Site icon Vistara News

ವಿಸ್ತಾರ Explainer: Model Code of Conduct: ಈ ಕ್ಷಣದಿಂದಲೇ ಜಾರಿ ಮಾದರಿ ನೀತಿ ಸಂಹಿತೆ! ಇದರ ಬಗ್ಗೆ ನೀವು ತಿಳಿದಿರಬೇಕಾದ 11 ನಿಯಮಗಳು ಇಲ್ಲಿವೆ

Election Commission's vote-friendly decision

ಭಾರತದ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ (Karnataka election 2023) ಮತದಾನದ ದಿನಾಂಕಗಳನ್ನು ಪ್ರಕಟಿಸಿದೆ. ಚುನಾವಣಾ ದಿನಾಂಕಗಳ ಘೋಷಣೆಯೊಂದಿಗೇ ʼಮಾದರಿ ನೀತಿ ಸಂಹಿತೆʼ (Model Code of Conduct) ಜಾರಿಗೆ ಬಂದಿದೆ. ರಾಜಕೀಯ ನಾಯಕರು, ಪಕ್ಷಗಳು, ಅಧಿಕಾರಿಗಳು, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲರೂ ಈ ನೀತಿಸಂಹಿತೆಗೆ ಬದ್ಧರಾಗಿರಬೇಕಾಗುತ್ತದೆ.

ಹಾಗಾದರೆ ಈ ಮಾದರಿ ನೀತಿ ಸಂಹಿತೆ ಯಾವುದು? ಸರಳವಾಗಿ ಹೇಳುವುದಾದರೆ ಇದು ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣಾ ಪ್ರಕ್ರಿಯೆಗಾಗಿ ಚುನಾವಣಾ ಆಯೋಗ ಸೂಚಿಸಿದ ನಿಯಮಗಳ ಗುಂಪು. ಈ ಸಂಹಿತೆಯ ಯಾವುದೇ ಉಲ್ಲಂಘನೆ ಮಾಡಿದರೆ ಚುನಾವಣಾ ಸಂಸ್ಥೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ.

ಭಾರತೀಯ ಚುನಾವಣಾ ಆಯೋಗದ (ECI) ವೆಬ್‌ಸೈಟ್‌ನಲ್ಲಿ ಮಾದರಿ ನೀತಿ ಸಂಹಿತೆಯ, ಪ್ರತಿಯೊಬ್ಬರೂ ಅನುಸರಿಸಬೇಕಾದ ನಿಯಮಗಳ ದೀರ್ಘ ಪಟ್ಟಿ ಇದೆ. ಇದರಲ್ಲಿ, ಸುಗಮ ಮತ್ತು ನ್ಯಾಯಯುತ ಮತದಾನ ಪ್ರಕ್ರಿಯೆಗೆ ಪೂರಕವಾದ ಹತ್ತು ಪ್ರಮುಖ ಅಂಶಗಳು ಇಲ್ಲಿವೆ.

  1. ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವಂತಹ, ಪರಸ್ಪರ ದ್ವೇಷವನ್ನು ಉಂಟುಮಾಡುವ, ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ, ಧಾರ್ಮಿಕ ಅಥವಾ ಭಾಷಿಕ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುವ ಯಾವುದೇ ಚಟುವಟಿಕೆಯನ್ನು ಕೈಗೊಳ್ಳಬಾರದು.
  2. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಳ ಕುರಿತ ಟೀಕೆಗಳನ್ನು ರಾಜಕೀಯ, ಕಾರ್ಯಕ್ರಮಗಳು, ಹಿಂದಿನ ದಾಖಲೆ ಮತ್ತು ಕೆಲಸಗಳಿಗೆ ಸೀಮಿತಗೊಳಿಸಬೇಕು. ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷವು ವೈಯಕ್ತಿಕ ಟೀಕೆಗಳನ್ನು ಅಥವಾ ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧಿಸದ ಯಾವುದೇ ಹೇಳಿಕೆಗಳನ್ನು ಮಾಡಬಾರದು.
  3. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಥವಾ ಇತರ ನಾಯಕರು ಜಾತಿ ಅಥವಾ ಕೋಮು ಆಧಾರದ ಮೇಲೆ ಮತ ಕೇಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಧಾರ್ಮಿಕ ಕ್ಷೇತ್ರಗಳನ್ನು ಚುನಾವಣಾ ಪ್ರಚಾರದ ವೇದಿಕೆಯಾಗಿ ಬಳಸಿಕೊಳ್ಳಬಾರದು.
  4. ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರಿಗೆ ಲಂಚ ನೀಡುವುದು, ಬೆದರಿಕೆ ಹಾಕುವುದು, ಮತದಾರರನ್ನು ವಂಚಿಸುವುದು, ಮತಗಟ್ಟೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುವುದು, ಮತದಾನ ಮೊದಲಿನ 48 ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದು ದಂಡನಾರ್ಹ ಅಪರಾಧ.
  5. ವ್ಯಕ್ತಿಗಳ ಅಭಿಪ್ರಾಯಗಳು ಅಥವಾ ಚಟುವಟಿಕೆಗಳ ವಿರುದ್ಧ ಪ್ರತಿಭಟಿಸಲು ಅವರ ಮನೆಗಳ ಮುಂದೆ ಪ್ರದರ್ಶನಗಳು ಅಥವಾ ಪಿಕೆಟಿಂಗ್ ಅನ್ನು ಮಾಡಬಾರದು. ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಯಾವುದೇ ವ್ಯಕ್ತಿಯ ಜಮೀನು, ಕಟ್ಟಡದಲ್ಲಿ ಅನುಮತಿಯಿಲ್ಲದೆ ಧ್ವಜಗಳು, ಬ್ಯಾನರ್‌ಗಳು, ಸೂಚನೆಗಳು ಮತ್ತು ಘೋಷಣೆಗಳನ್ನು ಪ್ರದರ್ಶಿಸುವಂತಿಲ್ಲ.
  6. ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯು ಉದ್ದೇಶಿತ ಸಭೆಯ ಸ್ಥಳ ಮತ್ತು ಸಮಯವನ್ನು ಭದ್ರತಾ ವ್ಯವಸ್ಥೆಗಳಿಗಾಗಿ ಸಾಕಷ್ಟು ಮುಂಚಿತವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಬೇಕು. ಧ್ವನಿವರ್ಧಕಗಳು ಮತ್ತಿತರ ಯಾವುದೇ ಸೌಲಭ್ಯಗಳಿಗೆ ಸ್ಥಳೀಯ ಪ್ರಾಧಿಕಾರಗಳ ಸರಿಯಾದ ಅನುಮತಿಯನ್ನು ಪಡೆಯಬೇಕು.
  7. ಸಂಘಟಿತ ಮೆರವಣಿಗೆಯ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮುಂಗಡ ಸೂಚನೆ ನೀಡಬೇಕು. ಮಾದರಿ ನೀತಿ ಸಂಹಿತೆಯಲ್ಲಿ ಅಂತಹ ಪ್ರಚಾರದ ಸಮಯದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ನಿಯಮಗಳನ್ನು ರೂಪಿಸಿದೆ. ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತಿರಬೇಕು. ದುರ್ಬಲಕೆಯಾಗಬಹುದಾದ ಸಾಧನ, ಮುದ್ರಿತ ಸಾಮಗ್ರಿ, ಧ್ವನಿಸಾಮಗ್ರಿಗಳನ್ನು ಕೊಂಡೊಯ್ಯಬಾರದು. ವಿರೋಧ ಪಕ್ಷಗಳ ನಾಯಕರ ಪ್ರತಿಕೃತಿಗಳನ್ನು ಒಯ್ಯಲು ಅನುಮತಿಯಿಲ್ಲ.
  8. ಮತದಾನದ ದಿನದಂದು, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಶಾಂತಿಯುತ ಮತ್ತು ಕ್ರಮಬದ್ಧವಾದ ಮತದಾನ ಖಚಿತಪಡಿಸಿಕೊಳ್ಳಲು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಸಹಕರಿಸಬೇಕು. ಅವರು ಮತದಾನದ ದಿನದಂದು ಮತ್ತು ಅದಕ್ಕೂ ಮುನ್ನ 48 ಗಂಟೆಗಳ ಅವಧಿಯಲ್ಲಿ ಮದ್ಯ ವಿತರಿಸುವುದನ್ನು ತಡೆಯಬೇಕು.
  9. ಮತದಾರರನ್ನು ಹೊರತುಪಡಿಸಿ, ECIಯಿಂದ ಮಾನ್ಯವಾದ ಗುರುತುಚೀಟಿ ಇಲ್ಲದ ಯಾರಿಗೂ ಮತಗಟ್ಟೆಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.
  10. ಕೇಂದ್ರ ಅಥವಾ ರಾಜ್ಯಗಳ ಆಡಳಿತ ಪಕ್ಷವು ಚುನಾವಣಾ ಪ್ರಚಾರದ ಉದ್ದೇಶಗಳಿಗಾಗಿ ಅಧಿಕಾರವನ್ನು ಬಳಸುವಂತಿಲ್ಲ. ಮಂತ್ರಿಗಳು ತಮ್ಮ ಅಧಿಕೃತ ಭೇಟಿಯನ್ನು ಚುನಾವಣಾ ಪ್ರಚಾರಗಳೊಂದಿಗೆ ಸಂಯೋಜಿಸಬಾರದು ಮತ್ತು ಪ್ರಚಾರಕ್ಕಾಗಿ ಅಧಿಕಾರ ಯಂತ್ರವನ್ನು ಅಥವಾ ಸಿಬ್ಬಂದಿಯನ್ನು ಬಳಸಬಾರದು.
  11. ಚುನಾವಣೆಗೆ ಸಂಬಂಧಿಸಿದಂತೆ ಮೈದಾನಗಳು, ಹೆಲಿಪ್ಯಾಡ್‌ಗಳಂತಹ ಸಾರ್ವಜನಿಕ ಸ್ಥಳಗಳು ಆಡಳಿತ ಪಕ್ಷದ ಏಕಸ್ವಾಮ್ಯಕ್ಕೆ ಒಳಗಾಗಬಾರದು. ಇತರ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಂತಹ ಸ್ಥಳಗಳು ಮತ್ತು ಸೌಲಭ್ಯಗಳನ್ನು ಆಡಳಿತ ಪಕ್ಷವು ಬಳಸುವ ಅದೇ ಷರತ್ತುಗಳು ಮತ್ತು ನಿಯಮಗಳ ಮೇಲೆ ಬಳಸಲು ಅನುಮತಿಸಬೇಕು.

ಇದನ್ನೂ ಓದಿ: Modi In Karnataka : 1994ರ ಚುನಾವಣೆಯಲ್ಲಿ ಕರ್ನಾಟಕ ಪ್ರವಾಸವನ್ನು ಸ್ಮರಿಸಿದ ಮೋದಿ; ಬಂಜಾರ ಮಹಿಳೆಗೆ ತಲೆಬಾಗಿದ ಪ್ರಧಾನಿ

Exit mobile version