Site icon Vistara News

ವಿಸ್ತಾರ TOP 10 NEWS | ಬೀದಿಗೆ ಬಂದ ಪೇ ಸಿಎಂನಿಂದ PM ಅಂಗಳಕ್ಕೆ BMS ವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 23092022

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಪೇ ಸಿಎಂ ಅಭಿಯಾನವನ್ನು ಕಾಂಗ್ರೆಸ್‌ ತೀವ್ರಗೊಳಿಸಿದ್ದು, ಹಿರಿಯ ಕಾಂಗ್ರೆಸಿಗರೇ ಪೋಸ್ಟರ್‌ ಅಂಟಿಸಿದ್ದಾರೆ. ಪಿಎಫ್‌ಐ ಮೇಲಿನ ದಾಳಿ ಪ್ರಕರಣಗಳ ವಿಚಾರಣೆ ಮತ್ತಷ್ಟು ವೇಗ ಪಡೆದಿದೆ, ಬಿಎಂಎಸ್‌ ಟ್ರಸ್ಟ್‌ ವಿವಾದವನ್ನು ಪ್ರಧಾನಿ ಅಂಗಳಕ್ಕೆ ಒಯ್ಯುವುದಾಗಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ, ದಶಕದಿಂದ ನನೆಗುದಿಗೆ ಬಿದ್ದಿದ್ದ ನಾಡಗೀತೆ ಧಾಟಿ ವಿವಾದ ಮುಕ್ತಾಯ ಕಂಡಿದೆ, ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ, ದೇವನೂರು ಮಹಾದೇವ ಸೇರಿ ಏಳು ಸಾಹಿತಿಗಳ ಪಠ್ಯವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ ಎನ್ನುವುದೂ ಸೇರಿ ದಿನ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1️⃣. ಪೇಸಿಎಂ ಪೋಸ್ಟರ್‌ ಪ್ರಕರಣದಲ್ಲಿ ಬೀದಿಗಿಳಿದ ಕಾಂಗ್ರೆಸ್‌ ಹಿರಿಯರು, ಐವರು ಆರೋಪಿಗಳಿಗೆ ಜಾಮೀನು
ಪೇಸಿಎಂ (PayCM) ಪೋಸ್ಟರ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುವಾರ ಬಂಧನಕ್ಕೊಳಗಾಗಿದ್ದ, ಐವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ ಪ್ರಕಟಪಡಿಸಿದ ಹಾಗೂ ವಿವಿಧೆಡೆ ಪೋಸ್ಟರ್‌ ಅಂಟಿಸಿದ್ದ ಆರೋಪದ ಮೇಲೆ ಸಂಜಯ್, ಸಿದ್ಧಯ್ಯ, ವಿನೋದ್, ವಿಶ್ವಮೂರ್ತಿ, ಮದನ್ ಎಂಬುವವರನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದರು. ಈ ವೇಳೆ ತೀವ್ರ ವಿಚಾರಣೆಗೊಳಪಡಿಸಿ ಪ್ರಕರಣ ಸಂಬಂಧ ಮಾಹಿತಿಯನ್ನು ಕಲೆಹಾಕಿದ್ದರು. ಯುವ ಕಾಂಗ್ರೆಸ್‌ ಆರಂಭಿಸಿದ್ದ ಅಭಿಯಾನಕ್ಕೆ ಹಿರಿಯ ಕಾಂಗ್ರೆಸಿಗರೂ ಕೈಜೋಡಿಸಿದ್ದು, ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ ಪೋಸ್ಟರ್‌ ಅಂಟಿಸಿ ಪ್ರತಿಭಟನೆ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
⭕ ಡಿಕೆಶಿ ಗಮ್‌ ಹಾಕಿದರು, ಸಿದ್ದರಾಮಯ್ಯ ಪೋಸ್ಟರ್‌ ಅಂಟಿಸಿದರು, ಪೊಲೀಸರು ಕರೆದೊಯ್ದರು

2️⃣. PFI ಮೇಲಿನ ದಾಳಿ | NIA ಪ್ರಕರಣದಲ್ಲಿ ಆರೋಪಿಗಳು ದಿಲ್ಲಿಗೆ, CCB ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಬೆಂಗಳೂರಿನಲ್ಲಿ ನಡೆದ ಎನ್‌ಐಎ ದಾಳಿಯಲ್ಲಿ ಬಂಧಿತರಾದ ಏಳು ಮಂದಿ ಪಿಎಫ್‌ಐ ಮುಖಂಡರನ್ನು ದಿಲ್ಲಿಗೆ ಕರೆದೊಯ್ಯಲಾಗಿದೆ. ದೇಶದ ೧೩ ರಾಜ್ಯಗಳಲ್ಲಿ ಗುರುವಾರ ಬಂಧಿತರಾದ ಎಲ್ಲ ೪೫ ಮಂದಿಯನ್ನೂ ದಿಲ್ಲಿಗೆ ಕರೆದೊಯ್ದು ಅಲ್ಲಿನ ಸ್ಪೆಷಲ್‌ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಬೆಂಗಳೂರಿನ ಸಿಸಿಬಿ ಮತ್ತು ಪೂರ್ವ ವಿಭಾಗದ ಪೊಲೀಸರು ರಾಜ್ಯದ ನಾನಾ ಕಡೆ ನಡೆಸಿದ ದಾಳಿಯ ವೇಳೆ ಬಂಧಿತರಾದ ೧೪ ಮಂದಿ ಪಿಎಫ್‌ಐ ಮುಖಂಡರನ್ನು ೧೧ ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ:
ಮಗ ಉಗ್ರನಾದ ನೋವು: ಮಹಮ್ಮದ್‌ ಮಾಜ್‌ನ ತಂದೆ ಹೃದಯಾಘಾತದಿಂದ ನಿಧನ
ಉನ್ನತ ಶಿಕ್ಷಣ ಪಡೆದವರೇ ಯಾಕೆ ಉಗ್ರ ಸಂಘಟನೆಗಳ ಬಲೆಗೆ ಬೀಳುತ್ತಾರೆ? ಇಲ್ಲಿದೆ ಸ್ಪಷ್ಟ ಕಾರಣ

3️⃣. ಬಿಎಂಎಸ್‌ ಟ್ರಸ್ಟ್‌ ವಿವಾದ | ತನಿಖೆಗೆ ಒಪ್ಪದ ಸರ್ಕಾರ, ಪ್ರತಿಭಟನೆ ಬಿಡದ JDS: ವಿಧಾನಸಭೆ ಮುಕ್ತಾಯ
ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಎಂಎಸ್‌ ಟ್ರಸ್ಟ್‌ ಕುರಿತು ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ ನಡುವೆಯೇ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಠಾವಧಿಗೆ ಮುಂದೂಡಿಕೆಯಾಗಿದೆ.
ಸದನದಲ್ಲಿ ಬೆಳಗ್ಗೆ ಕಲಾ ಆರಂಭವಾದ ನಂತರ ಗಲಾಟೆಯಾಗಿದ್ದರಿಂದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಚೇರಿಯಲ್ಲಿ ಸಂಧಾನಸಭೆ ನಡೆಸಲಾಯಿತು. ಆದರೆ ತನಿಖೆ ನಡೆಸಲೇಬೇಕು, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದ ಜೆಡಿಎಸ್‌, ಸಂಧಾನಕ್ಕೆ ಒಪ್ಪಲು ನಿರಾಕರಿಸಿತು. ಜೆಡಿಎಸ್‌ ಸದಸ್ಯರ ಪ್ರತಿಭಟನೆ ನಡುವೆಯೇ ಕಾರ್ಯಕಲಾಪಗಳನ್ನು ನಡೆಸಿದ ಸ್ಪೀಕರ್‌ ಕಾಗೇರಿ, ಸದನವನ್ನು ಅನಿರ್ದಿಷ್ಠಾವಧಿಗೆ ಮುಂದೂಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಮೋದಿ ಅಂಗಳಕ್ಕೆ BMS ಟ್ರಸ್ಟ್‌ ವಿವಾದ: ʼಸಚಿವ ಅಶ್ವತ್ಥನಾರಾಯಣ + ಒಂದು ಕಾಣದ ಕೈʼ ಎಂದ ಕುಮಾರಸ್ವಾಮಿ

4️⃣. Audio | ನಾಡಗೀತೆಗೆ ಅನಂತಸ್ವಾಮಿ ಧಾಟಿ, ಪೂರ್ಣ ಸಾಹಿತ್ಯ: ದಶಕದ ಗೊಂದಲಕ್ಕೆ ರಾಜ್ಯ ಸರ್ಕಾರದಿಂದ ತೆರೆ
ನಾಡಗೀತೆಗೆ ನಿರ್ದಿಷ್ಟ ಸಮಯ ಹಾಗೂ ದಾಟಿ ನಿಗದಿ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ದಶಕಗಳಿಂದ ಇದ್ದ ಗೊಂದಲಕ್ಕೆ ರಾಜ್ಯ ಸರ್ಕಾರ ಇದೀಗ ಪೂರ್ಣ ವಿರಾಮ ಹಾಡಿದೆ. ಖ್ಯಾತ ರಾಗ ಸಂಯೋಜಕ ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ದಾಟಿಯಲ್ಲಿ ಕುವೆಂಪು ವಿರಚಿತ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ಈಗ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. ಯಾವುದೇ ಆಲಾಪ ಹಾಗೂ ಪುನರಾವರ್ತನೆ ಇಲ್ಲದಂತೆ ಎರಡು ನಿಮಿಷ ಮೂವತ್ತು ಸೆಕೆಂಡ್‌ಗಳಲ್ಲಿ ನಾಡಗೀತೆಯನ್ನು ಹಾಡಲು ಸಾಧ್ಯ ಎಂದು ತಜ್ಞರು ನೀಡಿದ ವರದಿ ಆಧರಿಸಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5️⃣. ಡಾ. ರಾಜಕುಮಾರ್‌ ಪಾಠಕ್ಕೆ ಕತ್ತರಿ: ದೇವನೂರು ಸೇರಿ ಏಳು ಸಾಹಿತಿಗಳ ಪಠ್ಯ ಬೋಧಿಸದಂತೆ ಶಿಕ್ಷಣ ಇಲಾಖೆ ತಡೆ
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವ್ಯಾಪ್ತಿಯ ಪಠ್ಯಪುಸ್ತಕ ರಚನೆ ಕುರಿತು ಗೊಂದಲಗಳಿದ್ದ ಸಮಯದಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದ ಏಳು ಸಾಹಿತಿಗಳ ಪಠ್ಯಗಳನ್ನು ಬೋಧನೆ ಮಾಡದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರಲ್ಲಿ ಡಾ. ರಾಜಕುಮಾರ್‌ ಅವರ ಪಠ್ಯವೂ ಸೇರಿದೆ. ಇದರಂತೆ ದೇವನೂರು ಮಹಾದೇವ ಸೇರಿ ಏಳು ಸಾಹಿತಿಗಳು ಬರೆದ ಪಠ್ಯವನ್ನು ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂದು ಕರ್ನಾಟಕ ಪಠ್ಯಪುಸ್ತಕ ಸಂಘ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6️⃣. Navratri 2022 | ನವರಾತ್ರಿ ನವವರ್ಣ: ವಿಸ್ತಾರ ಡಿಜಿಟಲ್ ಸಂಭ್ರಮ
ಮತ್ತೆ ನವರಾತ್ರಿ (Navratri 2022) ಬಂದಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸಂಭ್ರಮದಿಂದ ಆಚರಿಸುವ ಹಬ್ಬವಿದು. ಅತಿದೀರ್ಘಕಾಲ ನಡೆಯುವ ಧಾರ್ಮಿಕ ಹಬ್ಬ ಎಂಬ ಹೆಗ್ಗಳಿಕೆಯೂ ಈ ನವರಾತ್ರಿಯದು.
ನಿಮ್ಮ ಕುಟುಂಬದ ಮಹಿಳಾ ಸದಸ್ಯರು, ಬಂಧುಗಳು, ಸ್ನೇಹಿತರು, ಅಕ್ಕ-ಪಕ್ಕದ ಮನೆಯವರು, ಕಾಲೇಜು ಸಹಪಾಠಿಗಳು, ಸಹೋದ್ಯೋಗಿಗಳು, ಸಂಘ ಸಂಸ್ಥೆಯ ಸದಸ್ಯರು ಹೀಗೆ ನಿಮ್ಮ ಆಪ್ತರೊಂದಿಗೆ ನೀವು ಆ ದಿನದ ಬಣ್ಣದ ಉಡುಗೆ ತೊಟ್ಟು (ನೆನಪಿರಲಿ ಎಲ್ಲರೂ ನಿಗದಿತ ಒಂದೇ ವರ್ಣದ ದಿರಸು ಧರಿಸಿರಬೇಕು) ವಿಶೇಷ ರೀತಿಯಲ್ಲಿ ನಿಂತು ನೀವೇ ನಿಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಳ್ಳಿ. ಅದನ್ನು ನಮಗೆ ಕಳುಹಿಸಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7️⃣. STAY | ಯಡಿಯೂರಪ್ಪ ವಿರುದ್ಧದ ಲೋಕಾಯಕ್ತ ತನಿಖೆಗೆ ಸುಪ್ರೀಂ ಕೋರ್ಟ್‌ ತಡೆ, ಉಳಿದವರ ವಿಚಾರಣೆ ಅಬಾಧಿತ
ಮಾಜಿ ಮುಖ್ಯಮಂತ್ರಿ, ಬಿಜೆಪಿಯ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಅವರ ವಿರುದ್ಧದ ಲೋಕಾಯುಕ್ತ ತನಿಖೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ.
ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬಿಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಿ ನವೆಂಬರ್‌ ೨ರೊಳಗೆ ವರದಿ ನೀಡುವಂತೆ ಜನಪ್ರತಿನಿಧಿ ನ್ಯಾಯಾಲಯವು ಲೋಕಾಯುಕ್ತಕ್ಕೆ ಆದೇಶ ನೀಡಿತ್ತು. ಇದರಂತೆ ಲೋಕಾಯುಕ್ತ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆಗೆ ಮುಂದಾಗಿತ್ತು. ಇದರ ವಿರುದ್ಧ ಬಿಎಸ್‌ವೈ ಮತ್ತು ಇತರರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8️⃣. Brand story | ಗೌತಮ್‌ ಶಾಂತಿಲಾಲ್‌ ಅದಾನಿ ಮುಟ್ಟಿದ್ದೆಲ್ಲ ಚಿನ್ನ, ಏನಿದು ಕಮಾಲ್ ?!
ಅದಾನಿ ಸಮೂಹದ ಸಂಸ್ಥಾಪಕ ಗೌತಮ್‌ ಅದಾನಿ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರೂ, ಸ್ವಪ್ರಯತ್ನ, ಸಾಹಸದಿಂದ ಉದ್ಯಮಶೀಲರಾಗಿ ದಿಗ್ಗಜ ಸಮೂಹವನ್ನು ಕಟ್ಟಿ, ವಿಶ್ವದ ಎರಡನೇ ಶ್ರೀಮಂತರಾಗಿರುವುದು ಕಾರ್ಪೊರೇಟ್‌ ವಲಯದ ದಂತಕತೆ. ಇದು ಹೇಗಾಯಿತು? ಇಲ್ಲಿದೆ (Brand story) ಅದಾನಿ ಗ್ರೂಪ್‌ನ ಬ್ರಾಂಡ್‌ ಸ್ಟೋರಿ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9️⃣. SCST, OBC ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಮಹತ್ವದ ಘೋಷಣೆ
ರಾಜ್ಯದ ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳ ಹಾಗೂ ಹೆಚ್ಚಿನ ಮೀಸಲಾತಿ ವರ್ಗಕ್ಕೆ ಸೇರ್ಪಡೆ ಕುರಿತು ಶೀಘ್ರದಲ್ಲೆ ಸರ್ವಪಕ್ಷಗಳ ಸಭೆ ನಡೆಸಲಾಗುತ್ತದೆ ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮಹತ್ವದ ಘೋಷಣೆ ಮಾಡಿದ್ದಾರೆ. ನ್ಯಾ. ನಾಗಮೋಹನದಾಸ್‌ ಅವರ ಸಮಿತಿ ವರದಿ, ನ್ಯಾ. ಸುಭಾಷ್‌ ಆಡಿ ಅವರ ಸಮಿತಿ ವರದಿಗಳನ್ನು ಆಧಾರದಲ್ಲಿರಿಸಿಕೊಂಡು ಚರ್ಚೆ ಮಾಡಬೇಕಿದೆ. ಸರ್ವಪಕ್ಷಗಳ ಸದಸ್ಯರೂ ಈ ಕುರಿತು ಚರ್ಚೆ ನಡೆಸಬೇಕು. ಅಕ್ಟೋಬರ್‌ ಮೊದಲ ವಾರದಲ್ಲಿ ಸಭೆಯನ್ನು ಆಯೋಜಿಸಿ ನಿರ್ಧಾರ ಮಾಡಲಾಗುತ್ತದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

🔟. Bigg Boss kannada | ನಾಳೆಯಿಂದ ಶುರುವಾಗ್ತಿದೆ ಬಿಗ್ ಬಾಸ್ ಸೀಸನ್ 9: ಏನೆಲ್ಲ ವಿಶೇಷತೆ ಇದೆ?
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ಕ್ಕೆ (Bigg Boss kannada) ಕೌಂಟ್‌ಡೌನ್‌ ಶುರುವಾಗಿದೆ. ಇದರ ಗ್ರ್ಯಾಂಡ್‌ ಪ್ರೀಮಿಯರ್‌ ಸೆಪ್ಟೆಂಬರ್‌ 24ರ ಸಂಜೆ 6 ಗಂಟೆಗೆ ಶುರುವಾಗಲಿದೆ. ಈ ಶೋ ನಿತ್ಯ ರಾತ್ರಿ 9.30ಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಬಾರಿ ಪ್ರವೀಣರ ಜತೆ ನವೀನರು ಇರಲಿದ್ದಾರೆ ಎಂದು ಪ್ರೋಮೊದಲ್ಲಿ ಹೇಳಲಾಗಿದೆ. ಯಾರೆಲ್ಲ ಸ್ಪರ್ಧಿಗಳು ? ಹೊಸ ನಿಯಮ ಸೇಪರ್ಡೆ ಆಗಿದೆಯೇ? ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version