ರಮೇಶ ದೊಡ್ಡಪುರ, ಬೆಂಗಳೂರು
ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಕಾರ್ಯಕರ್ತರ ಆಂತರಿಕ ಚುನಾವಣೆಯನ್ನು ಶುಕ್ರವಾರ ರಾಜ್ಯಾದ್ಯಂತ ನಡೆಸಲಿದೆ.
ಈ ಬಾರಿ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ತಿಳಿಸುತ್ತಿದ್ದಾರೆ. ಹಾಲಿ ಅತಿ ದೊಡ್ಡ ಪಕ್ಷ ಹಾಗೂ ಅಧಿಕಾರಾರೂಢ ಪಕ್ಷವೂ ಬಿಜೆಪಿ ಆಗಿರುವುದರಿಂದ ಹಾಲಿ ಶಾಸಕರು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ ಎಂಬ ಮಾತಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇರುವ ಸುಮಾರು 18 ಸಾವಿರ ಪದಾಧಿಕಾರಿಗಳಿಂದ ಚುನಾವಣೆ ನಡೆಸಲಾಗುತ್ತಿದೆ.
ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಆಪಾದನೆ, ಟಿಕೆಟ್ ಘೋಷಣೆ ನಂತರ ಕೇಳಿಬರುತ್ತದೆ. ಆದರೆ ಈ ಬಾರಿ ಅಂತಹ ಬಂಡಾಯ ಎದುರಾಗಬಾರದು ಎಂದು ಜಾಗ್ರತೆ ವಹಿಸಿರುವ ಬಿಜೆಪಿ ರಾಜ್ಯದ ಎಲ್ಲ 36 ಸಂಘಟನಾತ್ಮಕ ಜಿಲ್ಲೆಗಳಲ್ಲೂ ಚುನಾವಣೆ ನಡೆಸುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 3 ಗಂಟೆವರೆಗೆ ರಾಜ್ಯಾದ್ಯಂತ ಈ ಚುನಾವಣೆ ಅಥವಾ ಅಭಿಪ್ರಾಯ ಸಂಗ್ರಹ ನಡೆಯಲಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು, ಇದನ್ನು ಚುನಾವಣೆ ಎನ್ನುವುದಕ್ಕಿಂತಲೂ ಅಭಿಪ್ರಾಯ ಸಂಗ್ರಹ ಎನ್ನಬಹುದು. ರಾಜ್ಯದ ಎಲ್ಲ 36 ಸಂಘಟನಾತ್ಮಕ ಜಿಲ್ಲೆಗಳಲ್ಲೂ ಈ ಪ್ರಕ್ರಿಯೆ ನಡೆಯುತ್ತದೆ. ಪ್ರತಿ ಜಿಲ್ಲೆಗೆ ತಲಾ ಇಬ್ಬರು ವೀಕ್ಷಕರನ್ನು ನೇಮಕ ಮಾಡಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಮುಖ ಪದಾಧಿಕಾರಿಗಳಾದ ನಿರ್ಮಲ್ ಕುಮಾರ್ ಸುರಾನ, ಕೇಶವ ಪ್ರಸಾದ್, ಎನ್. ರವಿಕುಮಾರ್, ಮುರುಗೇಶ್ ನಿರಾಣಿ, ಜಗದೀಶ ಶೆಟ್ಟರ್ ಸೇರಿ ಅನೇಕರನ್ನು ಈ ಕಾರ್ಯಕ್ಕೆ ನೇಮಕ ಮಾಡಲಾಗಿದೆ ಎಂದಿದ್ದಾರೆ.
ಐದಾರು ಬೂತ್‌ಗಳನ್ನು ಒಳಗೊಂಡಂತೆ ರೂಪಿಸಲಾಗಿರುವ ಒಂದು ಶಕ್ತಿ ಕೇಂದ್ರದಿಂದ ಪದಾಧಿಕಾರಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಜತೆಗೆ ಆಯಾ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ ಪದಾಧಿಕಾರಿಗಳು, ರಾಷ್ಟ್ರೀಯ ಪದಾಧಿಕಾರಿಗಳು ಇದರಲ್ಲಿ ಅಭಿಪ್ರಾಯ ನೀಡುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ಅಭಿಪ್ರಾಯ ಸಂಗ್ರಹ ನಡೆದರೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.
ಈ ಅಭಿಪ್ರಾಯಗಳನ್ನು ಸಂಗ್ರಹಿಸಿ ಆಯಾ ವೀಕ್ಷಕರು ರಾಜ್ಯ ಘಟಕಕ್ಕೆ ಸಲ್ಲಿಸಲಿದ್ದಾರೆ. ಅದರ ಆಧಾರದಲ್ಲಿ ಏಪ್ರಿಲ್ 2 ಅಥವಾ 3 ರಂದು ರಾಜ್ಯ ಪದಾಧಿಕಾರಿಗಳ ಸಭೆ ನಡೆಸಲಾಗುತ್ತದೆ. ಇಲ್ಲಿ ಎಲ್ಲ ಕಡೆಗೂ ನಡೆದ ಚರ್ಚೆಯ ಮಾಹಿತಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ. ಏಪ್ರಿಲ್ 4ರಂದು ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಿಜೆಪಿ ಇತಿಹಾಸದಲ್ಲಿ ಇಂತಹ ಪ್ರಕ್ರಿಯೆಯನ್ನು ಮೊದಲ ಬಾರಿಗೆ ನಡೆಸಲಾಗುತ್ತಿದೆ. ಟಿಕೆಟ್ ಘೊಷಣೆ ನಂತರ ಬಂಡಾಯ ಏಳದಂತೆ ನೋಡಿಕೊಳ್ಳುವುದೂ ಸೇರಿ ಅನೇಕ ಉದ್ದೇಶಗಳನ್ನು ಹೊಂದಲಾಗಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ