Site icon Vistara News

ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್‌ ಡಿ.ಆರ್‌ ಪ್ರಥಮ, ದಾದಾಪೀರ್‌ ಜೈಮನ್‌ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ

vistara short story contest winners

ಬೆಂಗಳೂರು: ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ದಾಖಲೆ ಬಹುಮಾನ ಮೊತ್ತ ಹೊಂದಿದ ʼವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ- 2023ʼರ ಬಹುಮಾನಿತರ ಘೋಷಣೆ ಮತ್ತು ಪ್ರದಾನ ಕಾರ್ಯಕ್ರಮ ಇಂದು (ಮೇ 27) ನಡೆಯಿತು. ಮೊದಲ ಬಹುಮಾನವನ್ನು ಚಂದ್ರಶೇಖರ ಡಿ.ಆರ್.‌, ಎರಡನೇ ಬಹುಮಾನವನ್ನು ದಾದಾಪೀರ್‌ ಜೈಮನ್‌, ಮೂರನೇ ಬಹುಮಾನವನ್ನು ಪೂರ್ಣಿಮಾ ಮಾಳಗಿಮನಿ ತಮ್ಮದಾಗಿಸಿಕೊಂಡರು.

ಕ್ವೀನ್ಸ್‌ ರಸ್ತೆಯ ಹೋಟೆಲ್‌ ಮ್ಯಾಸ್ಟಿಫ್‌ನಲ್ಲಿ ನಡೆದ ಸಮಾರಂಭದಲ್ಲಿ, ಬಹುಮಾನ ವಿಜೇತರನ್ನು ಖ್ಯಾತ ಕತೆಗಾರ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಘೋಷಿಸಿದರು. ಮೊದಲ ಬಹುಮಾನದ ಮೊತ್ತ ರೂ. 55,000, ಎರಡನೇ ಬಹುಮಾನ ರೂ. 25,000 ರೂ., ಮೂರನೇ ಬಹುಮಾನ 10,000 ರೂ. ಹಾಗೂ ತಲಾ 2,000 ರೂ. ಮೊತ್ತದ ಮೆಚ್ಚುಗೆ ಬಹುಮಾನಗಳನ್ನು 5 ಮಂದಿಗೆ ವಿತರಿಸಲಾಯಿತು. ಕವಿ, ವಿಮರ್ಶಕಿ ಲಲಿತಾ ಸಿದ್ದಬಸವಯ್ಯ, ಕಾದಂಬರಿಕಾರ, ವಿಮರ್ಶಕ ಬಿ. ಜನಾರ್ದನ ಭಟ್‌ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ್ದರು.

ವಿಸ್ತಾರ ನ್ಯೂಸ್‌ ಟಿವಿ ವಾಹಿನಿಯ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಕಥಾಸ್ಪರ್ಧೆಯ ಆಶಯವನ್ನು ವಿವರಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಚೇರ್‌ಮನ್‌ ಎಚ್‌.ವಿ. ಧರ್ಮೇಶ್‌, ಬಹುಮಾನ ಆಯೋಜಕರಾದ ಶ್ರೀ ಸಿದ್ದಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನದ ಮಾಲೀಕ ಬಸವರಾಜ ಕೊನೇಕ, ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಡಾ. ಎಂ. ಆರ್‌ ವೆಂಕಟೇಶ್‌, ವಿ2 ಹೋಲ್ಡಿಂಗ್ಸ್‌ ಹೌಸಿಂಗ್‌ ಡೆವಲಪ್‌ಮೆಂಟ್‌ ಪ್ರೈ. ಲಿ. ಎಂ.ಡಿ ಡಾ.ಪಿ.ಎಲ್‌ ವೆಂಕಟರಾಮ ರೆಡ್ಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬಹುಮಾನಿತ ಹಾಗೂ ಟಾಪ್‌ 25 ಕತೆಗಳು ವಿಸ್ತಾರ ನ್ಯೂಸ್‌ ಜಾಲತಾಣದಲ್ಲಿ ಪ್ರಕಟವಾಗಲಿವೆ. ಈ ಕತೆಗಳು ಪುಸ್ತಕವಾಗಿಯೂ ಪ್ರಕಟಗೊಳ್ಳಲಿವೆ.

ಬಹುಮಾನಿತರ ವಿವರಗಳು ಈ ಕೆಳಗಿನಂತಿವೆ:

ಬಹುಮಾನ- ಕಥೆ- ಕಥೆಗಾರರು

ಪ್ರಥಮ: ಸೋಮನ ಕುಣಿತ- ಚಂದ್ರಶೇಖರ ಡಿ.ಆರ್
ದ್ವಿತೀಯ: ಅಂತಃಕಾರಣದ ಟಿಪ್ಪಣಿಗಳು- ದಾದಾಪೀರ್‌ ಜೈಮನ್‌
ತೃತೀಯ: ಅದು ಅವರ ಪ್ರಾಬ್ಲಮ್- ಪೂರ್ಣಿಮಾ ಮಾಳಗಿಮನಿ

ಮೆಚ್ಚುಗೆ: ಹುಣಿಸೆ ಹೂವು- ದೀಪದ ಮಲ್ಲಿ
ಮೆಚ್ಚುಗೆ: ಪಿಂಕ್‌ ಟ್ರಂಪೆಟ್- ಚೈತ್ರಿಕಾ ಹೆಗಡೆ
ಮೆಚ್ಚುಗೆ: ಪರವೇಶ್ಮಸ್ಥನ ಫಿಕ್ಹ್‌ ಪ್ರಸಂಗ- ಬಿ.ಎಂ ಹನೀಫ್‌
ಮೆಚ್ಚುಗೆ: ಕಿತ್ತಳೆ ಚಿಟ್ಟೆ- ಮಂಜು ನಾಯಕ್‌ ಚೆಳ್ಳೂರು
ಮೆಚ್ಚುಗೆ: ನೆಲೆ- ದೀಪಾ ಹಿರೇಗುತ್ತಿ

ಟಾಪ್‌ 25 ಪಟ್ಟಿ ಸೇರಿರುವ ಇತರ ಕತೆಗಳು

ಮಾಚಣ್ಣನ ಮಗ- ಸಂದೀಪ ನಾಯಕ
ಆತ್ಮದ ಗಿಡುಗ- ಮಂಜುನಾಥ್‌ ಲತಾ
ಪ್ರೀತಿ ಇಲ್ಲದ ಮೇಲೆ- ಶರತ್‌ ಭಟ್‌ ಸೇರಾಜೆ
ಸೀಕ್ರೆಟ್‌ ಸಂಟಾ- ಪೂರ್ಣಿಮಾ ಭಟ್ಟ ಸಣ್ಣಕೇರಿ
ಚೆಕ್‌ಔಟ್- ಸದಾಶಿವ ಸೊರಟೂರು
ಹುರಿಮೀಸೆ- ಚೀಮನಹಳ್ಳಿ ರಮೇಶ್‌ ಬಾಬು
ಪರಸೆ- ಭಾಗ್ಯರೇಖಾ ದೇಶಪಾಂಡೆ
ಮುಕ್ಕೋಡ್ಲು ಅಂಚೆ ಮತ್ತು ಪೋಸ್ಟ್- ಮೇ. ಕುಶ್ವಂತ್‌ ಕೋಳಿಬೈಲು
ಶ್ರೀಗಳ ಅರಣ್ಯಕಾಂಡ- ಮೌನೇಶ್‌ ಬಡಿಗೇರ್‌
ಶ್ರಾವಣಾ- ಬಸವಣ್ಣೆಪ್ಪ ಕಂಬಾರ
ಕಸೂತಿ- ಸೌಮ್ಯ ಪ್ರಭು ಕಲ್ಯಾಣಕರ್‌
ಗುಡ್‌ಮಾರ್ನಿಂಗ್‌ ಮೆಸೇಜ್- ಅಂಜನಾ ಹೆಗಡೆ
ಮೈ ಲೈಫ್‌ ಮೈ ಪ್ರಾಬ್ಲೆಮ್- ಸುಷ್ಮಾ ಸಿಂಧು
ಉರಿವ ರಾತ್ರಿ ಸುರಿದ ಮಳೆ- ಭವ್ಯಾ ನವೀನ್‌
ಕಿಂಡಿ- ಸಂಪತ್‌ ಸಿರಿಮನೆ
ಹೇರ್‌ಪಿನ್‌ ತಿರುವು- ಪ್ರಸಾದ್‌ ಶೆಣೈ ಆರ್.ಕೆ
ಏಳುಮಲ್ಲಿಗೆ ತೂಕದವಳು- ಶರಣಬಸವ ಗುಡದಿನ್ನಿ

ತೀರ್ಪುಗಾರರ ಪರಿಚಯ

ಲಲಿತಾ ಸಿದ್ದಬಸವಯ್ಯ

ಕವಯಿತ್ರಿ ಲಲಿತಾ ಸಿದ್ದಬಸವಯ್ಯ ಅವರು ಬಿ.ಎಸ್ಸಿ. ಪದವೀಧರೆ. 27-02-1955ರಂದು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ. 28 ವರ್ಷ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ನಂತರ ಬರವಣಿಗೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮೊದಲ ಸಿರಿ, ಇಹದ ಸ್ವರ, ಕೆಬ್ಬೆ ನೆಲ, ದಾರಿನೆಂಟ ಮತ್ತು ಬಿಡಿ ಹರಳು ಎಂಬ ಕವಿತಾ ಸಂಕಲನಗಳನ್ನೂ, ಆನೆಘಟ್ಟ ಎಂಬ ಕಥಾಸಂಕಲನವನ್ನೂ, ಇನ್ನೊಂದು ಸಭಾಪರ್ವ ಎಂಬ ನಾಟಕವನ್ನೂ, ಮಿ.ಛತ್ರಪತಿ ಎಂಬ ನಗೆಬರಹವನ್ನು ಪ್ರಕಟಿಸಿರುವ ಇವರಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಬಿಎಂಶ್ರೀ ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಸಂದಿವೆ.

ಡಾ. ಬಿ.ಜನಾರ್ದನ ಭಟ್‌

ಡಾ. ಬಿ. ಜನಾರ್ದನ ಭಟ್ ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ, ನಂತರ ಡಾಕ್ಟರೇಟ್ ಪದವಿಯನ್ನೂ ಪಡೆದಿರುವ ಅವರು ಬೆಳ್ಮಣ್ ಸ.ಪ.ಪೂ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ‌ ನಿವೃತ್ತರಾಗಿದ್ದಾರೆ. ಅವರ ಗ್ರಂಥಗಳಲ್ಲಿ ದಕ್ಷಿಣ ಕನ್ನಡದ ಶತಮಾನದ ಕಾವ್ಯ, ದಕ್ಷಿಣ ಕನ್ನಡದ ಶತಮಾನದ ಕತೆಗಳು, ಉಡುಪಿ ಜಿಲ್ಲೆಯ ಶತಮಾನದ ಕತೆಗಳು ಮುಖ್ಯವಾದವು. ಉತ್ತರಾಧಿಕಾರ, ಹಸ್ತಾಂತರ, ಮೂರು ಹೆಜ್ಜೆ ಭೂಮಿ, ಕಲ್ಲುಕಂಬವೇರಿದ ಹುಂಬ, ಅನಿಕೇತನ ಮುಂತಾದ ಕಾದಂಬರಿಗಳನ್ನು ಬರೆದಿದ್ದಾರೆ.

ಮೊದಲ ಮೂರು ಬಹುಮಾನಿತ ಕಥೆಗಾರರ ವಿವರ

ಚಂದ್ರಶೇಖರ ಡಿ.ಆರ್
ಮೂಲತಃ ತುಮಕೂರು. ಹುಟ್ಟಿದ್ದು ಓದಿದ್ದು ಎಲ್ಲಾ ತುಮಕೂರಿನಲ್ಲಿ. ಪ್ರಸ್ತುತ ಎಸ್‌ಬಿಐನಲ್ಲಿ 10 ವರ್ಷದಿಂದ ಮ್ಯಾನೇಜರ್. ಇವರು ಬರೆದ ಕತೆ ಸಮಾಜಮುಖಿ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿದೆ. ಸ್ಟೇಟ್‌ ಬ್ಯಾಂಕ್‌ನ ಸಣ್ಣ ಕಥಾ ವಿಭಾಗದಲ್ಲಿ ಕೂಡ ಬಹುಮಾನ ಬಂದಿತ್ತು.

ದಾದಾಪೀರ್ ಜೈಮನ್
ವೃತ್ತಿಯಿಂದ ಶಿಕ್ಷಕ ಆಗಿರುವ ಇವರಿಗೆ ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಆಸಕ್ತಿಯ ಕ್ಷೇತ್ರಗಳು. ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ದಿಮಿತ್ರಿ ಗಾರಿಶ್‌ ಅವರ ʼಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಕಥಾ ಸಂಕಲನ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪಡೆದಿದ್ದಾರೆ.

ಪೂರ್ಣಿಮಾ ಮಾಳಗಿಮನಿ
ʼAnyone but the Spouse’ ಎನ್ನುವ ಇಂಗ್ಲೀಷ್ ಕಥಾ ಸಂಕಲನ, ಇಜಯಾ, ಪ್ರೀತಿ ಪ್ರೇಮ -ಪುಸ್ತಕದಾಚೆಯ ಬದನೇಕಾಯಿ, ಅಗಮ್ಯ ಇವರ ಕಾದಂಬರಿಗಳು. ‘ಡೂಡಲ್ ಕಥೆಗಳು’ ಕಥಾ ಸಂಕಲನ. 2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ರೋತ್ಸವ ಕಥಾ ಬಹುಮಾನ ವಿಜೇತರು. ಇಜಯಾ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಸಂದಿದೆ. ಶಿವಮೊಗ್ಗ ಜಿಲ್ಲೆಯ ಹನುಮಂತಾಪುರ ಗ್ರಾಮದಲ್ಲಿ ಜನಿಸಿದವರು. ಭಾರತೀಯ ವಾಯುಸೇನೆಯಲ್ಲಿ ಏರೋ ನಾಟಿಕಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ಈಗ ಕೇಂದ್ರ ಸರಕಾರದ ಸಂಸ್ಥೆಯಲ್ಲಿ ಜಾಯಿಂಟ್ ಡೆಪ್ಯೂಟಿ ಡೈರೆಕ್ಟರ್ ಆಗಿದ್ದಾರೆ.

ಮೆಚ್ಚುಗೆ ಬಹುಮಾನಿತ ಕಥೆಗಾರರ ವಿವರ

ದೀಪಾ ಗಿರೀಶ್
‘ದೀಪದ‌ ಮಲ್ಲಿ’ ಕಾವ್ಯನಾಮದಲ್ಲಿ ಬರವಣಿಗೆಯಲ್ಲಿ ತೊಡಗಿರುವ ದೀಪಾ, ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯ. ಪ್ರಸ್ತುತ ಇವರು ಸುದ್ದಿಸಂಸ್ಥೆಯೊಂದರಲ್ಲಿ ನಿರೂಪಕರು. ಇವರ ʼಅಸ್ಮಿತಾʼ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚೊಚ್ಚಲ ಪುಸ್ತಕ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ʼಶ್ರೀಲೇಖಾ ದತ್ತಿ ಪ್ರಶಸ್ತಿʼ ದೊರಕಿದೆ.

ದೀಪಾ ಹಿರೇಗುತ್ತಿ
ಕುಮಟಾ ತಾಲೂಕಿನ ಹಿರೇಗುತ್ತಿಯಲ್ಲಿ ಜನಿಸಿದ ದೀಪಾ, ಚಿಕ್ಕಮಗಳೂರಿನ ಕೊಪ್ಪದಲ್ಲಿ ಇಂಗ್ಲಿಷ್‌ ಉಪನ್ಯಾಸಕಿ. ಹಲವು ಕಥಾ, ಕವನ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುತ್ತಲೇ ಇರುವ ಇವರ ಪ್ರಕಟಿತ ಕೃತಿಗಳು ಪರಿಮಳವಿಲ್ಲದ ಹೂಗಳ ಮಧ್ಯ ಕವನ ಸಂಕಲನ, ನಾನು ನೀವು ಮತ್ತು, ಫೀನಿಕ್ಸ್‌ ಅಂಕಣ ಬರಹಗಳ ಸಂಗ್ರಹ. ಕಸಾಪ ನೀಡುವ ಮಯೂರ ವರ್ಮ ಪ್ರಶಸ್ತಿಗೆ ಇವರು ಪಾತ್ರರಾಗಿದ್ದಾರೆ.

ಮಂಜು ಚಳ್ಳೂರು
ಇವರ ಹುಟ್ಟೂರು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು. ಚಳ್ಳೂರು, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಪ್ರಸ್ತುತ ವೈಕಾಮ್18 ಮೀಡಿಯಾ ಸಂಸ್ಥೆಯಲ್ಲಿ ಬರಹಗಾರನಾಗಿ ಉದ್ಯೋಗ. ಫೂ ಮತ್ತು ಇತರ ಕತೆಗಳು ಎಂಬ ಕಥಾ ಸಂಕಲನ‌ ಪ್ರಕಟವಾಗಿದೆ. ಟೋಟೋ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ, ಕಾಜಾಣ ಯುವ ಪುರಸ್ಕಾರ ಲಭಿಸಿವೆ. ಸಿನಿಮಾ ಮತ್ತು ಫೋಟೋಗ್ರಫಿ ಆಸಕ್ತಿಯ ಕ್ಷೇತ್ರಗಳು.

ಬಿ.ಎಂ ಹನೀಫ್‌
ಮೂಲತಃ ಪತ್ರಕರ್ತರಾದ ಬಿ.ಎಂ ಹನೀಫ್ ಕಥೆಗಾರ ಮತ್ತು ಕವಿಯಾಗಿಯೂ ಪರಿಚಿತರು. ಪ್ರಜಾವಾಣಿ ಸಮೂಹದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಇವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬೆಳ್ಳಾಯರು. ಮಾಂಜಿ ರವಾ ಫ್ರೈ ಕಥಾ ಸಂಕಲನ, ಕನಸು ಕನ್ನಡಿ ಅಂಕಣ ಬರಹಗಳ ಸಂಕಲನ, ಕತ್ತಲೆಗೆ ಯಾವ ಬಣ್ಣ ಕವನ ಸಂಕಲನ ಮತ್ತಿತರ ಪುಸ್ತಕಗಳ ಜತೆಗೆ ಹಲವು ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.

ಚೈತ್ರಿಕಾ ಶ್ರೀಧರ್ ಹೆಗಡೆ
ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲೂಕಿನ, ಕಂಚೀಮನೆ ಎಂಬ ಪುಟ್ಟ ಊರಿನಲ್ಲಿ ಜನಿಸಿದ ಚೈತ್ರಿಕಾ, ಬಿಕಾಂ ಓದಿ ಸದ್ಯ ಕನ್ನಡ ಕಿರುತೆರೆ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ಕವಿತೆಗಳ ಹಸ್ತಪ್ರತಿಗೆ ಕೊಡಮಾಡುವ 2016ರ ‘ಸಾಹಿತ್ಯ ಅಕಾಡೆಮಿ ದತ್ತಿ ಬಹುಮಾನ’ವು ‘ಎರಡು ನಂಬರಿನ ಟಿಕಲಿ’ ಎಂಬ ಹಸ್ತಪ್ರತಿಗೆ ದೊರೆತಿದೆ. 2021ರಲ್ಲಿ ಇವರ ಮೊದಲ ಕಥಾ ಸಂಕಲನ “ನೀಲಿ ಬಣ್ಣದ ಸ್ಕಾರ್ಫು” ಬಿಡುಗಡೆ ಆಗಿದೆ.

ಇದನ್ನೂ ಓದಿ: ವಿಸ್ತಾರ ನ್ಯೂಸ್‌ ಯುಗಾದಿ ಕಥಾಸ್ಪರ್ಧೆ: ಇತಿಹಾಸ ಬರೆದ ಕಥಾಪ್ರವಾಹ; ಟಾಪ್‌ 25 ಕಥೆಗಾರರ ಪಟ್ಟಿ ಇಲ್ಲಿದೆ!

Exit mobile version