Site icon Vistara News

Vistara Impact: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣ; ಮೂವರ ಅಮಾನತು, ಕಠಿಣ ಕ್ರಮವೆಂದ ಸಿಎಂ

Toilet Pit cleaning in Morarji Desai Residential School

ಕೋಲಾರ/ಹುಬ್ಬಳ್ಳಿ/ಬೆಂಗಳೂರು: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಯಲವಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನೇ ಮಲದ ಗುಂಡಿಗೆ ಇಳಿಸಿದ (Toilet Pit cleaning) ಪ್ರಕರಣದಲ್ಲಿ ತಪ್ಪಿತಸ್ಥ ಮೂವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಸಂಬಂಧ ವಿಸ್ತಾರ ನ್ಯೂಸ್‌ ವರದಿ (Vistara Impact) ಪ್ರಕಟಿಸುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ತುರ್ತು ಕ್ರಮವನ್ನು ಕೈಗೊಂಡಿದೆ. ಅಲ್ಲದೆ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯೆ ನೀಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ ಮಾಡಿಸಿರುವ ಪ್ರಕರಣ ಸಂಬಂಧ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ, ತಪ್ಪಿತಸ್ಥರ ಅಮಾನತು ಮಾಡುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸಪ್ಪ ಅವರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ವಸತಿ ಶಾಲೆಯ ಪ್ರಾಂಶುಪಾಲರಾದ ಭಾರತಮ್ಮ ಹಾಗೂ ವಾರ್ಡನ್ ಮಂಜುನಾಥ್ ಸೇರಿದಂತೆ ಕೃತ್ಯದಲ್ಲಿ ಭಾಗಿಯಾದ ಶಿಕ್ಷಕರ ಅಮಾನತಿಗೆ ಸೂಚಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯತ್ ಸಿಇಒಗೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದ್ದಾರೆ.

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ: ಸಿಎಂ ಸಿದ್ದರಾಮಯ್ಯ

ಈ ಪ್ರಕರಣದ ಬಗ್ಗೆ ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಕೋಲಾರದ ಮಾಲೂರು ಮಲದಗುಂಡಿ ಪ್ರಕರಣದಿಂದ ವಿಷಯ ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ತರಿಸುತ್ತಿದ್ದೇನೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ದೂರು ಕೊಟ್ಟರೆ ಸೂಕ್ತ ಕ್ರಮ: ಡಾ. ಜಿ. ಪರಮೇಶ್ವರ್

ಆ ರೀತಿ ಪಿಟ್‌ಗೆ ಇಳಿದು ಸ್ಚಚ್ಛಗೊಳಿಸುವ ಪದ್ಧತಿಯನ್ನು ಬಸವಲಿಂಗಪ್ಪ ಅವರ ಕಾಲದಲ್ಲಿಯೇ ನಿಷೇಧಿಸಲಾಗಿದೆ. ವಸತಿ ಶಾಲೆ ಮಕ್ಕಳನ್ನು ಹಾಗೆ ನಡೆಸಿಕೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಸಂಬಂಧ ನಮ್ಮ‌ ಇಲಾಖೆಗೆ ದೂರು ಬಂದರೆ ಸೂಕ್ತ ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಏನಿದು ಪ್ರಕರಣ?

ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಪೋಷಕರು ಬೇಸರ ವ್ಯಕ್ತಪಡಿಸಿ ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಈ ಕುರಿತ ವಿಡಿಯೊ ಹಾಗೂ ಫೊಟೊ ಎಲ್ಲೆಡೆ ಹರಿದಾಡಿ ವಿರೋಧ ವ್ಯಕ್ತಗೊಂಡಿತ್ತು. ದೂರು ನೀಡಿದ ಬಳಿಕ ಮೊರಾರ್ಜಿ ಶಾಲೆ ಪ್ರಾಂಶುಪಾಲ ಹಾಗೂ, ಶಿಕ್ಷಕರ ವಿರುದ್ಧ ಪೋಷಕರು ದೂರು ದಾಖಲಿಸಲಾಗಿದೆ.

ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿಯು ಮಕ್ಕಳಿಂದ ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದರು. ಕಳೆದ ಹಲವು ದಿನಗಳಿಂದ ಮಕ್ಕಳಿಗೆ ಇದೇ ರೀತಿಯಲ್ಲಿ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್ ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರಿಂದ ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವಿದೆ.

ಇದನ್ನೂ ಓದಿ: Karnataka Weather : ಇಂದಿನಿಂದ ಡಿ.20ರ ತನಕ ಮಳೆ ಕಾಟ!

ಇದಲ್ಲದೆ, ಮಕ್ಕಳಿಗೆ ಹೊಡೆಯುವುದು, ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ಕೊಡಲಾಗುತ್ತಿದೆ ಎಂದು ದೂರಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸುಮಾರು 250 ಜನ ಮಕ್ಕಳಿದ್ದು, ಅವರಿಗೆ ಶಿಕ್ಷೆ ನೀಡುವುದನ್ನು ತಪ್ಪಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

Exit mobile version