Site icon Vistara News

ವಿಸ್ತಾರ ಸಂಪಾದಕೀಯ: ಕ್ಷೇತ್ರಾಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ಪಕ್ಷ ರಾಜಕೀಯ ಸರಿಯಲ್ಲ

Vistara Editorial, Government should conduct exam without any lapse

ಗಾಗಲೇ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಆರ್ಥಿಕ ಸಮತೋಲನಕ್ಕೆ ಹೆಣಗಾಡುತ್ತಿರುವ ರಾಜ್ಯ ಸರ್ಕಾರ ಈಗ ಬಿಜೆಪಿ ಶಾಸಕರ ಕ್ಷೇತ್ರಗಳ ಅನುದಾನಕ್ಕೆ ಕೈ ಹಾಕಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ್ದ 485 ಕೋಟಿ ರೂಪಾಯಿಗಳ ಅನುದಾನವನ್ನು ವಾಪಸ್‌ ಪಡೆದಿರುವ ಸರ್ಕಾರ ತಮ್ಮದೇ ಪಕ್ಷದ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ವರ್ಗಾಯಿಸಿದೆ. ರಾಜರಾಜೇಶ್ವರಿ ಕ್ಷೇತ್ರಕ್ಕೆ ಹಂಚಿಕೆಯಾಗಿದ್ದ ದೊಡ್ಡ ಪ್ರಮಾಣದ ಅನುದಾನವನ್ನು ವಾಪಸ್ ಪಡೆಯಲಾಗಿದೆ. ಆರ್.ಆರ್. ನಗರ ಶಾಸಕ ಮುನಿರತ್ನ ಮತ್ತು ಡಿ.ಕೆ. ಬ್ರದರ್ಸ್ ನಡುವಿನ ಜಿದ್ದಾಜಿದ್ದಿನ ರಾಜಕೀಯ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಆರ್.ಆರ್ ನಗರ ಸೇರಿದಂತೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಳೆದ ಅವಧಿಯಲ್ಲಿ ನೀಡಲಾಗಿದ್ದ ಅನುದಾನವನ್ನು ವಾಪಸ್ ಪಡೆದು 11 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಸ್ವಾರಸ್ಯಕರ ಸಂಗತಿಯೆಂದರೆ, ಒಂದು ಕಾಲು ಬಿಜೆಪಿಯಿಂದ ಹೊರಗಿಟ್ಟು, ಕಾಂಗ್ರೆಸ್‌ನತ್ತ ಚಿತ್ತ ಹರಿಸಿರುವ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್‌ ಅವರ ಕ್ಷೇತ್ರಕ್ಕೂ ಅನುದಾನ ನೀಡಲಾಗಿದೆ. ಇದು ರಾಜ್ಯ ರಾಜಕೀಯದಲ್ಲಿ (Karnataka Politics) ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ(Vistara Editorial).

ಇದರೊಂದಿಗೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ಅಕ್ಷರಶಃ ದ್ವೇಷ ರಾಜಕಾರಣಕ್ಕೆ (Hate politics) ಇಳಿದಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್‌ ಸರ್ಕಾರದ ನಡೆ ಇದನ್ನು ಸಮರ್ಥಿಸುವಂತಿದೆ. ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲಿ, ಬೇಡವೆಂದು ಯಾರೂ ಹೇಳುವುದಿಲ್ಲ. ಆದರೆ ಅದಕ್ಕಾಗಿ ಬಿಜೆಪಿ ಶಾಸಕರ ಕ್ಷೇತ್ರಗಳ ಅನುದಾನವನ್ನು ಅಪಹರಿಸುವಂಥ ಕೀಳು ರಾಜಕೀಯ ಬೇಕೆ? ಇದನ್ನೇ ಅಲ್ವೇ ಸೇಡಿನ ರಾಜಕೀಯ ಅನ್ನುವುದು? ಇದರ ನಡುವೆ ಬಿಜೆಪಿಯ ಎಲ್ಲರನ್ನು ಬಿಟ್ಟು, ಕಾಂಗ್ರೆಸ್‌ನತ್ತ ತಿರುಗಿದ್ದಾರೆ ಎನ್ನಲಾಗುವ ಎಸ್‌ಟಿ ಸೋಮಶೇಖರ್‌ ಅವರ ಕ್ಷೇತ್ರಕ್ಕೆ ಮಾತ್ರ ನೀಡಿರುವುದೊಂದು ಚೋದ್ಯ. ʼನೀವೂ ಬಿಜೆಪಿ ಬಿಟ್ಟು ಕಾಂಗ್ರೆಸ್‌ನತ್ತ ಬನ್ನಿ, ಅನುದಾನ ಕೊಡೋಣʼ ಎಂದು ಬ್ಲ್ಯಾಕ್‌ಮೇಲ್‌ ಮಾಡಿದಂತೆ ಇದು ಕಾಣಿಸುತ್ತಿಲ್ಲವೇ? ಆರ್‌ಆರ್ ನಗರಕ್ಕೆ ಬಿಜೆಪಿ ಸರ್ಕಾರ ನೀಡಿದ್ದ 126 ಕೋಟಿ ರೂಪಾಯಿ ಅನುದಾನ ವಾಪಸ್ ಪಡೆಯಲಾಗಿದೆ. ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಮಂಜೂರು ಆಗಿದ್ದ ಅನುದಾನ ಅದಾಗಿತ್ತು. ಟೆಂಡರ್‌ ಆದ ಯೋಜನೆಗಳಿಂದಲೂ ಹಣ ವಾಪಸ್‌ ಕಿತ್ತುಕೊಳ್ಳಲಾಗಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಬರ ತಾಂಡವವಾಡುತ್ತಿದೆ, ಎಚ್ಚರಗೊಳ್ಳಲೇಬೇಕಿದೆ

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಾರಣದಿಂದ, ಬೊಕ್ಕಸದಲ್ಲಿ ಹಣವಿಲ್ಲದಾಗಿದೆ. ಹೀಗಾಗಿ ಇನ್ನೆರಡು ವರ್ಷಗಳ ಕಾಲ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ನಿರೀಕ್ಷಿಸಬೇಡಿ ಎಂದು ಶಾಸಕರಿಗೆ ಈ ಹಿಂದೆ ಹೇಳಲಾಗಿತ್ತು. ಇದೇ ನಿಜವಾಗಿದ್ದರೆ, ಎಲ್ಲ ಕ್ಷೇತ್ರಗಳಿಗೂ ಅನುದಾನಕ್ಕೆ ಹಣವಿಲ್ಲದಾಗಬೇಕು. ಕಾಂಗ್ರೆಸ್‌ ಕ್ಷೇತ್ರಗಳಿಗೆ ಮಾತ್ರ ಅದು ದಕ್ಕುವುದು ಹೇಗೆ? ಇದೊಂದು ಕೆಟ್ಟ ಸಂದೇಶವನ್ನೂ ರಾಜ್ಯದ ಜನತೆಯ ಮುಂದೆ ಬಿತ್ತುತ್ತದೆ. ಕಾಂಗ್ರೆಸ್‌ ಅನ್ನು ಗೆಲ್ಲಿಸಿದರೆ ಮಾತ್ರ ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡಲಾಗುವುದು, ಇಲ್ಲದಿದ್ದರೆ ಇಲ್ಲ ಎಂಬ ಬೆದರಿಕೆ ಸಂದೇಶವನ್ನು ಕಾಂಗ್ರೆಸ್‌ ರಾಜ್ಯದ ಜನತೆಗೆ ನೀಡುತ್ತಿರುವಂತಿದೆ. ಇದು ಸ್ಪಷ್ಟವಾಗಿ ಜನ ಪ್ರತಿನಿಧಿ ಕಾಯ್ದೆಯ ಉಲ್ಲಂಘನೆ. ಜನ ಪ್ರತಿನಿಧಿಗಳು ಅಂದರೆ ಸರ್ಕಾರ ತಮ್ಮ ಕ್ಷೇತ್ರದ ಎಲ್ಲ ಜನತೆಯನ್ನೂ ಸಮಾನವಾಗಿ ಕಾಣಬೇಕು. ಜತೆಗೆ ಇದು ಸಂವಿಧಾನದ ಸಮಾನತೆಯ ಆಶಯದ ಉಲ್ಲಂಘನೆ ಕೂಡ. ಸಂವಿಧಾನದ 14ನೇ ಆರ್ಟಿಕಲ್‌ ಪ್ರತಿಪಾದಿಸುವಂತೆ, ಸರ್ಕಾರವು ಎಲ್ಲ ಪ್ರಜೆಗಳನ್ನೂ ಕಾನೂನಿನ ವ್ಯಾಪ್ತಿಯಲ್ಲಿ ಸಮಾನವಾಗಿ ಪರಿಗಣಿಸತಕ್ಕದ್ದು. ಆರ್ಟಿಕಲ್‌ 15ರ ಪ್ರಕಾರ, ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳ ಅಥವಾ ಇನ್ಯಾವುದೇ ವಿಚಾರದ ಆಧಾರದಲ್ಲಿ ಸರ್ಕಾರವು ಯಾವುದೇ ನಾಗರಿಕರ ನಡುವೆ ತಾರತಮ್ಯ ಮಾಡಬಾರದು. ಕಾಂಗ್ರೆಸ್‌ ಪಕ್ಷವನ್ನು ಆರಿಸಿದ ಕ್ಷೇತ್ರಗಳಿಗೆ ಹಣ ನೀಡುವುದು, ಬಿಜೆಪಿಯನ್ನು ಆರಿಸಿದವರನ್ನು ಕಡೆಗಣಿಸುವುದು ಸಂವಿಧಾನಕ್ಕೆ ಎಸಗುವ ಅಪಚಾರ, ದ್ರೋಹ. ಇದನ್ನು ನ್ಯಾಯಾಂಗದ ಮುಂದೆಯೂ ಪ್ರಶ್ನಿಸಬಹುದಾಗಿದೆ.

ಶಾಸಕರು ಯಾವುದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ, ಅವರು ಪ್ರತಿನಿಧಿಸುವ ಜನ ಈ ರಾಜ್ಯದ ಪ್ರಜೆಗಳು ಎನ್ನುವುದನ್ನು ನಾವು ಮರೆಯಬಾರದು. ಬಿಜೆಪಿಯೇ ಅಧಿಕಾರದಲ್ಲಿರಲಿ ಅಥವಾ ಕಾಂಗ್ರೆಸ್‌ ಇರಲಿ, ಕ್ಷೇತ್ರಗಳ ಅಭಿವೃದ್ಧಿಗಾಗಿ ನೀಡುವ ಅನುದಾನದಲ್ಲಿ ತಾರತಮ್ಯ ಮಾಡಲೇ ಬಾರದು. ಇದು ಕೆಟ್ಟ ರಾಜಕೀಯ ಪರಂಪರೆ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version