Site icon Vistara News

ವಿಸ್ತಾರ ಸಂಪಾದಕೀಯ: ರೈತರ ಆತ್ಮಹತ್ಯೆ ಕುರಿತು ಸಚಿವರ ಬೇಜವಾಬ್ದಾರಿ ಹೇಳಿಕೆ

Shivanand Patil

Vistara Editorial: Minister's irresponsible statement on farmers' suicide is condemnable

ರಾಜ್ಯದ ರೈತರು ಬರದಿಂದ (Drought Situation) ಕಂಗೆಟ್ಟು ಆಕಾಶ ನೋಡುತ್ತಿದ್ದಾರೆ. ಸರ್ಕಾರವೂ ಏನು ಮಾಡಬೇಕು ಎಂದು ತೋಚದೆ ಕಂಗಾಲಾಗಿದೆ. ಅದರ ನಡುವೆ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ (Agriculture Marketing Minister) ಶಿವಾನಂದ ಪಾಟೀಲ್‌ (Shivananda Patil) ಅವರು ಉಡಾಫೆಯಾಗಿ ಮಾತನಾಡಿ ರೈತರನ್ನು ಅಪಮಾನಿಸಿದ್ದಾರೆ. ʼಬರಗಾಲ ಬರಲೆಂದು ರೈತರಿಗೆ ಆಸೆ ಇರುತ್ತೆ. ಬರಗಾಲ ಬಂದ್ರೆ ರೈತರು ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆʼ ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ಅವರು ರೈತರ ಆತ್ಮಹತ್ಯೆ ಬಗ್ಗೆ ಕೆಟ್ಟದಾಗಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದರು. ʼಲವ್‌ ಕೇಸಲ್ಲಿ ಸತ್ತೋರನ್ನೆಲ್ಲ ರೈತರ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆʼ ಎಂದಿದ್ದರು. ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವರಾಗಿದ್ದುಕೊಂಡು ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಾಗಿದ್ದ ಶಿವಾನಂದ ಪಾಟೀಲ್‌ ಅವರು ಅನ್ನದಾತರನ್ನು ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳು ಇದ್ದಷ್ಟು ಗಂಭೀರವಾಗಿಯೂ ಶಿವಾನಂದ ಪಾಟೀಲರು ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಸಿಎಂ ಇತ್ತೀಚೆಗೆ ಪ್ರಧಾನಿಯನ್ನು ಭೇಟಿಯಾಗಿ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಹಣದ ಬಗ್ಗೆ ಮಾತನಾಡಿ ಬಂದಿದ್ದಾರೆ. ಅದಕ್ಕಾಗಿಯೇ ದಿಲ್ಲಿ ಪ್ರಯಾಣ ಮಾಡಿ ಬಂದಿರುವ ಅವರ ಬದ್ಧತೆ ಮೆಚ್ಚುವಂಥದು. ಆದರೆ ತಮ್ಮ ಸಂಪುಟ ಸಹೋದ್ಯೋಗಿ ಎಂಥವರು ಎಂಬುದನ್ನು ಸಿಎಂ ಗಮನಿಸಿದಂತಿಲ್ಲ. ಇಲ್ಲವಾದರೆ ಇಷ್ಟು ಹೊತ್ತಿಗಾಗಲೇ ʼಹೀಗೆ ಮಾತನಾಡಬೇಡಿʼ ಎಂದು ಸಚಿವರಿಗೆ ತಾಕೀತು ಮಾಡುತ್ತಿದ್ದರು. ಕೃಷಿ ಮಾರುಕಟ್ಟೆ ಮತ್ತ ಸಕ್ಕರೆ ಸಚಿವರಿಗೆ ರೈತರ ಸ್ಥಿತಿಗತಿ ಗೊತ್ತಿಲ್ಲ ಎಂದಲ್ಲ. ಆದರೆ ಉಡಾಫೆ. “ಐದು ಲಕ್ಷ ಪರಿಹಾರ ಘೋಷಣೆ ಬಳಿಕ ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ, ಪ್ರೇಮ ಪ್ರಕರಣದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡವರನ್ನು ಕೂಡಾ ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ಪಟ್ಟಿಗೆ ಸೇರಿಸಲಾಗುತ್ತಿದೆ” ಎಂದು ಹೇಳುವ ಸಚಿವರಿಎಗ ಯಾವ ಬಗೆಯ ಗಂಭೀರತೆ ಇದೆ ಎಂದು ಹೇಗೆ ತಾನೇ ಹೇಳಬಹುದು? ಇಂಥವರು ತಮ್ಮ ಖಾತೆಗೆ ಎಷ್ಟರ ಮಟ್ಟಿಗೆ ನ್ಯಾಯ ಸಲ್ಲಿಸಬಲ್ಲರು?

ಈ ನಿಟ್ಟಿನಲ್ಲಿ 1983ರಲ್ಲಿ ಜನತಾ ರಂಗ ಸರಕಾರದ ಸಚಿವರಾಗಿದ್ದ ಅಬ್ದುಲ್‌ ನಜೀರ್‌ ಸಾಬ್‌ ಅವರನ್ನು ನಾವಿಲ್ಲಿ ನೆನೆಯಬಹುದು. ಒಂದು ಇಲಾಖೆಯನ್ನು ಹೇಗೆ ಆಯ್ದುಕೊಳ್ಳಬೇಕು, ಅದಕ್ಕೆ ಹೇಗೆ ತನ್ನ ಕಾರ್ಯವೈಖರಿಯ ಮೂಲಕ ನ್ಯಾಯ ಸಲ್ಲಿಸಬೇಕು, ಹೇಗೆ ತನುಮನಧನವನ್ನು ಅದಕ್ಕಾಗಿಯೇ ಸಮರ್ಪಿಸಿ ಕೆಲಸ ಮಾಡಿ ಜನತೆಗೆ ಒಳ್ಳೆಯದು ಮಾಡಬೇಕು ಎಂಬುದನ್ನು ನಜೀರ್‌ ಸಾಬ್‌ ಅವರಿಂದ ಕಲಿಯಬಹುದು. ಅಬ್ದುಲ್‌ ನಜೀರ್‌ ಸಾಬ್‌, ಅಂದು ಯಾರಿಗೂ ಬೇಡದ ಖಾತೆ ಎನಿಸಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಸ್ವತಃ ಕೇಳಿ ಪಡೆದುಕೊಂಡು, ‍ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಕಾರ್ಯ ಪ್ರವೃತ್ತರಾಗಿದ್ದರು. ಆ ಸಮಯದಲ್ಲಿ ನಾಡಿನಾದ್ಯಂತ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಸರಿಯಾಗಿ ಮಳೆಯೂ ಬಾರದೇ ಬರಗಾಲದಿಂದ ಕೆರೆ ಕಟ್ಟೆ, ಭಾವಿಗಳೆಲ್ಲ ಬರಿದಾಗಿ ಕುಡಿಯಲೂ ನೀರಿಲ್ಲದ ಬರ ಬಂದಿತ್ತು. ಈ ಪರಿಸ್ಥಿತಿ ಗಮನಿಸಿ ಕೂಡಲೇ ಸರ್ಕಾರದ ವತಿಯಿಂದ ಅಂತಹ ಪ್ರತಿಯೊಂದು ಬರಪೀಡಿತ ಹಳ್ಳಿಗಳಲ್ಲಿಯೂ ಕೊಳವೆ ಬಾವಿಗಳನ್ನು ಕೊರೆಸಿ, ಕೈ ಪಂಪ್ ಹಾಕಿಸಿ ಕೊಟ್ಟು ಜನರಿಗೆ ನೀರನ್ನು ಒದಗಿಸಿ ಕೊಟ್ಟರು. ಹೀಗೆ ಆಧುನಿಕ ಭಗೀರಥ ಎಂದೆನಿಸಿಕೊಂಡ ಅವರನ್ನು ಜನರೇ ಸ್ವತಃ ಪ್ರೀತಿಯಿಂದ ʼನೀರ್ ಸಾಬ್ʼ ಎಂದು ಕರೆದರು. ಮಾಡಿದರೆ ಇಂಥ ಕೆಲಸ ಮಾಡಿ ಸೈ ಎನಿಸಿಕೊಳ್ಳಬೇಕೇ ಹೊರತು, ಉಡಾಫೆ ಮಾತನಾಡಿ ಜನರಿಂದ ಛೀ ಥೂ ಎನಿಸಿಕೊಳ್ಳುವುದಲ್ಲ. ನೀರ್‌ ಸಾಬ್‌ ಅವರ ಹೆಸರು ಅವರ ಕೆಲಸ, ಪ್ರಾಮಾಣಿಕತೆಯಿಂದಾಗಿ ಚಿರಸ್ಥಾಯಿಯಾಗಿರುತ್ತದೆ. ಶಿವಾನಂದ ಪಾಟೀಲ್‌ ಅವರ ಹೆಸರು ಎಲ್ಲಿಯವರೆಗೆ ಇರಬಹುದು?

ಇದನ್ನೂ ಓದಿ: Shivananda Pateel: ಬರ ಬರ್ಲಿ ಅಂತ ರೈತರೇ ಕಾಯ್ತಾರೆ; ಸಚಿವ ಶಿವಾನಂದ ಪಾಟೀಲ್‌ ಇದೆಂಥಾ ಮಾತು?

ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಕೂಡ ಶಿವಾನಂದ ಪಾಟೀಲ್‌ ಅವರನ್ನು ಸಮರ್ಥಿಸುವಂತೆ ಮಾತನಾಡಿದ್ದಾರೆ ಎಂದು ಹೇಳಲಾದ ವಿಡಿಯೋ ಒಂದನ್ನು ‘ಇಂಡಿಯಾ ಟುಡೆ’ ಹಂಚಿಕೊಂಡಿದೆ. ʼʻಎಲ್ಲಿದೆ ಹೇಳಿ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ? ಎಲ್ಲ ಸುಳ್ಳುʼʼ ಎಂದು ಡಿ.ಕೆ. ಶಿವಕುಮಾರ್‌ ವಿಡಿಯೋದಲ್ಲಿ ಹೇಳಿದ್ದಾರೆ. ಈ ಮಾತು ಕೂಡ ಖಂಡನಾರ್ಹವೇ ಆಗಿದೆ. “ಇಂಥ ಸಂವೇದನೆ ಕಳೆದುಕೊಂಡಿರುವ ಸಚಿವರನ್ನು ಸಂಪುಟದಲ್ಲಿ ಇಟ್ಟುಕೊಳ್ಳಬಾರದು. ಅವರನ್ನು ಕೂಡಲೇ ಹುದ್ದೆಯಿಂದ ಪದಚ್ಯುತಗೊಳಿಸಬೇಕು” ಎಂದು ವಿಪಕ್ಷಗಳೂ ಆಗ್ರಹಿಸಿವೆ. ರೈತರು ಕೂಡ ಶಿವಾನಂದ ಪಾಟೀಲ್‌ ಮಾತಿಗೆ ಸಿಟ್ಟಿಗೆದ್ದಿದ್ದಾರೆ. ʼಯಾರೂ ನಿಮ್ಮ ಸಾಲಮನ್ನಾ ಕಾದುಕೊಂಡು ಕುಳಿತಿಲ್ಲ. ನಿಮ್ಮ ಸರ್ಕಾರಕ್ಕೆ ಸರಿಯಾದ ಬರ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಜನರ ಸಂಕಷ್ಟ ಪರಿಹರಿಸುವ ಮನಸ್ಸಿಲ್ಲ. ಹೀಗಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದೀರಿʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼನಾವೇ ರೈತ ಸಂಘದಿಂದ 50 ಲಕ್ಷ ರೂ. ಪರಿಹಾರ ಕೊಡಲು ನಿರ್ಧಾರ ಮಾಡಿದ್ದೇವೆ. ಈಗ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳಲಿʼ ಎಂದು ಸವಾಲು ಹಾಕಿದ್ದರು. ಇಂಥ ಛೀಮಾರಿಯ ಮಾತು ಕೇಳಿದ ಬಳಿಕವೂ ಶಿವಾನಂದ ಪಾಟೀಲರು ಸಚಿವರಾಗಿ ಉಳಿಯಬೇಕೆ? ಅವರೇ ನಿರ್ಧರಿಸಲಿ. ಮುಖ್ಯಮಂತ್ರಿಗಳೂ ಇವರ ʼಯೋಗ್ಯತೆʼಯನ್ನು ಸರಿಯಾಗಿ ಗಮನಿಸಲಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version