ಬೆಂಗಳೂರು: ದೇಶದ ಡಿಜಿಟಲ್ ಎಕಾನಮಿ ಶರವೇಗದ ಜತೆಯಲ್ಲೇ ವಂಚನೆ ಪ್ರಕರಣಗಳೂ ಹೆಚ್ಚುತ್ತಿದ್ದು, ಪೇಟಿಎಂ ಸೇರಿ ಚೀನಾ ಮೂಲದ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ರಾಜಕಾಲುವೆ ಒತ್ತುವರಿ ಸಂಬಂಧ ಮಹಿಳೆಯೊಬ್ಬರ ಕುರಿತು ಬಿಜೆಪಿ ಹಿರಿಯ ಶಾಸಕ ಅರವಿಂದ ಲಿಂಬಾವಳಿ ಆಡಿದ ಮಾತು ವಿವಾದಕ್ಕೀಡಾಗಿದೆ, ಬೆಂಗಳೂರು-ಮೈಸೂರು ದಶಪಥ ಕಾಮಗಾರಿ ಇದೀಗ ರಾಜಕೀಯ ಹಗ್ಗಜಗ್ಗಾಟದ ವೇದಿಕೆಯಾಗಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಪೇಟಿಎಂ, ರೇಜರ್ ಪೇ ಸೇರಿ ಚೈನೀಸ್ ಕಂಪನಿಗಳ ಮೇಲೆ ED ದಾಳಿ: ₹17 ಕೋಟಿ ವಶ
ಆನ್‌ಲೈನ್ ಮೂಲಕ ಸಾಲ ನೀಡುವ ಹಾಗೂ ಜನರನ್ನು ವಂಚಿಸುವ ಚೈನೀಸ್ ಮೊಬೈಲ್ ಆ್ಯಪ್ ಕಂಪನಿಗಳ ಬೆಂಗಳೂರು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ(ED) ಗುರುವಾರ ದಾಳಿ ನಡೆಸಿದೆ. ಚೀನಾದ ವ್ಯಕ್ತಿಗಳಿಂದ ನಿರ್ವಹಿಸಲ್ಪಡುತ್ತಿರುವ ಕಂಪನಿಗಳಿಗೆ ಸಂಬಂಧಿಸಿ ಬೆಂಗಳೂರಿನ ಆರು ಸ್ಥಳಗಳಲ್ಲಿ ದಾಳಿ ನಡೆದಿದ್ದು, ಪ್ರಸಿದ್ಧ ಆನ್‌ಲೈನ್ ವ್ಯವಹಾರಗಳ ಸಂಸ್ಥೆ ಪೇಟಿಎಂ, ರೇಜರ್‌ಪೇ ಸಹ ಸೇರಿವೆ. ಈ ಕುರಿತು ಜಾರಿ ನಿರ್ದೇಶನಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಅಕ್ರಮ ಹಣ ಸಂಗ್ರಹಣೆ ನಿಷೇಧ ಕಾಯ್ದೆ(PMLA) ಅಡಿಯಲ್ಲಿ ಚೈನೀಸ್ ಲೋನ್ ಆ್ಯಪ್ ವಿಚಾರವಾಗಿ ಬೆಂಗಳೂರಿನ ಆರು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಇಡಿ ತಿಳಿಸಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಬೆಂಗಳೂರು| ಅಹವಾಲು ಸಲ್ಲಿಸಲು ಬಂದ ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ಆವಾಜ್, ಆಕೆಯ ವಿರುದ್ಧ ಎಫ್‌ಐಆರ್
ರಾಜಕಾಲುವೆ ಒತ್ತುವರಿ ಸಂಬಂಧ ಗುರುವಾರ ಮಹಿಳೆಯೊಬ್ಬರ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಬಿಜೆಪಿ ಹಿರಿಯ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಕೇಳಿಬಂದಿದೆ. ಮಹಿಳೆಯೊಬ್ಬರು ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಮನವಿ ನೀಡಲು ಗುರುವಾರ ಮದ್ಯಾಹ್ನ ಬಂದಿದ್ದರು. ಆಗ ಶಾಸಕರು ಆ ಮಹಿಳೆಗೆ ಆವಾಜ್ ಹಾಕಿದ ದೃಶ್ಯ ಕಂಡುಬಂದಿತ್ತು. ಮಹಿಳೆ ನೀಡಲು ಬಂದ ಮನವಿ ಪತ್ರವನ್ನು ಕಸಿದುಕೊಂಡು ಲಿಂಬಾವಳಿ ಕೂಗಾಡಿದ್ದರು. ʼನಿಂಗೆ ಮಾನ ಮರ್ಯಾದೆ ಇದೆಯೇ? ನಾಚಿಕೆ ಆಗಲ್ವಾ ನಿಂಗೆ?ʼ ಎಂದು ಆವಾಜ್ ಹಾಕಿ ನಂತರ ಮಹಿಳೆಯನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗಲು ಪೊಲೀಸರಿಗೆ ಹೇಳಿದ್ದರು. ಬಳಿಕ ಮಾಧ್ಯಮಗಳ ಜತೆಗೆ ಮಾತನಾಡುವಾಗ ಲಿಂಬಾವಳಿ ಆಡಿದ ಮಾತು ವಿವಾದವನ್ನು ಮತ್ತೂ ಹೆಚ್ಚಿಸಿದೆ.
ಹೆಚ್ಚಿನ ಓದಿಗಾಗಿ: ಒಬ್ಬರೇ ಅಲ್ಲ ಲಿಂಬಾವಳಿ, ದೇಶಾದ್ಯಂತ ಇದೆ ಇಂಥ ರಾಜಕಾರಣಿಗಳ ಹಾವಳಿ!
3. ಸವಿಸ್ತಾರ ಅಂಕಣ | ಗಡಿಗಳ ಎಲ್ಲೆ ಮೀರಿ ಮನ್ನಣೆ ಗಳಿಸಿದ್ದ ಸಾವರ್ಕರ್! ಅವರ ಪರ ಹೋರಾಡಿದ್ದ ಮಾರ್ಕ್ಸ್ ಮೊಮ್ಮಗ!
ಸ್ವಾತಂತ್ರ್ಯ ಹೋರಾಟಗಾರರನ್ನು ಅವರವರ ಬದ್ಧತೆ, ದೇಶಭಕ್ತಿ, ಪರಿಶ್ರಮ ಹಾಗೂ ತ್ಯಾಗಗಳಿಂದ ಗೌರವಿಸುವ ಬದಲಿಗೆ ಸಣ್ಣಪುಟ್ಟ ಲೋಪಗಳನ್ನು ಹಿಡಿದು ಹೀಯಾಳಿಸುವ ಪದ್ಧತಿ ಆರಂಭವಾಗಿದೆ. ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರರ ದೇಶಭಕ್ತಿಯನ್ನು ಪ್ರಶ್ನಿಸುವ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯ ಹೋರಾಟಕ್ಕೆ ನೇರವಾಗಿ ಹಾಗೂ ಪರೋಕ್ಷವಾಗಿ ಸಾವರ್ಕರರ ಕೊಡುಗೆಯನ್ನು ತಿಳಿಸುವ ಸಂಗತಿಯ ಎರಡನೇ ಭಾಗ “ವಿಸ್ತಾರ ನ್ಯೂಸ್ʼ ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ್ ಕೋಣೆಮನೆ ಅವರ ಅಂಕಣ ʼಸವಿಸ್ತಾರʼದಲ್ಲಿ ಇಂದು ಮೂಡಿಬಂದಿದೆ. ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ.
4. ದಶಪಥದಲ್ಲಿ ₹800 ಕೋಟಿ ಭ್ರಷ್ಟಾಚಾರ: ಸಂಸದ ಪ್ರತಾಪ್ ಸಿಂಹ ವಿರುದ್ಧ ಜೆಡಿಎಸ್ ಶಾಸಕ ಆರೋಪ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಹಗರಣವೇ ನಡೆದಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಗಡಿ ಜೆಡಿಎಸ್ ಶಾಸಕ ಎ. ಮಂಜುನಾಥ್ ಆಗ್ರಹಿಸಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಬಂದು ಫೋಸ್ ಕೊಡುತ್ತಿದ್ದರು. ರಸ್ತೆಯನ್ನು ನಾವೇ ಮಾಡಿರೋದು ಎಂದು ತಮ್ಮನ್ನು ತಾವೇ ಹೊಗಳಿಕೊಂಡರು. ನಾನು ಪ್ರತಾಪ್ ಸಿಂಹ ಅವರನ್ನು ಕೇಳಲು ಬಯಸುತ್ತೇನೆ, ನೀವು ಯಾರಿಗೆ ಬ್ರಾಂಡ್ ಅಂಬಾಸಿಡರ್ ಹೇಳಿ. ಹೆದ್ದಾರಿ ಮಾಡುವ ಸಂಸ್ಥೆಯವರಿಗೆ ರಾಯಭಾರಿಯೇ? ಎಂದು ಪ್ರಶ್ನಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ನಿತಿನ್ ಗಡ್ಕರಿ ಅಂಗಳಕ್ಕೆ ದಶಪಥ ಫೈಟ್: ತಾವೂ ಭೇಟಿಯಾಗುವುದಾಗಿ ತಿಳಿಸಿದ ಸಚಿವ ಕೆ. ಗೋಪಾಲಯ್ಯ
5. ಮೂಲ ಸೌಕರ್ಯ ಸರಿಪಡಿಸದೆ ಇದ್ದರೆ ಬೆಂಗಳೂರಿನಿಂದ ವಲಸೆ: ಐಟಿ ಕಂಪನಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ
ರಾಜಧಾನಿಯ ಮೂಲ ಸೌಕರ್ಯಗಳಿಗೆ ಸಂಬಂಧಿಸಿ ಹಿರಿಯ ಉದ್ಯಮಿ ಮೋಹನ್ ದಾಸ್ ಪೈ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೇ ದೂರು ನೀಡಿದ ಬೆನ್ನಿಗೇ ಇದೀಗ ಸರಕಾರಕ್ಕೆ ಇನ್ನೊಂದು ಶಾಕ್ ಎದುರಾಗಿದೆ. ಸಂಚಾರ ಸಮಸ್ಯೆ, ಮಳೆ ಹಾನಿಗಳಿಂದ ನೂರಾರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿನ ಕಂಪನಿಗಳ ಸಂಘ (ಒರ್ಕಾ-ORRCA) ಮುಖ್ಯಮಂತ್ರಿಗಳಿಗೆ ಸುದೀರ್ಘ ಪತ್ರ ಬರೆದಿದೆ. ಇಲ್ಲಿನ ಅವ್ಯವಸ್ಥೆಗಳನ್ನು ಆದಷ್ಟು ಬೇಗ ಪರಿಹರಿಸುವಂತೆ ಮನವಿ ಮಾಡಿರುವ ಧ್ವನಿಯಲ್ಲಿಯೇ, ಇಲ್ಲಿನ ಸಮಸ್ಯೆಗಳಿಂದ ನೊಂದು ಇಲ್ಲಿನ ಐಟಿ ಮತ್ತು ಬ್ಯಾಂಕಿಂಗ್ ಕಂಪನಿಗಳು ಹೊರ ರಾಜ್ಯಕ್ಕೆ ವಲಸೆ ಹೋಗುವ ಬಗ್ಗೆಯೂ ಯೋಚಿಸುತ್ತಿವೆ ಎಂದು ತಣ್ಣಗೆ ಎಚ್ಚರಿಕೆ ನೀಡಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಹರ್ಷ ಹತ್ಯೆಗೆ ನಡೆದಿತ್ತು 15 ದಿನಗಳ ಸಂಚು: 750 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ NIA
ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಹತ್ಯೆಗೆ 15 ದಿನದಿಂದಲೂ ಸಂಚು ನಡೆಸಲಾಗಿತ್ತು ಎನ್ನುವುದೂ ಸೇರಿ ಅನೇಕ ಅಂಶಗಳನ್ನು 750ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ರೋಷನ್ ಭದ್ರಾವತಿಯಲ್ಲಿ ಮಾರಕಾಸ್ತ್ರಗಳನ್ನು ಖರೀದಿ ಮಾಡಿದ್ದ. ಬಂಧಿತ ಆರೋಪಿಗಳಲ್ಲಿ ಮೂವರನ್ನು ಹೊರತುಪಡಿಸಿ ಉಳಿದವರೆಲ್ಲ ಹಿಂದೆ ಹಲವಾರು ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆರೋಪಿಗಳೇ ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖವಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಮುರುಘಾಶ್ರೀ ಪ್ರಕರಣ| ಶ್ರೀಗಳಿಗೆ ಸೆ.5ರವರೆಗೆ ಜಾಮೀನಿಲ್ಲ, ಉಳಿದ 3 ಆರೋಪಿಗಳ ಬಂಧನಕ್ಕೆ ತಲಾಶ್
ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಪರವಾಗಿ ಕೋರ್ಟ್‌ನಲ್ಲಿ ಜಾಮೀನು ಆರ್ಜಿ ಸಲ್ಲಿಸಲಾಗಿದೆ. ಶ್ರೀಗಳ ಪರವಾಗಿ ವಕೀಲ ಉಮೇಶ್ ಅವರು ಚಿತ್ರದುರ್ಗ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸುವ ಸಾಧ್ಯತೆ ಇಲ್ಲ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ. ಇದರ ಜತೆಗೆ, ಮುರುಘಾ ಶ್ರೀಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯದ ನಾನಾ ಕಡೆ ಪ್ರತಿಭಟನೆಗಳು ನಡೆದಿವೆ.
8. Supreme Court | ಕೋರ್ಟ್ ಕಲಾಪಗಳಿಗೆ ಸಿಜೆಐ ಲಲಿತ್ ಶರವೇಗ, 4 ದಿನದಲ್ಲಿ 1,800 ಕೇಸ್ ವಿಲೇವಾರಿ!
ದೇಶದಲ್ಲಿ ನ್ಯಾಯದಾನ ನಿಧಾನ ಎಂಬ ಮಾತಿದೆ. ತಾಲೂಕು, ಜಿಲ್ಲೆ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರುವ ಪ್ರಕರಣಗಳ ವಿಲೇವಾರಿಗೆ ವರ್ಷಗಟ್ಟಲೆ ಬೇಕಾಗುತ್ತದೆ. ಆದರೆ, ಕೆಲವು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಿರುವ ಉದಯ್ ಉಮೇಶ್ ಲಲಿತ್ ಅವರು ಕೋರ್ಟ್ ಕಲಾಪಗಳಿಗೆ ಶರವೇಗ ನೀಡಿದ್ದಾರೆ. ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ಮೊದಲ ನಾಲ್ಕು ದಿನಗಳಲ್ಲಿ (4 Working Days) 1,800 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಈ ಕುರಿತು ವಕೀಲರ ಜತೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿಜೆಐ ಲಲಿತ್ ಅವರೇ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Ind vs Pak | ಅಗ್ರ ಕ್ರಮಾಂಕದ ಬ್ಯಾಟಿಂಗ್, ಡೆತ್ ಓವರ್ ಬೌಲಿಂಗ್ ಸುಧಾರಣೆಗೆ ಭಾರತ ತಂಡದ ಒತ್ತು
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಸೆಪ್ಟೆಂಬರ್ ೪ರಂದು ನಡೆಯಲಿರುವ ‘ಸಂಡೆ ಫೈಟ್’ಗೆ ವೇದಿಕೆ ಸಜ್ಜುಗೊಂಡಿದ್ದು, ಭಾರತ ತಂಡದ ಮ್ಯಾನೇಜ್ಮೆಂಟ್ ಅಗತ್ಯ ಸುಧಾರಣೆಗಳ ಕಡೆಗೆ ಚಿತ್ತ ನೆಟ್ಟಿದೆ. ಪ್ರಮುಖವಾಗಿ ಆರಂಭಿಕ ಬ್ಯಾಟಿಂಗ್ ವೈಫಲ್ಯ ಹಾಗೂ ಡೆತ್ ಓವರ್ ಬೌಲಿಂಗ್ ಬಿಗುಗೊಳಿಸುವ ಕಡೆಗೆ ಗಮನ ಹರಿಸುತ್ತಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕ್ ಎದುರು ಗೆಲುವು ಸಾಧಿಸಿರುವ ಹೊರತಾಗಿಯೂ ಕೆಲವೊಂದು ವೈಫಲ್ಯಗಳು ರಾರಾಜಿಸಿದ್ದವು. ಅವುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯುವ ನಿಟ್ಟಿನಲ್ಲಿ ಕೋಚ್ ರಾಹುಲ್ ದ್ರಾವಿಡ್ ರೂಪುರೇಷೆಗಳನ್ನು ರೂಪಿಸಲಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Rishi Sunak | ಬ್ರಿಟನ್ ಪಿಎಂ ರೇಸಿನಲ್ಲಿ ರಿಷಿ ಸುನಕ್ ಹಿಂದೆ ಬಿದ್ದಿದ್ದೇಕೆ? ಇಲ್ಲಿವೆ 7 ಕಾರಣ
ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ಬ್ರಿಟನ್‌ಗೆ ಹೊಸ ಸಾರಥಿ ಯಾರೆಂಬುದು ಸೋಮವಾರ ಸಾಯಂಕಾಲದ ಹೊತ್ತಿಗೆ ಗೊತ್ತಾಗಲಿದೆ. ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಾಯಕರನ್ನು ಆಯ್ಕೆ ಮಾಡುವ ಕನ್ಸರ್ವೇಟಿವ್ ಪಕ್ಷದ ಪ್ರಕ್ರಿಯೆಗಳು ಅಂತಿಮ ಘಟ್ಟಕ್ಕೆ ಬಂದಿವೆ. ಇದರ ಮಧ್ಯೆಯೇ, ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಏನೆಂದರೆ – ಮೊದಲಿನಿಂದಲೂ ಪಿಎಂ ರೇಸಿನಲ್ಲಿ ಮುಂದಿದ್ದ ರಿಷಿ ಸುನಕ್ ಇದ್ದಕ್ಕಿದ್ದಂತೆ ಹಿಂದೆ ಬಿದ್ದಿದ್ದೇಕೆ? ಈ ಕುರಿತು ಸಂಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.