Site icon Vistara News

ವಿಸ್ತಾರ TOP 10 NEWS | ಕಾಂಗ್ರೆಸ್‌ ಅಧ್ಯಕ್ಷರಾಗಿ ಕನ್ನಡಿಗ ಖರ್ಗೆ ಆಯ್ಕೆ ಹಾಗೂ ಇನ್ನಿತರ ಪ್ರಮುಖ ಸುದ್ದಿಗಳಿವು

TOP 10 NEWS 19102022

ಬೆಂಗಳೂರು: ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಒಂದೇ ಕುಟುಂಬಕ್ಕೆ ಸೀಮಿತವಾಗಿದ್ದ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಅವರಿಗಿರಬಹುದಾದ ಸ್ವಾತಂತ್ರ್ಯ, ಎದುರಿಗಿರುವ ಸವಾಲುಗಳ ಚರ್ಚೆ ಬಿರುಸಾಗಿದೆ. ಭೂತಕೋಲ ಕುರಿತು ನಟನ ಟೀಕೆಗೆ ವಿರೋಧ ವ್ಯಕ್ತವಾಗಿದೆ, ವಾಹನ ಚಾಲನೆ ನಿಯಮದಲ್ಲಿ ಪ್ರಮುಖ ಬದಲಾವಣೆ ಆಗಿದೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಬೆದರಿಕೆಯ ತಂತ್ರಕ್ಕೆ ಮುಂದಾಗಿದೆ, ಮುರುಘಾಶ್ರೀ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ, ಪೇ ಸಿಎಂ-ಸೇ ಸಿಎಂ ಜಟಾಪಟಿ ಮುಂದುವರಿದಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Kharge Congress President | ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಗೆಲುವು

ಎಐಸಿಸಿ ಅಧ್ಯಕ್ಷ (Congress President) ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಶಶಿ ತರೂರ್ ಸೋಲು ಕಂಡಿದ್ದಾರೆ. ಈ ಮೂಲಕ ಕಳೆದ 22 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಮನೆತನ ಹೊರತಾದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾದಂತಾಗಿದೆ. ಹಾಗೆಯೇ, ಈ ಸ್ಥಾನವನ್ನು ವಹಿಸಿಕೊಳ್ಳುತ್ತಿರುವ ಕರ್ನಾಟಕದ ಎರಡನೇ ವ್ಯಕ್ತಿಯಾಗಿದ್ದಾರೆ. ತರೂರ್ ಅವರಿಗೆ 1072 ಮತಗಳು ಲಭಿಸಿದ್ದರೆ, ಖರ್ಗೆ ಅವರು 7897 ಮತಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ, ೪೧೬ ಮತಗಳು ಅಸಿಂಧುಗೊಂಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Kharge Congress President | ಬೆಲೆಯೇರಿಕೆ ವಿರುದ್ಧ ಹೋರಾಟ, ಅಧ್ಯಕ್ಷರಾದ ಬೆನ್ನಲ್ಲೇ ಕೇಂದ್ರಕ್ಕೆ ಖರ್ಗೆ ಎಚ್ಚರಿಕೆ

2. ಕ್ರೂರ ರಜಾಕಾರರಿಂದ ಪ್ರಾಣ ಉಳಿಸಿಕೊಂಡಿದ್ದ ಮಗು ಈಗ ಕಾಂಗ್ರೆಸ್‌ ಅಧ್ಯಕ್ಷ

ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಹೌದೇ ಅಲ್ಲವೇ ಎಂದು ಅನೇಕರು ಪ್ರಶ್ನಿಸುವುದುಂಟು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇಶದ ಪ್ರಮುಖ ಹುದ್ದೆ, ಸ್ಥಾನಗಳಲ್ಲಿ ಕೂರುವಂತಾದರೆ ಅಷ್ಟರ ಮಟ್ಟಿಗಾದರೂ ಅದನ್ನು ಪ್ರಜಾಪ್ರಭುತ್ವ ಎಂದು ಒಪ್ಪಿಕೊಳ್ಳಬಹುದು. ಭಾರತದಲ್ಲಿ ಒಂದು ಚಲನಶೀಲ ವ್ಯವಸ್ಥೆ ಜೀವಂತವಾಗುವುದಕ್ಕೆ ಮತ್ತೆಒಂದು ಉದಾಹರಣೆಯಾಗಿ ಮಲ್ಲಿಕಾರ್ಜುನ ಖರ್ಗೆ ಎಲ್ಲರ ಮುಂದಿದ್ದಾರೆ. ಆದರೆ ಅವರು ನಡೆದುಬಂದ ದಾರಿ ಸಲೀಸಾಗಿರಲಿಲ್ಲ. ಖರ್ಗೆ ಜೀವನ ಸಾಧನೆ ಕುರಿತ ಹಿನ್ನೋಟ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ | ಕಾಂತಾರ ಅಭಿಮಾನಿಗಳ ಕಿಡಿ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ʼಕಾಂತಾರʼ ಸಿನಿಮಾ ವಿರುದ್ಧ ನಟ ಚೇತನ್ ವಿವಾದಾತ್ಮಕ ಟ್ವೀಟ್ ಮಾಡಿ ಅನೇಕರ ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ. ʼʼಕಾಂತಾರ ಸಿನಿಮಾ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ಇದೆ. ಆದರೆ ಭೂತಕೋಲ ಹಿಂದೂ ಸಂಸ್ಕೃತಿ ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಸಿನಿಮಾದಲ್ಲಿ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆʼʼ ಎಂದು ಚೇತನ್‌ ಟ್ವೀಟ್‌ ಮಾಡಿದ್ದರು.‌ ಈ ಟ್ವೀಟ್ ಈಗ ಕನ್ನಡ ಸಿನಿಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಲವರು ಇದಕ್ಕೆ ಕಟು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ವಿಶೇಷ ಲೇಖನ: ಭೂತ ಕೋಲ ಯಾವುದೇ ಸಮುದಾಯಕ್ಕೆ ಸೀಮಿತವಾದುದಲ್ಲ, ನಟ ಚೇತನ್‌ಗೆ ತಿಳಿವಳಿಕೆ ಇಲ್ಲ!

4. Traffic Rules | ಸೀಟ್‌ ಬೆಲ್ಟ್‌ ದಂಡದ ಪ್ರಮಾಣ ಹೆಚ್ಚಳ; ಹಿಂಬದಿ ಸವಾರರಿಗೂ 1,000 ರೂ. ಫೈನ್‌!

ಕಾರು ಚಾಲನೆ ವೇಳೆ ಈವರೆಗೆ ಇದ್ದ ನಿಯಮಗಳು ಬದಲಾಗಿವೆ. ಕಾರು ಚಾಲಕ ಮತ್ತು ಪಕ್ಕದ ಆಸನದಲ್ಲಿದ್ದವರಿಗಷ್ಟೇ ಸೀಮಿತವಾಗಿದ್ದ ಸೀಟ್‌ ಬೆಲ್ಟ್‌ ಧಾರಣೆ ನಿಯಮ ಈಗ ಹಿಂಬದಿ ಸವಾರರಿಗೂ ಅನ್ವಯವಾಗುತ್ತದೆ. ಒಂದು ವೇಳೆ ಹಿಂಬದಿ ಸವಾರರು ಸೀಟ್‌ ಬೆಲ್ಟ್‌ ಹಾಕದಿದ್ದರೆ ಸಾವಿರ ರೂಪಾಯಿ ದಂಡವನ್ನು ವಿಧಿಸುವುದಾಗಿ ಸಂಚಾರಿ ಪೊಲೀಸರು (Traffic Rules) ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಈ ಹಿಂದೆ 500 ರೂಪಾಯಿ ದಂಡದ ಪ್ರಮಾಣವನ್ನೂ ಏರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Viral Video | ಪರೀಕ್ಷಾ ಕೇಂದ್ರದಲ್ಲಿ ಹಿಂದು ಯುವತಿಯರ ತಾಳಿ ಬಿಚ್ಚಿಸಿದರು, ಮುಸ್ಲಿಂ ಯುವತಿಯರನ್ನು ಬುರ್ಖಾ ಸಹಿತ ಒಳಗೆ ಬಿಟ್ಟರು!

ತೆಲಂಗಾಣದ ಅಡಿಲಾಬಾದ್​ನಲ್ಲಿ ನಡೆದ ಘಟನೆಯೊಂದರ ವಿಡಿಯೊ ವೈರಲ್​ ಆಗುತ್ತಿದ್ದು, ಅದನ್ನು ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಅದೊಂದು ಪರೀಕ್ಷಾ ಕೇಂದ್ರ. ಅಲ್ಲಿ ಪರೀಕ್ಷಾರ್ಥಿಗಳನ್ನು ಪರಿಶೀಲನೆ ಮಾಡಿ ಒಳಗೆ ಬಿಡಲಾಗುತ್ತಿದೆ. ಹೀಗೆ ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡುವವರು ಹಿಂದು ಯುವತಿಯರಿಂದ ಕಿವಿಯೋಲೆ, ಗೆಜ್ಜೆ, ಬಳೆ, ಉಂಗುರ, ಮೂಗಿನ ನತ್ತು ಅಷ್ಟೇ ಅಲ್ಲ, ಮಾಂಗಲ್ಯ (ತಾಳಿ)ವನ್ನೂ ಕಳಚಿಸಿ ಒಳಗೆ ಕಳಿಸಿದ್ದಾರೆ. ಆದರೆ ಬುರ್ಖಾ ಧರಿಸಿ ಬಂದ ಯುವತಿಯರನ್ನು ಯಾವುದೇ ತಕರಾರು ಇಲ್ಲದೆ, ಹಾಗೇ ಬುರ್ಖಾ-ಹಿಜಾಬ್​ ಧರಿಸಿದಂತೆಯೇ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ’-ಈ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು. ಇದಕ್ಕೆ ಬಿಜೆಪಿ, ವಿಶ್ವ ಹಿಂದು ಪರಿಷತ್‌ ಸೇರಿ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ODI World Cup | ಭಾರತಕ್ಕೆ ಹೋಗುವುದಿಲ್ಲ ಎಂದು ಬೆದರಿಕೆಯೊಡ್ಡಿದ ಪಾಕ್ ಕ್ರಿಕೆಟ್‌ ಮಂಡಳಿ

ಭಾರತ ತಂಡ ಮುಂಬರುವ ಏಷ್ಯಾ ಕಪ್‌ ಆಡಲು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿಕೆ ನೀಡಿರುವ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯೂ, ನಾವು ಕೂಡ ಭಾರತಕ್ಕೆ ಏಕ ದಿನ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದಾಗಿ ಹೇಳಿದೆ.‌ ಏಷ್ಯಾ ಕಪ್‌ ೨೦೨೩ರ ಆತಿಥ್ಯ ಪಾಕಿಸ್ತಾನಕ್ಕೆ ಲಭಿಸಿದೆ. ಆದರೆ, ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷರೂ ಆಗಿರುವ ಜಯ್‌ ಶಾ, ಟೂರ್ನಿ ತಟಸ್ಥ ತಾಣದಲ್ಲಿ ನಡೆಯುವ ಕಾರಣ ಭಾರತ ತಂಡ ಅಲ್ಲಿಗೆ ಹೋಗುವ ಪ್ರಮೇಯವೇ ಇರುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. PM Narendra Modi | DefExpo-2022ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿ ಆಯೋಜಿಸಲಾಗಿರುವ DefExpo-2022 ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡಿದರು. ಭಾರತೀಯ ರಕ್ಷಣಾ ವಲಯಕ್ಕೆ ಬಲ ನೀಡುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅತಿದೊಡ್ಡ ರಕ್ಷಣಾ ಪ್ರದರ್ಶನವನ್ನು ಗಾಂಧಿನಗರದಲ್ಲಿ ಹಮ್ಮಿಕೊಳ್ಳಲಾಗಿದೆ. Path to Pride ಥೀಮ್‌ ಆಧಾರದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಪ್ರದರ್ಶನವು 12ನೇ ಆವೃತ್ತಿಯಾಗಿದೆ. ಇಂಡಿಯಾ ಪೆವಿಲಿಯನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶಿ ತರಬೇತುದಾರ ಏರ್‌ಕ್ರಾಫ್ಟ್ ಎಚ್‌ಟಿಟಿ-40 ಅನಾವರಣಗೊಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. New expressway | ಬೆಂಗಳೂರು-ಮುಂಬಯಿ 5 ಗಂಟೆ ಪ್ರಯಾಣ? ನಿತಿನ್‌ ಗಡ್ಕರಿ ಭರವಸೆ

ಬೆಂಗಳೂರಿನಿಂದ ಮುಂಬಯಿಗೆ ಭವಿಷ್ಯದ ದಿನಗಳಲ್ಲಿ ರಸ್ತೆ ಮೂಲಕ ಕಾರಿನಲ್ಲಿ ಪ್ರಯಾಣಿಸುವುದಿದ್ದರೆ, ಕೇವಲ 5 ಗಂಟೆಗಳಲ್ಲಿ ತಲುಪಬಹುದು! (New expressway) ಹೀಗಾಗಿ ರೈಲು ಅಥವಾ ವಿಮಾನದ ಬದಲು ಕಾರಿನಲ್ಲಿ ಪ್ರಯಾಣಿಸುವ ಆಯ್ಕೆಯೂ ನಿಮ್ಮದಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ. ಬೆಂಗಳೂರು-ಮುಂಬಯಿ ನಡುವೆ ಗ್ರೀನ್‌ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ಯೋಜನೆ ಪೂರ್ಣವಾದ ಬಳಿಕ ಉಭಯ ನಗರಗಳ ನಡುವೆ ರಸ್ತೆ ಮೂಲಕ ಪ್ರಯಾಣಕ್ಕೆ 5 ಗಂಟೆ ಸಾಕು ಎಂದು ಸಚಿವರು ತಿಳಿಸಿದ್ದಾರೆ. ಈಗ 15 ಗಂಟೆ ಬೇಕಾಗುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Pay CM ಬಳಿಕ Say CM ಅಭಿಯಾನ: Say Rahul, Sonia, DK ಎಂದ ಬಿಜೆಪಿ

Pay CM ಅಭಿಯಾನ ಭಾರಿ ಸದ್ದು ಮಾಡಿದ ಬೆನ್ನಿಗೇ ಕಾಂಗ್ರೆಸ್‌ ಈಗ Say CM ಅಭಿಯಾನ ನಡೆಸುವ ಎಚ್ಚರಿಕೆ ನೀಡಿದೆ. ತಾನು ಕೇಳಿದ ಐವತ್ತು ಪ್ರಶ್ನೆಗಳಿಗೆ ಒಂದಕ್ಕೂ ಉತ್ತರ ಕೊಟ್ಟಿಲ್ಲ ಎನ್ನುವುದು ಕಾಂಗ್ರೆಸ್‌ ಆರೋಪ. ಹೀಗಾಗಿ ಪ್ರಶ್ನೆಗಳಿಗೆ ಉತ್ತರ ಕೊಡಿ, ಮಾತನಾಡಿ ಎನ್ನುವ ಆಗ್ರಹದೊಂದಿಗೆ ಏನಾದರೂ ಹೇಳಿ ಸಿಎಂ ಎಂಬರ್ಥದಲ್ಲಿ ʻSay CM’ ಅಭಿಯಾನ ಶುರು ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್‌ ಎಚ್ಚರಿಕೆ ಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ಪ್ರತಿ ಅಭಿಯಾನ ಶುರು ಮಾಡಿದೆ. ಅದು ಪ್ರಧಾನವಾಗಿ ಸೋನಿಯಾ ಗಾಂಧಿ, ರಾಹುಲ್‌ ಮತ್ತು ಡಿಕೆಶಿ ಅವರನ್ನು ಟಾರ್ಗೆಟ್‌ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಮುರುಘಾ ಶ್ರೀ | ಒಡನಾಡಿ ಸೇವಾ ಸಂಸ್ಥೆಯಿಂದ ಮತ್ತೊಂದು ದೂರು

ಮುರುಘಾ ಮಠದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಜತೆಗೆ, ಇಬ್ಬರು ಬಾಲಕಿಯರ ಅಕ್ರಮ ವಶದ ದೂರು ಕೂಡ ದಾಖಲಾಗಿದೆ. ಇದೀಗ ಮೈಸೂರಿನ ಒಡನಾಡಿ ಸಂಸ್ಥೆ ಈ ಬಗ್ಗೆ ಇನ್ನೊಂದು ದೂರು ನೀಡಿದೆ. ಎರಡು ವರ್ಷಗಳ ಹಿಂದೆ ಮಠದಿಂದ ಹೊರ ಹೋಗಿದ್ದ ಬಾಲಕಿಯೊಬ್ಬಳ ಅತ್ಯಾಚಾರ ನಡೆದಿದ್ದು, ಕೊಲೆಯಾಗಿ ಪತ್ತೆಯಾಗಿದ್ದಳು. ಇಲ್ಲಿವರೆಗೂ ಈ ಬಗ್ಗೆ ಸಿಡಬ್ಲ್ಯೂಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 50 ಲಕ್ಷ ರೂಪಾಯಿ ಅಪಘಾತ ವಿಮೆ; ಎಸ್‌ಬಿಐ ಜತೆ ಒಡಂಬಡಿಕೆಗೆ ಸಹಿ
Narendra Modi | ಇಂಗ್ಲಿಷ್‌ ಮಾಧ್ಯಮ ಅಷ್ಟೆ, ಅದು ಬೌದ್ಧಿಕ ಸಾಮರ್ಥ್ಯದ ಅಳತೆಗೋಲು ಅಲ್ಲ ಎಂದ ಮೋದಿ
Oil | ಐರೋಪ್ಯ ನಿಷೇಧ ಸನ್ನಿಹಿತ, ಭಾರತದ ಐಒಸಿ, ಎಚ್‌ಪಿಸಿಎಲ್‌ನಿಂದ ರಷ್ಯಾ ತೈಲ ಖರೀದಿ ಸ್ಥಗಿತ
Deepavali | ಟಿಕೆಟ್‌ ದರದಲ್ಲಿ ಭಾರಿ ಹೆಚ್ಚಳ; ವಿಮಾನಕ್ಕಿಂತ ಖಾಸಗಿ ಬಸ್ ಟಿಕೆಟ್‌ ದರವೇ ದುಬಾರಿ!

Exit mobile version