Site icon Vistara News

ವಿಸ್ತಾರ ಸಂಪಾದಕೀಯ: ನಿಜವಾದ ಅರ್ಥದಲ್ಲಿ ʼಜನಸ್ಪಂದನʼವಾಗಲಿ

Vistara editorial, Jan Spandana by Karnataka CM Should reach people

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ರಾಜ್ಯ ಮಟ್ಟದ ಜನಸ್ಪಂದನ (Jan Spandana) ಕಾರ್ಯಕ್ರಮ ನಡೆಸಿದ್ದಾರೆ. ಜನಸ್ಪಂದನೆಯಲ್ಲಿ ರಾಜ್ಯದ ಎಲ್ಲೆಡೆಗಳಿಂದ ಬಂದ 20 ಸಾವಿರ ಮಂದಿ ಭಾಗಿಯಾಗಿದ್ದಾರೆ. 11 ಸಾವಿರ ಅರ್ಜಿಗಳು ಸ್ವೀಕೃತವಾಗಿವೆ. ಆಯಾ ಜಿಲ್ಲೆಗೆ ಸಂಬಂಧಪಟ್ಟ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆದಷ್ಟು ಶೀಘ್ರ, ಸಮಯ ಮಿತಿಯೊಳಗೆ ಬಗೆಹರಿಸಲು ಸೂಚನೆ ನೀಡಲಾಗಿದೆ. ಮೊದಲ ಜನ ಸ್ಪಂದನೆಯಲ್ಲಿ ಬಂದ ಅರ್ಜಿಗಳಲ್ಲಿ ಶೇ. 98ರಷ್ಟಕ್ಕೆ ಪರಿಹಾರ ದೊರಕಿವೆ. ಸಿಎಂ ಹೇಳಿರುವ ಇನ್ನೊಂದು ಬಹು ಮುಖ್ಯವಾದ ಮಾತು ಎಂದರೆ, “ಅಧಿಕಾರಿಗಳು ಕೆಳ ಹಂತದಲ್ಲೇ ಸಮಸ್ಯೆ ಬಗೆಹರಿಸಿದರೆ ಬೆಂಗಳೂರಿಗೆ ಜನ ಬಂದು ಅರ್ಜಿ ಕೊಡುವ ಸಂದರ್ಭ ಉದ್ಭವಿಸುವುದಿಲ್ಲ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೇಲೆ ಈ ಜವಾಬ್ದಾರಿ ಹೆಚ್ಚು ಇದೆʼ ಎಂಬುದು(vistara Editorial).

ಈ ಜನಸ್ಪಂದನದಲ್ಲಿ ಕಾಯಿಲೆಗಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ಕೋರಿದವರು, ಸ್ವಂತ ಉದ್ಯೋಗಕ್ಕೆ ಹಣಕಾಸಿನ ನೆರವು ಕೋರಿದವರು, ಬುದ್ಧಿಮಾಂದ್ಯ ಮಗುವಿನ ಚಿಕಿತ್ಸೆ- ಥಲಸ್ಸೆಮಿಯಾ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮನವಿ ನೀಡಿದವರು, ನೆರವು ಕೋರಿ ಬಂದ ಅಂಗವಿಕಲರು, ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ವರ್ಷಗಳಿಂದ ಅಲೆದರೂ ಸರ್ಕಾರಿ ಕಚೇರಿಯಲ್ಲಿ ಕೆಲಸ ಆಗದೆ ನೇರವಾಗಿ ಸಿಎಂ ಬಳಿಗೆ ಬಂದವರು- ಹೀಗೆ ನಾನಾ ಬಗೆಯ ಜನರಿದ್ದರು. ಸಿಎಂ ಕೂಡ ಎಲ್ಲರಿಗೂ ಸಕಾರಾತ್ಮಕವಾಗಿ ಸ್ಪಂದಿಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಜನಸ್ಪಂದನ ಕಾರ್ಯಕ್ರಮವನ್ನು ನಡೆಸುವ, ತಾವೂ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ಸಂಬಂಧಿಸಿ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮದ ಕುರಿತು ಪರಿಶೀಲನೆ ನಡೆಸುವ ಭರವಸೆಯನ್ನು ಪುನರುಚ್ಚರಿಸಿದರು.

ಜನಸ್ಪಂದನ ಕಾರ್ಯಕ್ರಮದ ಆಶಯ ದೊಡ್ಡದೇ. ಆದರೆ ಜನ ಪಹಣಿ, ಪೋಡಿ, ಖಾತೆ ಮಾಡಿಸುವುದು ಮೊದಲಾದ ಚಿಲ್ಲರೆ ಕೆಲಸಗಳನ್ನು ಮಾಡಿಸಿಕೊಳ್ಳುವುದು ಕೂಡ ಸಾಧ್ಯವಾಗದೆ ನೊಂದು ನೇರ ಸಿಎಂ ಬಳಿಗೇ ಬರುತ್ತಾರೆ ಎಂದರೆ ಅಂಥ ಬ್ಯೂರಾಕ್ರಸಿಗೆ ಏನನ್ನಬೇಕು? ಜನರಿಗೆ ದೂರುಗಳಿದ್ದೇ ಇರುತ್ತವೆ. ಜನ ಯಾವಾಗ ಮಂತ್ರಿಗಳ ಬಳಿಗೆ ಬರುತ್ತಾರೆ ಎಂಬುದನ್ನೂ ಗಮನಿಸಬೇಕು. ತಾಲೂಕು ಪಂಚಾಯತು, ಜಿಲ್ಲಾ ಪಂಚಾಯತು, ನೋಂದಣಿ, ಕಂದಾಯ, ಹೀಗೆ ವಿಭಾಗವಾರು ಇಲಾಖೆಗಳಲ್ಲಿ ಕೇಸ್‌ವರ್ಕರ್‌ಗಳು ತಮ್ಮ ಅರ್ಜಿಗಳ ವಿಲೇವಾರಿ ಮಾಡಲು ವಿಫಲರಾದಾಗ, ಮೇಲಧಿಕಾರಿಗಳತ್ತ ಜನ ಎಡತಾಕುವುದು ಸಾಮಾನ್ಯ. ಮೇಲಧಿಕಾರಿಗಳು ಇಂಥ ಅರ್ಜಿಗಳನ್ನು ʼಸರಿಯಾದ ರೀತಿಯಲ್ಲಿʼ (through proper channel) ಬರಲಿ ಎಂದು ಮತ್ತೆ ಅದನ್ನು ಕೆಳಗಿನ ಮೇಜುಗಳ ಕಡೆಗೆ ತಳ್ಳುವುದೂ ಸಾಮಾನ್ಯ. ಹೀಗೆ ಪ್ರಭಾವಿಗಳಲ್ಲದ ಜನಸಾಮಾನ್ಯರು ಮೇಜಿನಿಂದ ಮೇಜಿಗೆ ಅಲೆದಾಡುವುದು, ನಾಳೆ ಬಾ ಎಂದು ಹೇಳಿಸಿಕೊಳ್ಳುವುದು ಅತಿ ಸಾಮಾನ್ಯ ದೃಶ್ಯ. ಅನೇಕ ಮಂದಿಯ ಬದುಕು ಹೀಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಲೇ ʼತಬರನ ಕಥೆʼಯಂತೆ ಮುಗಿದುಹೋಗುತ್ತದೆ. ಇದೊಂದು ದಃಸ್ವಪ್ನವೇ ಸರಿ. ಇದರಿಂದ ಪಾರಾಗಲು ಸಣ್ಣ ಸಣ್ಣ ವಿಚಾರಗಳಿಗೂ ಜನ ಪುಢಾರಿಗಳ ಮೊರೆ ಹೋಗುತ್ತಾರೆ; ಅಥವಾ ದಲ್ಲಾಳಿಗಳನ್ನು ಹಿಡಿದುಕೊಳ್ಳುತ್ತಾರೆ. ಇವರ ಮೂಲಕ ಕೆಲಸ ಮಾಡಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ.

ಹೀಗೆ ಸರ್ಕಾರಿ ಕೆಲಸದ ಕೆಂಪು ಪಟ್ಟಿಯ ವಿಳಂಬ ನರಕದಿಂದ ಬೇಸತ್ತ ಜನಸಾಮಾನ್ಯನಿಗೆ, ಪಾರಾಗುವ ಒಂದು ಕಿಂಡಿಯಂತೆ ಜನಸ್ಪಂದನ ಕಾಣಿಸಿದರೆ ಆಶ್ಚರ್ಯವಿಲ್ಲ. ಸಿಎಂಗೆ ಅರ್ಜಿ ಸಲ್ಲಿಸಿದರೆ ತಮ್ಮ ಕೆಲಸ ಕೂಡಲೇ ಆಗಬಹುದು ಎಂಬ ಆಸೆ ಅವರಲ್ಲಿ ಮೂಡುವುದು ಸಹಜ. ಹೀಗಾಗಿಯೇ ಇಂಥ ಕಾರ್ಯಕ್ರಮಗಳಿಗೆ ಜನಸ್ಪಂದನ ದೊಡ್ಡ ಪ್ರಮಾಣದಲ್ಲಿ ವ್ಯಕ್ತವಾಗುತ್ತದೆ. ಈ ಹಿಂದಿನ ಮುಖ್ಯಮಂತ್ರಿಗಳೂ ಇಂಥ ಪ್ರಯತ್ನ ಮಾಡಿದ್ದುಂಟು. ಆದರೆ ಚಿಲ್ಲರೆ ಕೆಲಸಗಳಿಗೂ ಜನ ಸಿಎಂ ಬಳಿಗೇ ಬರಬೇಕಾಗುತ್ತದೆ ಎಂದರೆ ಅದನ್ನು ಉತ್ತಮ ಆಡಳಿತವೆನ್ನಬೇಕೋ ಇಲ್ಲವೋ ಎಂಬುದನ್ನು ಮತ್ತಷ್ಟು ವಿವೇಚಿಸಿ ನೋಡಿದರೆ ಗೊತ್ತಾಗುತ್ತದೆ. ರಾಜ್ಯದ ಮೂಲೆಮೂಲೆಗಳಿಂದ ಇಷ್ಟೊಂದು ಜನ ಬೆಂಗಳೂರಿಗೆ ಓಡಿ ಬರುತ್ತಾರೆ ಅಂದರೆ ಜಿಲ್ಲಾಡಳಿತಗಳು ಏನು ಮಾಡುತ್ತಿವೆ? ಪ್ರತಿ ಸಮಸ್ಯೆ ಪರಿಹಾರಕ್ಕೂ ಮುಖ್ಯಮಂತ್ರಿಯ ಮೊರೆ ಹೋಗಬೇಕು ಅಂದರೆ ಅಧಿಕಾರಿಗಳಿಗೆ ಏನು ಕೆಲಸ?

ಜನಸ್ಪಂದನ, ಜನತಾ ದರ್ಶನಗಳು ಕೇವಲ ತೋರಿಕೆಯ ಕಾರ್ಯಕ್ರಮ ಆಗದೆ ಜನರ ಸಂಕಷ್ಟ ಪರಿಹಾರ ಆಗುವಂತಾಗಲಿ. ಸ್ವಲ್ಪ ಆಳವಾಗಿ ವಿಮರ್ಶೆ ಮಾಡಿದರೆ, ಜನತಾ ದರ್ಶನಗಳು ಸರ್ಕಾರಗಳ ವೈಫಲ್ಯವನ್ನು ಕಾಣಿಸುವ ಕಾರ್ಯಕ್ರಮವೇ ಹೊರತು ಸಾಫಲ್ಯವನ್ನಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ ಸಮಯದಲ್ಲಿ ಕೆಲಸ ಆಗುತ್ತಿಲ್ಲ ಅನ್ನುವ ಕಾರಣಕ್ಕಾಗಿಯೇ ಜನಸ್ಪಂದನಕ್ಕೆ ಅಷ್ಟೊಂದು ಪ್ರಮಾಣದ ಅಹವಾಲುಗಳು ಬರುವುದು. ಮೊದಲು ಗ್ರಾಮ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಜನತೆಗೆ ತಮ್ಮ ಕಚೇರಿಯಲ್ಲಿಯೇ ದರ್ಶನ ಕೊಡಬೇಕು. ಕೆಳಹಂತದ ಅಧಿಕಾರಿಗಳ ಜನಸ್ಪಂದನ ಮೊದಲು ಆಗಲಿ. ಜಿಲ್ಲಾ ಮಟ್ಟದಲ್ಲೇ ಕೆಲಸಗಳು ಪರಿಣಾಮಕಾರಿಯಾಗಿ ನಡೆದಿದ್ದೇ ಆದಲ್ಲಿ ಜನ ದೂರದ ವಿಧಾನ ಸೌಧದವರೆಗೆ ದೂರುದುಮ್ಮಾನ ಹಿಡಿದುಕೊಂಡು ಮುಖ್ಯಮಂತ್ರಿಗಳನ್ನು ಹುಡುಕಿಕೊಂಡು ಬರುವ ಪ್ರಶ್ನೆಯೇ ಬರುವುದಿಲ್ಲ. ಜನಸ್ಪಂದನದ ಅರ್ಜಿಗಳನ್ನೇ ಕಾಲಕಾಲಕ್ಕೆ ವಿಲೇವಾರಿ ಮಾಡುವ ಒಂದು ವ್ಯವಸ್ಥೆಯೂ ರೂಪುಗೊಳ್ಳಬೇಕು.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಸ್ವಾಗತಾರ್ಹ

Exit mobile version