ರಮೇಶ ದೊಡ್ಡಪುರ ಬೆಂಗಳೂರು
ಕಲಾವಿದರೊಬ್ಬರಿಗೆ, ತನ್ನ ಕಲೆಗೆ ಸೂಕ್ತ ಶ್ರೇಯ ಸಿಗಬೇಕು ಎಂಬ ಸಣ್ಣ ಆಸೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಡೆಗೂ ಈಡೇರಿಸಿದೆ.
ರಾಜ್ಯದೆಲ್ಲೆಡೆ ಬಳಸುವ ಕನ್ನಡ ತಾಯಿ ಭುವನೇಶ್ವರಿಯ ಚಿತ್ರವನ್ನು ನಾಡಿನ ಪ್ರಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮಾ ಅವರು ರಚಿಸಿದ್ದು ಎಂದು ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಮೂಲಕ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿದ್ದ ಚರ್ಚೆಗೆ ಕೊನೆಗೂ ಮುಕ್ತಿ ದೊರಕಿದೆ.
1995-1998ರವರೆಗೆ ನಾಡಿನ ಹಿರಿಯ ಕವಿ ಸಾ. ಶಿ ಮರುಳಯ್ಯ ಅವರು ಕಸಾಪ ಅಧ್ಯಕ್ಷರಾಗಿದ್ದರು. ಕರ್ನಾಟಕದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಕರ್ನಾಟಕ ಮಾತೆಯನ್ನು ಪೂಜಿಸಲಾಗುತ್ತಿದೆ. ಒಂದು ಚಿತ್ರವನ್ನು ರಚಿಸಿಕೊಡಿ ಎಂದು ಬಿ.ಕೆ.ಎಸ್. ವರ್ಮ ಅವರನ್ನು ಮರುಳಯ್ಯ ಅವರು ಕೇಳಿದ್ದರು.
ಅದರಂತೆ, ರನ್ನ, ಪಂಪ, ಚಾಮುಂಡೇಶ್ವರಿ, ಹೊಯ್ಸಳ ಲಾಂಛನ, ಶಿಲ್ಪ ಕಲೆಗಳು, ಪರಿಸರವನ್ನು ಸೇರಿಸಿ ತಾಯಿ ಭುವನೇಶ್ವರಿಯ ಚಿತ್ರವನ್ನು ವರ್ಮ ರಚಿಸಿಕೊಟ್ಟಿದ್ದರು. ಚಿತ್ರವನ್ನು ಇನ್ನೇನು ಪೂರ್ಣಗೊಳಿಸುವಷ್ಟರಲ್ಲಿ, ಕಾರ್ಯಕ್ರಮವೊಂದಕ್ಕೆ ಅಗತ್ಯವಿದೆ ಎಂದು ಮರುಳಯ್ಯ ಅವರು ಕೊಂಡೊಯ್ದಿದ್ದರು. ಚಿತ್ರದ ಕೆಳಗೆ ಕಲಾವಿದರು ಸಾಮಾನ್ಯವಾಗಿ ಬರೆಯುವಂತೆ ತಮ್ಮ ಹೆಸರನ್ನು ಬಿ.ಕೆ.ಎಸ್. ವರ್ಮಾ ನಮೂದು ಮಾಡಿರಲಿಲ್ಲ.
ರಾಜಾ ರವಿವರ್ಮನ ಚಿತ್ರ ಎಂದ ಆಯೋಜಕ
ಬಿ.ಕೆ.ಎಸ್. ವರ್ಮ ಅವರು ರಚಿಸಿದ ಚಿತ್ರ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಆದರೆ ಇದನ್ನು ರಚಿಸಿದವರು ಯಾರು ಎಂದು ತಿಳಿದಿರಲಿಲ್ಲ. ಒಂದು ಕಾರ್ಯಕ್ರಮದಲ್ಲಿ ಬಿ.ಕೆ.ಎಸ್. ವರ್ಮ ಭಾಗವಹಿಸಿದ್ದರು. ಆಯೋಜಕರು ಭುವನೇಶ್ವರಿ ಚಿತ್ರವನ್ನು ಉಡುಗೊರೆಯಾಗಿ ಬಿ.ಕೆ.ಎಸ್. ವರ್ಮ ಅವರಿಗೆ ನೀಡಿದರು. ಈ ಚಿತ್ರವನ್ನು ರಚಿಸಿರುವುದು ರಾಜಾ ರವಿ ವರ್ಮ ಎಂದು ತಿಳಿಸಿದ್ದರು.
ಇದು ಬಿ.ಕೆ. ವರ್ಮಾ ಅವರಲ್ಲಿ ಅಚ್ಚರಿ ಉಂಟುಮಾಡಿತ್ತು. ಚಿತ್ರದ ಕೆಳಗೆ ತಮ್ಮ ಹೆಸರನ್ನು ನಮೂದಿಸಿದರೆ, ಮುಂದಿನ ಪೀಳಿಗೆಗೆ ಸರಿಯಾದ ಮಾಹಿತಿ ಲಭಿಸುತ್ತದೆ ಎಂದು, ಕನ್ನಡ ಸಾಹಿತ್ಯ ಪರಿಷತ್ತನ್ನು ಮನವಿ ಮಾಡಿದ್ದರು. ಆದರೆ ಎಷ್ಟು ದಿನಗಳಾದರೂ ಕಸಾಪ ಸ್ಪಂದಿಸಿರಲಿಲ್ಲ. ಮಾಧ್ಯಮಗಳಲ್ಲಿ ಈ ವಿಚಾರ ಚರ್ಚೆಯಾಗಿತ್ತು. ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ ಅವರು ಕಸಾಪಕ್ಕೆ ಪತ್ರ ಬರೆದು, ಕಲಾವಿದರಿಗೆ ಗೌರವ ನೀಡುವಂತೆ ಆಗ್ರಹಿಸಿದ್ದರು.
ಈ ಸಮಯದಲ್ಲಿ ಕಸಾಪ ಅಧ್ಯಕ್ಷರಾಗಿದ್ದ ಡಾ. ಮನು ಬಳಿಗಾರ್ ಅವರು, ಮೇಲ್ನೋಟಕ್ಕೆ ಇದು ನೀವು ಬರೆದದ್ದು ಎಂದು ತಿಳಿಯುತ್ತದೆ. ಆದರೆ ನಿಯಮದ ಪ್ರಕಾರ ಇದನ್ನು ಮಾಡೋಣ ಎಂದು ಚಿತ್ರಕಲಾ ಪರಿಷತ್ತಿನ ಕಮಲಾಕ್ಷಿ ಸೇರಿ ಅನೇಕರ ಸಮಿತಿ ರಚನೆ ಮಾಡಿ ಸಲಹೆ ಕೇಳಿದ್ದರು. ಅವರೆಲ್ಲರೂ ಒಕ್ಕೊರಲಿನಿಂದ, ಇದು ಬಿ.ಕೆ.ಎಸ್. ವರ್ಮ ಅವರು ಬರೆದ ಚಿತ್ರ ಎಂದು ಒಪ್ಪಿದ್ದರು.
ಫ್ರೇಮ್ ಮೇಲೆ ಬೇಡ ಎಂದಿದ್ದ ವರ್ಮ
ಸಮಿತಿ ಸಲಹೆಯನ್ನು ಪರಿಗಣಿಸಿದ ಡಾ. ಮನು ಬಳಿಗಾರ್, ಫೋಟೊವನ್ನು ಮತ್ತೆ ಬಿಚ್ಚಿದರೆ ಹಾಳಾಗುತ್ತದೆ, ತಮ್ಮ ಹೆಸರನ್ನು ಫ್ರೇಮ್ ಮೇಲೆ ಬರೆಸುವುದುದಾಗಿ ತಿಳಿಸಿದ್ದರು. ಮನೆಗೇ ಆಗಮಿಸಿ ತಮ್ಮನ್ನು ಗೌರವಿಸುತ್ತೇವೆ ಎಂದಿದ್ದರು. ಫ್ರೇಮ್‌ನೊಳಗೆ ಹಾಕಿದರೆ ಒಳ್ಳೆಯದು ಎಂದು ವರ್ಮ ತಿಳಿಸಿದ್ದರು. ಈ ಚರ್ಚೆ ಇರುವಾಗಲೇ ಕೋವಿಡ್ ಆಗಮಿಸಿ ಸಂಪರ್ಕ ಕಡಿತವಾಗಿತ್ತು. ನಂತರ ಮನು ಬಳಿಗಾರ್ ಅವರ ಅವಧಿಯೂ ಮುಗಿದಿತ್ತು.
ಹೆಸರು ಹಾಕಿಸಿದ ಕಸಾಪ
ಈ ಹಿಂದೆ ನಿರ್ಧಾರ ಮಾಡಿದಂತೆಯೇ ಇದೀಗ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರು ಭುವನೇಶ್ವರಿ ತಾಯಿಯ ಫೋಟೊಗೆ ಬಿ.ಕೆ.ಎಸ್. ವರ್ಮ ಅವರ ಹೆಸರು ಬರೆಸಿದ್ದಾರೆ. ಫೋಟೊ ಫ್ರೇಮ್ ಮೇಲೆ ಅಲ್ಲದೆ, ಭಾವಚಿತ್ರದ ಕೆಳಗೆ “ಕಲಾವಿದ: ಬಿ.ಕೆ.ಎಸ್. ವರ್ಮ” ಎಂದು ಬರೆಸಿದ್ದಾರೆ. ಇದೀಗ ನವೀಕರಣಗೊಳ್ಳುತ್ತಿರುವ ಕಸಾಪ ಕಚೇರಿಯಲ್ಲಿ, ಅಧ್ಯಕ್ಷರ ಆಸನದ ಹಿಂಭಾಗದಲ್ಲಿ ಅಳವಡಿಸಲು ನಿರ್ಧಾರ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಮಹೇಶ್ ಜೋಶಿ, ಕಲಾವಿದರು ಸಾಕಷ್ಟು ಶ್ರಮವಹಿಸಿ ಚಿತ್ರವನ್ನು ರಚಿಸಿರುತ್ತಾರೆ. ಅವರಿಗೆ ಗೌರವ ನೀಡಬೇಕಾದ್ದು ನಮ್ಮ ಕರ್ತವ್ಯ. ಇಂತಹ ಕಾರ್ಯವನ್ನು ನಾವು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.ʼ
ತಮ್ಮ ಹೆಸರನ್ನು ನಮೂದಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬಿ.ಕೆ.ಎಸ್. ವರ್ಮ ಅವರು, ಹೆಸರು ಬೇಕು ಎನ್ನುವುದು ಸ್ವಾರ್ಥವಲ್ಲ. ಮುಂದಿನ ಪೀಳಿಗೆಗೆ ಸರಿಯಾದ ಮಾಹಿತಿ ಸಿಗಬೇಕು ಎಂದು ನಿರೀಕ್ಷೆ ಪಟ್ಟಿದೆ. ಇಷ್ಟು ದಿನವಾದ ನಂತರವಾದರೂ ಕಸಾಪ ಈ ಕಾರ್ಯ ನಡೆಸಿರುವುದು ಸಂತಸ ತಂದಿದೆ ಎಂದಿದ್ದಾರೆ.
ಇದನ್ನೂ ಓದಿ | Appu Namana | ಕಲಾವಿದರ ಕೈ ಚಳಕದಿಂದ ಮೂಡಿ ಬಂತು ಪುನೀತ್ ಭಾವಚಿತ್ರ