Site icon Vistara News

ವಿಸ್ತಾರ ಸಂಪಾದಕೀಯ: ವರ್ಗಾವಣೆ ದಂಧೆ ಆರೋಪ, ಪಾರದರ್ಶಕ ತನಿಖೆ ಅಗತ್ಯ

Yathindra-Siddaramaiah

ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಫೋನ್‌ ಸಂಭಾಷಣೆ ಈಗ ರಾಜಕೀಯ ವಲಯದಲ್ಲಿ ಕೋಲಾಹಲ, ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ (CM siddaramaiah) ಅವರ ಸರ್ಕಾರದಲ್ಲಿ ಮಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹಸ್ತಕ್ಷೇಪ ಹೆಚ್ಚಾಗಿದೆ ಎಂಬ ಆರೋಪಕ್ಕೆ ಪೂರಕವಾಗಿ ವಿಡಿಯೊ ಸಾಕ್ಷಿಯೊಂದು ಲಭ್ಯವಾಗಿದೆ. ಇದರ ಬೆನ್ನಿಗೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ತಾವು ಮಾಡುತ್ತಿರುವ ಆರೋಪಗಳಿಗೆ ಸಾಕ್ಷಿ ಸಿಕ್ಕಿತು ಎಂದು ಸಾಮಾಜಿಕ ಜಾಲ ತಾಣದಲ್ಲಿ ಕುಟುಕಿದ್ದಾರೆ. ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿದ್ದ ವೇಳೆ ಸಿದ್ದರಾಮಯ್ಯ ಅವರಿಗೆ ಫೋನ್‌ ಕರೆ ಮಾಡಿದ ಯತೀಂದ್ರ, ತಾನು ನೀಡಿದ ಲಿಸ್ಟ್ ಬಗ್ಗೆ ಸಾರ್ವಜನಿಕರ ಮುಂದೆಯೇ ತಂದೆಯ ಜತೆ ಮಾತುಕತೆ ನಡೆಸಿದ್ದರು. ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಬೇರೊಂದು ಲಿಸ್ಟ್​ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ‌ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸಿದ್ದರು. ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, ʼಮಹದೇವ್​ ಯಾಕೆ ಯಾವ್ದ್ಯಾವುದು ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡ್ತಿರೋದುʼ ಅಂತ ಪ್ರಶ್ನೆ ಮಾಡಿದ್ದಾರೆ. ʼಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿʼ ಅಂತ ಯತೀಂದ್ರ ಅವರು ಮಹದೇವರಿಗೆ ಸೂಚಿಸಿದ್ದಾರೆ.

ಈ ವಿಡಿಯೋ ಈಗ ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದೆ. ʼʼಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. ಸಿದ್ದರಾಮಯ್ಯ ಸರಕಾರದ ವಸೂಲಿ ಬಿಸಿನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆʼʼ ಎಂದು ಎಚ್.ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ. ʼʼಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ. ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ರಾಜ್ಯದ ಮುಖ್ಯಮಂತ್ರಿಗೇ ಧಮಕಿ ಹಾಕಿ, “ನಾನು ಹೇಳಿದವರಷ್ಟನ್ನೇ ಮಾಡಿ” ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ?ʼʼ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಕೂಡ ಈ ಕುರಿತು ಗಂಭೀರ ಆರೋಪ ಮಾಡಿದೆ.

Yathindra Siddaramaiah CM Siddaramaiah and HD Kumaraswamy infront of vidhnasoudha and talk war about transfer racket.

ಡಾ. ಯತೀಂದ್ರ ಸಿದ್ದರಾಮಯ್ಯ ವಿಡಿಯೋದಲ್ಲಿ ಪ್ರಸ್ತಾಪ ಆಗಿರುವ ಮಹದೇವ್ ಅವರು ಮುಖ್ಯಮಂತ್ರಿ ಕಚೇರಿಯ ವಿಶೇಷಾಧಿಕಾರಿ ಆರ್. ಮಹದೇವ್. ಅವರು ಮುಖ್ಯಮಂತ್ರಿಗಳ ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ. ಮಹದೇವ್ ಮೂಲತಃ ಸಿದ್ದರಾಮನಹುಂಡಿ ಗ್ರಾಮದವರಾಗಿದ್ದು, ಬೆಂಗಳೂರಿನಲ್ಲಿ ಉಪನೋಂದಣಾಧಿಕಾರಿಯಾಗಿದ್ದರು. ಸಿಎಂ ಅವರು ಮುಖ್ಯಮಂತ್ರಿಯಾದ ಬಳಿಕ ಹುಟ್ಟೂರಿನ ಅಧಿಕಾರಿಯನ್ನೇ ಆಯಕಟ್ಟಿನ ಹುದ್ದೆಗೆ ನಿಯೋಜಿಸಿಕೊಂಡಿದ್ದರು. ಇವರು ಸಿದ್ದರಾಮಯ್ಯ ಅವರಿಗೆ ಓಎಸ್‌ಡಿ ಆಗಿದ್ದರೂ ಯತೀಂದ್ರ ಸಿದ್ದರಾಮಯ್ಯ ಅವರ ಕೆಲಸವನ್ನೇ ಹೆಚ್ಚಾಗಿ ಮಾಡುತ್ತಾರೆ ಎಂಬ ಆರೋಪವಿದೆ. ಇವರು ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ ಟೀಮ್‌ಗೆ ಆಪ್ತರಾಗಿರುವ ಅಧಿಕಾರಿ. ಮಹದೇವ್‌ ಅವರ ವಿರುದ್ಧ ಹಲವು ಸಚಿವರು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ಮಹದೇವ್‌ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಚಿವರು ದೂರಿದ್ದರು. ಮುಖ್ಯವಾಗಿ ಸಂತೋಷ್‌ ಲಾಡ್‌ ಅವರು ಮಹದೇವ್‌ ವಿರುದ್ಧ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮಹದೇವ್‌ ಸಚಿವ ಸಂತೋಷ್ ಲಾಡ್‌ಗೂ ಮಾಹಿತಿ ನೀಡದೇ ವರ್ಗಾವಣೆ ಪಟ್ಟಿ ರೆಡಿ ಮಾಡಿದ್ದರು ಎಂದು ಆರೋಪಿಸಲಾಗಿದೆ. ವರ್ಗಾವಣೆಗೆ ಸಿಎಂ ಅನುಮೋದನೆ ಪಡೆದುಕೊಳ್ಳುವ ವೇಳೆ ಹೆಚ್ಚುವರಿ ಲಿಸ್ಟ್ ರೆಡಿ ಮಾಡುತ್ತಿದ್ದ ಆರೋಪವನ್ನು ಮಹದೇವ್‌ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: CM siddaramaiah: ನನ್ನ ಲಿಸ್ಟೇ ಆಗಬೇಕು!‌ ಜನರ ಎದುರೇ ತಂದೆಗೆ ಫೋನ್‌ ಮಾಡಿ ಯತೀಂದ್ರ ತಾಕೀತು

ಈ ನಡುವೆ ಪ್ರಕರಣದ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಯತೀಂದ್ರ ಅವರು ಮಾತನಾಡಿರುವುದು ವರ್ಗಾವಣೆ ಬಗೆಗಲ್ಲ. ಬದಲಾಗಿ ಸಿಎಸ್‌ಆರ್‌ ನಿಧಿಯ ಬಗ್ಗೆ. ʼʼಅದು ಸಿಎಸ್‌ಆರ್ ಲಿಸ್ಟ್, ಶಾಲೆ ಕಟ್ಟಡಗಳನ್ನು ಸಿಎಸ್‌ಆರ್ ಫಂಡ್‌ನಿಂದ ರಿಪೇರಿ ಮಾಡಿಸಲಾಗುತ್ತಿದೆ. ಅದರ ಬಗ್ಗೆ ಯತೀಂದ್ರ ಹೇಳಿರುವುದು. ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದೇ ಹೌದಾದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆʼʼ ಎಂದಿದ್ದಾರೆ. ʻʻಯತೀಂದ್ರ ಅವರು ಕೆಡಿಪಿ ಸದಸ್ಯ ಹಾಗೂ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾರೆ. ತಂದೆಯವರು ಸಿಎಂ ಆಗಿರುವುದರಿಂದ ಅವರ ಪರವಾಗಿ ಜನಸಂಪರ್ಕ ಸಭೆ ನಡೆಸಿದ್ದಾರೆ‌. ಈ ಸಂದರ್ಭದಲ್ಲಿ ಸ್ಕೂಲ್ ವಿಚಾರವಾಗಿ ಮಾತನಾಡಿದ್ದಾರೆ. ಇದನ್ನು ವರ್ಗಾವಣೆ ದಂಧೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಯಾವ ವರ್ಗಾವಣೆಯೂ ಇಲ್ಲʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಯಾರು ಏನೇ ಹೇಳಲಿ, ಈ ವಿಚಾರದಲ್ಲಿ ಸಾರ್ವಜನಿಕವಾಗಿ ದೊಡ್ಡದೊಂದು ಚರ್ಚೆ ನಡೆಯುತ್ತಿರುವುದಂತೂ ನಿಜ. ಮುಖ್ಯಮಂತ್ರಿಗೇ ಶಾಸಕರೊಬ್ಬರು ಸಾರ್ವಜನಿಕವಾಗಿ ಕರೆ ಮಾಡಿ, ನಾನು ಹೇಳಿದಷ್ಟನ್ನೇ ಮಾಡಿ ಎಂದು ತಾಕೀತು ಮಾಡುವುದು ಅಷ್ಟೊಂದು ಸರಳ ವಿಚಾರ ಅನಿಸುವುದಿಲ್ಲ. ಹಾಗೇ ಯತೀಂದ್ರ ಅವರ ಮಾತಿನಲ್ಲಿ ಉಲ್ಲೇಖವಾಗಿರುವ ಮಹದೇವ್‌ ಅವರ ಮೇಲೆ ಈ ಹಿಂದೆ ವರ್ಗಾವಣೆ ದಂಧೆಯ ಆರೋಪಗಳು ಇರುವುದರಿಂದ, ಈ ಒಟ್ಟೂ ಪ್ರಹಸನ ಒಂದು ರೀತಿಯಲ್ಲಿ ಸಂಶಯಾಸ್ಪದವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ, ನಲುವತ್ತು ಪರ್ಸೆಂಟ್‌ ಕಮಿಷನ್‌ ಬಗ್ಗೆ ಮಾತನಾಡಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಅಂಥ ಕಾಂಗ್ರೆಸ್ ಸರ್ಕಾರವೂ ಈಗ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವುದು ವಿಷಾದದ ಸಂಗತಿಯಾಗಿದೆ. ಭ್ರಷ್ಟಾಚಾರವೇ ನಿಜವಾಗಿದ್ದರೆ ಯಾವ ಪಕ್ಷದ ಸರ್ಕಾರವೂ ಜನರಿಗೆ ಏನೂ ಉಪಯೋಗವಿಲ್ಲ ಎಂದಂತಾಗುತ್ತದೆ. ಹಾಗೆಯೇ ಭ್ರಷ್ಟಾಚಾರದ ಬಗೆಗ ಮಾತನಾಡುವ ನೈತಿಕತೆಯನ್ನೇ ಇವರು ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಪಾರದರ್ಶಕ ತನಿಖೆಯಾಗಿ ಸತ್ಯ ಹೊರಗೆ ಬರಲಿ. ಸರ್ಕಾರದ ಹಂಗಿನಲ್ಲಿ ಇಲ್ಲದ ಸ್ವತಂತ್ರ ತನಿಖೆ ತನಿಖೆ ನಡೆಯಬೇಕು. ವರ್ಗಾವಣೆ ದಂಧೆ ನಡೆಯುತ್ತಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಅಗತ್ಯವಾಗಿದೆ.

ಇದನ್ನೂ ಓದಿ:Yathindra Siddaramaiah: ಯತೀಂದ್ರ‌ ವರ್ಗಾವಣೆ ದಂಧೆ; ಮಾನ ಇದ್ದರೆ ಸಿಎಂ ರಾಜೀನಾಮೆ ಕೊಡಲಿ ಎಂದ ಎಚ್‌ಡಿಕೆ

Exit mobile version