Site icon Vistara News

ವಿಸ್ತಾರ TOP 10 NEWS | ಮುರುಘಾ ಶ್ರೀ ವಿರುದ್ಧ ಮತ್ತೊಂದು ದೂರಿನಿಂದ ಹಿಮಾಚಲ ಚುನಾವಣೆವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 14102022

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೆ ವಿಚಾರಣೆ ಎದುರಿಸುತ್ತಿರುವ ಮುರುಘಾ ಶರಣರ ವಿರುದ್ಧ ಮತ್ತಿಬ್ಬರು ಬಾಲಕಿಯರು ದೂರು ನೀಡಿದ್ದಾರೆ. ಜ್ಞಾನವಾಪಿ ಮಸೀದಿಯಲ್ಲಿ ದೊರೆತ ಶಿವಲಿಂಗದ ಕಾರ್ಬನ್‌ ಡೇಟಿಂಗ್‌ಗೆ ನ್ಯಾಯಾಲಯ ನಿರಾಕರಿಸಿದೆ, ಓಲಾ-ಉಬರ್‌ಗೆ ತಾತ್ಕಾಲಿಕ ಜಯ ಸಿಕ್ಕಿದೆ, ಭೂತಾನ್‌ ಅಡಕೆ ಆಮದು ಕುರಿತು ಕಾರ್ಯಪಡೆ ಸಭೆ ನಡೆದಿದೆ, ಕರ್ನಾಟಕಕ್ಕೆ ಮೊದಲ ವಂದೇ ಭಾರತ್‌ ರೈಲು ಆಗಮಿಸಲಿದೆ, ಹಿಮಾಚಲ ಪ್ರದೇಶ ಚುನಾವಣೆ ಘೋಷಣೆ ಆಗಿದೆ, ಭಾರತ್‌ ಜೋಡೋ ಯಾತ್ರೆ ಶನಿವಾರ 1,000 ಕಿ.ಮೀ. ಪೂರೈಸಲಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ top 10 NEWS.

1. ಮುರುಘಾ ಶರಣರ ಮೇಲೆ ಮತ್ತಿಬ್ಬರು ಬಾಲಕಿಯರಿಂದ ಲೈಂಗಿಕ ಕಿರುಕುಳ ದೂರು

ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಮತ್ತಿಬ್ಬರು ಅಪ್ರಾಪ್ತ ವಯಸ್ಕರಿಂದ ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. ಈ ಮೊದಲು ಇಬ್ಬರು ಬಾಲಕಿಯರು ದೂರು ದಾಖಲಿಸಿದ್ದು, ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ.
12 ಹಾಗೂ 14 ವರ್ಷದ ಇಬ್ಬರು ಬಾಲಕಿಯರು ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠದ ಡಾ.ಶಿವರಾತ್ರಿ ಮುರುಘಾ ಶರಣರಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಪೋಷಕರ ಜತೆ ಮೈಸೂರಿನ ಒಡನಾಡಿ ಸಂಸ್ಥೆಗೆ ಆಗಮಿಸಿರುವ ವಿದ್ಯಾರ್ಥಿಗಳು, ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಿದ್ದಾರೆ. ಮಕ್ಕಳು ಸದ್ಯ ಒಡನಾಡಿ ಆಶ್ರಯದಲ್ಲಿದ್ದಾರೆ.
ಮುರುಘಾ ಶ್ರೀ ಪ್ರಕರಣದ ಮತ್ತಷ್ಟು ಸುದ್ದಿಗಳು:
🔴 ಮುರುಘಾ ಶರಣರ ಮೇಲೆ ಮತ್ತಿಬ್ಬರು ಬಾಲಕಿಯರಿಂದ ಲೈಂಗಿಕ ಕಿರುಕುಳ ದೂರು
🟠ಇನ್ನೂ 30-35 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಸ್ಟ್ಯಾನ್ಲಿ ಗಂಭೀರ ಆರೋಪ
🟡ಎರಡೂವರೆ ವರ್ಷದಿಂದ ಲೈಂಗಿಕ ಕಿರುಕುಳ; ಬಡವರಾಗಿದ್ದರಿಂದ ಹೆದರಿದರು: ಸ್ಟ್ಯಾನ್ಲಿ
🟢ಇತ್ತ ಮೂರನೇ ಆರೋಪಿಗೆ ಜಾಮೀನು; ಅತ್ತ ಹೈಕೋರ್ಟ್‌ ಮೆಟ್ಟಿಲೇರಿದ ಮುರುಘಾಶ್ರೀ

2. Gyanvapi Case | ಶಿವಲಿಂಗ ಕಾರ್ಬನ್ ಡೇಟಿಂಗ್‌ ಪರೀಕ್ಷೆಗೆ ಅನುಮತಿ ನಿರಾಕರಿಸಿದ ಕೋರ್ಟ್


ಜ್ಞಾನವಾಪಿ ಮಸೀದಿಯಲ್ಲಿರುವ (Gyanvapi Mosque Case) ಶಿವಲಿಂಗದ ಕಾರ್ಬನ್ ಪರೀಕ್ಷೆಗೆ ಒಪ್ಪಿಗೆ ನೀಡಲು ವಾರಾಣಸಿ ಜಿಲ್ಲಾ ನ್ಯಾಯಾಲಯವು ನಿರಾಕರಿಸಿದೆ. ಈ ಮೂಲಕ ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಮತ್ತೊಂದು ಆಯಾಮ ದೊರೆತಿದೆ. ಒಂದೊಮ್ಮೆ ಕಾರ್ಬನ್ ಡೇಟಿಂಗ್‌ಗೆ ಅನುಮತಿ ನೀಡಿದ್ದರೆ, ಶಿವಲಿಂಗ ಎಷ್ಟು ಹಳೆಯದ್ದು ಎಂಬ ಮಾಹಿತಿ ಗೊತ್ತಾಗುತ್ತಿತ್ತು. ವಾರಾಣಸಿ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಎ ಕೆ ವಿಶ್ವೇಶ ಅವರು ಈ ಆದೇಶವನ್ನು ನೀಡಿದ್ದಾರೆ. ಕೋರ್ಟ್‌ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕೋರ್ಟ್‌ರೂಮ್‌ನಲ್ಲಿ ಕೇವಲ 58 ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಓಲಾ, ಉಬರ್‌, ರ‍್ಯಾಪಿಡೋಗೆ ತಾತ್ಕಾಲಿಕ ಜಯ; ಶೇ.10 ಮೀರದಂತೆ ದರ ವಿಧಿಸಿ ಎಂದ ಕೋರ್ಟ್‌


ಅಗ್ರಿಗೇಟರ್‌ ಆ್ಯಪ್‌ಗಳಾದ ಓಲಾ, ಉಬರ್‌, ರ‍್ಯಾಪಿಡೋಗಳ ಆಟೋ ಸೇವೆ ಸದ್ಯಕ್ಕೆ ನಿರಾತಂಕವಾಗಿದ್ದು, ತಾತ್ಕಾಲಿಕ ವ್ಯವಸ್ಥೆ ಮಾಡಿ ಹೈಕೋರ್ಟ್‌ ಸೂಚನೆ ಹೊರಡಿಸಿದೆ. ಸರ್ಕಾರ ನಿಗದಿ ಮಾಡಿರುವ ಬೆಲೆಯ ಮೇಲೆ ಶೇಕಡಾ ೧೦ ಮೀರದಂತೆ ದರ ವಿಧಿಸಬಹದು. ಜತೆಗೆ ಜಿಎಸ್‌ಟಿಯನ್ನೂ ಪಡೆದುಕೊಳ್ಳಬಹುದು ಎಂದು ಸೂಚನೆ ನೀಡಿದೆ.
ಅಗ್ರಿಗೇಟರ್‌ ಆ್ಯಪ್‌ಗಳು ತಮ್ಮ ಆಟೋ ಸೇವೆಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದೆ. ಮೂಲ ದರಕ್ಕಿಂತ ಹೆಚ್ಚಿನ ಹಣ ವಿಧಿಸುತ್ತಿದೆ ಎಂಬ ಆರೋಪ, ಅಭಿಯಾನ ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅವುಗಳಿಗೆ ಕಡಿವಾಣ ಹಾಕಿ ಆದೇಶ ಹೊರಡಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಭೂತಾನ್‌ ಅಡಕೆ; ಕೇಂದ್ರಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ನಿರ್ಧರಿಸಿದ ಅಡಕೆ ಕಾರ್ಯಪಡೆ


ಭೂತಾನ್‌ನಿಂದ ಹಸಿ ಅಡಕೆ ಆಮದು ಮಾಡಿಕೊಳ್ಳುವುದರಿಂದ ಆಗುವ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ಭೂತಾನ್‌ ಮಾತ್ರವಲ್ಲದೆ, ಬೇರೆ ದೇಶಗಳಿಂದಲೂ ಒಪ್ಪಂದದ ಮೇರೆಗೆ ಅಡಕೆ ಆಮದು ಮಾಡಿಕೊಳ್ಳದಂತೆ ಕೋರಲು ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಅಡಕೆ ಕಾರ್ಯಪಡೆಯ ಸಭೆಯು (Arecanut Task Force) ನಿರ್ಧರಿಸಿದೆ.
ತೆರಿಗೆ ವಂಚಿಸಿ ಬರುವ ಉತ್ಪನ್ನಕ್ಕೆ ಕಡಿವಾಣ ಹಾಕಬೇಕು. ಸ್ಮಗ್ಲಿಂಗ್ ಸಂಪೂರ್ಣವಾಗಿ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಿರ್ಣಯ ಪತ್ರ ಕಳಿಸಬೇಕು ಎಂದು ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅಡಕೆ ಆಮದು ಹೇಗೆ ಕಡಿಮೆ ಮಾಡಬೇಕು ಎಂದು ಸೂಚಿಸುವ ತಜ್ಞರ ಸಲಹೆಗಳನ್ನು ಒಳಗೊಂಡ ಈ ಪತ್ರವನ್ನು ಎರಡು ದಿನಗಳಲ್ಲಿ ಕಳಿಸಲು ಅಡಕೆ ಕಾರ್ಯಪಡೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದೆ ಎಂದು ಸಭೆಯ ನಂತರ ಅಡಕೆ ಕಾರ್ಯಪಡೆಯ ಅಧ್ಯಕ್ಷ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Vande Bharat Express | ಕರ್ನಾಟಕಕ್ಕೆ ಬರಲಿದೆ 130 ಕಿ.ಮೀ ವೇಗದಲ್ಲಿ ಚಲಿಸುವ ರೈಲು


ರೈಲು ಸಂಚಾರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕರ್ನಾಟಕದಲ್ಲಿ ಸಂಚರಿಸುವ ದಿನ ಸಮೀಪಿಸುತ್ತಿದೆ. ನವೆಂಬರ್‌ 10ರಂದು ಕರ್ನಾಟಕದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ಮಾಡಲಿದೆ. ಚೆನ್ನೈಯಿಂದ ಹೊರಡುವ ರೈಲು ಬೆಂಗಳೂರು ಮಾರ್ಗವಾಗಿ ಮೈಸೂರು ತಲುಪಲಿದೆ.
ಈ ಮೂಲಕ, ಅತ್ಯಂತ ವೇಗದ ರೈಲು ಸೇವೆ ಕರ್ನಾಟಕಕ್ಕೆ ಪದಾರ್ಪಣೆ ಮಾಡಲಿದೆ. ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾದ ವಂದೇ ಭಾರತ್‌, ರೈಲು ಹಳಿಯ ಸಾಮರ್ಥ್ಯಕ್ಕೆ ತಕ್ಕಂತೆ 130 ಕಿ.ಮೀ. ವೇಗದಲ್ಲಿ ಸಾಗುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Bharat Jodo | ಶನಿವಾರ 1,000 ಕಿ.ಮೀ ಗುರಿ ಮುಟ್ಟಲಿದೆ ಯಾತ್ರೆ: ಇಲ್ಲಿವರೆಗಿನ ವಿವರ ಇಲ್ಲಿದೆ


ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್‌ ಜೋಡೊ ಯಾತ್ರೆ ಇದೀಗ ಕರ್ನಾಟಕದಲ್ಲಿ, ಮೂರನೇ ರಾಜ್ಯದ ಮೂಲಕ ಹಾದುಹೋಗುತ್ತಿದೆ. ಇದೇ ಸಂದರ್ಭದಲ್ಲಿ ಶನಿವಾರ ಬಳ್ಳಾರಿಯನ್ನು ತಲುಪಲಿದ್ದು, ಕನ್ಯಾಕುಮಾರಿಯಿಂದ ಆರಂಭಿಸಿದ ನಂತರ 1,000 ಕಿ.ಮೀ. ಸಾಗಿದಂತಾಗುತ್ತದೆ.
ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7ರಂದು ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಒಟ್ಟು 3,500 ಕಿಲೋಮೀಟರ್ ಗುರಿ ಸಾಧಿಸಬೇಕಾದ ಯಾತ್ರೆಯಿದು. ಶನಿವಾರ ಬಳ್ಳಾರಿಯಲ್ಲಿ ಬೃಹತ್‌ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಮಳವಳ್ಳಿ ಬಾಲಕಿ ಕೊಲೆ | ಅತ್ಯಾಚಾರ ಎಸಗಿದವನಿಗೆ ಗಲ್ಲು ಶಿಕ್ಷೆಯಾಗಲಿ ಎಂದ ಪೋಷಕರು

“ನಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿದವನಿಗೆ ಗಲ್ಲು ಶಿಕ್ಷೆಯಾಗಬೇಕು. ಸರ್ಕಾರ ಅವನಿಗೆ ಊಟ, ತಿಂಡಿ ಕೊಟ್ಟು ಪೋಷಣೆ ಮಾಡುವುದು ಬೇಡ, ಅವನನ್ನು ನೇಣಿಗೆ ಹಾಕಬೇಕು. ಇದೊಂದು ಮಾಡಿಕೊಡಿ ಸಾಕು” ಎಂದು ಮಳವಳ್ಳಿ ಪಟ್ಟಣದಲ್ಲಿ ಟ್ಯೂಶನ್‌ ಹೇಳಿಕೊಡುತ್ತಿದ್ದ ಶಿಕ್ಷಕನಿಂದಲೇ ಅತ್ಯಾಚಾರಕ್ಕೊಳಗಾಗಿ ಭೀಕರವಾಗಿ ಕೊಲೆಯಾದ ಬಾಲಕಿಯ ಪೋಷಕರು ಜೆಡಿಎಸ್‌ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಬಳಿ ತೋಡಿಕೊಂಡ ಅಳಲು.
ಟ್ಯೂಶನ್‌ ಶಿಕ್ಷಕನೇ ಅತ್ಯಾಚಾರ ಎಸಗಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿರುವ ಪ್ರಕರಣಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಅಲ್ಲದೆ, ಕೆಲವು ಕಡೆ ಪ್ರತಿಭಟನೆಗಳೂ ನಡೆದಿದ್ದು, ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಗಲ್ಲು ಶಿಕ್ಷೆ ವಿಧಿಸಬೇಕೆಂಬ ಆಗ್ರಹಗಳು ವ್ಯಕ್ತವಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Kumbhamela | ಜಲಕ್ಕೆ ಕೃತಜ್ಞತೆ ಸಲ್ಲಿಸೋಣ; ನೀರಿನ ಮಹತ್ವ ತಿಳಿಸಿಕೊಟ್ಟ ಡಾ. ವೀರೇಂದ್ರ ಹೆಗ್ಗಡೆ

ಜಲ ಮಾತೆಗೆ ಕೃತಜ್ಞತೆಯನ್ನು ಸಲ್ಲಿಸುವುದೇ ಈ ಕುಂಭಮೇಳದ (Kumbhamela) ಉದ್ದೇಶವಾಗಿದೆ. ತ್ರಿವೇಣಿ ಸಂಗಮದಲ್ಲಿ ಮೂರು ನದಿಗಳಾದ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥಗಳಿಗೆ ನಮಸ್ಕರಿಸಿ, ಗೌರವಿಸಿ ಕೃತಜ್ಞತೆ ಸಲ್ಲಿಸುವ ಕೆಲಸವನ್ನು ನಾವೀಗ ಮಾಡುತ್ತಿದ್ದೇವೆ. ಈ ಮೂಲಕ ನಮ್ಮನ್ನು ಇದೇ ರೀತಿಯಲ್ಲಿ ರಕ್ಷಿಸು ಎಂದು ಕೇಳಿಕೊಳ್ಳುತ್ತಿದ್ದೇವೆ. ಇದರ ಜತೆಗೆ ನೀರಿನ ಮಿತವ್ಯಯವೂ ನಮ್ಮಿಂದ ಆಗಬೇಕಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಸೇರುವ ಕೆ.ಆರ್‌. ಪೇಟೆ ತಾಲೂಕಿನ ಅಂಬಿಗರ ಹಳ್ಳಿಯಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಕುಂಭ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Election Commission | ಹಿಮಾಚಲ ಪ್ರದೇಶದಲ್ಲಿ ನ.12ರಂದು ವಿಧಾನಸಭೆ ಚುನಾವಣೆ

ಚುನಾವಣೆ ಆಯೋಗವು (Election Commission) ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಿದೆ. ನವೆಂಬರ್‌ ೧೨ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ ೧೦ರಂದು ಫಲಿತಾಂಶ ಪ್ರಕಟವಾಗಲಿದೆ. ಅಕ್ಟೋಬರ್‌ ೧೭ರಂದು ಅಧಿಸೂಚನೆ ಹೊರಡಿಸಲಾಗುತ್ತದೆ.
ಅ.೨೫ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ, ಅ.೨೭ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.೨೯ರಂದು ಉಮೇದುವಾರಿಕೆ ವಾಪಸ್‌ ಪಡೆಯಲು ಅವಕಾಶ ಇರುತ್ತದೆ. ರಾಜ್ಯದ ೬೮ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಅ.೧೪ರಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಆಯೋಗ ಮಾಹಿತಿ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Election Commission | ಗುಜರಾತ್‌ ಚುನಾವಣೆ ದಿನಾಂಕ ಘೋಷಣೆ ಏಕಿಲ್ಲ? ನಿಯಮ ಉಲ್ಲಂಘಿಸಿತೇ ಆಯೋಗ?

10. Gandhada Gudi | ‘ಪುನೀತ್ ಪರ್ವ’ಕ್ಕೆ ಬಾಲಯ್ಯ, ಸೂರ್ಯ, ಕಮಲ್ ಹಾಸನ್ ಆಗಮನ!

ಎಲ್ಲೆಲ್ಲೂ ‘ಗಂಧದ ಗುಡಿ’ (Gandhada Gudi) ಘಮಲು ಹರಡಿದ್ದು, ಸಿನಿಮಾ ರಿಲೀಸ್​ಗೂ ಮೊದಲೇ ಅಬ್ಬರಿಸುತ್ತಿದೆ. ಈಗಾಗಲೇ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಇವೆಂಟ್​ನ ಭರ್ಜರಿಯಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ‘ಪುನೀತ್ ಪರ್ವ’ ಹೆಸರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ಟಾಲಿವುಡ್ ಸ್ಟಾರ್ ನಂದಮೂರಿ ಬಾಲಕೃಷ್ಣ, ತಮಿಳು ನಟರಾದ ಸೂಪರ್ ಸ್ಟಾರ್ ಸೂರ್ಯ ಹಾಗೂ ಕಮಲ್ ಹಾಸನ್ ಆಗಮಿಸಲಿದ್ದಾರೆ. ಈ ಮೂಲಕ ಅಕ್ಟೋಬರ್ 21ರಂದು ದೇಶವೇ ಬೆಂಗಳೂರಿನತ್ತ ತಿರುಗಿ ನೋಡಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ಒಂದು ದಿನದ ವೇತನ ದೇಣಿಗೆ
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾಗೆ ಕೊಲೆ ಬೆದರಿಕೆ: ದೂರು ದಾಖಲು
Inflation | ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ 10.7%ಕ್ಕೆ ಇಳಿಕೆ
GST | ಪರೋಟಾ ಅಂದ್ರೆ ರೋಟಿ, ಚಪಾತಿ ಅಲ್ಲ, 18% ಜಿಎಸ್‌ಟಿ ಪಕ್ಕಾ: ಗುಜರಾತ್‌ ಎಎಎಆರ್
ಉಕ್ರೇನ್​​ನಿಂದ ಮರಳಿದ್ದ ಭಾರತದ 2000 ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದು ಮುಂದುವರಿಸಲು ಅವಕಾಶ ಕೊಟ್ಟ ಉಜ್ಬೇಕಿಸ್ತಾನ
Congress President | ಖರ್ಗೆಗೆ ಜಿ-23ಯ ಮನೀಶ್‌ ತಿವಾರಿ ಬೆಂಬಲ, ಶಶಿ ತರೂರ್‌ಗೆ ಭಾರಿ ಹಿನ್ನಡೆ?

ದಿನದ ಲೇಖನಗಳು

ಮೊಗಸಾಲೆ ಅಂಕಣ | ಸೋನಿಯಾರನ್ನು ತತ್ತರಗೊಳಿಸಿದ ಅನಿರೀಕ್ಷಿತ ಬಂಡಾಯ
ರಾಮಾಯಣ ಸರ್ಕ್ಯೂಟ್ ನಂತೆ ಪಂಚ ಆತ್ಮಲಿಂಗಗಳ ದರ್ಶನಕ್ಕೂ ಬೇಕಿದೆ ಸರ್ಕ್ಯೂಟ್ ಯೋಜನೆ

Exit mobile version