ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮಂಗಳವಾರ ಹೊಸದಿಲ್ಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿದ್ದಾರೆ. ಶೀಘ್ರವೇ 18,177.44 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದರಲ್ಲಿ 4663.12 ಕೋಟಿ ರೂ. ಇನ್‌ಪುಟ್ ಸಬ್ಸಿಡಿ, 12,7577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಿದ್ದಾರೆ. ರಾಜ್ಯದಲ್ಲಿ 236ರಲ್ಲಿ 223 ತಾಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿರುವುದನ್ನು ಪ್ರಧಾನಿ ಗಮನಕ್ಕೆ ತಂದಿದ್ದಾರೆ. ಇದರ ಜೊತೆಗೆ ಮೇಕೆದಾಟು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಕೂಡ ವಾಗ್ದಾನದಂತೆ ಹಣಕಾಸು ಒದಗಿಸಲು ಮನವಿ ಮಾಡಿದ್ದಾರೆ.
ಕರ್ನಾಟಕದ ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ಮನದಟ್ಟು ಮಾಡಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯಗಳ ನಡುವೆ ಅರ್ಥಪೂರ್ಣ ಸಂವಹನ ಆಗಬೇಕಾದುದು ಮುಖ್ಯ. ನಮ್ಮದು ಒಕ್ಕೂಟ ವ್ಯವಸ್ಥೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಅತ್ಯುತ್ತಮ ಸಂವಹನ ಹಾಗೂ ಹೊಂದಾಣಿಕೆಗಳೇ ಉತ್ತಮ ಆಡಳಿತಕ್ಕೆ ಅತ್ಯಂತ ಮುಖ್ಯವಾದುದು. ಇತ್ತೀಚೆಗೆ ಇದಕ್ಕೆ ವಿರುದ್ಧವಾದುದೇ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಳುವ ಪಕ್ಷಗಳು ವಿಭಿನ್ನವಾಗಿದ್ದಾಗ ಎರಡೂ ವಿರುದ್ಧ ಧ್ರುವಗಳ ಕಡೆಗೆ ಎಳೆಯುತ್ತವೆ. ಇದು ಹಲವೊಮ್ಮೆ ರಾಜ್ಯ ಸರ್ಕಾರ ಮತ್ತು ಗವರ್ನರ್ ನಡುವಿನ ಸಂಘರ್ಷವಾಗಿ ಮಾರ್ಪಡುತ್ತದೆ. ಇದನ್ನು ಕೇರಳ, ತಮಿಳುನಾಡುಗಳ ಇತ್ತೀಚಿನ ಉದಾಹರಣೆಗಳಲ್ಲಿ ನೋಡಬಹುದು. ಹೀಗಾದಾಗ ಉತ್ತಮ ಆಡಳಿತ ಹಳಿ ತಪ್ಪುತ್ತದೆ. ಅಲ್ಲಿ ಆಡಳಿತಾತ್ಮಕ ಬಿಕ್ಕಟ್ಟುಗಳು, ಕಾನೂನು ಸಂಘರ್ಷಗಳು ತಲೆದೋರುತ್ತವೆ. ರಾಜ್ಯ ಸರ್ಕಾರಗಳ ಅಸಹಕಾರ, ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ಬಲಪ್ರಯೋಗ ಮುಂತಾದವು ಕಂಡುಬರುತ್ತದೆ.
ಸದ್ಯ ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಭೇಟಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸಮನ್ವಯದ ಮೂಲಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಗರಿಷ್ಠ ಅನುದಾನ ಪಡೆಯಬೇಕು. ಬರ ಇದ್ದಾಗ ಕೇಂದ್ರದ ಮೇಲೆ ಹಕ್ಕೊತ್ತಾಯ ಹೂಡುವುದು ಸಾಧ್ಯ. ಏನೆಲ್ಲ ಅನುದಾನ ಪಡೆಯಲು ಸಾಧ್ಯವೋ ಅವೆಲ್ಲವನ್ನು ಪಡೆಯಬೇಕು. ರಾಜ್ಯವನ್ನು ಬರ ಆವರಿಸಿದೆ. ರಾಜ್ಯ ಸರ್ಕಾರ ರೈತರ ನೆರವಿಗೆ ತಕ್ಷಣ ಧಾವಿಸಬೇಕು; ಅದಕ್ಕೆ ಅಗತ್ಯವಾದ ನಿಧಿಯನ್ನು ಕೇಂದ್ರವೂ ಒದಗಿಸುವುದು ಮುಖ್ಯ. ಇದಕ್ಕೆ ಎರಡೂ ಸರ್ಕಾರಗಳೂ ಒಣ ಪ್ರತಿಷ್ಠೆ, ಪೂರ್ವಗ್ರಹ, ಸುಖಾಸುಮ್ಮನೆ ಸಂಘರ್ಷ ಬಿಡಬೇಕು. ಈಗಾಗಲೇ ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್ ತಿಂಗಳ 4ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ನಂತರದ ಪರಿಷ್ಕೃತ ಮೊತ್ತದ ಬೇಡಿಕೆಯನ್ನು ರಾಜ್ಯ ಮಂಡಿಸಿದೆ. ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ರೈತರ ಹಿತರಕ್ಷಣೆಯ ದೃಷ್ಟಿಯಿಂದ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದು, ಪಡೆಯುವುದು ಈಗ ಉಭಯ ಸರ್ಕಾರಗಳ ಆದ್ಯತೆಯಾಗಬೇಕು.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಎತ್ತಿನಹೊಳೆಯಲ್ಲಿ ಹುಣಸೆಹಣ್ಣು ತೊಳೆಯುವ ಯೋಜನೆ!