Site icon Vistara News

ವಿಸ್ತಾರ TOP 10 NEWS | ರಾಜ್ಯ BJP ʼಜನಸ್ಪಂದನʼ ದಿಂದ ದಸರೆ ಉದ್ಘಾಟನೆಗೆ ರಾಷ್ಟ್ರಪತಿವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 10092022

ಬೆಂಗಳೂರು: ಜುಲೈ ಅಂತ್ಯದಲ್ಲಿ ಬೃಹತ್‌ ರ‍್ಯಾಲಿ ನಡೆಸುವ ಮೂಲಕ ವಿಧಾನಸಭೆ ಚುನಾವಣೆಗೆ ಚಾಲನೆ ನೀಡಬೇಕು ಬಿಜೆಪಿ ಚಿಂತನೆ ಸುಮಾರು ಒಂದೂವರೆ ತಿಂಗಳು ತಡವಾಗಿ ನೆರವೇರಿತು. ದೊಡ್ಡಬಳ್ಳಾಪುರದಲ್ಲಿ ರ‍್ಯಾಲಿ ನಡೆಸುವ ಮೂಲಕ ತನ್ನ ಸಂಘಟನಾತ್ಮಕ ಶಕ್ತಿಗೆ ಚುರುಕು ನೀಡಿರುವ ಬಿಜೆಪಿ, ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯುವ ಸಂದೇಶವನ್ನೂ ನೀಡಿದೆ. ಈ ವರ್ಷದ ಮೈಸೂರು ದಸರಾ ಉತ್ಸವವನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಲಿದ್ದಾರೆ, ರಾಹುಲ್‌ ಗಾಂಧಿ ಅವರು ನಡೆಸುತ್ತಿರುವ ಭಾರತ್‌ ಜೋಡೊ ಯಾತ್ರೆ ಕುರಿತು ಕೆಲ ವಿವಾದ ತಲೆದೋರಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. BJP ಜನಸ್ಪಂದನ | ಸಿದ್ದರಾಮಯ್ಯ ಅವರದ್ದು 100% ಸರ್ಕಾರ: ಸಿಎಂ ಬೊಮ್ಮಾಯಿ ʼದಮ್‌ʼದಾರ್‌ ಭಾಷಣ
ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ 40% ಲಂಚದ ಆರೋಪ ಹೊರಿಸುವ ಕಾಂಗ್ರೆಸ್‌ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತ್ಯುತ್ತರ ನೀಡಿದ್ದು, ಸಿದ್ದರಾಮಯ್ಯ ಅವರದ್ದು ಕೆಲಸವನ್ನೇ ಮಾಡದೆ ಬಿಲ್‌ ಮಾಡಿಕೊಳ್ಳುವ 100% ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ನಿಮಗೆ ತಾಕತ್‌ ಇದ್ದರೆ, ದಮ್‌ ಇದ್ದರೆ ನಮ್ಮನ್ನು ತಡೆಯಿರಿ ನೋಡೋಣ ಎಂದು ಕಾಂಗ್ರೆಸ್‌ ನಾಯಕರಿಗೆ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಆಕ್ರಮಣಕಾರಿಯಾಗಿ ಮಾತನಾಡಿದರು. ಸಾಮಾನ್ಯವಾಗಿ ಆಧ್ಯಾತ್ಮಿಕ ಉದಾಹರಣೆಗಳ ಮೂಲಕ, ಸೌಮ್ಯವಾಗಿ ಮಾತನಾಡುವ ಬೊಮ್ಮಾಯಿ ಅವರ ಭಾಷಣದಲ್ಲಿ ಉಗ್ರ ಸ್ವರೂಪ ಕಂಡುಬಂದರೆ, ವಿಶೇಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ದಾಳಿ ನಡೆಸಿದ್ದು ವಿಶೇಷವಾಗಿತ್ತು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. BJP ಜನಸ್ಪಂದನ | ದೇಶ ಒಡೆವವರ ಜತೆ ಕೈ ಜೋಡಿಸಿದ ಕಾಂಗ್ರೆಸ್‌ನಿಂದ ಭಾರತ್‌ ಜೋಡೊ ನಾಟಕ: ಸ್ಮೃತಿ ಇರಾನಿ ವಾಗ್ದಾಳಿ
ಕಾಂಗ್ರೆಸ್‌ ಪಕ್ಷದ ನೇತೃತ್ವ ವಹಿಸಿರುವ ಗಾಂಧಿ ಮನೆತನದವರು ಆಡುತ್ತಿರುವ ಹೊಸ ನಾಟಕ ಎಲ್ಲರಿಗೂ ಕಾಣುತ್ತಿದೆ. ರಾಷ್ಟ್ರಕ್ಕೆ ಮೋಸ ಮಾಡಿದವರು, ದೇಶವನ್ನು ಒಡೆಯಬೇಕೆಂದು ಸಂಚು ಹೂಡುತ್ತಿರುವವರ ಜತೆ ಕೈ ಜೋಡಿಸಿರುವ ಪಕ್ಷ ಈಗ ಭಾರತ್‌ ಜೋಡೊ ನಾಟಕವಾಡುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. ವಿಸ್ತಾರ ವಿಶೇಷ | ʼಹಿಂದʼ ಮತ ಸೆಳೆಯಲು ಒಂದೇ ದಿನ ಎರಡು ಬಾರಿ ಸಂದೇಶ ನೀಡಿದ ಬಿಜೆಪಿ
ಕರ್ನಾಟಕದಲ್ಲಿ ಅತಿ ದೊಡ್ಡ ವರ್ಗವಾಗಿರುವ ʼಹಿಂದʼ ಸಮುದಾಯವನ್ನು ಸೆಳೆಯದೆ ತನ್ನ ಗುರಿ 150ನ್ನು ತಲುಪುವುದು ಸಾಧ್ಯವಿಲ್ಲ ಎಂದು ಅರಿತಿರುವ ಬಿಜೆಪಿ ಈ ಕುರಿತು ಸ್ಪಷ್ಟ ಹೆಜ್ಜೆ ಇಟ್ಟಂತೆ ತೋರುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ರ‍್ಯಾಲಿ ನಡೆಸಿರುವ ಬಿಜೆಪಿ, ಪ್ರಮುಖವಾಗಿ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದೆ. ಇದೇ ವೇಳೆ ಮೈಸೂರು ದಸರಾ ಮಹೋತ್ಸವದಲ್ಲೂ ಇದೇ ಸಂದೇಶವನ್ನು ನೀಡಲು ಮುಂದಾಗಿರುವುದು ಸ್ಪಷ್ಟವಾಗಿದೆ. ಈ ಕುರಿತು ವಿಶ್ಲೇಷಣಾ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. BJP ಜನಸ್ಪಂದನ | ʼವಲಸಿಗʼ ಸಚಿವರ ʼಆತ್ಮನಿರ್ಭರʼ ರ‍್ಯಾಲಿಗೆ ಬಿಜೆಪಿ ನಾಯಕರು ಫುಲ್‌ ಖುಷ್‌ !
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆದ ನಂತರದಲ್ಲಿ ಬಿಜೆಪಿ ಪ್ರಸಿದ್ಧಿ ಕುಸಿಯುತ್ತಿದೆ ಎಂದು ತಿಳಿದಿದ್ದ ಬಿಜೆಪಿ ನಾಯಕರು, ಒಂದು ಉತ್ತಮ ರ‍್ಯಾಲಿ ಮೂಲಕ ಪಕ್ಷದಲ್ಲಿ ಹೊಸ ಚೈತನ್ಯವನ್ನು ಕಂಡುಕೊಳ್ಳಲು ಬಯಸಿದ್ದರು. ಬಿಜೆಪಿ ಅಸ್ತಿತ್ವವೇ ಇಲ್ಲ ಎನ್ನಲಾಗುವ ʼಡ್ರೈʼ ಪ್ರದೇಶದಲ್ಲಿ ಸುಮಾರು ಒಂದೂವರೆ ಲಕ್ಷ ಜನರನ್ನು ಸೇರಿಸಿದ ಮೂವರು ʼವಲಸಿಗʼ ಸಚಿವರಿಗೆ ಬಿಜೆಪಿ ನಾಯಕರು ಶಹಬ್ಬಾಸ್‌ಗಿರಿ ನೀಡಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

5. BJP ಜನಸ್ಪಂದನ | ಸರ್ಕಾರದ ಸಾಧನಾ ಸಮಾವೇಶಕ್ಕೆ ಹಿರಿಯ ನಾಯಕರೇ ಗೈರು! ಯಾರ ಮೇಲೆ ಅಸಮಾಧಾನ?
ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾದ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಬಿಜೆಪಿಗೆ ದೊಡ್ಡ ಮಟ್ಟದ ಅಸ್ತಿತ್ವವಿಲ್ಲದ ಆ ಭಾಗದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ಸಮಾವೇಶವೇ ನಡೆದಿದೆ. ಆದರೆ, ಇದರಲ್ಲಿ ಭಾಗವಹಿಸಲೇಬೇಕಾಗಿದ್ದ ಹಲವು ಹಿರಿಯ ನಾಯಕರು ಕಾರ್ಯಕ್ರಮದಿಂದ ದೂರ ಉಳಿದಿರುವುದೇಕೆ ಎಂಬ ಪ್ರಶ್ನೆ ಕಾಡಿದೆ. ಹೀಗಾಗಿ ದೊಡ್ಡ ಯಶಸ್ಸಿನ ಸಮಾವೇಶದ ನಂತರವು ಕೊರೆಯುವ ಹುಳವೊಂದು ಬಿಜೆಪಿಯ ತಲೆ ಹೊಕ್ಕಂತಾಗಿದೆ. ಇದು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ. ಇವರಲ್ಲಿ ಕಾರಣ ನೀಡಿ ಬಾರದಿರುವವರು ಹಾಗೂ ಕಾರಣ ನೀಡದೇ ಗೈರಾದವರು ಇದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್
ಸ್ವಾತಂತ್ರ್ಯ ಹೋರಾಟ ವೀರ ಸಾವರ್ಕರರ ಒಂದು ಮುಖವಾದರೆ, ಸಮಾಜ ಸುಧಾರಣೆ, ಅಸ್ಪೃಶ್ಯತೆ ನಿವಾರಣೆಯ ಕಾರ್ಯಗಳು ಇನ್ನೊಂದು ಮುಖ. ನಿಷ್ಪಕ್ಷಪಾತಿ ಇತಿಹಾಸಕಾರರು ಇದ್ದಿದ್ದರೆ ಸಾವರ್ಕರರಿಗೆ ನ್ಯಾಯ ಸಲ್ಲುತ್ತಿತ್ತೋ ಏನೋ. ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರ ಅಂಕಣವನ್ನು ಪೂರ್ಣ ಓದಲು ಇಲ್ಲಿ ಕ್ಲಿಕ್‌ ಮಾಡಿ.

7. Bharat Jodo Yatra | ಯೇಸು ನಿಜವಾದ ದೇವರು, ಶಕ್ತಿ ದೇವತೆಗಳಂತಲ್ಲ; ರಾಹುಲ್​ ಗಾಂಧಿ ಜತೆ ಪಾದ್ರಿ ವಾದ
ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಯನ್ನು ಬಿಜೆಪಿ ಹೆಜ್ಜೆಹೆಜ್ಜೆಗೂ ಟೀಕಿಸುತ್ತಿದೆ. ಈಗಾಗಲೇ ಯಾತ್ರೆಯಲ್ಲಿ ರಾಹುಲ್ ಗಾಂಧಿ ಧರಿಸಿದ್ದ ಟಿ ಶರ್ಟ್​ ಬಗ್ಗೆ ಟೀಕೆ ಮಾಡಿರುವ ಬಿಜೆಪಿ ಇದೀಗ, ‘ರಾಹುಲ್ ಗಾಂಧಿ ಮತ್ತು ಪಾದ್ರಿ ಜಾರ್ಜ್​ ಪೊನ್ನಯ್ಯ’ ಭೇಟಿಯನ್ನು ಖಂಡಿಸಿದೆ. ಪಾದ್ರಿ ಜಾರ್ಜ್​ ಪೊನ್ನಯ್ಯ ಹಿಂದೆಲ್ಲ ಹಲವು ಬಾರಿ ಹಿಂದು ದ್ವೇಷಿ ಹೇಳಿಕೆಗಳನ್ನು ನೀಡಿ ಅರೆಸ್ಟ್ ಆಗಿದ್ದವರು. ಅಷ್ಟೇ ಅಲ್ಲ, ‘ಭಾರತ ಮಾತೆ, ಭೂಮಾತೆಯ ಕಲ್ಮಶಗಳು ನನ್ನನ್ನೂ ಕಲುಷಿತಗೊಳಿಸಬಾರದು ಎಂಬ ಕಾರಣಕ್ಕೆ ನಾನು ಶೂ ಧರಿಸಿದ್ದೇನೆ’ ಎಂಬಂಥ ದುರಹಂಕಾರದ, ಭಾರತ ಮಾತೆಗೆ ಅಪಮಾನ ಮಾಡುವಂಥ ಮಾತುಗಳನ್ನಾಡಿದ್ದರು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. ಮೈಸೂರು ದಸರಾ ಉದ್ಘಾಟನೆಗೆ ಬರ್ತಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ದೇಶದ ಪ್ರಥಮ ಪ್ರಜೆಯೇ ಬರಲಿದ್ದಾರೆ. ಹೌದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಸರಾ ಉದ್ಘಾಟಿಸಲು ಒಪ್ಪಿದ್ದಾರೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಈ ವಿಷಯವನ್ನು ಪ್ರಕಟಿಸಿದ್ದಾರೆ. ಈ ಬಾರಿ ದಸರಾ ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂಬ ವಿಚಾರದಲ್ಲಿ ಇತ್ತೀಚೆಗೆ ಸಭೆ ನಡೆದಿತ್ತು. ಸಭೆಯ ಬಳಿಕ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿತ್ತು. ಈಗ ಅವರಿಂದ ಸಮ್ಮತಿಯ ಪತ್ರ ಬಂದಿದೆ ಎಂದು ಸಿಎಂ ತಿಳಿಸಿದರು. ಹೀಗಾಗಿ ಈ ಬಾರಿ ರಾಷ್ಟ್ರದ ಪ್ರಥಮ ಪ್ರಜೆ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಖುಷಿಯಿಂದ ಹೇಳಿಕೊಂಡರು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

9. ಬೀದಿ ನಾಯಿಗಳಿಗೆ ಆಹಾರ ಹಾಕುವವರು, ಅದು ಕಚ್ಚಿದವರ ಚಿಕಿತ್ಸಾ ವೆಚ್ಚವನ್ನೂ ಭರಿಸಲಿ: ಸುಪ್ರೀಂಕೋರ್ಟ್​
ಬೀಡಾಡಿ ನಾಯಿಗಳಿಂದ ಆಗುತ್ತಿರುವ ಅವಘಡಗಳು ಒಂದೆರಡಲ್ಲ. ಅದೆಷ್ಟೋ ಜನರ, ಅದರಲ್ಲೂ ಪುಟ್ಟ ಮಕ್ಕಳ ಪ್ರಾಣವನ್ನೂ ಬೀದಿನಾಯಿಗಳು ತೆಗೆದಿವೆ. ಹಲವರು ಬೀದಿ ನಾಯಿಗಳ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದೂ ಇದೆ. ಹೀಗಾಗಿ ಬೀಡಾಡಿ ನಾಯಿಗಳು ಮತ್ತು ಅವು ತಂದೊಡ್ಡುತ್ತಿರುವ ಅಪಾಯವನ್ನು ತಡೆಯುವ ಅಗತ್ಯತೆ ಬಗ್ಗೆ ಸುಪ್ರೀಂಕೋರ್ಟ್​ ಹೇಳಿದೆ. ‘ಬೀದಿ ನಾಯಿಗಳಿಗೆ ಆಹಾರ ಹಾಕುವವರು, ಅವುಗಳ ವ್ಯಾಕ್ಸಿನೇಶನ್​ ಬಗ್ಗೆಯೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲ, ಈ ಬೀದಿ ನಾಯಿಗಳು ಯಾರ ಮೇಲಾದರೂ ದಾಳಿ ಮಾಡಿ ಗಾಯಗೊಳಿಸಿದಾಗ, ಅವರ ಚಿಕಿತ್ಸೆಯ ವೆಚ್ಚವನ್ನೂ ಇವರೇ ಭರಿಸಬೇಕಾಗುತ್ತದೆ’ ಎಂದೂ ಹೇಳಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. Pitru Paksha | ಪಿತೃ ಪಕ್ಷ ಎಂದರೇನು? ಏಕೆ ಮತ್ತು ಹೇಗೆ ಆಚರಣೆ ಮಾಡಬೇಕು?
ನಮ್ಮನ್ನು ಅಗಲಿದವರಿಗೆ ಕೃತಜ್ಞತೆ ಸಲ್ಲಿಸುವ ಸಮಯ ಪಿತೃಪಕ್ಷ (Pitru Paksha). ಈ ಪಕ್ಷಕ್ಕೆ ಇರುವ ಮಹತ್ವವೇನು, ಆಚರಣೆ ಏಕೆ ಮತ್ತು ಹೇಗೆ ಎಂದು ತಿಳಿಸುವ ವಿಶೇಷ ಲೇಖನ ಇಲ್ಲಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version