Site icon Vistara News

ವಿಸ್ತಾರ TOP 10 NEWS | ʼಜೋಡೊʼ ಹೊಸ್ತಿಲಲ್ಲಿ ಅಪಸ್ವರದಿಂದ ಪಂಜಾಬ್‌ನಲ್ಲಿ MMS ಗದ್ದಲದವರೆಗಿನ ಪ್ರಮುಖ ಸುದ್ದಿಗಳಿವು

vistara TOP 10 NEWS 18092022

ಬೆಂಗಳೂರು: ರಾಹುಲ್‌ ಗಾಂಧಿಯವರು ನಡೆಸುತ್ತಿರುವ ಭಾರತ್‌ ಜೋಡೊ ಪಾದಯಾತ್ರೆ ಕರ್ನಾಟಕಕ್ಕೆ ಕಾಲಿಡುವ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮಾತುಗಳ ಕುರಿತು ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಬಳ್ಳಾರಿ ವಿಮ್ಸ್‌ನಲ್ಲಿ ಸಂಭಿಸಿದ ಸಾವುಗಳಿಗೆ ಕರೆಂಟ್‌ ಕಟ್‌ ಕಾರಣವಲ್ಲ ಎಂದು ಸರ್ಕಾರ ಹೇಳಿದೆ, ದಿನಪೂರ್ತಿ ಗದ್ದಲಕ್ಕೆ ಕಾರಣವಾದ ಪಂಜಾಬ್‌ MMS ಹಗರಣ ಸಂಜೆ ವೇಳೆಗೆ ತಿಳಿಯಾಗಿದೆ, ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಮಕ್ಕಳ ಕಳ್ಳರ ಕೂಗೆದ್ದಿದೆ, ಕತೆಗಾರ್ತಿ ಕುಸುಮಾ ಆಯರಹಳ್ಳಿ ಅವರ ಹೊಸ ಅಂಕಣ ಆರಂಭವಾಗಿದೆ, ಕೊಹ್ಲಿ ಕುರಿತು ರೋಹಿತ್‌ ಪ್ರತಿಕ್ರಿಯೆ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಭಾರತ್‌ ಜೋಡೊ ಹೊಸ್ತಿಲಲ್ಲೆ ಅಪಸ್ವರ: ಡಿಕೆಶಿ ಹೇಳಿಕೆಗೆ ಮೂಲ ಕಾಂಗ್ರೆಸಿಗರಿಂದಲೇ ವಿರೋಧ
ರಾಹುಲ್‌ ಗಾಂಧಿ ಆರಂಭಿಸಿರುವ ಭಾರತ್‌ ಜೋಡೊ ಯಾತ್ರೆ ಕರ್ನಾಟಕಕ್ಕೆ ಕಾಲಿಡುವುದಕ್ಕೂ ಮುನ್ನವೇ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕರುಗಳು ತಮ್ಮ ಬಣವನ್ನು ಸ್ಪಷ್ಟಪಡಿಸುತ್ತಿದ್ದು, ಕೆಲಸ ಮಾಡದೇ ಹೋದರೆ ಟಿಕೆಟ್‌ ಇಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆ ಕುರಿತು ಇದೀಗ ಮೂಲ ಕಾಂಗ್ರೆಸಿಗರೂ ಅಪಸ್ವರ ಎತ್ತಿದ್ದಾರೆ. ಈ ಕುರಿತು ದಿನೇಶ್‌ ಗುಂಡೂರಾವ್‌, ಆರ್‌.ವಿ. ದೇಶಪಾಂಡೆ, ರಾಮಲಿಂಗಾರೆಡ್ಡಿ ಅವರುಗಳು ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿವರೆಗೆ ಡಿ.ಕೆ. ಶಿವಕುಮಾರ್‌ ವರ್ಸಸ್‌ ಸಿದ್ದರಾಮಯ್ಯ ಎಂದರೆ ಮೂಲ ವರ್ಸಸ್‌ ವಲಸಿಗ ಕಾಂಗ್ರೆಸಿಗರು ಎನ್ನುವಂತಿತ್ತು. ಆದರೆ ಇದೀಗ ಲೆಕ್ಕಾಚಾರ ಬದಲಾಗುವಂತೆ ತೋರುತ್ತಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

2. Ballary VIMS | ವಿದ್ಯುತ್‌ ವ್ಯತ್ಯಯಕ್ಕೂ ಸಾವಿಗೂ ಸಂಬಂಧವಿಲ್ಲ: ಸಚಿವ ಸುಧಾಕರ್‌ ಪ್ರಾಥಮಿಕ ವರದಿ
ಬಳ್ಳಾರಿಯ ವಿಮ್ಸ್‌ನ ವೆಂಟಿಲೇಟರ್‌ನಲ್ಲಿದ್ದ ಮೌಲಾ ಹುಸೇನ್ ಮತ್ತು ಚೆಟ್ಟೆಮ್ಮ ಅವರ ಸಾವಿಗೆ ವಿದ್ಯುತ್ ಕಡಿತ ಕಾರಣವಲ್ಲ ಎಂಬುದು ಇಲ್ಲಿನ ವೈದ್ಯರ ಮಾಹಿತಿ ಮತ್ತು ದಾಖಲೆಯಿಂದ ತಿಳಿಯುತ್ತದೆ, ಆದರೆ, ನನ್ನ ನಿರ್ಧಾರವನ್ನು ಹೇಳುವುದಿಲ್ಲ, ಅದು ತನಿಖಾ ತಂಡದ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ತನಿಖಾ ತಂಡದ ವರದಿಯೇ ಅಂತಿಮ, ವರದಿಯನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಭಾನುವಾರ ವಿಮ್ಸ್‌ಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸೆ.14ರಂದು ಬೆಳಗ್ಗೆ 8:20ರಿಂದ 9:30ರವರೆಗೆ ವಿದ್ಯುತ್ ಕಡಿತವಾಗಿರುವುದು ನಿಜ, ಒಂದು ಗಂಟೆಯ ಅವಧಿಯಲ್ಲಿ ಇಬ್ಬರು ನಿಧನರಾಗಿದ್ದಾರೆ, ಈ ಸಂದರ್ಭದಲ್ಲಿ ವೆಂಟಿಲೇಟರ್ ಬ್ಯಾಕಪ್‌ನಲ್ಲಿ ನಡೆಯುತ್ತಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮೌಲಾಹುಸೇನ್(35) ಮೆದುಳಿನ ರಕ್ತಸ್ರಾವದಿಂದ ನಿಧನರಾಗಿದ್ದಾರೆ. ಮುಂಚೆಯೇ ರೋಗಿಯ ಸಂಬಂಧಿಕರಿಗೆ ರೋಗಿಯ ಸ್ಥಿತಿಯ ಬಗ್ಗೆ ತಿಳಿಸುತ್ತಾ, ಸಹಿ ಪಡೆದಿದ್ದಾರೆ ಎಂದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ವಿಮ್ಸ್ ಸಾವು ಪ್ರಕರಣ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜೀನಾಮೆ ನೀಡಲಿ ಎಂದ ಕುಮಾರಸ್ವಾಮಿ

3. Punjab MMS Scandal | ತನ್ನದೇ ಅಶ್ಲೀಲ ವಿಡಿಯೊ ರೆಕಾರ್ಡ್​ ಮಾಡಿ ಬಾಯ್​ಫ್ರೆಂಡ್​ಗೆ ಕಳಿಸಿದ್ದಳು ವಿದ್ಯಾರ್ಥಿನಿ
ಚಂಡೀಗಢದ ಯೂನಿವರ್ಸಿಟಿ ಹಾಸ್ಟೆಲ್​​ನಲ್ಲಿರುವ ಒಬ್ಬಳು ವಿದ್ಯಾರ್ಥಿ ತನ್ನೊಂದಿಗೆ ಇದ್ದ ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವಿಡಿಯೊವನ್ನು ರೆಕಾರ್ಡ್​ ಮಾಡಿ ಬಾಯ್​ಫ್ರೆಂಡ್​ಗೆ ಎಂಎಂಎಸ್​ ಮಾಡಿದ್ದಾಳೆ. ನಂತರ ಆತ ಆ ವಿಡಿಯೋಗಳನ್ನು ಅಡಲ್ಟ್​ ವೆಬ್​ಸೈಟ್​ಗೆ ಹಾಕಿದ್ದಲ್ಲದೆ, ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್ ಮಾಡಿದ ಎಂಬ ಸುದ್ದಿ ಇಂದು ಬೆಳ್ಳಂಬೆಳಗ್ಗೆ ಬಂದಿತ್ತು. ಆದರೆ ನಂತರ ‘ಇಲ್ಲ, 60 ವಿದ್ಯಾರ್ಥಿನಿಯರ ವಿಡಿಯೋಗಳೆಲ್ಲ ವೈರಲ್ ಆಗಿಲ್ಲ. ಒಬ್ಬಳೇ ಹುಡುಗಿ, ಅಂದರೆ ಯಾರು ವಿಡಿಯೋವನ್ನು ಎಂಎಂಎಸ್​ ಮಾಡಿದ್ದಳೋ ಅವಳದ್ದೇ ಅಶ್ಲೀಲ ವಿಡಿಯೋ ಮಾತ್ರ ಲೀಕ್​ ಆಗಿದೆ’ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿತ್ತು. ಇದೀಗ ಚಂಡೀಗಢ ಯೂನಿವರ್ಸಿಟಿ ವಿಡಿಯೋ ಲೀಕ್​ ಬಗ್ಗೆ ಸ್ಪಷ್ಟನೆ ನೀಡಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

4. child theft | ಮಕ್ಕಳ ಕಳ್ಳರೆಂದು ಭ್ರಮಿಸಿ ಬೆನ್ನಟ್ಟಿದರು, ಇನ್ನೋವಾ ವಾಹನ ಪಲ್ಟಿಯಾಗಿ ಮೂವರಿಗೆ ಗಾಯ
ರಾಜ್ಯದ ಕೆಲವು ಭಾಗಗಳಲ್ಲಿ ಮಕ್ಕಳ ಕಳ್ಳರ ಕುರಿತಾದ ವದಂತಿಗಳು ಭಾರಿ ಅಪಾಯವನ್ನೇ ಸೃಷ್ಟಿಸುತ್ತಿವೆ. ಬಾಗಲಕೋಟೆಯಲ್ಲಿ ಶನಿವಾರ ರಾತ್ರಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಭ್ರಮಿಸಿ ಜನರೆಲ್ಲ ಸೇರಿ ವಾಹನವೊಂದನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಇನ್ನೋವಾ ವಾಹನ ಪಲ್ಟಿಯಾಗಿ ಮಹಾರಾಷ್ಟ್ರ ಮೂಲದವರು ಎಂದು ಹೇಳಲಾದ ಮೂವರು ಗಾಯಗೊಂಡಿದ್ದಾರೆ. ಇವರು ಮಕ್ಕಳ ಕಳ್ಳರಲ್ಲ, ಜನರು ಆತಂಕದಿಂದ ಅಪಾಯ ತಂದಿಟ್ಟಿದ್ದಾರೆ ಎಂದು ಬಾಗಲಕೋಟೆ ಎಸ್ಪಿ ಜಯಪ್ರಕಾಶ್‌ ಹೇಳಿದ್ದಾರೆ.
ಮಕ್ಕಳ ಕಳವಿನ ಬಗ್ಗೆ ಬಣ್ಣ ಬಣ್ಣದ ಕಥೆಗಳು ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲೆಡೆಯೂ ಭಯವಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇನ್ನೋವಾ ವಾಹನವೊಂದನ್ನು ಗ್ರಾಮಸ್ಥರು ಅಟ್ಟಾಡಿಸಿಕೊಂಡು ಹೋದ ಪರಿಣಾಮ ವಾಹನ ಪಲ್ಟಿಯಾಗಿದೆ. ವಿಜಯಪುರ, ಧಾರವಾಡದಲ್ಲೂ ಮಕ್ಕಳ ಕಳ್ಳರೆಂದು ಭಾವಿಸಿ ಮರಕ್ಕೆ ಕಟ್ಟಿ ಥಳಿಸಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
child theft | ಮಕ್ಕಳ ಕಳ್ಳರೆಂದು ಭ್ರಮಿಸಿ ಬೆನ್ನಟ್ಟಿದರು, ಇನ್ನೋವಾ ವಾಹನ ಪಲ್ಟಿಯಾಗಿ ಮೂವರಿಗೆ ಗಾಯ

5. ವಿಸ್ತಾರ ವಿಶೇಷ: ʼಮೂಕ ಪ್ರಾಣಿಗಳ ಮೇಲೆ ಅವನಿಗೆ ಅಪಾರ ಪ್ರೀತಿʼ: ʼಚೀತಾʼ ತಂಡದ ಕನ್ನಡಿಗ ಸನತ್‌ಕೃಷ್ಣ ತಾಯಿಯ ಅಭಿಮಾನದ ಮಾತು
ನಮೀಬಿಯಾದಿಂದ ಹತ್ತು ಗಂಟೆಗಳ ಪ್ರಯಾಣದ ನಂತರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಸಿವಂಗಿಗಳನ್ನು (ಚೀತಾ) ತಂದ ತಂಡದಲ್ಲಿ ಕನ್ನಡಿಗ, ಪುತ್ತೂರಿನ ಡಾ. ಸನತ್‌ಕೃಷ್ಣ ಮುಳಿಯ ಒಬ್ಬರು. ಅತ್ಯಂತ ಚಿಕ್ಕ ವಯಸ್ಸಿನಲ್ಲೆ, ಅತ್ಯಂತ ಹೊಣೆಗಾರಿಕೆಯ ಕಾರ್ಯ ನಿರ್ವಹಿಸುವ ಸನತ್‌ಕೃಷ್ಣ ಕುರಿತು ಅವರ ತಾಯಿ ಉಷಾರ ಅವರು ʼವಿಸ್ತಾರ ನ್ಯೂಸ್‌ʼ ಜತೆ ಮಾತನಾಡಿದ್ದಾರೆ. ತಾಯಿ ಉಷಾ ಅವರಿಗೆ ಪುತ್ರನ ಸಾಧನೆ ಕುರಿತು ಅಪಾರ ಹೆಮ್ಮೆ. ಅದಕ್ಕಿಂತಲೂ ಹೆಚ್ಚಾಗಿ, ಮೂಕ ಪ್ರಾಣಿಗಳ ಕುರಿತು ಸನತ್‌ಕೃಷ್ಣ ಅವರು ಹೊಂದಿರುವ ಅಪಾರ ಪ್ರೀತಿಯ ಕುರಿತು ಮತ್ತೂ ಗೌರವವಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
🐆ಚೀತಾ ಉಳಿಸುವುದೆಂದ್ರೆ ಜಗತ್ತು ಬದಲಾಗುತ್ತಿದೆ ಎಂದರ್ಥ! ಭಾರತದಲ್ಲಿ ಸಂತತಿ ಬೆಳೆಯಬಲ್ಲದೇ?
🐆Fact-Check | ಚೀತಾ ತಂದ ವಿಮಾನಕ್ಕೆ ವಿಶೇಷವಾಗಿ ಈಗ ಬಣ್ಣ ಬಳಿದಿದ್ದರ?

6. ಕೇರಳ ಸಿಎಂ ವಿಜಯನ್‌ ತಂದಿದ್ದ ಮೂರಕ್ಕೆ ಮೂರೂ ಪ್ರಸ್ತಾವನೆಯನ್ನು ರಿಜೆಕ್ಟ್‌ ಮಾಡಿದ ಸಿಎಂ ಬೊಮ್ಮಾಯಿ
ರೈಲ್ವೆ ಮಾರ್ಗ, ರಸ್ತೆ ಸಾರಿಗೆ ಸೇರಿ ಮೂರು ವಿಚಾರಗಳಲ್ಲಿ ಕರ್ನಾಟಕ ಸರ್ಕಾರವನ್ನು ಮನವೊಲಿಸಲು ಬಂದಿದ್ದ ನೆರೆ ರಾಜ್ಯ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರ ಎಲ್ಲ ಮೂರು ಪ್ರಸ್ತಾವನೆಗಳನ್ನೂ ಕರ್ನಾಟಕ ಸರ್ಕಾರ ತಿರಸ್ಕರಿಸಿದೆ.
ಇತ್ತೀಚೆಗೆ ತಿರುವನಂತಪುರದಲ್ಲಿ ದಕ್ಷಿಣ ರಾಜ್ಯಗಳ ಸಭೆಯಲ್ಲಿ ಭಾಗವಹಿಸಿದ್ದಾಗ, ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶದ ಕೆಲವು ವಿಷಯಗಳ ಕುರಿತು ಚರ್ಚೆ ನಡೆಸಲು ಕೋರಿದ್ದರು. ಅದರಂತೆ ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಕಾಂಞಂಗಾಡ್- ಪಣತ್ತೂರು ಹಾಗೂ ಕಾಣಿಯೂರು ರೈಲ್ವೆ ಮಾರ್ಗ, ತಲಸ್ಸೇರಿ-ಮೈಸೂರು ರೈಲ್ವೆ ಲೈನ್‌ ಹಾಗೂ ಗುಂಡ್ಲುಪೇಟೆ ಮಾರ್ಗವಾಗಿ ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ರಾತ್ರಿ ಹೊತ್ತು ಹೆಚ್ಚಿನ ಬಸ್‌ ಸಂಚಾರದ ಕುರಿತು ಪ್ರಸ್ತಾವನೆಗಳಿದ್ದವು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

7. SSC CGL 2022 | ಎಸ್‌ಎಸ್‌ಸಿಯ ಸಿಜಿಎಲ್ ಪರೀಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು?
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ‘ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಎಗ್ಸಾಮ್’ಗೆ (SSC CGL 2022) ಅಧಿಸೂಚನೆ ಹೊರಡಿಸಿದೆ. ಈ ಪರೀಕ್ಷೆ ಕುರಿತು ಮಾಹಿತಿ ನೀಡುವ ಪ್ರಶ್ನೋತ್ತರ ಇಲ್ಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

8. ಪೋಸ್ಟ್‌ ಬಾಕ್ಸ್‌ 143 | ತುಂಟ ಕೋತಿಗೂ ಗಂಭೀರ ಗಜಕ್ಕೂ ಪ್ರೇಮ ಅಂದ್ರೆ..
www.vistaranews.com ನಲ್ಲಿನ ವೈವಿದ್ಯಮಯ ಅಂಕಣಗಳ ಸಾಲಿಗೆ ಭಾನುವಾರದಿಂದ ಮತ್ತೊಂದು ಸೇರ್ಪಡೆಯಾಗಿದೆ. ಕತೆಗಾರ್ತಿ, ಅಂಕಣಕಾರ್ತಿ, ರೇಡಿಯೋ ಜಾಕಿ, ಕವಿ ಕುಸುಮಾ ಆಯರಹಳ್ಳಿ ಅವರ ಪೋಸ್ಟ್‌ ಬಾಕ್ಸ್‌ 143 ಅಂಕಣ ಆರಂಭವಾಗಿದೆ. ಪ್ರೇಮಪತ್ರವೇ ಮನಸುಗಳಿಗೆ ಸೇತುವೆ ಅನ್ನುವ ಕಾಲ ಇದಲ್ಲವಾದರೂ, ಒಂದು ತಂಗಾಳಿಯಂಥ ಪತ್ರ ಬರೆಸಿಕೊಳ್ಳುವುದಕ್ಕೆ ಎಲ್ಲ ಮನಸುಗಳೂ ಹಾತೊರೆಯುವುದು ನಿಜವಲ್ಲವೇ? ಇದು ಅಂಥದೊಂದು ಪಿಸುಮಾತು, ತುಸು ʻಗ್ಯಾನʼ ತುಂಬಿದ ಅಂಕಣ. ಅಂಕಣ ಓದಲು ಇಲ್ಲಿ ಕ್ಲಿಕ್‌ ಮಾಡಿ.

9. ವಿಸ್ತಾರ Money Guide | ನಿಮ್ಮ ಡೆಬಿಟ್‌, ಕ್ರೆಡಿಟ್ ಕಾರ್ಡ್‌ ಸುರಕ್ಷತೆಗೆ ಆರ್‌ಬಿಐ ಟೋಕನ್‌ ಶೀಘ್ರ, ಏನಿದು?
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಂಬರುವ ಅಕ್ಟೋಬರ್‌ 1 ರಿಂದ ಕಾರ್ಡ್‌ ಟೋಕನೈಸೇಶನ್‌ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಇದರಿಂದ ನಿಮ್ಮ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ಗಳು ದುರ್ಬಳಕೆಯಾಗದಂತೆ ನೋಡಿಕೊಳ್ಳಬಹುದು. ಆರ್‌ಬಿಐ ಪ್ರಕಾರ 2022 ರ ಅಕ್ಟೋಬರ್‌ 1 ರಿಂದ ಇದು ಕಡ್ಡಾಯವಾಗಲಿದೆ.
ಅನೇಕ ಮಂದಿ ಕಳೆದ ಕೆಲ ವರ್ಷಗಳಿಂದ ಸೈಬರ್‌ ವಂಚನೆಗೆ ಗುರಿಯಾಗಿದ್ದಾರೆ. ಹಣ ಕಳೆದುಕೊಂಡಿದ್ದಾರೆ. ಏಕೆಂದರೆ ಅವರ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ನಲ್ಲಿದ್ದ ಅವರ ಕಾರ್ಡ್‌ ಡೇಟಾಗಳು ಸೋರಿಕೆಯಾಗಿವೆ. ಹಾಗಾದರೆ ಏನಿದು ಟೋಕನೈಸೇಶನ್‌ ಹಾಗೂ ಇದರಿಂದ ಡೆಬಿಡ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಸುರಕ್ಷತೆ ಹೇಗೆ ವೃದ್ಧಿಸುತ್ತದೆ? ಇಲ್ಲಿದೆ ವಿವರ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

10. Team India | ವಿರಾಟ್‌ ಕೊಹ್ಲಿಯನ್ನೂ ಆರಂಭಿಕ ಬ್ಯಾಟಿಂಗ್‌ ಆಯ್ಕೆಯಾಗಿ ಬಳಸುತ್ತೇವೆ ಎಂದ ರೋಹಿತ್‌
ರೋಹಿತ್‌ ಶರ್ಮ ನೇತೃತ್ವದ ಟೀಮ್ ಇಂಡಿಯಾ (Team India) ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಮುಂಬರುವ ಟಿ೨೦ ವಿಶ್ವ ಕಪ್‌ಗಾಗಿ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನಾಯಕ ರೋಹಿತ್‌ ಶರ್ಮ ಭಾನುವಾರ ಮುಂದಿನ ಯೋಜನೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈ ವೇಳೆ ಅವರು ವಿರಾಟ್‌ ಕೊಹ್ಲಿ ಅವರನ್ನು ಅಗತ್ಯ ಬಿದ್ದರೆ ಆರಂಭಿಕರಾಗಿ ಬ್ಯಾಟ್‌ ಮಾಡುವ ಆಯ್ಕೆಯಾಗಿ ಪರಿಗಣಿಸುವುದಾಗಿಯೂ ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Exit mobile version