Site icon Vistara News

Vistara News Launch | ಕನ್ನಡಿಗರ ಮನ, ಮನೆ ತಲುಪುವುದೇ ವಿಸ್ತಾರನ್ಯೂಸ್ ಆಶಯ: ಹರಿಪ್ರಕಾಶ್ ಕೋಣೆಮನೆ

Vistara News Launch

ಬೆಂಗಳೂರು: ವಿಸ್ತಾರನ್ಯೂಸ್ ಚಾನೆಲ್ (Vistara News Launch) ಅನಾವರಣಕ್ಕೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಅಗತ್ಯವಿತ್ತೇ ಎಂದು ಹಲವರು ಪ್ರಶ್ನಿಸಿದ್ದಾರೆ. ನಾವು ಚಾನೆಲ್ ಆರಂಭಿಸಿದ್ದೆ ಕನ್ನಡಿಗರ ಮನ ಮತ್ತು ಮನೆಯನ್ನು ತಲುಪಲು. ಅದೇ ಕಾರಣಕ್ಕಾಗಿ ವಿಸ್ತಾರ ಕನ್ನಡ ಸಂಭ್ರಮ ನಿರಂತರ ಕಾರ್ಯಕ್ರಮದ ಮೂಲಕ ಚಾನೆಲ್‌ ಶುಭಾರಂಭ ಮಾಡುತ್ತಿದ್ದೇವೆ. ಭಾನುವಾರ ಬೆಂಗಳೂರಲ್ಲಿ ಇಡೀ ವಿಸ್ತಾರ ಕನ್ನಡ ಸಂಭ್ರಮ ನಡೆದಿದ್ದರೆ, ರಾಜ್ಯದ 220 ಕಡೆಗೂ ಇಂಥ ವಿಸ್ತಾರ ಕನ್ನಡ ಸಂಭ್ರಮ ನಡೆಯಲಿದೆ ಎಂದು ವಿಸ್ತಾರನ್ಯೂಸ್‌ ಸಿಇಒ ಕೂಡ ಆಗಿರುವ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಹೇಳಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ವಿಸ್ತಾರನ್ಯೂಸ್ ಲಾಂಚ್ ಸಮಾರಂಭದಲ್ಲಿ ಮಾತನಾಡಿ ದ ಅವರು,ವೃತ್ತಿ ವಿಷಯದಲ್ಲಿ ನನಗೆ ಎರಡು ಆಯ್ಕೆಗಳಿದ್ದವು. ಮೊದಲನೆಯ ನಾಗರಿಕ ಪರೀಕ್ಷೆ ಬರೆದು ಅಧಿಕಾರಿಯಾಗವುದು. ಎರಡನೆಯದು ಪತ್ರಕರ್ತನಾಗುವುದು. ನಾನು ಎರಡು ಬಾರಿ ಸ್ಪರ್ಧಾತ್ಮಕ ಪರೀಕ್ಷೆ ಬರೆದೆ. ಎರಡನೇ ಬಾರಿ ಸಂದರ್ಶನದಲ್ಲಿ ಸಕ್ಸೆಸ್ ಆಗಲಿಲ್ಲ. ಮಾಧ್ಯಮ ವೃತ್ತಿಯತ್ತ ಹೊರಳಿದೆ. ಅಧಿಕಾರಿಯಾಗುವುದಕ್ಕಿಂತಲೂ ಹಲವು ವ್ಯಕ್ತಿಗಳನ್ನು ಸರಿಯಾದ ದಿಕ್ಕಿನಲ್ಲಿ ಚಿಂತಿಸುವಂತೆ, ಕೆಲಸ ಮಾಡುವಂತೆ ಹಚ್ಚುವ ಕೆಲಸವನ್ನು ಮಾಡುವುದು ಯೋಗ್ಯವೆನಿಸಿತು. ಅದೇ ಕಾರಣಕ್ಕೆ 22 ವರ್ಷದ ಹಿಂದೆ ನಾನು ಪತ್ರಕರ್ತನಾಗುವ ನಿರ್ಧಾರ ಕೈಗೊಂಡೆ ಎಂದು ಅವರು ತಿಳಿಸಿದರು.

ಮಾಧ್ಯಮ ವೃತ್ತಿಯಲ್ಲಿ ನನಗೆ ಬಹಳ ವೇಗವಾಗಿ ಉನ್ನತಿ ದೊರೆಯುತ್ತಾ ಹೋಯಿತು. 33ನೇ ವಯಸ್ಸಿಗೆ ಕರ್ನಾಟಕದ ನಂಬರ್ 1 ಪತ್ರಿಕೆಯನ್ನು ಕಟ್ಟುವ ಅವಕಾಶ ದೊರೆಯಿತು. ಆ ಬಳಿಕ ನನಗೆ 40 ವಯಸ್ಸು ತುಂಬುವ ಹೊತ್ತಿಗೆ 2ನೇ ನಂಬರ್ 1 ಪತ್ರಿಕೆ ಮುನ್ನಡೆಸುವ ಅವಕಾಶ ದೊರೆಯಿತು. ನಾನು ಈಗ ಮೂರನೇ ಹೆಜ್ಜೆಯನ್ನು ಇಡುತ್ತಿದ್ದೇನೆ. ಬದಲಾದ ಸಂದರ್ಭದಲ್ಲಿ ಮಾಧ್ಯಮಗಳನ್ನು ನವ ಮಾಧ್ಯಮಗಳನ್ನು ಮುನ್ನಡೆಸಬೇಕಿದೆ ಎಂದು ಕೋಣೆಮನೆ ಅವರು ಹೇಳಿದರು.

ಪತ್ರಿಕೋದ್ಯಮ ಹೆಮ್ಮೆಯ ವೃತ್ತಿಯಾಗಬೇಕು. ಗೌರವದ ವೃತ್ತಿಯಾಗಬೇಕು. ಇದು ನಮ್ಮ ಆಶಯ ಮತ್ತು ಅಪೇಕ್ಷೆಯಾಗಿದೆ. ಯಾವುದೇ ವೃತ್ತಿಯಲ್ಲಿ ಏಕತಾನತೆ ಇರುತ್ತದೆ. ಆದರೆ, ಮಾಧ್ಯಮದಲ್ಲಿ ಅದಕ್ಕೆ ಅವಕಾಶವಿಲ್ಲ. ಸಮಾಜದ ಎಲ್ಲ ಜನರೊಂದಿಗೆ, ಸಂಸ್ಕೃತಿಗಳೊಂದಿಗೆ ಕೆಲಸ ಮಾಡುವ ಅವಕಾಶವಿದೆ. ಅದೇ ಕಾರಣಕ್ಕೆ ಅದು ಪ್ರಮುಖ ವೃತ್ತಿಯಾಗಿದೆ ಎಂದು ಅವರು ಹೇಳಿದರು.

ಮಾಧ್ಯಮವು ಸ್ವತಂತ್ರವಾಗಿರಬೇಕು ಎಂಬುದು ನನ್ನ ಇನ್ನೊಂದು ಆಸೆ. ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶಗಳು ದೊರೆಯಬೇಕು. ಆ ಕಾರಣಕ್ಕಾಗಿ ನಾವು ಈ ಹೊಸ ಮಾಧ್ಯಮ ಸಂಸ್ಥೆಯನ್ನು ಹುಟ್ಟು ಹಾಕಿದ್ದೇವೆ. ಈಗಾಗಲೇ ನಾವು ವಿಸ್ತಾರ ನ್ಯೂಸ್, ಎಂಟರ್ಟೈನ್ಮೆಂಟ್, ಮ್ಯೂಸಿಕ್ ಚಾನೆಲ್‌‌ಗೆ ಅನುಮತಿಗಳನ್ನು ಪಡೆದುಕೊಂಡಿದ್ದೇವೆ. ಮೂರ್ನಾಲ್ಕು ತಿಂಗಳಲ್ಲಿ ಈ ಚಾನೆಲ್‌ಗಳು ಶುರುವಾಗಲಿವೆ ಎಂದು ಅವರು ತಿಳಿಸಿದರು.

ನಮ್ಮ ಆಶಯ ಜನಪರವಾಗಿರಬೇಕು. ಆ ಮೂಲಕ ದೇಶ, ರಾಜ್ಯದ ಅಭಿವೃದ್ಧಿಗೆ ಕಿಂಚಿತ್ ಕಾಣಿಕೆ ಕೊಡಬೇಕು. ನಾವು ಬೇರೆಯವರಿಗೆ ಬೊಟ್ಟು ಮಾಡುತ್ತೇವೆ. ಆದರೆ, ನಾವು ಕೂಡ ಈ ವ್ಯವಸ್ಥೆಯ ಭಾಗ ಮರೆಯುತ್ತೇವೆ. ಸದಭಿರುಚಿ ಚಾನೆಲ್ ಆಗಬೇಕೆಂಬುದು ನಮ್ಮ ಆಶಯ. ಸಮಾಜವನ್ನು ಒಳಗೊಂಡ ಚಾನೆಲ್ ಕಟ್ಟುವುದು ನಮ್ಮ ಮತ್ತೊಂದು ಆಶಯ. ವಿಸ್ತಾರನ್ಯೂಸ್ ಚಾನೆಲ್ ‌ಯಾರ ಮಾಲೀಕರದ್ದು ಅಲ್ಲ, ಹೂಡಿಕೆದಾರರದ್ದು ಅಲ್ಲ, ಇದು ಕನ್ನಡಿಗರ ಚಾನೆಲ್ ಎಂದು ತಿಳಿಸಿದರು.

ಇದನ್ನೂ ಓದಿ | Vistara News Launch | ತರುಣ ಉದ್ಯಮಿಗಳಿಗೆ ಬೆಂಬಲ, ಕಾಯಕಯೋಗಿ ಉಮಾಶಂಕರ್ ಹಂಬಲ!

Exit mobile version