Site icon Vistara News

ವಿಸ್ತಾರ TOP 10 NEWS | ಮತಾಂತರ ನಿಷೇಧಕ್ಕೆ ಸಮ್ಮತಿಯಿಂದ ಫೆಡರರ್‌ ವಿದಾಯದವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 15092022

ಬೆಂಗಳೂರು: ಸುಗ್ರೀವಾಜ್ಞೆ ಮೂಲಕ ಜಾರಿಯಾಗಿ, ವಿಧಾನಸಭೆ ಅನುಮೋದನೆ ಪಡೆದಿದ್ದ ಮತಾಂತರ ನಿಷೇಧ ಕಾಯ್ದೆ ವಿಧಾನ ಪರಿಷತ್‌ನಲ್ಲಿ ಒಪ್ಪಿಗೆ ಪಡೆದು ಈಗ ಅಧಿಕೃತವಾಗಿದೆ. ಇನ್ನು ರಾಜ್ಯಪಾಲರ ಅನುಮೋದನೆಯೊಂದೇ ಬಾಕಿ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಚರ್ಚೆ ನಡೆಸಲು ವಿಧಾನಸಭೆ ಒಪ್ಪಿದೆ, ರಾಜ್ಯಾದ್ಯಂತ ಎಂಜಿನಿಯರ್ಸ್‌ ಡೇ ಹಾಗೂ ಸರ್‌. ಎಂ.ವಿ. ಜನ್ಮದಿನ ಆಚರಿಸಲಾಗಿದೆ, ಉತ್ತರ ಕನ್ನಡದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಗೆ ರಾಜ್ಯ ಸರ್ಕಾರ ಆಘಾತ ನೀಡಿದೆ, 20 ಗ್ರ್ಯಾನ್‌ಸ್ಲಾಮ್‌ ವಿಜೇತ ಟೆನ್ನಿಸ್‌ ಆಟಗಾರ ರೋಜರ್‌ ಫೆಡರರ್‌ ವಿದಾಯ ಘೋಷಿಸಿದ್ದಾರೆ ಎನ್ನುವುದು ಸೇರಿ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಮತಾಂತರ ನಿಷೇಧ ಕಾಯಿದೆ ಈಗ ಅಧಿಕೃತ: ಕಾಂಗ್ರೆಸ್‌, ಜೆಡಿಎಸ್‌ ಸಭಾತ್ಯಾಗದ ನಡುವೆ ಮೇಲ್ಮನೆಯಲ್ಲೂ ವಿಧೇಯಕ ಪಾಸ್‌
ಬಲವಂತದ ಮತಾಂತರ, ಆಮಿಷದ ಮತಾಂತರಗಳನ್ನು ತಡೆಯುವ ಉದ್ದೇಶದ್ದೆಂದು ಹೇಳಲಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ (Anti conversion bill)ಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ಸಭಾತ್ಯಾಗದ ನಡುವೆ ವಿಧಾನ ಪರಿಷತ್‌ ಅಂಗೀಕಾರ ನೀಡಿದೆ. ಇದರೊಂದಿಗೆ ವಿಧಾನಸಭೆಯಲ್ಲಿ ಈಗಾಗಲೇ ಅನುಮೋದನೆ ಪಡೆದು ಸುಗ್ರೀವಾಜ್ಞೆಯ ಬಲದಲ್ಲಿ ಜಾರಿಯಲ್ಲಿದ್ದ ಈ ವಿಧೇಯಕ ಅಧಿಕೃತ ಕಾನೂನಾಗಿ ಜಾರಿಗೆ ಬರಲಿದೆ. ವಿಧೇಯಕವನ್ನು ವಿರೋಧಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದ ಬಳಿಕ ಧ್ವನಿಮತದಿಂದ ಅಂಗೀಕಾರವನ್ನು ನೀಡಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಅಧಿವೇಶನದ ಇನ್ನಷ್ಟು ಸುದ್ದಿಗಳು 👇🏾
🔴PSI Scam | ಕಾನೂನು ಸಚಿವರ Law ಪಾಯಿಂಟ್‌ಗೆ ತಲೆಯಾಡಿಸಿ ಸುಮ್ಮನಾದ ಲಾಯರ್‌ ಸಿದ್ದರಾಮಯ್ಯ !
🔴ʼಗೋಡೌನ್‌ʼ ರೀತಿ ರಂಗಮಂದಿರ ನಿರ್ಮಾಣ | ಕಾರ್ಯಾಂಗದ ಮೇಲೆ ಸ್ಪೀಕರ್‌ ಬೇಸರ; ಹೊಸ ನೀತಿ ಘೋಷಿಸಿದ ಸುನಿಲ್‌ಕುಮಾರ್‌

2. ಸರ್.ಎಂ.ವಿ.ಗೆ ಸರ್ಕಾರದ ಗೌರವ: ಮುಂದಿನ ವರ್ಷದ ಆಚರಣೆ ಘೋಷಿಸಿದ ಸಿಎಂ ಬೊಮ್ಮಾಯಿ
ಎಂಜಿನಿಯರ್ಸ್‌ ದಿನದಂದು ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಅವರಿಗೆ ರಾಜ್ಯ ಸರ್ಕಾರ ವಿಶೇಷ ಗೌರವ ಘೋಷಣೆ ಮಾಡಿದೆ. ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಷ್ಟೆ ಅಲ್ಲದೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಆಯೋಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಅರಣ್ಯಗಳ ಸಿವಿಲ್​ ಎಂಜಿನಿಯರ್​​ಗಳು ಯಾರೆಂದು ಗೊತ್ತಾ? ಅವರಿಗೂ ಶುಭ ಕೋರಬಹುದಾ?
ನೀವು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ವಿಶ್ವೇಶ್ವರಯ್ಯರ ಹತ್ತು ಹೇಳಿಕೆಗಳು ಇವು

3. ಉತ್ತರ ಪ್ರದೇಶದಲ್ಲಿ ದಲಿತ ಸೋದರಿಯರ ಬರ್ಬರ ಹತ್ಯೆ: ಶವ ಪರೀಕ್ಷೆ ವರದಿಯಲ್ಲೇನಿದೆ?
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಹತ್ಯೆಯಾದ ದಲಿತ ಸಹೋದರಿಯ ಪೋಸ್ಟ್ ಮಾರ್ಟಮ್​ ವರದಿ ಹೊರಬಿದ್ದಿದೆ. ಇವರಿಬ್ಬರ ಮೇಲೆ ಅತ್ಯಾಚಾರವಾಗಿದ್ದು ಶವಪರೀಕ್ಷೆಯಲ್ಲಿ ದೃಢಪಟ್ಟಿದೆ. ಈಗಾಗಲೇ ಬಂಧಿತರಾಗಿರುವ ಆರೋಪಿಗಳಾದ ಚೋಟು, ಜುನೈದ್, ಸೊಹೈಲ್, ಹಫೀಜುಲ್, ಕರಿಮುದ್ದೀನ್ ಮತ್ತು ಆರಿಫ್ ತಾವು ರೇಪ್​ ಮಾಡಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ ಮತ್ತು ತಾವೇನೆಲ್ಲ ಮಾಡಿದೆವು ಎಂಬುದನ್ನೂ ವಿವರಿಸಿದ್ದಾರೆ. ಆರು ಮಂದಿ ಆರೋಪಿಗಳು ನೀಡಿದ ವಿವರಣೆಯನ್ನು ಪೊಲೀಸರು ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. super speciality hospital | ಉತ್ತರ ಕನ್ನಡ ಜಿಲ್ಲೆ ಬೇಡಿಕೆ ತಿರಸ್ಕರಿಸಿದ ಸರ್ಕಾರ, ಆರ್ಥಿಕ ಇಲಾಖೆ ತಣ್ಣೀರು
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ (Super specialty hospital) ಸ್ಥಾಪಿಸಬೇಕು ಎಂದು ಆಗ್ರಹಿಸಿ ನಡೆದ ದೊಡ್ಡ ಮಟ್ಟದ ಹೋರಾಟಕ್ಕೂ ಫಲ ಸಿಕ್ಕಿಲ್ಲ. ರಾಜ್ಯ ಸರ್ಕಾರ ಈ ಭಾಗದ ಜನರು ಮತ್ತು ಬೆಂಗಳೂರಿನಲ್ಲಿರುವ ಉತ್ತರ ಕನ್ನಡವಾಸಿಗಳು ಮಾಡಿದ ಸಾಕಷ್ಟು ಪ್ರಯತ್ನಗಳು, ಕೊಟ್ಟ ಮನವಿಗಳು, ರಕ್ತದಲ್ಲಿ ಬರೆದ ಪತ್ರಗಳು ಯಾವುದೂ ಸದ್ಯಕ್ಕೆ ವರ್ಕ್‌ ಆದಂತೆ ಕಾಣುತ್ತಿಲ್ಲ. ರಾಜ್ಯ ಸರ್ಕಾರ ಉತ್ತರ ಕನ್ನಡದ ಜನರ ಬೇಡಿಕೆಗೆ ತಣ್ಣೀರು ಹಾಕಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ವಿಮ್ಸ್‌ ಆಸ್ಪತ್ರೆ ಸಾವಿನ ಹೊಣೆ ಹೊರದ ಸರ್ಕಾರ: ಆಕಸ್ಮಿಕವಲ್ಲ, ಕೊಲೆ ಎಂದ ಸಿದ್ದರಾಮಯ್ಯ
ವಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಉಂಟಾದ ಸಾವುಗಳು ಅಲ್ಲಿನ ವಿದ್ಯುತ್ ಕಡಿತದಿಂದ ಆಗಿದೆ ಎಂಬ ಕುರಿತು ಚರ್ಚೆ ನಡೆಯುತ್ತಿರುವಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಳಸಿದ ಪದಪ್ರಯೋಗ ಕೆಲಹೊತ್ತು ವಾಗ್ವಾದಕ್ಕೆ ಕಾರಣವಾಯಿತು.
ಹಳೆ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮೂವರು ರೋಗಿಗಳು ಮೃತಪಟ್ಟಿದ್ದಾರೆ. ವಿದ್ಯುತ್‌ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ವೆಂಟಿಲೇಟರ್ ಗೆ ವಿದ್ಯುತ್‌ ಸಂಪರ್ಕ ಕಡಿತವಾಗಿ ಮೃತಪಟ್ಟಿದ್ದಾರೆ. ವಿದ್ಯುತ್‌ ಇಲ್ಲದ ಸಂದರ್ಭದಲ್ಲಿ ಜನರೇಟರ್‌ ಅನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಿದ್ದು ಸರ್ಕಾರದ ಕರ್ತವ್ಯವಾಗಿತ್ತು. ಆದರೆ ವಿದ್ಯುತ್‌ ವೈಫಲ್ಯವಾಗಿ ಮೃತಪಟ್ಟಿದ್ದಾರೆ. ಇದು ಸರ್ಕಾರವೇ ರೂಪಿಸಿರುವ ಸಂಚು, ಕೊಲೆ. ಇದಕ್ಕೆ ಹೊಣೆ ಹೊತ್ತು ಕೂಡಲೆ ಪರಿಹಾರ ನೀಡಬೇಕು ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಬಳ್ಳಾರಿ ವಿಮ್ಸ್ ಆಸ್ಪತ್ರೆ ವಿದ್ಯುತ್‌ ಸಮಸ್ಯೆ: ಇಬ್ಬರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲು ಸಮಿತಿ ರಚನೆ

6. Hijab Row | ಸಮವಸ್ತ್ರ ಕುರಿತು ನಿಯಮ ರೂಪಿಸುವ ಹಕ್ಕು ಶಿಕ್ಷಣ ಸಂಸ್ಥೆಗಳಿಗಿದೆ ಎಂದ ಸುಪ್ರೀಂ ಕೋರ್ಟ್
ಕರ್ನಾಟದಲ್ಲಿ ಉಂಟಾದ ಹಿಜಾಬ್‌ ವಿವಾದದ‌ (Hijab Row) ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. “ಸಮವಸ್ತ್ರದ ಕುರಿತು ನಿಯಮ ರೂಪಿಸುವ ಅಧಿಕಾರ ಶಿಕ್ಷಣ ಸಂಸ್ಥೆಗಳಿಗಿದೆ” ಎಂದು ಹೇಳಿದೆ. ನ್ಯಾಯಾಲಯದ ಅಭಿಪ್ರಾಯವು ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿದಾರರಿಗೆ ಹಿನ್ನಡೆಯುಂಟು ಮಾಡಿದೆ ಎಂದೇ ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಡಿ.ಕೆ. ಶಿವಕುಮಾರ್‌ಗೆ ED ಸಂಕಷ್ಟ | ವಾರದಲ್ಲಿ ಹಾಜರಾಗಲು ಸಮನ್ಸ್‌: ಖಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ
ಅಕ್ರಮ ಹಣ ಸಂಗ್ರಹಣೆ ಹಾಗೂ ವರ್ಗಾವಣೆ ಪ್ರಕರಣಕ್ಕೆ ಸಂಬಂದಿಸಿ ವಿಚಾರಣೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿದೆ. ಸೆಪ್ಟೆಂಬರ್‌ 19ರಂದು ಹಾಜರಾಗುವಂತೆ ಹೇಳಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್‌ ಬಂಧನಕ್ಕೊಳಗಾಗಿದ್ದರು ಹಾಗೂ ಅನೇಕ ಬಾರಿ ವಿಚಾರಣೆಗೂ ಹಾಜರಾಗಿದ್ದರು. ಮುಂದಿನ ವಾರದಲ್ಲಿ ಹಾಜರಾಗಿ ವಿಚಾರಣೆ ಎದುರಿಸಿ ಎಂದು ಸಮನ್ಸ್‌ ನೀಡಲಾಗಿದೆ. ಸಮನ್ಸ್‌ ದೊರೆತಿರುವುದನ್ನು ಡಿ.ಕೆ. ಶಿವಕುಮಾರ್‌ ಖಚಿತಪಡಿದ್ದಾರೆ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ED ಎಂದರೆ ಜಾರಿ ನಿರ್ದೇಶನಾಲಯ ಅಲ್ಲ; ಹೊಸ ಹೆಸರು ನೀಡಿದ ಕಾಂಗ್ರೆಸ್‌ ನಾಯಕ ಸುರ್ಜೆವಾಲ

8. Modi Birthday | ಮೋದಿ ಫೋಟೊಗೆ ಹಾಲಿನ ಅಭಿಷೇಕ, ಹೋಮ-ಹವನ ನಡೆಸುವಂತಿಲ್ಲ: ಹಾಗಾದರೆ ಏನು ಮಾಡಲಾಗುತ್ತದೆ?
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್‌ಸಿ ಎನ್. ರವಿಕುಮಾರ್ ತಿಳಿಸಿದ್ದಾರೆ. ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕದಂತಹ ಕಾರ್ಯ ಮಾಡಬಾರದು. ಯುವಮೋರ್ಚಾದಿಂದ ಎಲ್ಲ ಜಿಲ್ಲೆಗಳಲ್ಲಿ ಒಟ್ಟು 11 ಸಾವಿರ ಯೂನಿಟ್ ರಕ್ತದಾನ ನಡೆಯಲಿದೆ. ದೇಶದಲ್ಲಿ ಇದೊಂದು ಗಿನ್ನೆಸ್ ದಾಖಲೆ ಆಗಬೇಕು ಎಂಬ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Sukesh Case | ‘ರಕ್ಕಮ್ಮ’ ಜಾಕ್ವೆಲಿನ್, ನೋರಾ ಬಳಿಕ ಇನ್ನೂ 4 ನಟಿಯರ ವಿಚಾರಣೆ ಸಾಧ್ಯತೆ
ಸುಕೇಶ್ ಚಂದ್ರಶೇಖರ್ 200 ಕೋಟಿ ರೂ. ಸುಲಿಗೆ (Sukesh Case) ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಮೂಲದ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ದಿಲ್ಲಿ ಪೊಲೀಸ್‌ ಆರ್ಥಿಕ ಅಪರಾಧ ವಿಂಗ್ 8 ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಡಿಸಿದೆ. ಈ ವಿಚಾರಣೆ ಬೆನ್ನಲ್ಲೇ ಬಾಲಿವುಡ್‌ನ ಕೆಲವು ನಟ- ನಟಿಯರು ವಿಚಾರಣೆಯ ಭಯವನ್ನು ಎದುರಿಸುತ್ತಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್‌ಗೆ ಒಟ್ಟು ಮೂರು ಸಮನ್ಸ್ ನೀಡಲಾಗಿತ್ತು. ಆಗಸ್ಟ್ 29 ಮತ್ತು ಸೆಪ್ಟೆಂಬರ್ 12ರ ಸಮನ್ಸ್‌ಗೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅಂತಿಮವಾಗಿ ಅವರು ಗುರುವಾರ ವಿಚಾರಣೆಗೆ ಹಾಜರಾಗಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Roger Federer | ವೃತ್ತಿ ಟೆನಿಸ್‌ಗೆ ವಿದಾಯ ಹೇಳಿದ ದಿಗ್ಗಜ ರೋಜರ್‌ ಫೆಡರರ್‌
೨೦ ಗ್ರ್ಯಾನ್‌ ಸ್ಲಾಮ್ ಪ್ರಶಸ್ತಿಗಳ ವಿಜೇತ ಸ್ವಿಜರ್ಲೆಂಡ್‌ನ ಟೆನಿಸ್ ತಾರೆ ರೋಜರ್‌ ಫೆಡರರ್‌ ವೃತ್ತಿ ಕ್ರೀಡೆಗೆ ಗುರುವಾರ ವಿದಾಯ ಘೋಷಿಸಿದ್ದಾರೆ. ಲೇವರ್‌ ಕಪ್‌ ೨೦೨೨ರ ಬಳಿಕ ಅಂತಾರಾಷ್ಟ್ರೀಯ ಟೆನಿಸ್‌ ಅಂಗಣದಿಂದ ಅವರು ಹೊರಕ್ಕುಳಿಯಲಿದ್ದು, ತಮ್ಮ ನಿವೃತ್ತಿಯ ಕುರಿತು ಸುದೀರ್ಘವಾದ ಪತ್ರವೊಂದನ್ನು ಬರೆದಿದ್ದಾರೆ. ಲೇವರ್‌ ಕಪ್‌ ಸೆಪ್ಟೆಂಬರ್‌೨೩ರಿಂದ ಲಂಡನ್‌ನಲ್ಲಿ ನಡೆಯಲಿದ್ದು, ATP ಟೂರ್‌ನ ಈ ಟೆನಿಸ್‌ ಟೂರ್ನಿ ಅವರ ವೃತ್ತಿ ಟೆನಿಸ್‌ನ ಕೊನೇ ಸ್ಪರ್ಧೆಯಾಗಿದೆ. ತಮ್ಮ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಧನ್ಯವಾದ ಹೇಳಿರುವ ಅವರು, ೪೧ ವರ್ಷವಾಗಿರುವುದರಿಂದ ಇದು ವಿದಾಯಕ್ಕೆ ಸೂಕ್ತ ಕಾಲ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version