ಹಲವು ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕಿದೆ. ಪೆಟ್ರೋಲಿಯಂ ಬಳಕೆ ಕಡಿಮೆ ಮಾಡಿ ಶುದ್ಧ ಇಂಧನಕ್ಕೆ ಪರಿವರ್ತನೆ (ಜೈವಿಕ ಇಥೆನಾಲ್, ಜೈವಿಕ ಡೀಸೆಲ್ ಅಥವಾ ವಿದ್ಯುನ್ಮಾನ ವಾಹನಗಳ ಹೆಚ್ಚಳ), ಫ್ಯಾಕ್ಟರಿಗಳಿಂದ ಆಗುವ ಮಾಲಿನ್ಯ ತಡೆಗೆ ಕಟ್ಟುನಿಟ್ಟಾದ ಮಾರ್ಗಸೂಚಿ ಜಾರಿ, ಮರಗಿಡಗಳೂ ಸೇರಿದಂತೆ ಪ್ರಾಕೃತಿಕ ಸಂಪನ್ಮೂಲಗಳ ಹೊಣೆಯರಿತ ಬಳಕೆ ಮತ್ತು ಅರಣ್ಯೀಕರಣ, ಜಲಮೂಲಗಳ ಸಂರಕ್ಷಣೆ- ಇಂಥ ಕಾರ್ಯಗಳು ಸಾಕಷ್ಟು ನಡೆದರೆ ಮಾತ್ರ ನಮ್ಮ ಭವಿಷ್ಯದ ತಲೆಮಾರು ಮಾಲಿನ್ಯದ ಅಪಾಯದಿಂದ ಪಾರಾಗಬಹುದು. ಕೆರೆಗಳಿಗೆ ಮತ್ತೆ ಜೀವ ಕೊಡುವುದು, ಪಾರ್ಕುಗಳನ್ನು ಹೆಚ್ಚಿಸುವುದು, ಅರಣ್ಯೀಕರಣ, ಒತ್ತುವರಿ ತೆರವು, ಸೆಟ್ಬ್ಯಾಕ್ಗಳ ಕಡ್ಡಾಯ ಪಾಲನೆ, ಇವೆಲ್ಲ ಆಗಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಜಡತ್ವ ತೊರೆದು ಕ್ರಿಯಾಶೀಲವಾಗಬೇಕು.