Site icon Vistara News

ವಿಸ್ತಾರ ಸಂಪಾದಕೀಯ: ಮೈಸೂರಿನಲ್ಲೂ ಮೆಟ್ರೋ ಸೇವೆ ಬೇಗ ಸಾಕಾರಗೊಳ್ಳಲಿ

Vistara Editorial, Mysuru need metro project

ದೇಶಾದ್ಯಂತ ರೈಲು ಸೇವೆಗಳು ತ್ವರಿತಗತಿಯಲ್ಲಿ ವಿಸ್ತಾರಗೊಳ್ಳುತ್ತಿದ್ದು, ಹಲವು ನಗರಗಳಲ್ಲಿ ಮೆಟ್ರೋ ರೈಲು ಸೇವೆ (Namma Metro) ಆರಂಭವಾಗಲಿದೆ. ಬೆಂಗಳೂರಿನ ಬಳಿಕ ಮೈಸೂರಿನಲ್ಲೂ ಮೆಟ್ರೋ ಸೇವೆ (Metro service at Mysore) ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಘೋಷಿಸಿದ್ದಾರೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ದೇಶದ ಮೊದಲ ಪ್ರಾದೇಶಿಕ ರೈಲು ಎಂದೇ ಗುರುತಿಸಲಾಗದ ರ‍್ಯಾಪಿಡ್‌ ಎಕ್ಸ್‌ (ನಮೋ ಭಾರತ್‌) ರೈಲಿಗೆ ಚಾಲನೆ ನೀಡಿ, ದೇಶದ ಹಲವು ರೈಲು ಮಾರ್ಗಗಳ ಉದ್ಘಾಟನೆಯನ್ನು ವರ್ಚ್ಯುವಲ್‌ ಆಗಿ ಮಾಡಿ ಅವರು ಈ ಮಾತು ಹೇಳಿದ್ದಾರೆ. ಇದರೊಂದಿಗೆ ಅವರು ಬೆಂಗಳೂರಿನ ಹೊಸ ಜೀವನಾಡಿಯಾಗಿರುವ ನಮ್ಮ ಮೆಟ್ರೋದ ನೇರಳೆ ಮಾರ್ಗದ ಎರಡು ವಿಸ್ತೃತ ರೂಟ್‌ಗಳನ್ನು ಕೂಡ ಲೋಕಾರ್ಪಣೆ ಮಾಡಿದ್ದಾರೆ. ಕೆಆರ್ ಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ಮೆಟ್ರೋ ರೈಲು ಸೇವೆ ಈಗ ವಿಸ್ತರಿಸಿದೆ(Vistara Editorial).

ದೇಶದ ಮೊದಲ ಸೆಮಿ ಹೈಸ್ಪೀಡ್‌ ಎನಿಸಿರುವ, ದೇಶದ ಮೊದಲ ಪ್ರಾದೇಶಿಕ ರೈಲು ಎಂದೇ ಖ್ಯಾತಿಯಾಗಿರುವ ರ‍್ಯಾಪಿಡ್‌ ಎಕ್ಸ್‌ ರೈಲು ಕ್ಷಿಪ್ರವಾಗಿ ಉಪ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದಕ್ಕೆ ‘ನಮೋ ಭಾರತ್’‌ ಎಂದು ನಾಮಕರಣ ಮಾಡಲಾಗಿದೆ. ಉತ್ತರ ಪ್ರದೇಶದ ಸಾಹಿಬಾಬಾದ್‌ ಹಾಗೂ ದುಹೈ ಡಿಪೋ ನಡುವಿನ 17 ಕಿ.ಮೀ ಪ್ರಯಾಣದ ರೈಲಿಗೆ ಮೋದಿ ಚಾಲನೆ ನೀಡಿದ್ದಾರೆ. ದೆಹಲಿಯಿಂದ ಬೇರೆ ನಗರಗಳಿಗೆ ವೇಗದ ಹಾಗೂ ಅತ್ಯಾಧುನಿಕ ರೈಲು ಸಂಪರ್ಕ ಕಲ್ಪಿಸುವ ಯೋಜನೆಯೇ ಪ್ರಾದೇಶಿಕ ಕ್ಷಿಪ್ರ ಸಾಗಣೆ ವ್ಯವಸ್ಥೆ (RRTS). ಸುಮಾರು 30 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ರ‍್ಯಾಪಿಡ್‌ ಎಕ್ಸ್‌ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸಲಿದೆ. ಸ್ಟಾಂಡರ್ಡ್‌ ಕ್ಲಾಸ್‌ ಹಾಗೂ ಪ್ರೀಮಿಯಂ ಕ್ಲಾಸ್‌ ಬೋಗಿಗಳು ಇದರಲ್ಲಿದ್ದು, ಸುಮಾರು 1,700 ಪ್ರಯಾಣಿಕರು ಒಂದು ರೈಲಿನಲ್ಲಿ ಪ್ರಯಾಣಿಸಬಹುದು. ದೆಹಲಿಯಿಂದ ಮೀರತ್‌ವರೆಗೆ ರ‍್ಯಾಪಿಡ್‌ ಎಕ್ಸ್‌ ರೈಲು ಸಂಚಾರ 2025ರ ಜೂನ್‌ನಲ್ಲಿ ಆರಂಭವಾಗಲಿದೆ. ಒಮ್ಮೆ ಯೋಜನೆ ಪೂರ್ತಿಗೊಂಡರೆ ದೆಹಲಿಯಿಂದ ಮೀರತ್‌ಗೆ ಕೇವಲ ಒಂದು ಗಂಟೆಯಲ್ಲಿ ತೆರಳಬಹುದಾಗಿದೆ. ಈಗ ಸುಮಾರು 82 ಕಿ.ಮೀ ಪ್ರಯಾಣಕ್ಕೆ ಮೂರರಿಂದ ನಾಲ್ಕು ಗಂಟೆ ಬೇಕಾಗುತ್ತದೆ.

ಬೆಂಗಳೂರಿನಲ್ಲಿ ಮೆಟ್ರೋ ಸೇವೆಯಿಂದ ಎಷ್ಟು ಪ್ರಯೋಜವಾಗಿದೆ ಎಂಬುದನ್ನು ಇಂದು ಎಲ್ಲರೂ ಕಾಣಬಹುದಾಗಿದೆ. ಎರಡು ದಶಕ ಹಿಂದೆ ಈ ಯೋಜನೆಯ ಕೆಲಸ ಶುರುವಾದಾಗ, ಇದರ ಉಪಯುಕ್ತತೆಯ ಬಗ್ಗೆ ಅನುಮಾನಗಳಿದ್ದವು. ಆದರೆ ಇಂದು ಮೆಟ್ರೋದ ಪ್ರಯೋಜನ, ಉಪಯುಕ್ತತೆ ಸ್ವಯಂವೇದ್ಯ. ಸಾವಿರಾರು ಜನ ನಮ್ಮ ಮೆಟ್ರೋದಲ್ಲಿ ಪ್ರತಿದಿನ ಓಡಾಡುತ್ತಾರೆ. ಅವರ ಪ್ರಯಾಣದ ಸಮಯ, ಶ್ರಮ, ಒತ್ತಡ ಗಣನೀಯವಾಗಿ ಕಡಿಮೆಯಾಗಿದೆ. ಬೆಂಗಳೂರಿನ ಟ್ರಾಫಿಕ್‌ನ ಮೇಲಿನ ಒತ್ತಡ ಕೂಡ ಕಡಿಮೆಯಾಗಿದೆ. ಪೀಕ್‌ ಸಮಯದಲ್ಲಿ ಮೆಟ್ರೋದಲ್ಲಿ ಕಾಲಿಡಲು ಕೂಡ ಜಾಗವಿರುವುದಿಲ್ಲ. ಇದು ಬಹಳಷ್ಟು ಸುರಕ್ಷಿತವೂ ಆರಾಮದಾಯಕವೂ ಆಗಿದೆ. ದಿಲ್ಲಿ, ಮುಂಬಯಿ, ಕೋಲ್ಕತ್ತಾಗಳ ಬಳಿಕ ಬೆಂಗಳೂರು ಮೆಟ್ರೋಪಾಲಿಟನ್‌ ಸಿಟಿ ಎನಿಸಿಕೊಂಡಿದೆ. ಐಟಿ ಉದ್ಯಮ ಇಲ್ಲಿಗೆ ಅಂತಾರಾಷ್ಟ್ರೀಯ ವರ್ಚಸ್ಸನ್ನು ತಂದುಕೊಟ್ಟಿದೆ. ಇಂಥ ನಗರಕ್ಕೆ ಬೇಕಿದ್ದ ಪ್ರತಿಷ್ಠಿತ ಸಾರಿಗೆ ಮೂಲಸೌಕರ್ಯ ಮೆಟ್ರೋದಿಂದ ವಿಸ್ತರಿಸಿದೆ. ಇದು ಇನ್ನಷ್ಟು ಲೈನುಗಳನ್ನು, ಕಾರ್ಯಾಚರಣೆಯ ಮಾರ್ಗಗಳನ್ನು ಹೊಂದಿದಾಗ ಮತ್ತಷ್ಟು ಲಾಭಕರ ಹಾಗೂ ವ್ಯಾಪಕವಾಗುತ್ತದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಪ್ಯಾಲೆಸ್ತೀನ್‌ ನಾಗರಿಕರಿಗೂ ಮಾನವೀಯ ನೆರವು ದೊರೆಯಲಿ

ಮೈಸೂರು ಕೂಡ ಬೆಳೆಯುತ್ತಿರುವ ನಗರ. ಇಂದು, ಮೈಸೂರಿನಲ್ಲಿ ಬೆಂಗಳೂರಿನಷ್ಟು ಜನದಟ್ಟಣೆ ಹಾಗೂ ಟ್ರಾಫಿಕ್‌ ದಟ್ಟಣೆ ಇಲ್ಲವೆಂದು ನಮಗೆ ಅನಿಸಬಹುದು. ಆದರೆ ಸಾರಿಗೆ- ಸಂಪರ್ಕದ ವಿಷಯದಲ್ಲಿ ನಾವು ಇನ್ನು ಐವತ್ತು ವರ್ಷಗಳ ನಂತರ ನಗರ ಹೇಗಿರಲಿದೆ ಎಂಬುದನ್ನು ಯೋಚಿಸಬೇಕಾಗುತ್ತದೆ. ನಗರ ಯೋಜನೆ ಎಂಬುದು ಇಂಥ ದೂರದೃಷ್ಟಿಯನ್ನು ಬೇಡುತ್ತದೆ. ಬೆಂಗಳೂರಿಗೆ ಹೋಲಿಸಿದರೆ ಮೈಸೂರಿನ ರಸ್ತೆಗಳು ಸಾಕಷ್ಟು ವಿಶಾಲವಾಗಿವೆ ನಿಜ. ಆದರೆ ಕಾಲ ಹೀಗೇ ಇರುವುದಿಲ್ಲ. ಎರಡನೇ ಹಂತದ, ಮೂರನೇ ಹಂತದ ನಗರಗಳಿಗೆ ಉದ್ಯಮಗಳು, ಕೈಗಾರಿಕೆಗಳು ವಿಸ್ತರಿಸತೊಡಗಿದಂತೆ ನಗರವೂ ಬೆಳೆಯತೊಡಗುತ್ತದೆ. ಅದಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆಯೂ ಅಗತ್ಯವಾಗುತ್ತದೆ. ಹೀಗೆ ಬೆಳೆಯಲಿರುವ ನಗರಗಳಲ್ಲಿ ಮೈಸೂರು ಒಂದು. ಇಲ್ಲಿರುವ ಹಿತಕರ ಹವಾಮಾನ, ರಾಜಧಾನಿಗೆ ನಿಕಟವಾಗಿರುವಿಕೆ, ಜಮೀನಿನ ಲಭ್ಯತೆ ಇತ್ಯಾದಿಗಳು ಈ ನಗರದ ಬೆಳವಣಿಗೆಯಲ್ಲಿ ವರವಾಗಲಿವೆ. ಇಲ್ಲಿ ಮೆಟ್ರೋ ಬಗ್ಗೆ ಈಗಿನಿಂದಲೇ ಚಿಂತಿಸುವುದು ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಮೋದಿಯವರು ಸೂಕ್ತ ಮಾತನ್ನೇ ಆಡಿದ್ದಾರೆ. ಬೆಂಗಳೂರು ಮತ್ತು ಮೈಸೂರು ನಡುವೆ ಈಗ ಮುಕ್ತವಾಗಿರುವ ಎಕ್ಸ್‌ಪ್ರೆಸ್‌ ವೇಯಿಂದಾಗಿ ಈಗ ಕೇವಲ ಎರಡು ಗಂಟೆಗಳಲ್ಲಿ ಎರಡು ನಗರಗಳನ್ನು ಸಂಪರ್ಕಿಸಬಹುದಾಗಿದೆ. ಈ ಹಿಂದೆ ಬೆಂಗಳೂರು ಮತ್ತು ಮೈಸೂರನ್ನು ಮೆಟ್ರೋ ಮೂಲಕವೇ ಸಂಪರ್ಕಿಸುವ ಯೋಜನೆಯ ಬಗ್ಗೆಯೂ ಚರ್ಚೆಯಾಗಿತ್ತು. ಮೆಟ್ರೋ ಯೋಜನೆ ಅಂದರೆ ಇಂದು ಉಳ್ಳವರು ಓಡಾಡುವ ರೈಲುಗಳು ಮಾತ್ರವಲ್ಲ, ಅವು ಎಲ್ಲರಿಗೂ ಅಗತ್ಯ ಸೇವೆ ಎನಿಸಿವೆ. ಹಾಗೆಯೇ ಮೆಟ್ರೋ ಯೋಜನೆಗಳಿಂದ ಉದ್ಯೋಗಗಳ ಪ್ರಮಾಣವೂ ಹೆಚ್ಚುವುದು ಖಚಿತ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version