ಬೆಂಗಳೂರು: ಮಳೆಗಾಲದ ಅಧಿವೇಶನವು ಹೆಸರಿಗೆ ತಕ್ಕಂತೆ ಬೆಂಗಳೂರು ಹಾಗೂ ರಾಜ್ಯಾದ್ಯಂತ ಮಳೆ ಹಾನಿ ಕುರಿತ ಚರ್ಚೆಗೆ ವೇದಿಕೆಯಾಗಿದೆ. ಮಳೆಯ ಕುರಿತು ಚರ್ಚೆ ನಡೆಯುವ ವೇಳೆ, ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯ ಕಾಮಗಾರಿಗಳವರೆಗೂ ವಾಗ್ವಾದ ನಡೆದಿದೆ. ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ನಡೆದಿದೆಯಾದರೂ ಈ ಬಾರಿಯೂ ವಿಐಪಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿದಂತೆ ಕಾಣುತ್ತಿದೆ. ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿ ಶಾಸಕ ದಡೇಸೂಗೂರು ಅವರಿಗೆ ನೀಡಿದ್ದು ಹಣವೇ ಅಲ್ಲ ಅದು ಸೀಬೆ ಹಣ್ಣು ಎಂಬ ಟ್ವಿಸ್ಟ್ ನೀಡಿದ್ದಾರೆ ಪರಸಪ್ಪ, ಭಾರತದಲ್ಲಿ ಪಿಕ್ಸೆಲ್ ಫೋನ್ ಉತ್ಪಾದನೆಗೆ ಗೂಗಲ್ ಉತ್ಸುಕವಾಗಿದೆ ಎನ್ನುವುದೂ ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ನಾವೂ ಕಪ್ಪು ಬಾವುಟ ತೋರಿಸಿ, ಮೊಟ್ಟೆ ಹೊಡೆದೇ ಬಂದಿದ್ದೀವಿ ಗೊತ್ತ?: ಸರ್ಕಾರಕ್ಕೆ ಸಿದ್ದರಾಮಯ್ಯ ಆವಾಜ್
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಕೊಡಗು ಜಿಲ್ಲೆಯ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಭೋಪ್ಪಯ್ಯ ಅವರ ವಿರುದ್ಧ ಒಂದು ಹಂತದಲ್ಲಿ ವ್ಯಘ್ರರಾದ ಸಿದ್ದರಾಮಯ್ಯ, ನಾವೂ ಕಪ್ಪು ಬಾವುಟ ತೋರಿಸಿಕೊಂಡೇ ಮೊಟ್ಟೆ ಹೊಡೆದೇ ಬಂದಿದ್ದೇವೆ. ನಾವು ಮನಸ್ಸು ಮಾಡಿದರೆ ರಾಜ್ಯಾದ್ಯಂತ ಮೊಟ್ಟೆ ಹೊಡೆಸುತ್ತೇವೆ ಎಂದು ಎಚ್ಚರಿಸಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
2. ಸಿದ್ದರಾಮಯ್ಯ ಬೋಟ್‌ನಲ್ಲಿ ಹೋದಾಗ ಎಷ್ಟು ನೀರಿತ್ತು?: ಮೊಣಕಾಲುದ್ದ ನೀರಿಗೆ ಇದು ಬೇಕಿತ್ತ ಎಂದ ಸಿಎಂ
ಬೆಂಗಳೂರಿನಲ್ಲಿ ಮಳೆಯಿಂದುಂಟಾದ ಹಾನಿಯ ಕುರಿತು ಚರ್ಚೆಯ ವೇಳೆಯಲ್ಲಿ ವಿಶೇಷ ಚರ್ಚೆಯೊಂದು ನಡೆಯಿತು. ಮಳೆ ಹಾನಿ ಪ್ರದೇಶಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದಾಗ ಬೋಟ್‌ನಲ್ಲಿ ಹೋದದ್ದೇಕೆ? ನಿಜಕ್ಕೂ ಅಲ್ಲಿ ಎಷ್ಟು ಅಡಿ ನೀರಿತ್ತು ಎಂಬ ಚರ್ಚೆ ಅನೇಕ ಹೊತ್ತು ನಡೆಯಿತು. ಮೊಣಕಾಲು ಉದ್ದ ಇದ್ದ ನೀರಲ್ಲಿ ಬೋಟ್‌ನಲ್ಲಿ ಹೋಗಿದ್ದೀರ. ಒಂದೂವರೆ ಅಡಿ ನೀರಿನಲ್ಲಿ ಅದ್ಯಾವ ಪುಣ್ಯಾತ್ಮ ಬೋಟ್‌ನಲ್ಲಿ ಕರೆದುಕೊಂಡು ಹೋದನೋ ಎಂದರು. ಅದ್ಯಾಕೊ ಚರ್ಚೆ ತಮ್ಮನ್ನೇ ಸುತ್ತಿಕೊಳ್ಳುತ್ತಿದೆ ಎಂದು ಅರಿತ ಸಿದ್ದರಾಮಯ್ಯ, ಚರ್ಚೆಗೆ ತಮ್ಮದೇ ಧಾಟಿಯಲ್ಲಿ ವಿರಾಮ ಹೇಳಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
3. 40% ಕಮಿಷನ್ | ಬಿಜೆಪಿ ಸರಕಾರದ ಮೇಲೆ 15,00,00,00,00,000 ರೂ. ಲೂಟಿ ಆರೋಪ, ಕಾಂಗ್ರೆಸ್‌ನಿಂದ ಲಂಚದ ಮೆನು!
ಒಂದು ಕಡೆ ವಿಧಾನ ಮಂಡಲದ ಅಧಿವೇಶನದಲ್ಲಿ ಬಿಜೆಪಿ ಸರಕಾರದ ವಿರುದ್ಧ ದೊಡ್ಡ ಹೋರಾಟಕ್ಕೆ ಪ್ಲ್ಯಾನ್ ಮಾಡಿರುವ ಕಾಂಗ್ರೆಸ್ ಅದೇ ಹೊತ್ತಿಗೆ ಹೊರಗೂ ಅಭಿಯಾನಕ್ಕೆ ಚಾಲನೆ ನೀಡಿದೆ. ಬಿಜೆಪಿ ವಿರುದ್ಧ ಇರುವ ೪೦% ಕಮಿಷನ್ ಆರೋಪವನ್ನೇ ಪ್ರಧಾನವಾಗಿಟ್ಟುಕೊಂಡು ಇದು ʻ೪೦% ಕಮಿಷನ್ ಸರಕಾರʼ ಎಂದು ಪ್ರಚಾರ ಮಾಡಲು ಮುಂದಾಗಿದೆ. ಬಿಜೆಪಿ ಸರಕಾರ ಲಂಚದಿಂದ ಲೂಟಿ ಮಾಡಿರುವ ಮೊತ್ತ ೧ ಲಕ್ಷ ೫೦ ಸಾವಿರ ಕೋಟಿ ರೂ. ಎಂದು ಕಾಂಗ್ರೆಸ್ ಆರೋಪಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಡಿಯೊ ಹಾಡು ಬಿಡುಗಡೆ ಮತ್ತು ಭ್ರಷ್ಟಾಚಾರದಿಂದ ನೊಂದವರಿಗೆ ಸಹಾಯ ಮಾಡಲು ಹೆಲ್ಪ್‌ಲೈನನ್ನು ಪ್ರಕಟಿಸಿದೆ. ಜತೆಗೆ ಯಾವುದಕ್ಕೆ ಎಷ್ಟು ಲಂಚ ಕೊಡಬೇಕು ಎಂಬ ಬಗ್ಗೆ ʻಲಂಚ ಕಾರ್ಡ್ʼ ನ್ನೂ ಬಿಡುಗಡೆ ಮಾಡಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
4. ಶಾಸಕರಿಗೆ ಬ್ಯಾಗ್‌ನಲ್ಲಿ ಕೊಟ್ಟಿದ್ದು ದುಡ್ಡಲ್ಲ, ಸೀಬೆ ಹಣ್ಣು!: PSI ಹಗರಣಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದ ಪರಸಪ್ಪ
ಪಿಎಸ್‌ಐ ಹಗರಣದಲ್ಲಿ ಅಭ್ಯರ್ಥಿಯೊಬ್ಬರಿಗೆ ನೌಕರಿ ಕೊಡಿಸಲು ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು 15 ಲಕ್ಷ ರೂ. ಪಡೆದಿದ್ದಾರೆ ಎಂಬ ಆರೋಪದ ಕುರಿತು ಸುದ್ದಿಗೋಷ್ಠಿ ನಡೆಸಿರುವ ಪರಸಪ್ಪ, ತಾವು ಶಾಸಕರಿಗೆ ಕೊಟ್ಟಿದ್ದು ಹಣವಲ್ಲ ಸೀಬೆ ಹಣ್ಣು ಎಂದಿದ್ದಾರೆ. ಒಟ್ಟಾರೆ ಪಿಎಸ್‌ಐ ಹಗರಣದ ಕುರಿತು ಮಾತನಾಡೇ ಇಲ್ಲ, ಇದ್ದಿದ್ದು ಜಮೀನು ವ್ಯಾಜ್ಯ ಎಂದೂ ತಿಳಿಸಿದ್ದಾರೆ. ಈ ವಿಚಾರವನ್ನು ಪಿಎಸ್‌ಐ ಹಗರಣ ಎಂದು ಆಡಿಯೊ, ವೀಡಿಯೊ ತಿರುಚಿ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ. ಇದರಲ್ಲಿ ಶಾಸಕರ ಪಾತ್ರ ಏನೂ ಇಲ್ಲ ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: 40% ಕಮಿಷನ್| ಕರ್ನಾಟಕವನ್ನು ಕರಪ್ಶನ್ ಕ್ಯಾಪಿಟಲ್ ಮಾಡಿದ ಬಿಜೆಪಿ ಸರಕಾರ: ಕಾಂಗ್ರೆಸ್ ತೀವ್ರ ವಾಗ್ದಾಳಿ
5. Rajakaluve Encroachment | ಶಾಸಕರ ಜಾಗವೆಂದು ಗೊತ್ತಿದ್ದರೂ ಡೆಮಾಲಿಷ್ ಮಾಡ್ತಿರಾ? ಎಷ್ಟು ಧೈರ್ಯ; ಹ್ಯಾರಿಸ್ ಪಿಎ ಧಮ್ಕಿ
“ವಿಥೌಟ್ ನೋಟಿಸ್, ವಿಥೌಟ್ ಮಾರ್ಕಿಂಗ್ ಹೇಗೆ ಡೆಮಾಲಿಷ್ ಮಾಡ್ತೀರಾ? ಈ ಜಾಗ ಶಾಸಕರದ್ದು ಅಂತ ಗೊತ್ತಿದ್ರೂ, ನೀವು ಡೆಮಾಲಿಷ್ ಮಾಡ್ತೀರಾ? ನಿಮಗೆಷ್ಟು ಧೈರ್ಯ?” ಹೀಗೆ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಆಪ್ತ ಸಹಾಯಕ ರಮೇಶ್ ಎಂಬುವವರು ಒತ್ತುವರಿ ತೆರವು (Rajakaluve Encroachment) ಮಾಡಲು ಬಂದ ಬಿಬಿಎಂಪಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ ರೀತಿ. ಬಿಬಿಎಂಪಿಯಿಂದ ನಡೆಯುತ್ತಿರುವ ಒತ್ತುವರಿ ತೆರುವ ಕಾರ್ಯಾಚರಣೆ ಭಾಗವಾಗಿ ಪಾಪ ರೆಡ್ಡಿ ಲೇಔಟ್‌ನಲ್ಲಿದ್ದ ಹ್ಯಾರಿಸ್ ಪುತ್ರ ನಲಪಾಡ್‌ಗೆ ಸೇರಿದ ಜಾಗದ ತೆರವು ವಿಚಾರವಾಗಿ ಭಾರಿ ಗೊಂದಲ ಹಾಗೂ ವಿವಾದ ಸೃಷ್ಟಿಯಾಗಿದೆ. ಈ ಸಂಬಂಧ ತೆರವು ಕಾರ್ಯಾಚರಣೆಗೆ ಬಂದ ಬಿಬಿಎಂಪಿ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಪ್ರಸಂಗ ನಡೆದಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Rajakaluve Encroachment | ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಿಂದಲೇ ರಾಜಕಾಲುವೆ ಒತ್ತುವರಿ!
6. India China Conflict | ಲಡಾಕ್‌ನ ವ್ಯೂಹಾತ್ಮಕ ಸ್ಥಳಗಳಿಂದ ಸೇನೆ ವಾಪಸ್, ಭಾರತ-ಚೀನಾ ಬಿಕ್ಕಟ್ಟು ಅಂತ್ಯ?
ಲಡಾಕ್‌ನ ಹಲವು ವ್ಯೂಹಾತ್ಮಕ ಪ್ರದೇಶಗಳಿಂದ ಭಾರತ ಹಾಗೂ ಚೀನಾದ ಸೈನಿಕರನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಕಳೆದ ಎರಡು ವರ್ಷಗಳಿಂದ ಉಭಯ ದೇಶಗಳ ಮಧ್ಯೆ ಉಂಟಾಗಿದ್ದ ಬಿಕ್ಕಟ್ಟು (India China Conflict) ಸಂಪೂರ್ಣವಾಗಿ ಶಮನವಾಗಿದೆ ಎಂದೇ ಹೇಳಲಾಗುತ್ತಿದೆ.
ಭಾರತ ಹಾಗೂ ಚೀನಾ ನಡುವೆ ಸೇನೆ ಮಟ್ಟದಲ್ಲಿ ೧೬ನೇ ಸುತ್ತಿನ ಮಾತುಕತೆ ಬಳಿಕ ಲಡಾಕ್ ಗಡಿಗಳಲ್ಲಿ ಯಥಾಸ್ಥಿತಿ ಕಾಪಾಡಲು ಎರಡೂ ದೇಶಗಳು ಮುಂದಾಗಿವೆ. ಅದರಲ್ಲೂ, ಎರಡು ವರ್ಷದಿಂದ ಮೊಂಡುತನ ಪ್ರದರ್ಶಿಸುತ್ತಿದ್ದ ಚೀನಾ ತನ್ನ ಸೈನಿಕರನ್ನು ಹಿಂಪಡೆದಿದೆ. ಇದಕ್ಕೆ ಭಾರತವೂ ಸಕಾರಾತ್ಮಕವಾಗಿ ಸ್ಪಂದಿಸಿ, ಎಲ್ಲ ಸೈನಿಕರನ್ನು ಹಿಂಪಡೆದಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
7. Essential Medicines | ಅಗತ್ಯ ಔಷಧಗಳ ಪಟ್ಟಿಗೆ ಧೂಮಪಾನ ವ್ಯಸನ ನಿವಾರಣೆಯ ಚಿಕಿತ್ಸೆ, ವೆಚ್ಚ ಅಗ್ಗ
ಧೂಮಪಾನ ವ್ಯಸನದಿಂದ ಬಿಡುಗಡೆ ಹೊಂದಬೇಕು ಮತ್ತು ಉತ್ತಮ ಆರೋಗ್ಯವನ್ನು ಗಳಿಸಿಕೊಳ್ಳಬೇಕು ಎಂದು (Essential Medicines) ಬಯಸುವವರಿಗೆ ಇಲ್ಲಿದೆ ಸಿಹಿ ಸುದ್ದಿ! ಕೇಂದ್ರ ಸರ್ಕಾರ ಧೂಮಪಾನದ ವ್ಯಸನಕ್ಕೆ ಸಿಲುಕಿರುವವರಿಗೆ ನೀಡುವ ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿಯನ್ನು ( Nicotine replacement therapy) ಅಗತ್ಯ ಔಷಧಗಳ ಪಟ್ಟಿಗೆ ಸೇರಿಸಿದೆ. (NLEM) ಇದರ ಪರಿಣಾಮ ಈ ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ದರಗಳು ಇಳಿಕೆಯಾಗಲಿದೆ. ಚಿಕಿತ್ಸೆಯ ವೆಚ್ಚ ಕಡಿಮೆಯಾಗಲಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
8. ಹಿಂದುಗಳೇ ಇರುವ ಇಡೀ ಹಳ್ಳಿಯನ್ನು ಕಬಳಿಸಿದ ವಕ್ಫ್ ಬೋರ್ಡ್; ಸಂಪೂರ್ಣ ಆಸ್ತಿಯ ಮಾಲೀಕತ್ವ ಅದರದ್ದೇ!
ಇಡೀ ಹಳ್ಳಿಗೆ ಹಳ್ಳಿಯ ಆಸ್ತಿಯನ್ನೇ ವಕ್ಫ್ ಮಂಡಳಿ ಕಬಳಿಸಿದ ವಿದ್ಯಮಾನ ತಮಿಳುನಾಡಿನಲ್ಲಿ ನಡೆದಿದೆ. ಇಲ್ಲಿನ ತಿರುಚ್ಚಿ ಸಮೀಪದ ತಿರುಚೆಂಥುರೈ ಎಂಬ ಗ್ರಾಮ ಹಿಂದು ಬಾಹುಳ್ಯವಿರುವ ಹಳ್ಳಿ. ಆದರೆ ಆ ಗ್ರಾಮದ ಆಸ್ತಿಯನ್ನು ತಮಿಳುನಾಡು ವಕ್ಫ್ ಬೋರ್ಡ್ ಇದೀಗ ಸಂಪೂರ್ಣವಾಗಿ ತನ್ನದಾಗಿಸಿಕೊಂಡಿದೆ. ಇದು ಹಳ್ಳಿಗರ ಪಾಲಿಗೆ ದೊಡ್ಡ ಶಾಕ್ ಕೊಟ್ಟಿದೆ. ವರ್ಷಾನುಗಟ್ಟಲೆ ಇಲ್ಲೇ ಇದ್ದು, ಈ ಭೂಮಿ, ಪ್ರದೇಶವೆಲ್ಲ ತಮ್ಮದೇ ಎಂದು ಬದುಕುತ್ತಿದ್ದ ಸ್ಥಳೀಯರು ಈಗ ಈ ನೆಲ ನಮ್ಮದಲ್ಲ ಎಂಬ ನೋವಿನಲ್ಲಿ ಇದ್ದಾರೆ.
ಇತ್ತೀಚೆಗೆ ಹಳ್ಳಿಯ ರಾಜಗೋಪಾಲ್ ಎಂಬುವರು ತಮ್ಮ 1 ಎಕರೆ 2 ಸೆಂಟ್ಸ್ ಭೂಮಿಯನ್ನು ರಾಜರಾಜೇಶ್ವರಿ ಎಂಬುವರಿಗೆ ಮಾರಲು ಹೊರಟಿದ್ದರು. ಅದರ ಮಾರಾಟ ಪ್ರಕ್ರಿಯೆ ನಡೆಸುವ ಸಲುವಾಗಿ ರಾಜಗೋಪಾಲ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದರು. ಆದರೆ ಅಲ್ಲಿ ಹೋದಾಗ ಅಧಿಕಾರಿಗಳು ಹೇಳಿದ ಮಾತು ಕೇಳಿ ಅಕ್ಷರಶಃ ದಂಗಾಗಿ ಹೋಗಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
9. ಇ- ಬೈಕ್ ಚಾರ್ಜಿಂಗ್ ಯುನಿಟ್‌ನಿಂದ ಹೋಟೆಲ್‌ಗೆ ಬೆಂಕಿ, 8 ಸಾವು
ತೆಲಂಗಾಣದ ಇ-ಬೈಕ್ ಶೋರೂಮ್‌ನಲ್ಲಿ ನಡೆದ ಬೆಂಕಿ ಆಕಸ್ಮಿಕ ದುರ್ಘಟನೆಯಲ್ಲಿ 8 ಮಂದಿ ನಿಧನರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸಿಕಂದರಾಬಾದ್‌ನ ಪಾಸ್‌ಪೋರ್ಟ್ ಕಚೇರಿಯ ಸಮೀಪದಲ್ಲಿರುವ ಇ-ಬೈಕ್ ಚಾರ್ಜಿಂಗ್ ಸ್ಟೇಶನ್ ಹಾಗೂ ಹೋಟೆಲ್‌ನಲ್ಲಿ ಈ ದುರ್ಘಟನೆ ನಡೆದಿದೆ. ಕಟ್ಟಡದ ಕೆಳಗಿನ ಭಾಗದಲ್ಲಿ ಇ- ಬೈಕ್ ಚಾರ್ಜಿಂಗ್ ಸ್ಟೇಶನ್ ಇದ್ದು, ಅಲ್ಲಿ ಹುಟ್ಟಿಕೊಂಡ ಬೆಂಕಿ ಮೇಲಿರುವ ಹೋಟೆಲ್ ಅನ್ನು ವ್ಯಾಪಿಸಿ ಈ ದುರ್ಘಟನೆ ಸಂಭವಿಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
10. Google | ಚೀನಾದಿಂದ ಭಾರತಕ್ಕೆ ಪಿಕ್ಸೆಲ್ ಸ್ಮಾರ್ಟ್‌ಫೋನ್ ಉತ್ಪಾದನಾ ಘಟಕ ಸ್ಥಳಾಂತರಕ್ಕೆ ಗೂಗಲ್ ಚಿಂತನೆ
ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಸಂಘರ್ಷ, ಕೋವಿಡ್ ಬಿಕ್ಕಟ್ಟು ಸೃಷ್ಟಿಸಿರುವ ಸಂಕೀರ್ಣ ಸವಾಲುಗಳ ಹಿನ್ನೆಲೆಯಲ್ಲಿ ತಂತ್ರಜ್ಞಾನ ದಿಗ್ಗಜ ಗೂಗಲ್ (Google) ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನಾ ಘಟಕದ ಕೆಲ ಭಾಗಗಳನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಗೂಗಲ್ 5-10 ಲಕ್ಷ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲು ಭಾರತೀಯ ಮೂಲದ ಕಂಪನಿಗಳಿಂದ ಬಿಡ್‌ಗಳನ್ನು ಆಹ್ವಾನಿಸಿದೆ. ಅಂದರೆ ಗೂಗಲ್‌ನ ಪಿಕ್ಸೆಲ್ ಫೋನ್‌ಗಳ ಒಟ್ಟು ವಾರ್ಷಿಕ ಉತ್ಪಾದನೆಯಲ್ಲಿ 10-20% ಪಾಲು ಇದಾಗಿದೆ. ಸ್ಥಳೀಯವಾಗಿ ಕಚ್ಚಾ ವಸ್ತುಗಳನ್ನು ಖರೀದಿಸುವ ಬಗ್ಗೆ ಭಾರತೀಯ ಉತ್ಪಾದಕರಿಂದ ವಿವರಗಳನ್ನೂ ಗೂಗಲ್ ಪಡೆದಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.