ರಾಜ್ಯ ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಟ್ಯಾಕ್ಸಿ ಪ್ರಯಾಣ ಹಾಗೂ ಸಾಗಣೆ ದರಗಳನ್ನು ಪರಿಷ್ಕರಿಸಿ ರಾಜ್ಯ ಸಾರಿಗೆ ಇಲಾಖೆ (Transport Department) ಆದೇಶ ಹೊರಡಿಸುವ ಮೂಲಕ ಏಕರೂಪದ ದರ ಜಾರಿಗೆ ತಂದಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಅದರಲ್ಲೂ, ಓಲಾ, ಊಬರ್, ರ‍್ಯಾಪಿಡೋ ಸೇರಿ ಯಾವುದೇ ಅಗ್ರಿಗೇಟರ್ ಕಂಪನಿಗಳ (Taxi Aggregators) ವಾಹನಗಳ ಮೌಲ್ಯಗಳ ಆಧಾರದ ಮೇಲೆ ದರಗಳನ್ನು ನಿಗದಿಪಡಿಸಿರುವುದು ಉತ್ತಮ ತೀರ್ಮಾನವಾಗಿದೆ. ಇದರಿಂದಾಗಿ ಖಾಸಗಿ ಟ್ಯಾಕ್ಸಿ ಅಗ್ರಿಗೇಟರ್‌ಗಳು ಹಾಗೂ ಖಾಸಗಿ ವಾಹನಗಳ ಚಾಲಕರು ರಾತ್ರಿಯಾಗುತ್ತಲೇ, ಮಳೆ ಬಂದಾಗ ಸೇರಿ ಹಲವು ಸಂದರ್ಭಗಳಲ್ಲಿ ಗ್ರಾಹಕರಿಂದ ದುಪಟ್ಟು ಹಣ ಪೀಕುವುದನ್ನು ತಡೆಯಲು ಸಾಧ್ಯವಾಗಲಿದೆ.
ಖಾಸಗಿ ಟ್ಯಾಕ್ಸಿ ಅಗ್ರಿಗೇಟರ್‌ಗಳು ಹಾಗೂ ಖಾಸಗಿ ವಾಹನಗಳ ಚಾಲಕರು ಗ್ರಾಹಕರಿಂದ ದುಪ್ಪಟ್ಟು ಹಣವನ್ನು ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿದ್ದಾರೆ ಎಂಬ ಆರೋಪಗಳು, ದೂರುಗಳು ಕೇಳಿಬರುತ್ತಲೇ ಇರುತ್ತವೆ. ಆ್ಯಪ್‌ಗಳ ಮೂಲಕವೇ ಟ್ಯಾಕ್ಸಿ, ಆಟೋಗಳನ್ನು ಬುಕ್ ಮಾಡುವುದರಿಂದ ಚೌಕಾಸಿ ಮಾಡಲು ಕೂಡ ಆಗಲ್ಲ. ಹಾಗಂತ, ತುರ್ತು ಸಂದರ್ಭದಲ್ಲಿ ಹೆಚ್ಚಿನ ಹಣ ನೀಡದೆ ಪ್ರಯಾಣಿಸದಿರಲು ಕೂಡ ಆಗುವುದಿಲ್ಲ. ಆದರೀಗ, 10 ಲಕ್ಷ ರೂ. ಕ್ಕಿಂತ ಕಡಿಮೆ ಇರುವ ವಾಹನಗಳಿಗೆ ಕನಿಷ್ಠ ದರ 100ರೂ ಇದ್ದು, ಪ್ರತಿ ಕಿ.ಮೀಗೆ 24 ರೂ. ನಿಗದಿಪಡಿಸಲಾಗಿದೆ. 10-15 ಲಕ್ಷ ರೂ.ವರೆಗಿನ ವಾಹನಗಳಿಗೆ ಕನಿಷ್ಠ ದರ 115 ರೂ., ಪ್ರತಿ ಕಿ.ಮೀಗೆ 28 ರೂ. ನಿಗದಿ ಮಾಡಲಾಗಿದೆ. ಇನ್ನು 15 ಲಕ್ಷ ರೂ. ಮೇಲ್ಪಟ್ಟ ವಾಹನಗಳಿಗೆ ಕನಿಷ್ಠ ದರ 130 ರೂ. ಹಾಗೂ ಪ್ರತಿ ಕಿ.ಮೀಗೆ 32 ರೂ. ನಿಗದಿ ಮಾಡಿದೆ. ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಪ್ರಯಾಣಿಸಿದರೆ ನಿಗದಿತ ದರಕ್ಕಿಂತ ಶೇ.10ರಷ್ಟು ಹೆಚ್ಚುವರಿ ಬೆಲೆ ನಿಗದಿಪಡಿಸಲಾಗಿದೆ. ಇದು ಕೂಡ ದುಪ್ಪಟ್ಟು ಹಣ ವಸೂಲಿ ಮಾಡುವ ಕಂಪನಿಗಳಿಗೆ ಮೂಗುದಾರ ಹಾಕಿದಂತಾಗಲಿದೆ.
ರಾಜ್ಯ ಸರ್ಕಾರವೇನೋ ಏಕರೂಪದ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ, ಬಹುತೇಕ ಸಂದರ್ಭಗಳಲ್ಲಿ, ಅದರಲ್ಲೂ, ಆಟೋ, ಟ್ಯಾಕ್ಸಿಗಳಿಗೆ ನಿಗದಿಪಡಿಸುವ ದರಗಳು ಸಮರ್ಪಕವಾಗಿ ಜಾರಿಗೆ ಬರುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, 2021ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರವು ವಾಹನಗಳ ಮೌಲ್ಯ ಆಧರಿಸಿ ದರ ನಿಗದಿ ಮಾಡಿತ್ತು. ಸಿಟಿ ಟ್ಯಾಕ್ಸಿ ಸೇವೆಯನ್ನು ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ, 2021ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ನಿಗದಿ ಮಾಡಿತ್ತು. ಆದರೆ ಪ್ರಾಧಿಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಹಣವನ್ನು ಜನರಿಂದ ವಸೂಲಿ ಮಾಡಲಾಗುತ್ತಿರುವ ಕುರಿತು ದೂರುಗಳು ಬಂದಿವೆ. ಹಾಗಾಗಿ, ರಾಜ್ಯ ಸರ್ಕಾರವು ನೂತನ ಆದೇಶವನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಜಾರಿಯಾಗಿರುವ ನಿಯಮಗಳ ಪಾಲನೆಯಾಗಿದೆಯೋ ಇಲ್ಲವೋ ಎಂಬುದರ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನೂ ತರಬೇಕು.
ಆಟೋ, ಕ್ಯಾಬ್‌ಗಳನ್ನು ಆನ್‌ಲೈನ್ ಮೂಲಕ ಬುಕ್ ಮಾಡುವಾಗ ಗ್ರಾಹಕರಿಗೆ ಇನ್ನಷ್ಟು ತೊಂದರೆಗಳು ಎದುರಾಗುತ್ತವೆ. ಆ್ಯಪ್ ಮೂಲಕ ಕ್ಯಾಬ್ ಅಥವಾ ಆಟೋ ಬುಕ್ ಮಾಡಿದಾಗ, ಗ್ರಾಹಕರು ಕ್ಯಾನ್ಸಲ್ ಮಾಡಿದರೆ ಸಂಚರಿಸದಿದ್ದರೂ ಪ್ರಯಾಣದ ಮೊತ್ತವನ್ನು ಕಟ್ಟಬೇಕಾಗುತ್ತದೆ. ಮುಂದಿನ ಬಾರಿ ಕ್ಯಾಬ್ ಅಥವಾ ಆಟೋಗಳಲ್ಲಿ ಪ್ರಯಾಣಿಸಿದಾಗ ಕ್ಯಾನ್ಸಲ್ ಮಾಡಿದ ಮೊತ್ತವೂ ಜಮೆಯಾಗಿ, ಒಟ್ಟು ಹಣ ಪಾವತಿಸಬೇಕಾಗುತ್ತದೆ. ಆದರೆ, ಆಟೋ ಅಥವಾ ಕ್ಯಾಬ್ ಡ್ರೈವರ್‌ಗಳು ಕ್ಯಾನ್ಸಲ್ ಮಾಡಿದರೆ, ಅವರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಹಾಗಾಗಿ, ಕಡಿಮೆ ದೂರದ ಪ್ರದೇಶಗಳು, ಸಂಚಾರ ದಟ್ಟಣೆ ಇರುವ ಪ್ರದೇಶಗಳಿಗೆ ಬುಕ್ ಮಾಡಿದಾಗ, ಹೆಚ್ಚಿನ ಚಾಲಕರು ಟ್ರಿಪ್ ಕ್ಯಾನ್ಸಲ್ ಮಾಡುತ್ತಾರೆ. ಅವರಿಗೂ ಕೂಡ ಬೇಕಾಬಿಟ್ಟಿಯಾಗಿ ಕ್ಯಾನ್ಸಲ್ ಮಾಡಿದರೆ ಶುಲ್ಕ ವಿಧಿಸಬೇಕು ಇಲ್ಲವೇ ಕ್ಯಾನ್ಸಲ್ ಮಾಡದ ಹಾಗೆ ನಿಯಮ ರೂಪಿಸಬೇಕು. ಇದರಿಂದ ಗ್ರಾಹಕರು ಅನಗತ್ಯವಾಗಿ ಕಿರಿಕಿರಿ ಅನುಭವಿಸುವುದು ತಪ್ಪುತ್ತದೆ.
ಇದನ್ನೂ ಓದಿ: Taxi Fare revises : ಟ್ಯಾಕ್ಸಿ ಕಂಪನಿಗಳ ಕಳ್ಳಾಟಕ್ಕೆ ಮೂಗುದಾರ; ಏಕರೂಪ ದರ ನಿಗದಿ ಮಾಡಿದ ಸರ್ಕಾರ
ಆಟೋ, ಕ್ಯಾಬ್‌ಗಳನ್ನು ಬುಕ್ ಮಾಡಲು ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯಿಂದಲೇ ಆ್ಯಪ್ ಅಭಿವೃದ್ಧಿಪಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕಳೆದ ವರ್ಷ ಘೋಷಿಸಿದ್ದರು. ರಾಜ್ಯ ಸರ್ಕಾರದ ಆ್ಯಪ್ ಮೂಲಕವೇ ಜನ ಆಟೋ, ಕ್ಯಾಬ್‌ಗಳನ್ನು ಬುಕ್ ಮಾಡಬಹುದು ಎಂದು ತಿಳಿಸಿದ್ದರು. ಇದರಿಂದಾಗಿ ಖಾಸಗಿ ಅಗ್ರಿಗೇಟರ್ ಕಂಪನಿಗಳ ಸುಲಿಗೆಯಿಂದ ನಾಗರಿಕರು ತಪ್ಪಿಸಿಕೊಳ್ಳಬಹುದಾಗಿತ್ತು. ಆಟೋಗಳು, ಕ್ಯಾಬ್‌ಗಳ ಚಾಲಕರು ಕೂಡ ಹೆಚ್ಚಿನ ಕಮಿಷನ್ ಅಥವಾ ಬಾಡಿಗೆಯಲ್ಲಿ ನ್ಯಾಯವಾದ ಪಾಲು ಪಡೆಯಲು ಸಾಧ್ಯವಾಗುತ್ತಿತ್ತು. ಈಗಲೂ ರಾಜ್ಯ ಸರ್ಕಾರವು ಇಂತಹ ಉಪಕ್ರಮದ ಬಗ್ಗೆ ಯೋಚಿಸುವ ಮೂಲಕ ಸಾರ್ವಜನಿಕರು ಹಾಗೂ ಆಟೋ, ಕ್ಯಾಬ್‌ಗಳ ಚಾಲಕರು ಹೆಚ್ಚಿನ ಲಾಭ ಗಳಿಸುವಂತೆ ಮಾಡಬಹುದು. ಇಂತಹ ಅವಕಾಶವನ್ನು ರಾಜ್ಯ ಸರ್ಕಾರ ಸದ್ಬಳಕೆ ಮಾಡಿಕೊಳ್ಳಲಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ