ಬೆಂಗಳೂರು: ಮನೆ, ವಾಣಿಜ್ಯ ಸಂಬಂಧವಾಗಿ ವಾಸ್ತು ಪರಿಹಾರಗಳನ್ನು ಸೂಚಿಸುವ ʻಸರಳ ವಾಸ್ತುʼ ಮೂಲಕ ನಾಡಿನಾದ್ಯಂತ ಮನೆಮಾತಾಗಿದ್ದ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಹಾಡಹಗಲೇ ಹತ್ಯೆ ಮಾಡಿರುವುದು ಬೆಚ್ಚಿ ಬೀಳಿಸಿದೆ. ಸೋಮವಾರ ಪೂರ್ತಿ ಐಪಿಎಸ್, ಐಎಎಸ್ ಬಂಧನ ಎನ್ನುತ್ತಿರುವಾಗಲೇ ಮಂಗಳವಾರ ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿರುವುದು ಸೇರಿ ದಿನದ ಪ್ರಮುಖ ಹತ್ತು ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
೧. ಸರಳ ವಾಸ್ತು ಖ್ಯಾತಿಯ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಹತ್ಯೆ
ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಹತ್ಯೆ ಮಾಡಲಾಗಿದೆ. ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಗುರೂಜಿ ತಮ್ಮನ್ನು ಭೇಟಿಯಾಗಲು ಬಂದಿದ್ದ ಭಕ್ತರ ವೇಷದಲ್ಲಿದ್ದ ಹಂತಕರನ್ನು ನೋಡಲು ರಿಸೆಪ್ಷನ್‌ಗೆ ಬಂದಾಗ ಬರ್ಬರವಾಗಿ ಕೊಲೆಗೀಡಾಗಿದ್ದಾರೆ. ಅವರು ಸೋಫಾದ ಮೇಲೆ ಕೂರುತ್ತಿದ್ದಂತೆಯೇ ಅವರ ಕಾಲಿಗೆ ಒಬ್ಬ ಬೀಳುತ್ತಾನೆ. ಪಕ್ಕದಲ್ಲಿಯೇ ಚಾಕುವನ್ನು ಪೇಪರ್‌ನಲ್ಲಿ ಮುಚ್ಚಿಟ್ಟುಕೊಂಡಿದ್ದ ಮತ್ತೊಬ್ಬ ಹಂತಕ ಗುರೂಜಿಯ ಎದೆಗೇ ಬಲವಾಗಿ ಚಾಕುವಿನಿಂದ ಇರಿಯುತ್ತಾನೆ. ಅವರು ತಪ್ಪಿಸಿಕೊಳ್ಳಲು ಕಿರುಚುತ್ತಾ ಎದ್ದು ನಿಂತರೂ ಬಿಡದ ಹಂತಕರಿಬ್ಬರು ಜಿದ್ದಿಗೆ ಬಿದ್ದವರಂತೆ ಚಾಕುವಿನಿಂದ ಇರಿಯುತ್ತಲೇ ಇರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕೃತ್ಯ ನಡೆದ ನಾಲ್ಕು ಗಂಟೆಯೊಳಗೆ ಆರೋಪಿಗಳಾದ ಮಹಾಂತೇಶ್ ಹಾಗೂ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
2. Zameer ACB Raid | ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ
ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಫ್ರೇಜರ್‌ಟೌನ್ ಬಡಾವಣೆಯಲ್ಲಿ ಇರುವ ಶಾಸಕರ ನಿವಾಸದ ಮೇಲೆ ೪೦ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ಅಧಿಕಾರಿಗಳು ಶಾಸಕರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
ಪಿಎಸ್‌ಐ ಹಗರಣದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಜಮೀರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
೩. Rain News | ಮಳೆಯ ಅಬ್ಬರ, ಗುಡ್ಡ ಕುಸಿತ; ಗೋವಾ, ಕರ್ನಾಟಕ ಸಂಚಾರ ಸ್ಥಗಿತ
ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿರುವ ನಡುವೆಯೇ ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲೂ ಭಾರಿ ಮಳೆಯಾಗುತ್ತಿದೆ. ಗೋವಾ ಸಮೀಪದ ಮಾಲಶೇಜ್ ಘಾಟ್‌ನಲ್ಲಿ ಭಾರಿ ಮಳೆಯಿಂದಾಗಿ ಸೋಮವಾರ ರಾತ್ರಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ಕರ್ನಾಟಕ-ಗೋವಾ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
4. PSI Scam | ದಾರಿ ತಪ್ಪಿಸಿದ ಗೃಹ ಸಚಿವ ರಾಜೀನಾಮೆ ನೀಡಲಿ ಎಂದ ಕಾಂಗ್ರೆಸ್
ಪಿಎಸ್‌ಐ ನೇಮಕಾತಿ ಪರೀಕ್ಷೆ ಸೇರಿ ಅನೇಕ ಸಂದರ್ಭದಲ್ಲಿ ಪ್ರರಕಣಗಳನ್ನು ತಪ್ಪುದಾರಿಗೆಳೆದ ಗೃಹಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
ಯಾವುದೇ ಕಾರಣಕ್ಕೆ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
೫. ಎಸಿಬಿ ಸೀಮಂತ್‌ಕುಮಾರ್ ಸಿಂಗ್ ವಿರುದ್ಧ ತನಿಖೆಯಾಗಲಿ: ನ್ಯಾ. ಸಂದೇಶ್‌ಗೆ ವಕೀಲರ ಸಂಘ ಬೆಂಬಲ
ನ್ಯಾಯಮೂರ್ತಿಗಳ ಮೇಲೆಯೇ ಮಾನಸಿಕ ಒತ್ತಾಯ ಮಾಡಬಹುದಾದವರು ಎನ್ನಲಾಗುತ್ತಿರುವ ಎಸಿಬಿ ಮುಖ್ಯಸ್ಥ ಸೀಮಂತ್‌ಕುಮಾರ್ ಸಿಂಗ್ ಅವರ ಕುರಿತು ತನಿಖೆ ಆಗಬೇಕು ಎಂದು ಬೆಂಗಳೂರು ವಕೀಲರ ಸಂಘ ಆಗ್ರಹಿಸಿದೆ. ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ಅವರ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದ ಕಾರಣಕ್ಕೆ ಎಸಿಬಿ ವಿರುದ್ಧ ಚಾಟಿ ಬೀಸಿದ್ದ ಹೈಕೋರ್ಟ್ ನ್ಯಾ. ಎಚ್.ಪಿ. ಸಂದೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
6. ಕಾಳಿದೇವಿಯ ಕೈಗೆ ಸಿಗರೇಟು ಕೊಟ್ಟ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಬೆಂಗಳೂರು, ಲಖನೌನಲ್ಲಿ FIR
ಕಾಳಿಕಾ ಮಾತೆಯು ಸಿಗರೇಟು ಸೇದುವಂತೆ ಚಿತ್ರೀಕರಣ ಮಾಡಿ ಪೋಸ್ಟರ್ ಮತ್ತು ವಿಡಿಯೊ ಬಿಡುಗಡೆ ಮಾಡಿದ ನಿರ್ಮಾಪಕಿ, ನಟಿ ಲೀನಾ ಮಣಿಮೇಕಲೈ ವಿರುದ್ಧ ಬೆಂಗಳೂರು ಮತ್ತು ಉತ್ತರ ಪ್ರದೇಶದ ಲಖನೌನಲ್ಲಿ ಎಫ್‌ಐಆರ್ ದಾಖಲಾಗಿದೆ. ಲೀನಾ ಇತ್ತೀಚೆಗೆ ತಮ್ಮ ಮುಂಬರುವ ಸಾಕ್ಷ್ಯಚಿತ್ರದ ಪೋಸ್ಟರನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಪೋಸ್ಟರ್‌ನಲ್ಲಿ ಮಹಿಳೆಯೊಬ್ಬರು ಕಾಳಿ ಮಾತೆಯ ವೇಷ ಧರಿಸಿ ಸಿಗರೇಟು ಸೇದುತ್ತಿರುವ ದೃಶ್ಯವಿದೆ. ಇದನ್ನು ಡಿಲೀಟ್ ಮಾಡಬೇಕು. ಸಮಸ್ತ ಹಿಂದೂ ಜನತೆಯ ಮುಂದೆ ಲೀನಾ ಕ್ಷಮೆ ಕೇಳಬೇಕು ಎಂದು ಎಲ್ಲೆಡೆ ಕೂಗು ಕೇಳಿ ಬಂದಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೭. Spice jetನಲ್ಲಿ ಮತ್ತೆ ತಾಂತ್ರಿಕ ಸಮಸ್ಯೆ, ದಿಲ್ಲಿಯಿಂದ ದುಬೈಗೆ ಹೊರಟ ವಿಮಾನ ಕರಾಚಿಯಲ್ಲಿ ಲ್ಯಾಂಡಿಂಗ್
ದಿಲ್ಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಅದನ್ನು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ಮಂಗಳವಾರ ಬೆಳಗ್ಗೆ ಈ ವಿಮಾನ ಹಾರಾಟ ಆರಂಭಿಸಿ ಸ್ವಲ್ಪ ಹೊತ್ತಿನಲ್ಲಿ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಕರಾಚಿ ವಿಮಾನ ನಿಲ್ದಾಣವನ್ನು ಸಂಪರ್ಕಿಸಿ ಅನುಮತಿ ಪಡೆದು ಇಳಿಸಲಾಯಿತು. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಸ್ಪೈಸ್ ಜೆಟ್ ವಿಮಾನಗಳಲ್ಲಿ ಪದೇಪದೆ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಕಂಡುಬಂದಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
8. ಕೋಟಿ ಕೋಟಿ ಲೂಟಿ ಮಾಡಿ ಶೋಕಿ ಮಾಡಿದ ಬ್ಯಾಂಕ್ ಜವಾನ!
ಇವನೊಬ್ಬ ಬ್ಯಾಂಕ್ ಜವಾನ. ಆದರೆ, ಮಾಡಿದ್ದು ಮಾತ್ರ ೪೨೦ ಕೆಲಸ. ಸದ್ಯ ಈತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಸುಮಾರು ೪ ರಿಂದ ೪.೫ ಕೋಟಿ ರೂಪಾಯಿ ಹಣ ದೋಚಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಎದುರಿಸುತ್ತಿದ್ದಾನೆ. ಪ್ರವೀಣ ಪತ್ರಿ ಅಲಿಯಾಸ್ ಪಿ. ದೀಕ್ಷಿತ್ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಬ್ಯಾಂಕ್ ಜವಾನ. ಡಿಸಿಸಿ ಬ್ಯಾಂಕ್‌ನ ಕಮತಗಿ ಶಾಖಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ ಪತ್ರಿ, ಬ್ಯಾಂಕ್ ಮ್ಯಾನೇಜರ್‌ಗಳ ಕಂಪ್ಯೂಟರ್ ಐಡಿ ಹ್ಯಾಕ್ ಮಾಡಿ ಕೋಟಿ ಕೋಟಿ ದೋಖಾ ಮಾಡಿದ್ದಾನೆ. ಕದ್ದ ಹಣದಲ್ಲಿ ಪ್ರವಾಸ, ಸಿನಿಮಾ ಎನ್ನುತ್ತ ಮಜಾ ಮಾಡುತ್ತ ಹೀರೊ ರೀತಿ ಪೋಸ್ ಕೊಟ್ಟಿದ್ದಾನೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೯. ಮತ್ತೆ ಟ್ವಿಟರ್-ಕೇಂದ್ರ ವಾರ್, ಕೆಲವು ವಿಷಯ ಡಿಲೀಟ್ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ
ಟ್ವಿಟರ್‌ನಲ್ಲಿರುವ ಕೆಲವು ವಿಷಯಗಳನ್ನು ತೆಗೆದುಹಾಕುವಂತೆ ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮೈಕ್ರೋ ಬ್ಲಾಗಿಂಗ್ ಫ್ಲಾಟ್ ಫಾರಂ ಕರ್ನಾಟಕ ಹೈಕೋರ್ಟ್ ಮೊರೆ ಹೊಕ್ಕಿದೆ. ಹೊಸ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ ೬೯ಎ ಪ್ರಕಾರ, ಕೇಂದ್ರ ಸರಕಾರ ಈಗಾಗಲೇ ಟ್ವಿಟರ್ ಸಂಸ್ಥೆಗೆ ನೋಟಿಸ್ ನೀಡಿದ್ದು, ಅದನ್ನು ಪಾಲಿಸಲು ಜುಲೈ ನಾಲ್ಕರ ಅಂತಿಮ ಗಡುವನ್ನು ನೀಡಿತ್ತು. ಆದೇಶವನ್ನು ಪಾಲಿಸದೆ ಹೋದರೆ ಕ್ರಿಮಿನಲ್ ಕ್ರಮಗಳನ್ನು ಎದುರಿಸಬೇಕು ಎಂಬ ಎಚ್ಚರಿಕೆಯನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಈಗ ಟ್ವಿಟರ್ ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆಯನ್ನು ಸಲ್ಲಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
10. England Tour : ಭಾರತಕ್ಕೆ 7 ವಿಕೆಟ್ ಸೋಲು
ಮರುನಿಗದಿಯಾಗಿದ್ದ ಇಂಗ್ಲೆಂಡ್ ವಿರುದ್ಧದ (England Tour) ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ೭ ವಿಕೆಟ್‌ಗಳ ಸೋಲಿಗೆ ಒಳಗಾಗಿದೆ. ಇದೇ ವೇಳೆ ಇಂಗ್ಲೆಂಡ್ ಬಳಗ ೩೭೮ ರನ್‌ಗಳನ್ನು ಚೇಸ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಸಾಧನೆ ಮಾಡಿತು. ೫ ಪಂದ್ಯಗಳ ಟೆಸ್ಟ್ ಸರಣಿ ೨-೨ರಲ್ಲಿ ಸಮಬಲದೊಂದಿಗೆ ಮುಕ್ತಾಯಕಂಡಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)