ಬಯಲು ಸೀಮೆಯ ಜನರ ಮೂಗಿಗೆ ತುಪ್ಪ ಸವರುವ, ಮಲೆನಾಡಿನ ಜನರನ್ನು ಸರ್ವನಾಶ ಮಾಡುವ ಯೋಜನೆ ಎತ್ತಿನಹೊಳೆ (Yettinahole project) ಎಂಬುದು ಮತ್ತೆ ಮತ್ತೆ ರುಜುವಾತಾಗುತ್ತಿದೆ. ಕೋಟ್ಯಂತರ ರೂಪಾಯಿ ಚೆಲ್ಲಾಡಿ ದಶಕಗಳ ಕಾಲದಿಂದ ನಿರ್ಮಿಸುತ್ತಿರುವ ಎತ್ತಿನಹೊಳೆ ಯೋಜನೆಯ ಪೊಳ್ಳು ಕಾಮಗಾರಿ ಇತ್ತೀಚೆಗೆ ಬಯಲಾಗಿತ್ತು. ಪ್ರಾಯೋಗಿಕವಾಗಿ 6 ಕಿಮೀ ದೂರ ನೀರು ಹರಿಸುವ ವೇಳೆಗೇ ಹಲವಾರು ಅನಾಹುತಗಳು ನಡೆದಿದ್ದು, ಅಧಿಕಾರಿಗಳು, ಸ್ಥಳೀಯರು ಇದರಿಂದ ಬೆಚ್ಚಿಬಿದ್ದಿದ್ದರು. ಯೋಜನೆಯ ಅಂಗವಾಗಿ ಕಟ್ಟಲಾಗಿರುವ ಸಕಲೇಶಪುರ (Sakleshpur) ತಾಲ್ಲೂಕಿನ ಕಾಡುಮನೆ ಚೆಕ್ ಡ್ಯಾಂನಿಂದ ದೊಡ್ಡನಾಗರ ಶೇಖರಣಾ ಘಟಕಕ್ಕೆ ಅಧಿಕಾರಿಗಳು ಪ್ರಾಯೋಗಿಕವಾಗಿ ನೀರು ಹರಿಸುವಾಗ ಅರ್ಧಕ್ಕೂ ಹೆಚ್ಚು ನೀರು ಪೈಪಿನಿಂದ ಸೋರಿಕೆಯಾಗಿದ್ದು, ಭೂಮಿ ಗಡಗಡ ನಡುಗಿದೆ. ಭೂಕುಸಿತ ಉಂಟಾಗಿ ರಸ್ತೆಗಳು ಅಡಿಗಳಷ್ಟು ಕುಸಿದೇ ಹೋಗಿವೆ. ಇದು ಎತ್ತಿನಹೊಳೆ ಉಂಟುಮಾಡಲಿರುವ ಸರ್ವನಾಶದ ಟ್ರೇಲರ್ ಅಷ್ಟೇ, ಸಿನಿಮಾ ಇನ್ನೂ ಬಾಕಿ ಇದೆ(Vistara Editorial).
ಈ ಕುರಿತು ʼವಿಸ್ತಾರ ನ್ಯೂಸ್ʼ ವಿಶೇಷ ವರದಿ ಮಾಡಿದೆ. ಎತ್ತಿನಹೊಳೆ ಎಂಬ ಬಿಳಿ ಆನೆ ಪ್ರಾಜೆಕ್ಟ್‌ನ ಮತ್ತೊಂದು ಮುಖವನ್ನು ವಿಸ್ತಾರವಾಗಿ ತೆರೆದಿಡಲಾಗಿದೆ. ಎತ್ತಿನಹೊಳೆ ಯೋಜನೆ (Yettinahole Project) ಹೆಸರಿನಲ್ಲಿ ಜನರ ಜತೆ ರಾಜಕಾರಣಿಗಳು, ಅಧಿಕಾರಿಗಳು ಚೆಲ್ಲಾಟವಾಡುತ್ತಿರುವುದು, ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವುದು ಖಾತ್ರಿ. ಜತೆಗೆ ಇದರ ಹಿಂದೆ ಆಂಧ್ರಪ್ರದೇಶ ಮತ್ತು ಉತ್ತರ ಭಾರತೀಯ ಗುತ್ತಿಗೆದಾರರ ಮಾಫಿಯಾ (Contractor mafia) ಇದೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಒಟ್ಟಿನಲ್ಲಿ ಇದು ಗುತ್ತಿಗೆದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಯಾಗಿದೆ. ಅವೈಜ್ಞಾನಿಕವಾಗಿ ರೂಪಿಸಿರುವುದು ಈ ಯೋಜನೆಯ ಇನ್ನೊಂದು ಕರಾಳತೆ. ಅಂದುಕೊಂಡಷ್ಟು ನೀರನ್ನು ಪಡೆಯಲು ಎಂದಿಗೂ ಇದರಲ್ಲಿ ಸಾಧ್ಯವಿಲ್ಲ ಎಂದು ಆಧಾರ ಸಹಿತ ಉದ್ಯಮಿ, ಪರಿಸರ ಚಿಂತಕ ಎಚ್.ಎಸ್. ಶೆಟ್ಟಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಅವರನ್ನು ಮೌನವಾಗಿಸಲು ಬೆದರಿಕೆ ಹಾಕಲಾಗುತ್ತಿದೆ, ನೋಟೀಸ್ ನೀಡಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Yettinahole Project: ಅಕ್ರಮದ ಹೊಳೆಯಾದ ಎತ್ತಿನಹೊಳೆ ಪ್ರಾಜೆಕ್ಟ್; ಭ್ರಷ್ಟಾಚಾರದ ಹಿಂದಿದೆಯಾ ಮಾಫಿಯಾ?
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ಪೂರೈಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಈ ಯೋಜನೆ ಮೂಲಕ ನೀರು ಕೊಡುತ್ತೇವೆ ಎಂದು ಕಳೆದ 10 ವರ್ಷಗಳಿಂದ ಸರ್ಕಾರಗಳು ಸತಾಯಿಸುತ್ತಾ ಬಂದಿವೆ. ನೀರಾವರಿ ತಜ್ಞ ದಿವಂಗತ ಡಾ. ಜಿ.ಎಸ್. ಪರಮಶಿವಯ್ಯ ಅವರ ವರದಿ ಆಧರಿಸಿ ಶುರು ಮಾಡಿದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 2014ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ, ಇನ್ನು ಕೆಲವೇ ವರ್ಷಗಳಲ್ಲಿ ಪಶ್ಚಿಮಘಟ್ಟದಿಂದ ಕೋಲಾರಕ್ಕೆ ನೀರು ಹರಿಯುತ್ತದೆ ಎಂದು ಹೇಳಿದ್ದರು. ಇದಾಗಿ ಒಂದು ದಶಕ ಕಳೆದರೂ ಒಂದೇ ಒಂದು ಹನಿ ನೀರು ಸಹ ಫಲಾನುಭವಿಗಳಿಗೆ ಸಿಕ್ಕಿಲ್ಲ. ಪಶ್ಚಿಮಘಟ್ಟ ಶ್ರೇಣಿಯಿಂದ ಪಶ್ಚಿಮಾಭಿಮುಖವಾಗಿ ಹರಿಯುವ ನೀರನ್ನು ಪೂರ್ವದ ಜಿಲ್ಲೆಗಳತ್ತ ತಿರುಗಿಸಿ, ಕುಡಿಯಲು ಪೂರೈಸುವುದೇ ಎತ್ತಿನ ಹೊಳೆ ಯೋಜನೆಯ ಉದ್ದೇಶ. ಈ ಯೋಜನಾ ಪ್ರದೇಶದ 7 ಜಿಲ್ಲೆಗಳಿಗೆ ಕುಡಿಯುವ ನೀರಿನ ಅಗತ್ಯ ಮತ್ತು ಕೆರೆಗಳನ್ನು ತುಂಬಿಸುವುದಕ್ಕಾಗಿ 24.01 ಟಿಎಂಸಿ ನೀರು ಬಳಸಿಕೊಳ್ಳುವ ಪ್ರಸ್ತಾಪ ಇದರ ಹಿಂದಿದೆ. ಅಷ್ಟು ಪ್ರಮಾಣದ ನೀರು ಇಲ್ಲಿಂದ ಲಭ್ಯವಾಗದು ಎಂದು ತಜ್ಞರು ಹೇಳಿದ್ದನ್ನು ಸರ್ಕಾರ ಕಿವಿಗೆ ಹಾಕಿಕೊಂಡಿಲ್ಲ. ಬಹುಶಃ ಆಗಲೇ ಈ ಬೃಹತ್ ಯೋಜನೆಯಲ್ಲಿ ಎಷ್ಟೆಲ್ಲಾ ಮೇಯಬಹುದು ಎಂಬುದನ್ನು ನಮ್ಮ ರಾಜಕಾರಣಿಗಳು, ಅಧಿಕಾರಿಗಳು ಅರ್ಥ ಮಾಡಿಕೊಂಡಿದ್ದರು ಎಂದು ಕಾಣುತ್ತದೆ. ಹಾಗೆಯೇ ಆಗಿದೆ.
2012ರಲ್ಲಿ ಎತ್ತಿನಹೊಳೆ ಯೋಜನೆಗೆ 8,323.50 ಕೋಟಿ ರೂಪಾಯಿ ವೆಚ್ಚವನ್ನು ನಿಗದಿಪಡಿಸಿ ಅನುಮೋದನೆ ನೀಡಲಾಗಿತ್ತು. 2014ರಲ್ಲಿ ಯೋಜನೆಯ ಅಂದಾಜು ವೆಚ್ಚವನ್ನು ಪರಿಷ್ಕರಿಸಿ 12,912.36 ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಯಿತು. ಅದೇ ವರ್ಷ ಕಾಮಗಾರಿಗೆ ಚಾಲನೆ ನೀಡಲಾಯಿತು. ಇದಾದ ಬಳಿಕ 25,125 ಕೋಟಿ ರೂಪಾಯಿಗೆ ಎತ್ತಿನಹೊಳೆ ಯೋಜನೆಯ ಪರಿಷ್ಕೃತ ಅಂದಾಜನ್ನು ನಿಗದಿಪಡಿಸಿ ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಖರ್ಚಾಗಿರುವ ಹಣದಲ್ಲಿ ಎಷ್ಟು ಅಧಿಕಾರಿಗಳಿಗೆ ಸೇರಿದೆ, ಎಷ್ಟು ಗುತ್ತಿಗೆದಾರರ ಜೇಬಿಗೆ ಹೋಗಿದೆ ಎಂಬುದನ್ನು ಯಾರೂ ಪತ್ತೆಹಚ್ಚಲು ಸಾಧ್ಯವೇ ಇಲ್ಲವೇನೋ. ಇಷ್ಟಾಗಿಯೂ ಎತ್ತಿನಹೊಳೆ ಯೋಜನೆಯ ಪ್ರದೇಶದಲ್ಲಿ ಸಿಗುವ ನೀರು 9.55 ಟಿಎಂಸಿ ಮಾತ್ರ. ನೀರು ಸಿಗುತ್ತದೆ. ವ್ಯವಸಾಯ, ತೋಟಗಾರಿಕೆ, ಮೀನಿಗೆ ಕಳೆದು ಜನರಿಗೆ ಕುಡಿಯುವ ಬಳಕೆಗೆ ಸಿಗುವುದು ಕೇವಲ 0.85 ಟಿಎಂಸಿ. ಇಷ್ಟಕ್ಕಾಗಿ 25 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುವುದರ ಹಿಂದೆ ಯಾವ ಹುನ್ನಾರ ಇದೆ?
ಹಾಸನ ಜಿಲ್ಲೆ ಸಕಲೇಶಪುರದ ದಟ್ಟಾರಣ್ಯದಲ್ಲಿ ಎತ್ತಿನಹೊಳೆ ಸೇರಿ ಏಳೆಂಟು ಹಳ್ಳಗಳ ನೀರನ್ನು ಸಂಗ್ರಹಿಸಲು ನಿರ್ಮಿಸುತ್ತಿರುವ ಕಿರು ಅಣೆಕಟ್ಟುಗಳು, ನಂತರ ಅದನ್ನು 940 ಅಡಿ ಎತ್ತರಕ್ಕೆ ಪಂಪ್ ಮಾಡಿ ಅಲ್ಲಿಂದ ಸುರಂಗ ಮಾರ್ಗದಲ್ಲಿ ಪೈಪ್‌ಗಳ ಮೂಲಕ ಹರಿಸುವ ಮೆಗಾ ಕಾಮಗಾರಿಗಳಿಂದಾಗಿ ಪಶ್ಚಿಮಘಟ್ಟದ ಬಹಳಷ್ಟು ನಿತ್ಯಹರಿದ್ವರ್ಣದ ಕಾಡುಗಳು ನಾಶವಾಗಿವೆ, ಆಗುತ್ತಿವೆ. ಜಾಗತಿಕ ತಾಪಮಾನ, ಅವೈಜ್ಞಾನಿಕ ಕಾಮಗಾರಿಗಳಿಂದ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯ ಉಪನದಿಯಾದ ಎತ್ತಿನಹೊಳೆಗೆ ಪೆಟ್ಟು ಬಿದ್ದು ನೇತ್ರಾವತಿ ನದಿ ನೀರೂ ಕಡಿಮೆಯಾಗಿದೆ. ಈ ಯೋಜನೆಯಿಂದ ಬಯಲುಸೀಮೆಗೆ ನೀರು ಪೂರೈಸುವುದಿರಲಿ, ಪಶ್ಚಿಮಘಟ್ಟದಲ್ಲೂ ನೀರಿಗೆ ಬರ ಬರುವ ಕಾಲ ದೂರವಿಲ್ಲ. ಯಾವ ಪುರುಷಾರ್ಥಕ್ಕೆ ಈ ಯೋಜನೆ? ಎತ್ತಿನಹೊಳೆ ಯೋಜನೆ ಹೆಸರಲ್ಲಿ ರೈತರನ್ನು ಬೆದರಿಸಿ ಭೂ ಸ್ವಾಧೀನಪಡಿಸಿಕೊಂಡಿರುವ ಆರೋಪ ಸಹ ಕೇಳಿಬಂದಿದೆ. ಜೊತೆಗೆ ಗುತ್ತಿಗೆದಾರರಿಗೆ ಲಾಭವಾಗುವಂತೆ ಕಾಲುವೆ ನೀರಿನ ಯೋಜನೆಯನ್ನು ಪೈಪ್‌ಲೈನ್ ಯೋಜನೆ ಮಾಡಲಾಗಿದೆ. ಇಲ್ಲಿಗೆ ತಂದ ಮೆಟಲ್ ಪೈಪ್‌ಗಳು ತುಕ್ಕು ಹಿಡಿದು ಹಾಳಾಗಿವೆ. ಇವೆಲ್ಲವೂ ಕಾಮಗಾರಿಗಳ ಕಳಪೆತನವನ್ನು ಸಾರಿ ಸಾರಿ ಹೇಳುತ್ತಿವೆ.
ಸಮಗ್ರ ಎತ್ತಿನಹೊಳೆ ಯೋಜನೆಯ ಹಿಂದೆ ನಡೆದಿರಬಹುದಾದ ಅವ್ಯವಹಾರ, ಹಗರಣವನ್ನು ಬಯಲಿಗೆಳೆಯಲೇಬೇಕು. ಇದು ರಾಜ್ಯ ಸರ್ಕಾರದಿಂದ ಆದೀತು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಕೇಂದ್ರ ತನಿಖಾ ಸಂಸ್ಥೆಗಳು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ, ಸಮಗ್ರ ತನಿಖೆ ಮಾಡದಿದ್ದರೆ ಸಾರ್ವಜನಿಕರ ಕೋಟ್ಯಂತರ ಹಣ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುವುದು ಖಚಿತ. ಈ ಯೋಜನೆ ಈ ಶತಮಾನದ ಅತಿ ದೊಡ್ಡ ಘೋಟಾಳೆ ಆಗಿರುವ ಎಲ್ಲ ಸಾಧ್ಯತೆಯೂ ಇದೆ. ಪ್ರಜ್ಞಾವಂತರು, ಪರಿಸರತಜ್ಞರು ಇದನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಮಕ್ಕಳಿಂದ ಮಲಗುಂಡಿ ಸ್ವಚ್ಛ ಕೃತ್ಯ ಅಕ್ಷಮ್ಯ ಅಪರಾಧ