Site icon Vistara News

ವಿಸ್ತಾರ TOP 10 NEWS | ಕೆಂಪು ಕೋಟೆಯಿಂದ ಚಾಮರಾಜಪೇಟೆವರೆಗೆ ತ್ರಿವರ್ಣ ಹಾಗೂ ಇನ್ನಿತರ ಸುದ್ದಿಗಳಿವು

Vistara TOP 10

ಬೆಂಗಳೂರು: ಸ್ವಾತಂತ್ರ್ಯದ 75ನೇ ವರ್ಷಾಚರಣೆಯನ್ನು ಅಭೂತಪೂರ್ವವಾಗಿ ದೇಶಕ್ಕೆ ದೇಶವೇ ಸಂಭ್ರಮಿಸಿದೆ. ಸರ್ಕಾರದ ಕರೆಯೊಂದಕ್ಕೆ ನಾಗರಿಕರು ಸ್ಪಂದಿಸಿದ ಪರಿ ಅದ್ಭುತ. ದೇಶಾದ್ಯಂತ ಸೋಮವಾರ ತ್ರಿವರ್ಣ ಧ್ವಜ ರಾರಾಜಿಸಿತು. ಕೆಂಪುಕೋಟೆ ಸೇರಿದಂತೆ ಎಲ್ಲೆಡೆ ನಡೆದ ಸರ್ಕಾರಿ ಹಾಗೂ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳೂ ಕಣ್ಸೆಳೆದವು. ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನೆರವೇರಿದೆ ಎನ್ನುವುದೂ ಸೇರಿದಂತೆ ದೇಶದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Independence Day | 25 ವರ್ಷದೊಳಗೆ ಅಭಿವೃದ್ಧಿ ಹೊಂದಿರುವ ದೇಶದ ಗುರಿ, ಪ್ರಧಾನಿ ಪಂಚ ಪ್ರಾಣ ಸಂಕಲ್ಪ
ಮುಂದಿನ 25 ವರ್ಷಗಳನ್ನು ನಾವು ಸಂಕಲ್ಪ ಶಕ್ತಿಯಿಂದ ಮುನ್ನಡೆಯಬೇಕಾಗಿದೆ. ಆ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲೇಬೇಕು. ( Independence Day ) ಅದಕ್ಕಾಗಿ ನಮ್ಮ ಪಂಚಪ್ರಾಣಗಳನ್ನು ಕೇಂದ್ರೀಕರಿಸಬೇಕಾಗಿದೆ. ಗುಲಾಮಿ ಮನಸ್ಥಿತಿ ನಿವಾರಣೆ, ಅತ್ಯುನ್ನತ ಭಾರತ, ದೇಶದ ಪರಂಪರೆಯ ಬಗ್ಗೆ ಹೆಮ್ಮೆ, ವಿವಿಧತೆಯಲ್ಲಿ ಏಕತೆ, ನಾಗರಿಕ ಕರ್ತವ್ಯದಲ್ಲಿ ನಿಷ್ಠೆಗಳು ನಮ್ಮ ಪಂಚಪ್ರಾಣಗಳಾಗಬೇಕು. ಈ ಮೂಲಕ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸಬೇಕು ಎಂದು ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿನ ತಮ್ಮ ಭಾಷಣದಲ್ಲಿ ತಿಳಿಸಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ನೆಹರೂರನ್ನು ಸ್ಮರಿಸಿದ ಪ್ರಧಾನಿ ಮೋದಿ; ಕರ್ನಾಟಕ ಬಿಜೆಪಿಗೆ ಇರಸುಮುರಸು! 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರಧಾನಿ ನರೇಂದ್ರ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ದೇಶವನ್ನು ಉದ್ದೇಶಿಸಿ ಮಾತನಾಡಿದರು. ಭಾಷಣ ಪ್ರಾರಂಭ ಮಾಡುತ್ತಿದ್ದಂತೆ ಅವರು ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಉಚ್ಚರಿಸಿ, ಅವರಿಗೆಲ್ಲ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. ಹೀಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವಾಗ ಪ್ರಧಾನಿ ಮೋದಿ, ಜವಾಹರ್​ ಲಾಲ್​ ನೆಹರೂ ಹೆಸರನ್ನೂ ಉಲ್ಲೇಖಿಸಿದ್ದು ಗಮನಾರ್ಹ. ನೆಹರೂರನ್ನು ಜಾಹೀರಾತಿನಿಂದ ಹೊರಗಿಟ್ಟಿದ್ದ ಕರ್ನಾಟಕ ಬಿಜೆಪಿ ನಾಯಕರಿಗೆ ಪರೋಕ್ಷವಾಗಿಯೇ ಇದರ ಬಿಸಿ ಮುಟ್ಟಿದಂತಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. ಕೆಪಿಸಿಸಿ ಆಯೋಜಿಸಿದ್ದ ಫ್ರೀಡಂ ಮಾರ್ಚ್‌ನಲ್ಲಿ ಸಾವಿರಾರು ಜನ ಭಾಗಿ, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಡಿ. ಕೆ. ಶಿವಕುಮಾರ್‌
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಫ್ರೀಡಂ ಮಾರ್ಚ್‌ನಲ್ಲಿ ರಾಜ್ಯದ ಅನೇಕ ಭಾಗಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು. ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ಆರಂಭವಾದ ಮಾರ್ಚ್‌, ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದವರೆಗೆ ಸಾಗಿತು. ರ‍್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಸೇರಿ ಅನೇಕರು ಭಾಗವಹಿಸಿದ್ದರು. ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಡಿ.ಕೆ. ಶಿವಕುಮಾರ್‌ ಸೇರಿ ಅನೇಕರು ಮಾತನಾಡಿದರು, ನಂತರ ಖ್ಯಾತ ಗಾಯಕ ಹರಿಹರನ್‌ ಸಂಗೀತ ಕಾರ್ಯಕ್ರಮ ಆಯೋಜನೆಯಾಗಿತ್ತು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. Independence day| ಕಂಠೀರವದಲ್ಲಿ ಬಿಜೆಪಿ ಠೇಂಕಾರ, ಕಾಂಗ್ರೆಸ್‌ನ ಭ್ರಮೆ ಕಳಚಿ ಗೆದ್ದು ಬರುತ್ತೇವೆ ಎಂದ ಬಿಎಸ್‌ವೈ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಭಾಗವಾಗಿ ಬೆಂಗಳೂರು ಜಿಲ್ಲಾ ಬಿಜೆಪಿಯು ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮ ಒಂದು ಹಂತಕ್ಕೆ ಬಿಜೆಪಿ ಸಮಾವೇಶವಾಗಿ ಮಾರ್ಪಟ್ಟಿತು. ಜತೆಗೆ ಕಾಂಗ್ರೆಸ್‌ ಆಯೋಜಿಸಿದ ಪಾದಯಾತ್ರೆಗೆ ಕೌಂಟರ್‌ ಅಟ್ಯಾಕ್‌ ಅಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು. ಬಿ.ಎಸ್‌. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಬಹುತೇಕ ಎಲ್ಲ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಶಕ್ತಿಯನ್ನು ವಿಜೃಂಭಿಸುವಂತೆ ಮಾಡಿದರು. ಜತೆಗೆ ಪ್ರತಿ ಪಕ್ಷಗಳಿಗೆ ಠಕ್ಕರ್‌ ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಂತೂ ಕಾಂಗ್ರೆಸ್‌ನ ಎಲ್ಲ ಭ್ರಮೆಗಳನ್ನು ಕಳಚಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಘೋಷಿಸಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

5. ಚಾಮರಾಜಪೇಟೆ ಮೈದಾನದಲ್ಲಿ ತಿರಂಗಾ ಅರಳಿತು, ಇನ್ನು ಗಣೇಶೋತ್ಸವ ಮಾಡಿಯೇ ಸಿದ್ಧ ಎಂದ ಶ್ರೀರಾಮ ಸೇನೆ
ಚಾಮರಾಜಪೇಟೆ ಮೈದಾನದಲ್ಲಿ ಬಿಗಿ ಭದ್ರತೆಯ ನಡುವೆ ಸ್ವಾತಂತ್ರ್ಯೋತ್ಸವ ಆಚರಣೆ ಯಶಸ್ವಿಯಾಗಿ ನಡೆದ ಬೆನ್ನಿಗೇ ಇಲ್ಲಿ ಗಣೇಶೋತ್ಸವವನ್ನೂ ಮಾಡಿಯೇ ಸಿದ್ಧ ಎಂದು ಶ್ರೀರಾಮ ಸೇನೆ ಘೋಷಿಸಿದೆ. ಧ್ವಜಾರೋಹಣ ನಡೆದ ಬೆನ್ನಿಗೇ ಪಟಾಕಿ ಸಿಡಿಸಿ ಸಂಭ್ರಮಿಸಿದ ಶ್ರೀರಾಮಸೇನೆಯ ಕಾರ್ಯಕರ್ತರು ಮುಂದೆ 250 ಅಡಿ ಧ್ಚಜಾ ಹಿಡಿದು ಗ್ರೌಂಡ್ ಸುತ್ತ ಘೋಷಣೆ ಕೂಗಲು ಸಿದ್ಧತೆ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಶ್ರೀರಾಮ ಸೇನೆ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ್‌, ಧ್ವಜಾರೋಹಣ ಮಾಡಿದ್ದು ಸಂತಸ ತಂದಿದೆ. ಮುಂದೆ ಇಲ್ಲಿ ಗಣೇಶೋತ್ಸವ, ಶಿವನ ಹಬ್ಬ ಎಲ್ಲವನ್ನೂ ಮಾಡುತ್ತೇವೆ ಎಂದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. ಶಿವಮೊಗ್ಗ ಉದ್ವಿಗ್ನ: ಸಾವರ್ಕರ್‌ ಭಾವಚಿತ್ರ ತೆರವು ಬೆನ್ನಲ್ಲೇ ಯುವಕನಿಗೆ ಇರಿತ
ಶಿವಮೊಗ್ಗದ ಅಮೀರ್‌ ಅಹಮದ್‌ ವೃತ್ತದಲ್ಲಿ ಇಟ್ಟಿದ್ದ ಸಾವರ್ಕರ್‌ ಫೋಟೊ ತೆಗೆದು ಟಿಪ್ಪು ಸುಲ್ತಾನ್‌ ಫೋಟೊ ಇಡಲು ಮುಂದಾದ ವಿವಾದ ತಾರಕಕ್ಕೇರುತ್ತಿದ್ದಂತೆಯೇ ಹಿಂದು ಯುವಕನನ್ನು ಚೂರಿಯಿಂದ ಇರಿಯಲಾಗಿದೆ. ಉಪ್ಪಾರ ಕೇರಿ ವಾಸಿ ಪ್ರೇಮ್ ಸಿಂಗ್( 22) ಎಂಬ ಯುವಕನ ಮೇಲೆ ಮೊದಲು ಹಲ್ಲೆ ಮಾಡಲಾಯಿತು. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Shivamogga tense| ಮಾಹಿತಿ ಪಡೆದ ಸಿಎಂ, ಎಸ್‌ಡಿಪಿಐ ಆರೋಪಿಗಳನ್ನು ಉಗ್ರರೆಂದು ಪರಿಗಣಿಸಲು ನಳಿನ್‌ ಆಗ್ರಹ
ಶಿವಮೊಗ್ಗದಲ್ಲಿ ಸಂಭವಿಸಿದ ಸಾವರ್ಕರ್‌-ಟಿಪ್ಪು ಫ್ಲೆಕ್ಸ್‌ ವಿವಾದಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಶಿವಮೊಗ್ಗ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಎಸ್‌ಡಿಪಿಐ ಸೇರಿದ ಆರೋಪಿಗಳನ್ನು ಉಗ್ರರೆಂದು ಎಂದು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡ ಬಳಿಕ ಡಿಜಿ ಐಪಿಪಿ ಪ್ರವೀಣ್‌ ಸೂದ್‌ ಅವರ ಜತೆ ಫೋನ್‌ನಲ್ಲಿ ಮಾತನಾಡಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. SBI Home loan| ಎಸ್‌ಬಿಐ ಗೃಹಸಾಲ ಬಡ್ಡಿ ದರ 0.2% ಏರಿಕೆ, ಇಎಂಐ ಇಂದಿನಿಂದಲೇ ಹೆಚ್ಚಳ
ದೇಶದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐ SBI Home loan ತನ್ನ ಗೃಹ ಸಾಲದ ಬಡ್ಡಿ ದರದಲ್ಲಿ ೦.೨% ಏರಿಕೆ ಮಾಡಿದೆ. ಬ್ಯಾಂಕ್‌ ತನ್ನ ಸಾಲದ ವಿತರಣೆಗೆ ತಗಲುವ ವೆಚ್ಚವಾದ ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್-ಬೇಸ್ಡ್‌ ಲೆಂಡಿಂಗ್‌ ರೇಟ್‌ (MCLR) ಅನ್ನು ಆಗಸ್ಟ್‌ ೧೫ರಿಂದ ಅನ್ವಯವಾಗುವಂತೆ ಏರಿಸಿದೆ. ಅಂದರೆ ಎಂಸಿಎಲ್‌ಆರ್‌ ಆಧಾರಿತ ಸಾಲದ ಬಡ್ಡಿ ದರವನ್ನು ವೃದ್ಧಿಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

9. Accident | ಬೀದರ್‌ ಬಳಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಮೃತ್ಯು, ಇನ್ನೊಬ್ಬ ಗಂಭೀರ
ಬೀದರ್‌ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೀದರ್ ತಾಲೂಕಿನ ಬಂಗೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತ ನಡೆದಿದ್ದು, ಎರ್ಟಿಗೋ ಕಾರು ಮತ್ತು ಕಂಟೇನರ್‌ಗಳ ನಡುವೆ ಡಿಕ್ಕಿ ನಡೆದಿದೆ. ನಾಲ್ವರು ಸ್ಥಳದಲ್ಲೇ ಸಾವು ಕಂಡಿದ್ದರೆ, ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಐವರಿಗೆ ಗಾಯಗಳಾಗಿವೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. ವಿಸ್ತಾರ 5G Info | 5G ನೆಟ್‌ವರ್ಕ್‌ ಹೇಗೆ ಕಾರ್ಯನಿರ್ವಹಿಸಲಿದೆ? ಸವಾಲುಗಳೇನು?
ಬಹು ನಿರೀಕ್ಷಿತ ೫ಜಿ ನೆಟ್‌ವರ್ಕ್‌ ಹೇಗೆ ಕಾರ್ಯನಿರ್ವಹಿಸುತ್ತದೆ (ವಿಸ್ತಾರ 5G Info) ಎಂಬ ಕುತೂಹಲ ನಿಮ್ಮಲ್ಲಿರಬಹುದು. 5ಜಿ ನೆಟ್‌ವರ್ಕ್‌ನಲ್ಲಿ ಒಂದು ಮೊಬೈಲ್‌ ನೆಟ್‌ ವರ್ಕ್‌ ಅನ್ನು ಸೆಲ್‌ಗಳಾಗಿ (cell) ವಿಭಜಿಸಲಾಗುವುದು. ಪ್ರತಿಯೊಂದು ಫೋನ್‌ ಕೂಡ ಒಂದು ಸೆಲ್‌ ಜತೆ ಸಂಪರ್ಕ ವನ್ನು ಹೊಂದಿರುತ್ತದೆ.
ಪ್ರತಿಯೊಂದು ಸೆಲ್‌ ಕೂಡ ಒಂದು ಸೆಲ್‌ ಟವರ್‌ ( cell tower) ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಸೆಲ್‌ ಟವರ್‌, ವೈರ್‌ಲೆಸ್‌ ಟ್ರಾನ್ಸಿವರ್‌ ಬೇಸ್‌ ಸ್ಟೇಷನ್‌ ಆಗಿರುತ್ತದೆ. ಈ ಬೇಸ್‌ ಸ್ಟೇಶನ್‌ ತನ್ನ ಸೆಲ್‌ನಲ್ಲಿರುವ ಎಲ್ಲ ಸಕ್ರಿಯ ಫೋನ್‌ಗಳಿಗೆ ವೈರ್‌ಲೆಸ್‌ ಸಂಪರ್ಕವನ್ನು ಒದಗಿಸುತ್ತದೆ. ವ್ಯಕ್ತಿಯೊಬ್ಬ ಕರೆ ಮಾಡುವಾಗ ರೇಡಿಯೊ ತರಂಗಗಳು ಸಮೀಪದ ಸೆಲ್‌ ಟವರ್‌ ಮೂಲಕ ಸಾಗಿ ವರ್ಗಾವಣೆಯಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version