ರಮೇಶ ದೊಡ್ಡಪುರ, ಬೆಂಗಳೂರು
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ವಿವಿಧ ಸಮುದಾಯಗಳನ್ನು ಹತ್ತಿರ ಸೆಳೆಯುವ ಕೈಂಕರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಗಳ ಮೀಸಲಾತಿ, ಪ್ರಾತಿನಿಧ್ಯ ಸೇರಿ ಅನೇಕ ಕ್ರಮ ಕೈಗೊಂಡಿರುವ ಬಿಜೆಪಿ ಸರ್ಕಾರ ಇದೀಗ ತನ್ನ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಬಿಜೆಪಿಯನ್ನು ಪ್ರಾರಂಭದಿಂದಲೂ ಮೇಲ್ವರ್ಗದ ಹಾಗೂ ನಗರ ಪ್ರದೇಶದ ಪಕ್ಷ ಎನ್ನಲಾಗುತ್ತಿತ್ತು. 1992ರ ಡಿಸೆಂಬರ್ 6ರಂದು ಉತ್ತರ ಪ್ರದೇಶದಲ್ಲಿ ಬಾಬ್ರಿ ಕಟ್ಟಡ ನೆಲಸಮದ ಆಸುಪಾಸಿನವರೆಗೂ ಪರಿಸ್ಥಿತಿ ಬಹುತೇಕ ಹಾಗೆಯೇ ಇತ್ತು. ಆದರೆ ನಂತರದಲ್ಲಿ ದೇಶದ ರಾಜಕೀಯದಲ್ಲಾದ ಅಗಾಧ ಬದಲಾವಣೆಯು ಬಿಜೆಪಿಗೆ ಬಹುದೊಡ್ಡ ವಿಸ್ತಾರವನ್ನು ನೀಡಿತು.
ನಿರಂತರವಾಗಿ ಬಿಜೆಪಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಈ ಸಮುದಾಯಗಳು ಬಿಜೆಪಿ ಕಡೆಗೆ ವಾಲಿವೆ. ಆದರೆ ಕರ್ನಾಟಕದ ಮಟ್ಟಿಗೆ ಇನ್ನೂ ಇದು ಸಂಪೂರ್ಣ ಸಾಧ್ಯವಾಗಿಲ್ಲ. ಒಬಿಸಿ ಸಮುದಾಯ ಎಸ್‌ಟಿ ಸಮುದಾಯಗಳು ವಿವಿಧ ನಾಯಕರ ವೈಯಕ್ತಿಕ ವರ್ಚಸ್ಸಿನ ಕಾರಣದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹತ್ತಿರದಲ್ಲಿವೆ. ಆದರೆ ಬಹುದೊಡ್ಡ ಸಂಖ್ಯೆಯಲ್ಲಿರುವ ಎಸ್‌ಸಿ ಸಮುದಾಯ ಇನ್ನೂ ಬಿಜೆಪಿ ಕೈ ಹಿಡಿದಿಲ್ಲ. ಈಗಲೂ ಕಾಂಗ್ರೆಸ್ ಪಕ್ಷಕ್ಕೆ ಅತಿ ದೊಡ್ಡ ವೋಟ್‌ಬ್ಯಾಂಕ್ ಆಗಿಯೇ ಉಳಿದಿವೆ.
ಇದೇ ಕಾರಣಕ್ಕೆ ಇತ್ತೀಚೆಗಷ್ಟೆ ಎಸ್‌ಸಿ ಮೀಸಲಾತಿಯನ್ನು ಶೇ.13ರಿಂದ 17ಕ್ಕೆ, ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೈಗೊಂಡಿದೆ. ವಿಶೇಷ ಅಧಿವೇಶನ ಕರೆಯಿರಿ, ನಾವೂ ಬೆಂಬಲ ನೀಡಿ ಮಸೂದೆ ಪಾಸ್ ಮಾಡಿಸುತ್ತೇವೆ ಎಂದು ಕಾಂಗ್ರೆಸ್‌ನ ಸಿದ್ದರಾಮಯ್ಯ ಹೇಳಿದರಾದರೂ, ಇದರ ಸಂಪೂರ್ಣ ಶ್ರೇಯ ತಮಗೇ ಸಲ್ಲಬೇಕೆಂಬ ಕಾರಣಕ್ಕೆ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದೆ.
ಸಾಂಪ್ರದಾಯಿಕ ಮತಕೋಟೆಯಲ್ಲಿ ಬೆಂಕಿ
ಎಸ್‌ಸಿಎಸ್‌ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದ್ದರಿಂದಾಗಿ ಆ ಸಮುದಾಯಗಳು ತನ್ನೆಡೆಗೆ ವಾಲುತ್ತವೆ ಎನ್ನುವುದು ಬಿಜೆಪಿ ಲೆಕ್ಕಾಚಾರ. ಆದರೆ ಜನರಲ್ ಕೆಟಗರಿಯಲ್ಲಿದ್ದ ಆರು ಪರ್ಸೆಂಟ್ ಮೀಸಲಾತಿಯನ್ನು ಕಿತ್ತುಕೊಂಡಿರುವುದು ಬಿಜೆಪಿಯನ್ನು ʼಅನಾದಿಕಾಲʼದಿಂದಲೂ ಬೆಂಬಲಿಸಿಕೊಂಡು ಬಂದಿರುವ ಮೇಲ್ವರ್ಗಕ್ಕೆ ತೀರಾ ನಿರಾಸೆ ಉಂಟುಮಾಡಿದೆ.
ಈಗಾಗಲೆ ಮೀಸಲಾತಿ ಪ್ರಮಾಣ ಶೇ.50 ಇದೆ. ಉಳಿದ ಶೇ.50 ಎನ್ನುವುದು ಹೆಸರಿಗಷ್ಟೇ ಜನರಲ್ ಕೆಟಗರಿ ಎನ್ನುವುದು ಅನೇಕರ ವಾದ. ಇದೀಗ ಶೇ.6 ಮೀಸಲಾತಿ ಹೆಚ್ಚಳ ಮಾಡಿ ಮತ್ತಷ್ಟು ಅವಕಾಶಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಅದರಲ್ಲೂ ತಾವು ಎಲ್ಲ ಕಾಲದಲ್ಲೂ ಬೆಂಬಲಿಸಿಕೊಂಡು ಬಂದ ಬಿಜೆಪಿಯ ʼಡಬಲ್ ಎಂಜಿನ್ʼ ಸರ್ಕಾರದ ಸಮಯದಲ್ಲೇ ಈ ʼಅನ್ಯಾಯʼ ಆಗಿರುವುದು ನುಂಗಲಾರದ ತುಪ್ಪವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಘಟನೆಯ ಪ್ರಮುಖರೊಬ್ಬರು, ಸಮುದಾಯದಲ್ಲಿ ಈ ಕುರಿತು ಸಾಕಷ್ಟು ಅಸಮಾಧಾನವಿದೆ. ಅದರಲ್ಲೂ ಇನ್ನು ಮುಂದೆ ಸರ್ಕಾರಿ ಉದ್ಯೋಗದ ಕನಸನ್ನು ಬಿಟ್ಟುಬಿಡುವುದು ಒಳ್ಳೆಯದು ಎಂದು ಯುವಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಅಸಮಾಧಾನವನ್ನು ತಣಿಸಲು ಈಗಾಗಲೆ ಕೇಂದ್ರ ಸರ್ಕಾರ EWS Reservation ಜಾರಿ ಮಾಡಿದೆ. ಇದರಿಂದಾಗಿಯೇ ಉತ್ತರ ಪ್ರದೇಶ ಮುಂತಾದ, ಬ್ರಾಹ್ಮಣ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿ ಬಿಜೆಪಿಗೆ ಅನುಕೂಲವಾಗಿದೆ. ರಾಜ್ಯದಲ್ಲೂ ಇದನ್ನು ಜಾರಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇವೆ ಎಂದಿದ್ದಾರೆ.
ಯಡಿಯೂರಪ್ಪ ಅವಧಿಯಲ್ಲಿ ಒಪ್ಪಿಗೆ
ಶಿಕ್ಷಣ, ಉದ್ಯೋಗದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಶೇ.10 ಮೀಸಲಾತಿ ನೀಡುವ ಸಲುವಾಗಿ ಸಂವಿಧಾನದ 15ನೇ ವಿಧಿಗೆ ಇರುವ ಉಪಬಂಧಗಳಿಗೆ ಆರನೇ ಉಪಬಂಧವನ್ನು ಸೇರಿಸುವ ಮೂಲಕ ಸಂವಿಧಾನಕ್ಕೆ ಕೇಂದ್ರ ಸರ್ಕಾರ 103ನೇ ತಿದ್ದುಪಡಿ ಮಾಡಿತ್ತು. ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿ ಜಾರಿಗೊಳಿಸಿಯಾಗಿದೆ. ಇದು ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳು ಹಾಗೂ ಹುದ್ದೆಗಳ ನೇಮಕಾತಿಗೆ ಅನ್ವಯಿಸುತ್ತದೆ.
ಆಯಾ ರಾಜ್ಯ ಸರ್ಕಾರಗಳು ತಮ್ಮ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗದಲ್ಲಿ ಇಡಬ್ಲ್ಯುಎಸ್ ಮೀಸಲು ನೀಡಲು ಪ್ರತ್ಯೇಕ ಅಧಿಸೂಚನೆ, ನಿಯಮ ರೂಪಿಸಬೇಕು. ಈಗಾಗಲೆ ಜಾರ್ಖಂಡ್, ಗುಜರಾತ್, ಉತ್ತರಾಖಂಡ, ದೆಹಲಿ, ಗೋವಾ, ಆಂಧ್ರಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ಮಿಜೊರಾಂ, ಜಮ್ಮು ಕಾಶ್ಮೀರ, ತೆಲಂಗಾಣ ರಾಜ್ಯಗಳು ಇಡಬ್ಲ್ಯುಎಸ್ ಜಾರಿ ಮಾಡಿವೆ. ಕರ್ನಾಟಕದಲ್ಲೂ ಜಾರಿ ಮಾಡಲು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಆದರೆ ಕೇಂದ್ರ ಸರ್ಕಾರವು ಶೇ.10 ಮೀಸಲು ನೀಡಿದ್ದನ್ನು ಪ್ರಶ್ನಿಸಿ 20ಕ್ಕೂ ಹೆಚ್ಚು ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. ಈ ತೀರ್ಪನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡುವ ಸಲುವಾಗಿ ಸಂಪುಟ ನಿರ್ಧಾರ ಇನ್ನೂ ಜಾರಿಯಾಗಿಲ್ಲ. ಇದೀಗ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವ ಕಾರಣ ರಾಜ್ಯದ ಆರ್ಥಿಕ ಬಡ ವರ್ಗಗಳಲ್ಲಿ ಅಧಿಸೂಚನೆ ನಿರೀಕ್ಷೆ ಗರಿಗೆದರಿದೆ.
ಎಸ್‌ಸಿಎಸ್‌ಟಿ ಮಾದರಿಯಲ್ಲೇ ಜಾರಿ?
ಪ್ರಕರಣವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿರುವ ಕಾರಣ ಮುಂದಿನ ಚುನಾವಣೆ ದೃಷ್ಟಿಯಿಂದ ಇಡಬ್ಲ್ಯುಎಸ್ ಮೀಸಲು ತ್ವರಿತವಾಗಿ ಜಾರಿಗೊಳಿಸಲು ಬಿಜೆಪಿ ಮೇಲೆ, ವಿವಿಧ ಸಮುದಾಯಗಳು ಒತ್ತಡ ತರುತ್ತಿವೆ. ಮೂರ್ನಾಲ್ಕು ದಿನಗಳಲ್ಲೆ ರಾಜ್ಯದ ಬಿಜೆಪಿ ನಾಯಕರಿಗೆ ಸಮುದಾಯದ ನೂರಾರು ನಾಯಕರು ಕರೆ ಮಾಡಿ, ಇಡಬ್ಲ್ಯುಎಸ್ ಜಾರಿ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಹೀಗಾಗಿ ಸರ್ಕಾರದ ಮೇಲೆ ಬಿಜೆಪಿ ಒತ್ತಡ ಹೆಚ್ಚಿಸಿದೆ ಎಂದು ಮೂಲಗಳು ಹೇಳಿವೆ.
ಎಸ್‌ಸಿಎಸ್‌ಟಿ ಮೀಸಲು ಹೆಚ್ಚಳದ ಕುರಿತು ಮೊದಲಿಗೆ ಆಯಾ ಸಮುದಾಯಗಳ ಮುಖಂಡರ ಜತೆಗೆ ಅನೇಕ ಸುತ್ತಿನ ಮಾತುಕತೆ ನಡೆಸಲಾಯಿತು. ನಂತರ ಆ ಸಮುದಾಯಗಳ ತಜ್ಞರ ಜತೆ ಕುಳಿತುಕೊಂಡು, ಸಾಧಕ ಬಾಧಕಗಳು, ಮುಂಬರುವ ಕಾನೂನು ತೊಡಕುಗಳನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಆನಂತರ ಬಿಜೆಪಿ ಕೋರ್ ಸಮಿತಿಯಲ್ಲಿ ಚರ್ಚೆ ಮಾಡಲಾಯಿತು. ಈ ಕುರಿತು ಬಿಜೆಪಿ ಕಾರ್ಯಕಾರಿಣಿಯಲ್ಲಿ ನಿರ್ಣಯ ಮಾಡಲಾಯಿತು. ಇದೆಲ್ಲದರ ನಂತರ ಸರ್ವಪಕ್ಷ ಸಭೆಯನ್ನು ನಡೆಸಿ ತೀರ್ಮಾನ ಕೈಗೊಳ್ಳಲಾಯಿತು. ವಾಲ್ಮೀಕಿ ಜಯಂತಿ ಆಸುಪಾಸಿನಲ್ಲಿರುವಂತೆ ಈ ನಿರ್ಧಾರದ ಕುರಿತು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಸಮುದಾಯಗಳಿಂದ ಪ್ರಶಂಸೆಯನ್ನು ಪಡೆಯಲಾಯಿತು.
ಇಡಬ್ಲ್ಯುಎಸ್ ಮೀಸಲು ಹೆಚ್ಚಳಕ್ಕೆ ಯಡಿಯೂರಪ್ಪ ಅವರ ಅವಧಿಯಲ್ಲಿ ಸಂಪುಟ ಒಪ್ಪಿಗೆ ಪಡೆದಿದ್ದರೂ ಸರ್ಕಾರ ಇದನ್ನು ಎಸ್‌ಸಿಎಸ್‌ಟಿ ಮೀಸಲು ಹೆಚ್ಚಿಸಿದ ಮಾದರಿಯಲ್ಲೇ ನಡೆಸಲು ತೀರ್ಮಾನಿಸಿದೆ ಎನ್ನಲಾಗಿದೆ. ಮೊದಲಿಗೆ ವಿವಿಧ ಸಮುದಾಯಗಳ ಸಂಗಟನೆಗಳೊಂದಿಗೆ, ಅಲ್ಲಿನ ತಜ್ಞರೊಂದಿಗೆ, ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿ ನಂತರದಲ್ಲಿ ಮತ್ತೆ ಸಂಪುಟಕ್ಕೆ ತಂದು ನಿರ್ಧಾರ ಕೈಗೊಂಡು ಗೆಜೆಟ್ ಹೊರಡಿಸುವ ಚರ್ಚೆ ಗಂಭೀರವಾಗಿ ನಡೆದಿದೆ. ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ನಂತರದಲ್ಲಿ ಪ್ರಕ್ರಿಯೆಗೆ ಚಾಲನೆ ನೀಡಿ, ಕೆಲವೇ ದಿನಗಳಲ್ಲಿ ಒಂದು ಹಂತಕ್ಕೆ ತರಲಾಗುತ್ತದೆ. ಇದೆಲ್ಲದರ ನಂತರ ವರಿಷ್ಠರ ಜತೆಗೆ ಚರ್ಚೆ ನಡೆಸಿ ಒಂದು ʼಸೂಕ್ತʼ ದಿನಾಂಕವನ್ನು ತಾವೇ ತಿಳಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಲಾಭ ಪಡೆಯಲು ತಯಾರಿ
ಶೇ.10 ಇಡಬ್ಲ್ಯುಎಸ್ ಮೀಸಲಾತಿಯನ್ನು ಹೆಚ್ಚಿಸಲು ಒಂದುಕಡೆ ತಯಾರಿ ನಡೆದಿದ್ದರೆ, ಮತ್ತೊಂದೆಡೆ ಇದರ ಲಾಭವನ್ನು ಪಕ್ಷಕ್ಕೆ ಹೇಗೆ ಪಡೆಯುವುದು ಎಂಬ ಲೆಕ್ಕಾಚಾರಗಳಿಗೂ ಚಾಲನೆ ನೀಡಲಾಗಿದೆ. ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ವಿವಿಧೆಡೆ ಸಮುದಾಯ ಸಂಘಟನೆಗಳು ಕಾರ್ಯಕ್ರಮ ಏರ್ಪಡಿಸುವುದು, ಪಕ್ಷದ ವತಿಯಿಂದ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದು ಸೇರಿ ಎಲ್ಲ ರೀತಿಯಲ್ಲೂ ಸಾಮಾನ್ಯ ಜನರಿಗೆ ಈ ಮಾಹಿತಿ ತಲುಪಬೇಕು ಎಂಬ ಉದ್ದೇಶವನ್ನು ಹೊಂದಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ | EWS Reservation ನೀತಿಗೆ ಸುಪ್ರೀಂ ಸಮ್ಮತಿ, ರಾಜ್ಯಗಳಿಗೂ ಲಾಭ ಈ ಮೀಸಲಾತಿ!