ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಭಾರತ್ ಜೋಡೊ ಯಾತ್ರೆ ಕೇರಳದ ನಂತರ ಕರ್ನಾಟಕದಲ್ಲಿ ಶುಕ್ರವಾರದಿಂದ ಆರಂಭವಾಗಿದೆ. ಸಂಭ್ರಮದಿಂದ ಮೊದಲ ದಿನದ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಇನ್ನೂ 20 ದಿನ ಕರ್ನಾಟಕದಲ್ಲಿ ಸಾಗಲಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗುವ ಸಾಧ್ಯತೆಯಿದೆ, ಬಿಬಿಎಂಪಿ ಚುನಾವಣೆಗೆ ಮುಹೂರ್ತ ಕೂಡಿಬಂದಿದೆ, ವಿಜ್ಞಾನಿಗಳು ಆರನೇ ಮಹಾಸಾಗರವನ್ನು ಪತ್ತೆ ಹಚ್ಚಿದ್ದಾರೆ, ಶನಿವಾರದಿಂದ 5G ಸೇವೆ ಆರಂಭವಾಗಲಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಕರ್ನಾಟಕಕ್ಕೆ ಕಾಲಿಟ್ಟ Bharat Jodo | ಸಂವಿಧಾನದ ಉಳಿವಿಗಾಗಿ, ಜನರ ನೋವು ಕೇಳಲು ಈ ಯಾತ್ರೆ ಎಂದ ರಾಹುಲ್ ಗಾಂಧಿ
ಈ ದೇಶದಲ್ಲಿ ಸಂವಿಧಾನದ ಉಳಿವಿಗಾಗಿ ಭಾರತ್ ಜೋಡೊ ಯಾತ್ರೆ ನಡೆಸುತ್ತಿದ್ದೇವೆ. ಬಿಜೆಪಿ ಮತ್ತು ಆರೆಸ್ಸೆಸ್ ಸಾರುತ್ತಿರುವ ದ್ವೇಷದ ಸಿದ್ದಾಂತದ ವಿರುದ್ಧ ಈ ಯಾತ್ರೆ ನಡೆಯುತ್ತಿದೆ. ಜನರ ನೋವು ಕೇಳುವುದಕ್ಕಾಗಿ ಈ ಯಾತ್ರೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಆಯೋಜಿಸಿರುವ ಭಾರತ್ ಜೋಡೊ ಯಾತ್ರೆ ಶುಕ್ರವಾರ ಕರ್ನಾಟಕ ಪ್ರವೇಶಿಸಿದ ಸಂದರ್ಭದಲ್ಲಿ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಎದುರು ಸಮಾವೇಶ ನಡೆದಿದ್ದು, ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಭಾಗವಹಿಸಿದ್ದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Bharat Jodo | ಸಿದ್ದು-ಡಿಕೆಶಿ ಜೋಡೋ ಮಾಡಲು ಮತ್ತೊಮ್ಮೆ ಪ್ರಯತ್ನಿಸಿದ ರಾಹುಲ್
2. Cong Prez Poll | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೂವರು ನಾಯಕರಿಂದ ನಾಮಪತ್ರ; ಹೆಚ್ಚಿನವರಿಗೆ ಖರ್ಗೆ ಪರ ಒಲವು
ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆಯಲಿರುವ ಚುನಾವಣೆ(Cong Prez Poll)ಗೆ ತಿರುವನಂತಪುರಂ ಸಂಸದ ಶಶಿ ತರೂರ್, ಜಾರ್ಖಂಡ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್.ತ್ರಿಪಾಠಿ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದರು. ಇಲ್ಲಿ ಕೆ.ಎನ್.ತ್ರಿಪಾಠಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ನೇರ ಹಣಾಹಣಿ ಏರ್ಪಡುವುದು ಶಶಿ ತರೂರ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ನಡುವೆಯೇ ಎಂದೇ ಹೇಳಲಾಗಿದೆ. ಈ ಮೂವರೂ ತಮ್ಮ ನಾಮಪತ್ರವನ್ನು ಎಐಸಿಸಿ ಪ್ರಧಾನ ಕಚೇರಿಯಲ್ಲಿರುವ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ ಮಿಸ್ತ್ರಿ ಅವರಿಗೆ ಸಲ್ಲಿಸಿದ್ದಾರೆ. ಶಶಿ ತರೂರ್ ಮತ್ತು ಕೆ.ಎನ್.ತ್ರಿಪಾಠಿಗಿಂತಲೂ ಮಲ್ಲಿಕಾರ್ಜುನ ಖರ್ಗೆಗೇ ಬೆಂಬಲ ಜಾಸ್ತಿ ಇರುವುದು ಈಗಲೇ ಗೋಚರಿಸುತ್ತಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
3. ರಾಜ್ಯದ ಹಲವೆಡೆ ಆರ್‌ಟಿಒ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ
ರಾಜ್ಯದ ಐದು ಕಡೆ ಆರ್‌ಟಿಒ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ತಂಡಗಳು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿವೆ. ಬಳ್ಳಾರಿ, ವಿಜಯಪುರ, ವಿಜಯನಗರ, ಚಿಕ್ಕೋಡಿ ಹಾಗೂ ಬೀದರ್‌ಗಳಲ್ಲಿ ದಾಳಿ ನಡೆದಿವೆ. NH63 ರಸ್ತೆಯ ಗೋಡೆಹಾಳ್‌ನಲ್ಲಿ ಹಗರಿ ನದಿಯ ಸೇತುವೆ ಬಳಿ ಇರುವ ಆರ್‌ಟಿಓ ಚೆಕ್‌ಪೋಸ್ಟ್ ಮೇಲೆ ಎಸ್ಪಿ ಪುರುಷೋತ್ತಮ ನೇತೃತ್ವದ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಿದೆ. ಮಹಾರಾಷ್ಟ್ರ ಗಡಿಯಲ್ಲಿರುವ ಧೂಳಖೇಡ RTO ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಅನಿತಾ ನೇತೃತ್ವದಲ್ಲಿ ದಾಳಿ ನಡೆದಿದೆ. 3ರಿಂದ 4 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ. ಬೀದರ್‌ನ ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿನ ಆರ್‌ಟಿಓ ಚೆಕ್‌ಪೋಸ್ಟ್‌ಗೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
4. ವಿಸ್ತಾರ Exclusive | ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಯಾವಾಗ?: ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್ ನಾಗರಕಟ್ಟೆ ಸಂದರ್ಶನ
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ದೇಶದ ಪರಮ ಶ್ರದ್ಧಾ ಭಕ್ತಿಯ ಕೇಂದ್ರಗಳಲ್ಲಿ ಒಂದಾಗಿ ತಲೆ ಎತ್ತುತ್ತಿರುವ ಈ ದೇಗುಲವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಅತ್ಯಂತ ಸೂಕ್ಷ್ಮ ಧಾರ್ಮಿಕ ಮತ್ತು ತಾಂತ್ರಿಕ ಅಂಶಗಳನ್ನು ಆಧರಿಸಿ ನಿರ್ಮಿಸಲಾಗುತ್ತಿದೆ. ಈ ದೇವಾಲಯ ನಿರ್ಮಾಣ ಕಾರ್ಯ ಈಗ ಯಾವ ಹಂತದಲ್ಲಿದೆ, ಯಾವಾಗ ರಾಮನ ದರ್ಶನಕ್ಕೆ ಅವಕಾಶ ಸಿಗಬಹುದು, ಭವ್ಯ ಮಂದಿರದ ನಿರ್ಮಾಣ ಯಾವಾಗ ಪೂರ್ಣವಾಗಲಿದೆ ಎಂಬೆಲ್ಲ ವಿಚಾರಗಳಿಗೆ ಸಂಬಂಧಿಸಿ ವಿಸ್ತಾರ ನ್ಯೂಸ್ ಜತೆ ವಿಸ್ತೃತವಾಗಿ ಮಾತನಾಡಿದ್ದಾರೆ ರಾಮ ಮಂದಿರ ನಿರ್ಮಾಣದ ಉಸ್ತುವಾರಿಯಾಗಿರುವ ಗೋಪಾಲ ನಾಗರಕಟ್ಟೆ ಅವರು. ಕರ್ನಾಟಕದವರೇ ಆಗಿರುವ ಗೋಪಾಲ ನಾಗರಕಟ್ಟೆ ಅವರು ಆರೆಸ್ಸೆಸ್‌ನ ಪ್ರಚಾರಕರಾಗಿದ್ದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ. ಅವರೊಂದಿಗಿನ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
5. India 5G launch | ಪ್ರಧಾನಿ ನರೇಂದ್ರ ಮೋದಿಯಿಂದ ನಾಳೆ 5ಜಿ ಸೇವೆಗೆ ಚಾಲನೆ
ದೇಶದಲ್ಲಿ 5ಜಿ ಸೇವೆಗೆ ಶನಿವಾರ ( India 5G launch) ಚಾಲನೆ ದೊರಕಲಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ (IMC-2022) ಆರನೇ ಆವೃತ್ತಿಯ ಉದ್ಘಾಟನೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ.
ಬಳಿಕ ಟೆಲಿಕಾಂ ಕಂಪನಿಗಳು 5ಜಿ ಸೇವೆಯನ್ನು ವಾಣಿಜ್ಯೋದ್ದೇಶಕ್ಕೆ ಬಿಡುಗಡೆಗೊಳಿಸಲಿವೆ. ರಿಲಯನ್ಸ್ ಜಿಯೊ ಮತ್ತು ಭಾರ್ತಿ ಏರ್‌ಟೆಲ್, ಅಕ್ಟೋಬರ್‌ನಲ್ಲಿ 5ಜಿ ಸೇವೆಗೆ ಚಾಲನೆ ನೀಡುವುದಾಗಿ ಘೋಷಿಸಿವೆ. ದೀಪಾವಳಿ ವೇಳೆಗೆ ಪ್ರಮುಖ ಮೆಟ್ರೊ ನಗರಗಳಲ್ಲಿ ಜನತೆಗೆ 5ಜಿ ಸೇವೆ ಲಭಿಸಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
6. Ocean 6 | ಆರನೇ ಮಹಾ ಸಾಗರ ಪತ್ತೆ ಹಚ್ಚಿದ ಸಂಶೋಧನಾ ತಂಡ!
ಭೂಮಿಯ ಮೇಲೆ ಅಂಟ್ಲಾಟಿಕ್, ಪೆಸಿಫಿಕ್, ಹಿಂದೂ ಮಹಾ ಸಾಗರ, ಅರ್ಕಾಟಿಕ್, ಸದರ್ನ್ ಓಷನ್… ಹೀಗೆ ಐದು ಮಹಾಸಾಗರ(Ocean)ಗಳಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಆದರೆ, ವಿಜ್ಞಾನಿಗಳು ಆರನೇಯ ಮಹಾ ಸಾಗರ ಇರುವಿಕೆಯ ಸಾಕ್ಷ್ಯಗಳನ್ನು ಕಂಡಿದ್ದಾರೆ. ಭೂಮಿಯ ಮೇಲಿನ ಮತ್ತು ಒಳಭಾಗದ ನಡುವಿನ ಭಾಗ(ಮ್ಯಾಂಟಲ್)ದಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಸಾಕ್ಷ್ಯಗಳು ಲಭ್ಯವಾಗಿವೆ. ಹಾಗಾಗಿ, ಇದು ಆರನೇ ಮಹಾಸಾಗರಕ್ಕೆ ಸಾಕ್ಷ್ಯ ಆಗಿದೆ ಎಂದು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
7. RBI Interest rate hike | ಆರ್‌ಬಿಐ ರೆಪೊ ದರ ಹೆಚ್ಚಳದಿಂದ ಸಾಲಗಳ ಇಎಂಐ ಎಷ್ಟು ಹೆಚ್ಚಲಿದೆ? ಇಲ್ಲಿದೆ ವಿವರ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೊ ದರವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳ ಬಡ್ಡಿ ದರಗಳಲ್ಲಿ ಏರಿಕೆಯಾಗಲಿದೆ. (RBI Interest rate hike) ಈ ಕುರಿತ ವಿವರ ಇಂತಿದೆ.
ಆರ್‌ಬಿಐ ರೆಪೊ ದರವನ್ನು 0.50% ಹೆಚ್ಚಿಸಿದ್ದು, 5.90%ಕ್ಕೆ ಏರಿಕೆಯಾಗಿದೆ. ಇದರ ಪರಿಣಾಮ ರೆಪೊ ದರ ಆಧಾರಿತ ಎಲ್ಲ ಸಾಲಗಳ ಮೇಲೂ ಆಗಲಿದೆ. ಸಾಮಾನ್ಯವಾಗಿ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಿಸುವ ವೇಳೆ ಇಎಂಐ ಬದಲಿಗೆ, ಇಎಂಐ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಆರ್‌ಬಿಐ ತನ್ನ ರೆಪೊ ದರ ಹೆಚ್ಚಿಸಿರುವ ಪರಿಣಾಮ ನಾನಾ ಬಗೆಯ ಸಾಲಗಳು ದುಬಾರಿಯಾಗಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
8. ಈ ವರ್ಷಾಂತ್ಯದೊಳಗೆ ಬಿಬಿಎಂಪಿ ಚುನಾವಣೆ ಫಿಕ್ಸ್ ; ಡಿ. 31ರೊಳಗೆ ಚುನಾವಣೆ ಮುಗಿಸಲು ಹೈಕೋರ್ಟ್ ಸೂಚನೆ
ಹಲವು ತಿಂಗಳುಗಳಿಂದ ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಬಿಬಿಎಂಪಿ ಚುನಾವಣೆ ವಿಚಾರವು ಕೊನೆಗೂ ಇತ್ಯರ್ಥಗೊಂಡಿದೆ. ಡಿಸೆಂಬರ್ 31 ರೊಳಗೆ ಬಿಬಿಎಂಪಿ ಚುನಾವಣೆಯನ್ನು ಮುಗಿಸಲು ಸೂಚಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೆ, ಮೀಸಲಾತಿ ಪಟ್ಟಿಯನ್ನು ಸರಿಪಡಿಸಲೂ ಗಡುವು ನೀಡಿದೆ.
ಬಿಬಿಎಂಪಿ ಮೀಸಲಾತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರ ಕೈಗೆತ್ತಿಕೊಂಡು ವಾದ-ಪ್ರತಿವಾದವನ್ನು ಆಲಿಸಿತು. ನ್ಯಾ.ಹೇಮಂತ್ ಚಂದನ್ ಗೌಡರ್ ಪೀಠದಲ್ಲಿ ವಿಚಾರಣೆ ನಡೆದಿದ್ದು, ಮೀಸಲಾತಿ ಪಟ್ಟಿ ಸರಿಪಡಿಸಲು 16 ವಾರಗಳ ಸಮಯ ಬೇಕು ಎಂದು ಸರ್ಕಾರದ ಪರವಾಗಿ ಎಎಜಿ ಧ್ಯಾನ್ ಚಿನ್ನಪ್ಪ ಅಫಿಡವಿಟ್ ಸಲ್ಲಿಸಿದರು. ಆದರೆ, ಈ ವಾದವನ್ನು ಒಪ್ಪದ ನ್ಯಾಯಪೀಠವು ನವೆಂಬರ್ 30ರ ಒಳಗೆ ಮೀಸಲಾತಿ ಪಟ್ಟಿ ಸರಿಪಡಿಸುವಂತೆ ಸರ್ಕಾರಕ್ಕೆ ಗಡುವು ನೀಡಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
9. Navaratri 2022 | ಸರಸ್ವತಿ ಪೂಜೆ ಎಂದು? ಪೂಜೆ ಹೇಗೆ ಮಾಡಬೇಕು?
ನವರಾತ್ರಿಯಲ್ಲಿ (Navaratri 2022) ಶಕ್ತಿ ದೇವಿಯರ ಜತೆಗೆ ವಿದ್ಯಾದೇವಿ ಸರಸ್ವತಿ ಪೂಜೆಯನ್ನೂ ನೆರವೇರಿಸಲಾಗುತ್ತದೆ. ನಮ್ಮೆಲ್ಲರ ಹೃದಯಾಂತರಾಳವನ್ನು ಪರಿಶುದ್ಧಗೊಳಿಸಿ, ನೀರಿನಂತೆ ಪ್ರವಹಿಸಿದಳಾಗಿರುವ ಕಾರಣದಿಂದ ಶಾರದೆಯನ್ನು ಇಲ್ಲಿ ಸರಸ್ವತಿ ಎಂದು ಕರೆಯಲಾಗುತ್ತದೆ. ಈ ಪೂಜೆಯನ್ನು ಎಂದು, ಹೇಗೆ ಮಾಡಬೇಕೆಂಬ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
10. ONDC | ಕೇಂದ್ರದಿಂದ ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ಪರ್ಯಾಯ ಒಎನ್‌ಡಿಸಿ ಬೆಂಗಳೂರಿನಲ್ಲೇ ಶುರು!
ಇ-ಕಾಮರ್ಸ್ ವಲಯದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಪ್ರಾಬಲ್ಯವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಇಂದು ಮಹತ್ತ್ವಾಕಾಂಕ್ಷೆಯ ಒಎನ್‌ಡಿಸಿ (Open Network for Digital Commerce- ONDC) ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಬೆಂಗಳೂರಿನಲ್ಲಿ ಇಂದು ಆರಂಭಿಸಿದೆ.
ಸರ್ಕಾರ ಸಣ್ಣ ವ್ಯಾಪಾರಸ್ಥರಿಗೆ ಇ-ಕಾಮರ್ಸ್ ವಹಿವಾಟಿಗೆ ಸಹಕರಿಸಲು ಹಾಗೂ ಅಮೆಜಾನ್ ಮತ್ತು ವಾಲ್‌ಮಾರ್ಟ್‌ನಂಥ ದಿಗ್ಗಜ ಕಂಪನಿಗಳ ಪಾರಮ್ಯವನ್ನು ನಿಯಂತ್ರಿಸಲು, ಅವುಗಳಿಗೆ ಪರ್ಯಾಯವಾಗಿ ಒಎನ್‌ಡಿಸಿಯನ್ನು ಆರಂಭಿಸಿದೆ. ಒಎನ್‌ಡಿಸಿಯಲ್ಲಿ ಸ್ಥಳೀಯ ವರ್ತಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಗ್ರಾಹಕರು ತಮಗೆ ಬೇಕಾದ ಮಾರಾಟಗಾರರಿಂದ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.