Site icon Vistara News

ವಿಸ್ತಾರ ಸಂಪಾದಕೀಯ: ನಿಗಮ ಘೋಷಿಸಿದರೆ ಸಾಲದು, ಅದಕ್ಕೆ ಪೋಷಣೆಯೂ ಬೇಕು

Vistara Editorial :It is not enough to declare a corporation, it also needs to be nurtured

#image_title

ಎರಡೇ ದಿನದಲ್ಲಿ ರಾಜ್ಯ ಸರ್ಕಾರ (Karnataka Government) 5 ನಿಗಮ ಮಂಡಳಿಗಳನ್ನು ಘೋಷಿಸಿದೆ. ನಾರಾಯಣಗುರು ಅಭಿವೃದ್ಧಿ ನಿಗಮ, ಮೇದರ ಅಭಿವೃದ್ಧಿ ನಿಗಮ, ಹಡಪದ ಅಭಿವೃದ್ಧಿ ನಿಗಮ, ಹೂಗಾರ ಅಭಿವೃದ್ಧಿ ನಿಗಮ ಮತ್ತು ಗಾಣಿಗ ಅಭಿವೃದ್ಧಿ ನಿಗಮಗಳನ್ನು ಸರ್ಕಾರ ಘೋಷಣೆ ಮಾಡಿದೆ. ಇನ್ನಷ್ಟು ನಿಗಮಗಳ ಘೋಷಣೆಯ ಸಾಧ್ಯತೆಯೂ ಇದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಬರುವ ಹೂಗಾರ, ಹೂವಾಡಿಗ, ಈಡಿಗ, ಬಿಲ್ಲವ, ಮೇದರ, ಮರಾಠ, ಗಾಣಿಗ ಮುಂತಾದ ಸಮುದಾಯಗಳ ಕ್ಷೇಮ ಚಿಂತನೆಗಾಗಿ ಈ ನಿಗಮಗಳು ಮೀಸಲಾಗಿವೆ. ಇವೆಲ್ಲವೂ ಅತ್ಯಂತ ಹಿಂದುಳಿದ ಸಮುದಾಯಗಳು ಎಂಬುದು ನಿಜ. ಇವುಗಳ ಹಿತಚಿಂತನೆಗಾಗಿ ಪ್ರತ್ಯೇಕ ಘಟಕಗಳು ಬೇಕು ಎಂಬ ಬೇಡಿಕೆ ಬಹುಕಾಲದ್ದಾಗಿತ್ತು. ಸದ್ಯ ಅದನ್ನು ಸರ್ಕಾರ ಈಡೇರಿಸಿದೆ. ಅದನ್ನು ಸ್ವಾಗತಿಸೋಣ.

ಆದರೆ ಚುನಾವಣೆಗೆ ಇನ್ನು ಕೇವಲ ಎರಡೇ ತಿಂಗಳು ಇರುತ್ತ, ನಿಗಮಗಳನ್ನು ಘೋಷಿಸಿರುವ ಸರ್ಕಾರದ ತರಾತುರಿಯೂ ಅರ್ಥವಾಗದ್ದೇನಲ್ಲ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಸರ್ಕಾರ ಜಾತಿ, ಸಮುದಾಯಗಳ ಓಲೈಕೆಗಾಗಿ ನಿಗಮಗಳ ರಚನೆಗೆ ವೇಗವನ್ನು ನೀಡಿದೆ. ರಾಜ್ಯದಲ್ಲಿ 90ಕ್ಕೂ ಅಧಿಕ ನಿಗಮ ಮಂಡಳಿಗಳಿದ್ದು, ಇವುಗಳಲ್ಲಿ 20ಕ್ಕೂ ಹೆಚ್ಚು ನಿಗಮಗಳು ಜಾತಿ- ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಾಗಿವೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಇಲಾಖೆಯೇ ಇದೆ. ಈ ಇಲಾಖೆಯಿಂದ ಅಭಿವೃದ್ಧಿ ಸಾಧಿತವಾಗುತ್ತಿಲ್ಲ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತೆ, ಸಾಲುಸಾಲಾಗಿ ಸಮುದಾಯಗಳ ನಿಗಮಗಳನ್ನು ಸ್ಥಾಪಿಸುತ್ತ ನಡೆದಿದೆ. ಹೀಗೆ ಜಾತಿಗೊಂದು ನಿಗಮವನ್ನು ಸ್ಥಾಪಿಸಬಹುದೇ, ಕೆಲವೇ ಕೆಲವು ಜಾತಿಗಳ ಅಭಿವೃದ್ಧಿಗಾಗಿ ಸಾರ್ವಜನಿಕರ ಹಣವನ್ನು ವಿನಿಯೋಗಿಸುವುದು ಸಂವಿಧಾನದ ಪರಿಚ್ಛೇದ 27ರ (ನಿರ್ದಿಷ್ಟ ಧರ್ಮ- ಜಾತಿಗಾಗಿ ಮೀಸಲಾಗಿ ತೆರಿಗೆ ಪಡೆಯುವಂತಿಲ್ಲ) ಉಲ್ಲಂಘನೆಯಲ್ಲವೇ ಎಂಬ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನೂ ಹೈಕೋರ್ಟ್‌ನಲ್ಲಿ ಎತ್ತಲಾಗಿದ್ದು, ಅದು ವಿಚಾರಣೆಯಲ್ಲೇ ಇನ್ನೂ ಇದೆ. ಹೀಗಾಗಿ ಇವುಗಳ ಸಾಂವಿಧಾನಿಕ ಮಾನ್ಯತೆಯ ಪ್ರಶ್ನೆಯನ್ನು ಕೋರ್ಟ್‌ಗೇ ಬಿಟ್ಟು, ಇವುಗಳ ಬಳಕೆಯಲ್ಲಿ ಆಗುತ್ತಿರುವ ಅಪಸವ್ಯಗಳ ಕುರಿತು ಕೊಂಚ ನೋಡಬಹುದು.

ಈಗಾಗಲೇ ಜಾತಿಗೊಂದು, ಕುಲಕ್ಕೊಂದು ನಿಗಮಗಳಿವೆ. ಇವೆಲ್ಲವೂ ವ್ಯರ್ಥ ಅನ್ನುವಂತಿಲ್ಲ. ಈಗಾಗಲೇ ಬಜೆಟ್‌ನಲ್ಲಿ ಘೋಷಿಸಲಾಗಿರುವ ಅನುದಾನಗಳ ಬಳಕೆ ಮಾಡಿಕೊಂಡು ಕಾರ್ಯಕ್ರಮಗಳ ಜಾರಿ ಮಾಡುವುದಷ್ಟೇ ಈ ನಿಗಮ- ಮಂಡಳಿಗಳ ಕೆಲಸವಾಗಿರುತ್ತದೆ. ಆದರೆ ಇದನ್ನು ಎಲ್ಲ ನಿಗಮಗಳೂ ಪರಿಣಾಮಕಾರಿಯಾಗಿ ಮಾಡುತ್ತಿವೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ಅನೇಕ ನಿಗಮಗಳು ನಾಮಕಾವಸ್ಥೆ ಎನ್ನುವಂತಿವೆ. ಇವು ಯಾವುದೇ ಕೆಲಸ ಮಾಡಿದ ದಾಖಲೆಯಿಲ್ಲ. ಆದರೆ ಇವುಗಳ ಅಧ್ಯಕ್ಷರು, ಸದಸ್ಯರ ಸಂಬಳ ಸಾರಿಗೆಯಂತೂ ಗರಿಷ್ಠ ಮಟ್ಟದಲ್ಲೇ ಇದೆ. ಹೆಚ್ಚಿನ ನಿಗಮಗಳ ಅಧ್ಯಕ್ಷರಿಗೆ ಸಂಪುಟ ದರ್ಜೆ, ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಸಂಬಳವೂ ಅದೇ ಲೆಕ್ಕಾಚಾರದಲ್ಲೇ ಇದೆ. ನಿಗಮ ಮಂಡಳಿಗಳ ರಚನೆ ಆರಂಭವಾದದ್ದು ಸಚಿವಾಲಯದ ಭಾರ ತಗ್ಗಿಸುವ ಹಾಗೂ ಆಡಳಿತ ವಿಕೇಂದ್ರೀಕರಣದ ದೃಷ್ಟಿಯಿಂದ. ಆರಂಭದಲ್ಲಿ ಅಧಿಕಾರಿಗಳನ್ನೇ ಈ ಹುದ್ದೆಗಳಿಗೆ ನೇಮಿಸುತ್ತಿದ್ದರೂ ನಂತರ ನಾನಾ ಕ್ಷೇತ್ರದ ತಜ್ಞರ ನೆರವು ಪಡೆದುಕೊಳ್ಳಲು ಪ್ರಾರಂಭಿಸಲಾಯಿತು. ಇತ್ತೀಚೆಗೆ ಶಾಸಕರು ಮತ್ತು ಸಚಿವ ಸಂಪುಟದಲ್ಲಿ ಸ್ಥಾನಗಳಿಂದ ವಂಚಿತರಾದವರು ಈ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇವು ಗಂಜಿಕೇಂದ್ರಗಳೆಂದೇ ಅಪಖ್ಯಾತಿ ಪಡೆದಿವೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ : ಅಧಿಕಾರಿಗಳು ಮಾದರಿಯಾಗಿರಲಿ, ಹುದ್ದೆಯ ಘನತೆ ಕಾಪಾಡಲಿ

ಗಂಜಿಕೇಂದ್ರಗಳೇ ಆಗಿರಲಿ; ತಮ್ಮ ಸ್ಥಾಪನೆಯ ಉದ್ದೇಶಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಿದ್ದರೆ ಸಾರ್ಥಕವಾಗುತ್ತಿತ್ತು. ಆದರೆ ಅಲ್ಲಿರುವ ಅಧ್ಯಕ್ಷರನ್ನು ಹೊರತುಪಡಿಸಿದರೆ ಬಹುತೇಕ ನಿಗಮಗಳಿಗೆ ನೀಡಲಾಗುತ್ತಿರುವ ಹಣ ಅಲ್ಲಿಯ ಸಿಬ್ಬಂದಿಗಳ ವೇತನಕ್ಕೂ ಸಾಲುವುದಿಲ್ಲ. ನಿಗಮದ ಸದಸ್ಯರು ಸಾಮಾನ್ಯವಾಗಿ ಆಯಾ ಕ್ಷೇತ್ರಗಳ ತಜ್ಞರುಗಳಾಗಿದ್ದು, ತಮ್ಮ ಅನುಭವವನ್ನು ಅಲ್ಲಿ ಧಾರೆಯೆರೆಯಲು ಕಾತುರರಾಗಿರುತ್ತಾರೆ. ಆದರೆ ಅದಕ್ಕೆ ತಕ್ಕ ಯೋಜನೆಗಳು, ಅನುದಾನ ಸಿಗದೇ ಹತಾಶರಾಗುತ್ತಾರೆ. ಅಷ್ಟರಲ್ಲಿ ಅವರ ಕಾಲಾವಧಿಯೂ ಮುಗಿದಿರುತ್ತದೆ.

ರಾಜ್ಯ ಸರ್ಕಾರ ಕೇವಲ ಜಾತಿಗಳ ಓಲೈಕೆಗೆ ನಿಗಮ ಘೋಷಿಸದೆ, ಅದರಿಂದ ಘೋಷಿತ ಸಮುದಾಯಗಳಿಗೆ ಪ್ರಯೋಜನ ಆಗುವಂತೆ ನೋಡಿಕೊಳ್ಳಬೇಕು. ಸಂಪುಟ ನಿರಾಶ್ರಿತರನ್ನು ನೇಮಿಸುವ ಕ್ರಮ ಕೈಬಿಟ್ಟು ಪರಿಣತರನ್ನು, ತಜ್ಞರನ್ನು ಇದಕ್ಕೆ ನೇಮಿಸಿ ಕಲ್ಯಾಣ ಉಪಕ್ರಮಗಳು ಜಾರಿಯಾಗುವಂತೆ ಪ್ರಯತ್ನಿಸಬೇಕು. ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗದ ಸಮಸ್ಯೆ ಹೆಚ್ಚಿದೆ. ಇದರತ್ತ ಹೆಚ್ಚಿನ ಲಕ್ಷ್ಯ ಹರಿಸಬೇಕಿದೆ.

Exit mobile version