ರಾಯಚೂರು: ಫೋನ್‌ನಲ್ಲಿ ಪರ್ಸೆಂಟೇಜ್ ವ್ಯವಹಾರ ನಡೆಸಿದ್ದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದ್ದು, ಇದು ವಿಸ್ತಾರ ನ್ಯೂಸ್ ಪ್ರಕಟಿಸಿದ್ದ ಸುದ್ದಿಯ ಫಲಶ್ರುತಿಯಾಗಿದೆ.
ಪಾಮನಕಲ್ಲೂರು ಗ್ರಾ.ಪಂ ಪಿಡಿಒ ಅಮರೇಶಪ್ಪ ಅಮಾನತುಗೊಂಡ ಅಧಿಕಾರಿ. ಇವರು ನಡುರಸ್ತೆಯಲ್ಲಿ ನಿಂತು ಮೊಬೈಲ್‌ನಲ್ಲಿ ಡೀಲ್ ನಡೆಸುತ್ತಿದ್ದುದನ್ನು ವಿಸ್ತಾರ ನ್ಯೂಸ್ ಸೆರೆ ಹಿಡಿದಿತ್ತು. ವಿಸ್ತಾರ ನ್ಯೂಸ್ ಸುದ್ದಿ ಪ್ರಸಾರದ ಹಿನ್ನೆಲೆಯಲ್ಲಿ ಅಧಿಕಾರಿಯ ಬಳಿ ಸ್ಪಷ್ಟನೆ ಕೇಳಿ ಕಾರ್ಯನಿರ್ವಾಹಕ ಅಧಿಕಾರಿ ನೋಟೀಸ್ ನೀಡಿದ್ದರು. ಸಮಂಜಸವಾದ ಸ್ಪಷ್ಟನೆ ಬರದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಹಿನ್ನೆಲೆ
ಪಿಡಿಒ ಅಮರೇಶಪ್ಪ ದಾರಿ ಬದಿ ಬೈಕ್ ನಿಲ್ಲಿಸಿಕೊಂಡು ಫೋನ್‌ನಲ್ಲೇ ಲಂಚದ ವ್ಯವಹಾರ ನಡೆಸಿದ ವಿಡಿಯೋ ವೈರಲ್ ಆಗಿತ್ತು. ʼʼಒಂದು ಪರ್ಸೆಂಟೇಟಜ್ ಕೊಡುʼʼ ಎಂದು ಸ್ಪಷ್ಟವಾಗಿ ಡಿಮ್ಯಾಂಡ್ ಮಾಡಿದ್ದು ಕಂಡುಬಂದಿತ್ತು. ವೈರಲ್ ಆದ ವಿಡಿಯೋ ಸ್ಪಷ್ಟೀಕರಣ ಕೇಳಿ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಜಾರಿ ಮಾಡಿದ ನೋಟಿಸ್‌ಗೆ ಯಾವುದೇ ಸ್ಪಷ್ಟೀಕರಣ ಅಮರೇಶಪ್ಪ ನೀಡಿಲ್ಲ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಪಾವತಿ ಮಾಡದೆ ಇರುವುದು, 2018-19ರಲ್ಲಿ 3.02 ಲಕ್ಷ ಹಾಗೂ 21-22ರಲ್ಲಿ 0.28 ಲಕ್ಷ ರೂ. ಕೂಲಿ ಪಾವತಿ ಮಾಡಲು ಕ್ರಮ ವಹಿಸಿಲ್ಲದಿರುವುದು, ಹೊಸದಾಗಿ ಶೌಚಾಲಯಗಳನ್ನು ನಮೂದಿಸಲು ಅವಕಾಶ ಇದ್ದರೂ ಎಂಟ್ರಿ ಮಾಡದೆ ಇರುವುದು, ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಬಾಕಿ, ಈ ಎಲ್ಲಾ ಮೇಲಿನ ಅಂಶಗಳನ್ನು ಉಲ್ಲೇಖ ಮಾಡಿ, ಅಧಿಕಾರಿಯ ಅಮಾನತು ಆದೇಶ ಹೊರಡಿಸಲಾಗಿದೆ.