Site icon Vistara News

ವಿಸ್ತಾರ TOP 10 NEWS | ಮಂಗಳೂರಲ್ಲಿ ಮೋದಿ ಹವಾದಿಂದ ರಿಷಿ ಸುನಕ್‌ ಸೋಲುವರೆಗಿನ ಪ್ರಮುಖ ಸುದ್ದಿಗಳಿವು

Vistara TOP 10 02092022

ಬೆಂಗಳೂರು: ದಕ್ಷಿಣ ಕನ್ನಡದಲ್ಲಿ ಬಹುದಿನಗಳ ನಿರೀಕ್ಷೆಯ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ನೆರವೇರಿದೆ. ಕೇಂದ್ರ ಸರ್ಕಾರವು ಅಭಿವೃದ್ಧಿ ದೃಷ್ಟಿಕೋನದಲ್ಲಿ ಮುನ್ನಡೆಯುತ್ತಿರುವುದನ್ನು ಮೋದಿ ವಿವರಿಸಿದ್ದಾರೆ. ಮುರುಘಾಶ್ರೀಗಳ ವಿರುದ್ಧದ ಪ್ರಕರಣದಲ್ಲಿ ನಾಲ್ಕು ದಿನ ಪೊಲೀಸ್‌ ಕಸ್ಟಡಿಗೆ ವಹಿಸಲಾಗಿದೆ, 2016ರಲ್ಲಿ ತಮಗೆ ಲಭಿಸಿದ್ದ ಬಸವಶ್ರೀ ಪ್ರಶಸ್ತಿಯನ್ನು ಲೇಖಕ ಪಿ. ಸಾಯಿನಾಥ್‌ ವಾಪ್ಸಿ ಮಾಡಿದ್ದಾರೆ, ನೌಕಾದಳದ ಧ್ವಜದಲ್ಲಿದ್ದ ಸೇಂಟ್‌ ಜಾರ್ಜ್‌ ಕ್ರಾಸ್‌ ಅನ್ನು ತೆಗೆಯಲಾಗಿದೆ, ದೇಶಕ್ಕೆ ಐಎನ್‌ಎಸ್‌ ವಿಕ್ರಾಂತ್‌ ಸಮರ್ಪಣೆಯಾಗಿದೆ ಎಂಬುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Modi in Mangalore | ಜನರ ಆಕಾಂಕ್ಷೆಯೇ ನಮಗೆ ಆದೇಶ: ಮಂಗಳೂರಿನಲ್ಲಿ ಮೋದಿ ಹವಾ
ದೇಶವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡೊಯ್ಯಬೇಕೆಂದರೆ ಜನರ ಆಕಾಂಕ್ಷೆಗಳಿಗೆ ತಕ್ಕಂತೆ ನಡೆಯಬೇಕು ಎನ್ನುವುದನ್ನು ನಾವು ಅರಿತಿದ್ದೇವೆ. ಹಾಗಾಗಿ ಜನರ ಆಕಾಂಕ್ಷೆಗಳೇ ನಮಗೆ ಆದೇಶವಿದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ (Modi in Mangalore) ತಿಳಿಸಿದ್ದಾರೆ. ಮಂಗಳೂರಿನ ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಆಯೋಜಿಸಿದ್ದ ಸುಮಾರು 3,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸಮಾವೇಶದಲ್ಲಿ ನೆರೆದಿದ್ದ ಬೃಹತ್‌ ಜನಸ್ತೋಮವನ್ನುದ್ದೇಶಿಸಿ ಮೋದಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಪ್ರವಾಸದ ಎಲ್ಲ ಸುದ್ದಿಗಳನ್ನೂ ಒಂದೇ ಕಡೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

2. ಮುರುಘಾಶ್ರೀ ಪ್ರಕರಣ | ಶ್ರೀಗಳನ್ನು ಕಟಕಟೆಯಲ್ಲಿ ನಿಲ್ಲಿಸಿದ ಜಡ್ಜ್‌, 4 ದಿನ ಕಸ್ಟಡಿ, ಆಸ್ಪತ್ರೆ ಹೈಡ್ರಾಮಾಕ್ಕೆ ತೆರೆ
ಗುರುವಾರ ರಾತ್ರಿ ಬಂಧಿತರಾದ ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಅಂದರೆ ಅವರು ಸೆ.೫ರವರೆಗೆ ಪೊಲೀಸ್‌ ಕಸ್ಟಡಿಯಲ್ಲಿ ಇರಬೇಕಾಗುತ್ತದೆ. ಶ್ರೀಗಳನ್ನು ಅನಾರೋಗ್ಯದ ನೆಪ ಒಡ್ಡಿ ತನಗೆ ತಿಳಿಸದೆಯೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ನ್ಯಾಯಾಧೀಶರು ಜೈಲು ಅಧೀಕ್ಷಕರ ವಿರುದ್ಧ ಕೋರ್ಟ್‌ ಗರಂ ಆದರು. ಈ ನಡುವೆ ವಿಚಾರಣೆ ವೇಳೆ ಶ್ರೀಗಳನ್ನು ಕಟಕಟೆಯಲ್ಲಿ ನಿಲ್ಲಿಸಿದ ಘಟನೆಯೂ ನಡೆಯಿತು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮುರುಘಾ ಶ್ರೀ ಬಂಧನ, ವಿಚಾರಣೆ ಕುರಿತು ಎಲ್ಲ ಸುದ್ದಿಗಳನ್ನೂ ಒಂದೇ ಕಡೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

3. ಮುರುಘಾಶ್ರೀ ಪ್ರಕರಣ | ಶ್ರೀಗಳ ಬಂಧನದ ಬೆನ್ನಲ್ಲೇ ಪಿ.ಸಾಯಿನಾಥ್‌ರಿಂದ ಬಸವಶ್ರೀ ಪ್ರಶಸ್ತಿ ವಾಪಸ್‌!
ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಚಿತ್ರದುರ್ಗ ಮಠದ ಡಾ.ಶಿವಮೂರ್ತಿ ಮುರುಘಾಶರಣರನ್ನು ಬಂಧಿಸಿ, ಅವರನ್ನು ಪೊಲೀಸ್‌ ಕಸ್ಟಡಿಗೆ ವಹಿಸಿದ ಬೆನ್ನಲ್ಲೇ ಹಿರಿಯ ಪತ್ರಕರ್ತ, ಲೇಖಕ ಪಿ.ಸಾಯಿನಾಥ್‌ ಅವರು ಬಸವಶ್ರೀ ಪ್ರಶಸ್ತಿಯನ್ನು ವಾಪಸ್‌ ಮಾಡಿದ್ದಾರೆ. ಮುರುಘಾ ಮಠವು ಪ್ರತಿ ವರ್ಷ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ನೀಡುತ್ತದೆ. ಅದರಂತೆ, ಪಿ. ಸಾಯಿನಾಥ್‌ ಅವರಿಗೆ ೨೦೧6ರಲ್ಲಿ ಬಸವಶ್ರೀ ಪ್ರಶಸ್ತಿ ನೀಡಲಾಗಿತ್ತು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Britain PM | ಬ್ರಿಟನ್ ಮುಂದಿನ ಪ್ರಧಾನಿ ಲಿಜ್ ಟ್ರಸ್, ರಿಷಿ ಸುನಕ್‌ಗೆ ಕೈ ತಪ್ಪಿದ ಪಟ್ಟ
ಬ್ರಿಟನ್‌ನ ಮುಂದಿನ ಪ್ರಧಾನಿ (Britain PM) ಯಾರಾಗಲಿದ್ದಾರೆ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರಕುತ್ತಿದೆ. ಹೌದು, ನಿರೀಕ್ಷೆಯಂತೆ ಲಿಜ್ ಟ್ರಸ್ (Liz Truss) ಬ್ರಿಟನ್ ಪ್ರಧಾನಿಯಾಗುವುದು ಪಕ್ಕಾಗಿದೆ. ಭಾರತೀಯ ಸಂಜಾತ ಮತ್ತು ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಅಂತಿಮ ಸ್ಪರ್ಧೆಯಲ್ಲಿ ಟ್ರಸ್ ಎದುರು ಸೋಲೊಪ್ಪಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಬ್ರಿಟನ್‌ ಪ್ರಧಾನಿಯಾಗುವ ಅವಕಾಶವನ್ನು ಸುನಕ್ ಕಳೆದುಕೊಂಡಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. INS Vikrant | ಸ್ವದೇಶಿ ನಿರ್ಮಿತ ಯುದ್ಧವಾಹಕ ಐಎನ್ಎಸ್ ವಿಕ್ರಾಂತ್ ಕಾರ್ಯಾರಂಭ
ಐಎನ್ಎಸ್ ವಿಕ್ರಾಂತ್ (INS Vikrant) ವಿಶೇಷ ಮತ್ತು ವಿಶಿಷ್ಟ ಹಡಗು ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇದೊಂದು ತೇಲಾಡುವ ನಗರವಾಗಿದೆ ಎಂದರು. ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಮತ್ತು ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಹಡಗಿನ ಕಾರ್ಯಾರಂಭಕ್ಕೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ವಿಸ್ತಾರ ವಿಶೇಷ | ನೌಕಾಪಡೆಗೆ ಛತ್ರಪತಿ ಶಿವಾಜಿ ಮಹಾರಾಜರ ಛಾಪು: ನೂತನ ಧ್ವಜ ಅನಾವರಣ
ಭಾರತೀಯ ನೌಕಾಪಡೆಗೆ ಸ್ವದೇಶಿ ನಿರ್ಮಿತ ಹಡಗಿನ ಜತೆಗೆ ಹೊಚ್ಚ ಹೊಸ ಧ್ವಜವೂ ಲಭಿಸಿದೆ. ಈ ಬಾರಿ ರೂಪಿಸಿರುವ ಧ್ವಜದಲ್ಲಿ, ಬ್ರಿಟಿಷರ ವಸಾಹತು ಗುರುತನ್ನು ಸಂಪೂರ್ಣ ಅಳಿಸಿರುವ ಜತೆಗೇ ಸ್ವದೇಶಿ ತತ್ವವನ್ನೂ ಅಳವಡಿಸಲಾಗಿದೆ. ಧ್ವಜದಲ್ಲಿದ್ದ ಸೇಂಟ್‌ ಜಾರ್ಜ್‌ ಕ್ರಾಸ್‌ ಅನ್ನು ತೆಗೆದುಹಾಕಲಾಗಿದೆ. ಒಂದು ಮೂಲೆಯಲ್ಲಿ ತ್ರಿವರ್ಣ ಧ್ವಜವಿದ್ದರೆ ಮತ್ತೊಂದು ಕಡೆ ನೌಕಾದಳದ ಲಾಂಛನವಿದೆ. ಲಾಂಛನದ ಸುತ್ತ ಅಷ್ಟಕೋನವಾಗಿ ರೂಪಿಸಲಾಗಿದೆ. ಅಷ್ಟಕೋನ ಎನ್ನುವುದು, ಅಷ್ಟ ದಿಕ್ಕುಗಳಲ್ಲೂ ಸಮುದ್ರವನ್ನು ಕಾಯುವ ಸಂಕಲ್ಪವನ್ನು ಮೂಡಿಸುತ್ತದೆ. ಜತೆಗೆ, ಛತ್ರಪತಿ ಶಿವಾಜಿ ಮಹಾರಾಜದ ರಾಜಮುದ್ರೆಯೂ ಇದೇ ಅಷ್ಟಕೋನಾಕಾರವನ್ನು ಹೊಂದಿತ್ತು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Starbucks | ಅಮೆರಿಕದ ಸ್ಟಾರ್‌ಬಕ್ಸ್‌ ಕಾಫಿ ಹೌಸ್‌ ಸಿಇಒ ಆಗಿ ಲಕ್ಷ್ಮಣ್ ನರಸಿಂಹನ್‌ ನೇಮಕ
ಅಮೆರಿಕ ಮೂಲದ ಬಹುರಾಷ್ಟ್ರೀಯ ಸರಣಿ ಕಾಫಿ ಹೌಸ್‌ ಸ್ಟಾರ್‌ಬಕ್ಸ್‌ನ (Starbucks) ನೂತನ ಸಿಇಒ ಆಗಿ ಲಕ್ಷ್ಮಣ್‌ ನರಸಿಂಹನ್‌ ನೇಮಕವಾಗಿದ್ದಾರೆ. ಇದರೊಂದಿಗೆ ವಿಶ್ವದ ಅತಿ ದೊಡ್ಡ ಕಾಫಿ ಕೆಫೆ ಸರಣಿಯ ಸಾರಥ್ಯ ಭಾರತೀಯ ಮೂಲದ ಸಿಇಒಗೆ ಸಿಕ್ಕಿದಂತಾಗಿದೆ. ಅವರಿಗೆ ವಾರ್ಷಿಕ 10.37 ಕೋಟಿ ರೂ. ವೇತನ, 12.6 ಕೋಟಿ ರೂ. ಬೋನಸ್ ಹಾಗೂ ೭೩ ಕೋಟಿ ರೂ. ಇನ್ಸೆಂಟಿವ್ ಪಡೆಯಲಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. AIFF Election | ಫುಟ್ಬಾಲ್‌ ಒಕ್ಕೂಟಕ್ಕೆ ಕಲ್ಯಾಣ್‌ ಅಧ್ಯಕ್ಷ, ಒಕ್ಕೂಟದ ಉನ್ನತ ಸ್ಥಾನವೇರಿದ ಮೊದಲ ಕ್ರೀಡಾಪಟು
ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮೋಹನ್‌ ಬಗಾನ್‌ ತಂಡದ ಮಾಜಿ ಗೋಲ್‌ಕೀಪರ್‌ ಕಲ್ಯಾಣ್‌ ಚೌಬೆ ಗೆಲುವು ಸಾಧಿಸಿದ್ದು, ಸಂಸ್ಥೆಯ ೮೫ ವರ್ಷಗಳ ಇತಿಹಾಸದಲ್ಲಿ ಉನ್ನತ ಸ್ಥಾನ ಅಲಂಕರಿಸಿದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
ಈಸ್ಟ್‌ ಬೆಂಗಾಲ್‌ ತಂಡದ ಪರವಾಗಿಯೂ ಆಡಿದ್ದ ೪೫ ವರ್ಷದ ಕಲ್ಯಾಣ್‌ ಚೌಬೆ ಅವರು ತಮ್ಮ ಪ್ರತಿಸ್ಪರ್ಧಿ ಭಾರತ ಫುಟ್ಬಾಲ್ ತಂಡದ ದಿಗ್ಗಜ ಭೈಚುಂಗ್ ಭುಟಿಯಾ ಅವರನ್ನು ೩೩-೧ ಮತಗಳಿಂದ ಸೋಲಿಸಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ರಾಜ್ಯ ಫುಟ್ಬಾಲ್‌ ಸಂಸ್ಥೆಗಳಲ್ಲಿ ಕಲ್ಯಾಣ್ ಚೌಬೆ ಅವರಿಗೆ ಹೆಚ್ಚು ಬೆಂಬಲಿಗರು ಇದ್ದ ಕಾರಣ ಈ ಫಲಿತಾಂಶವನ್ನು ನಿರೀಕ್ಷಿಸಲಾಗಿತ್ತು. ಆದಾಗ್ಯೂ ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟದಲ್ಲಿದ್ದ ರಾಜಕಾರಣಿಗಳ ರಾಜ್ಯಭಾರ ಸದ್ಯದ ಮಟ್ಟಿಗೆ ಕೊನೆಗೊಂಡಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ವಿಸ್ತಾರ Explainer | ಏನಿದು ಡಿಜಿಟಲ್ ರೇಪ್? ಶಿಕ್ಷೆಯಾದ ದೇಶದ ಮೊದಲ ಪ್ರಕರಣ ಯಾವುದು?
ದೇಶದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ರೇಪ್ (Digital Rape) ಅಪರಾಧಕ್ಕಾಗಿ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯವು ವಿಧಿಸಿದೆ. ಈ ಡಿಜಿಟಲ್ ರೇಪ್ ಬಗ್ಗೆ ಜನರಿಗೆ ಅಷ್ಟೊಂದು ಅರಿವು ಇಲ್ಲ. ಡಿಜಿಟಲ್ ರೇಪ್ ಅಂದರೆ, ವರ್ಚುವಲ್ ಅಥವಾ ಆನ್‌ಲೈನ್ ರೇಪ್ ಅಲ್ಲ. ಪೋಕ್ಸೋ(POCSO)ಮತ್ತು ಐಪಿಸಿ ಸೆಕ್ಷನ್ 375ರಡಿ ದಂಡನಾರ್ಹವಾಗಿರುವ ಈ ಅಪರಾಧ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಕುರಿತು Explainerಗೆ ಇಲ್ಲಿ ಕ್ಲಿಕ್‌ ಮಾಡಿ.

10. Sudeep birthday | ಹುಟ್ಟುಹಬ್ಬದ ದಿನವೇ ಜಗ ಮೆಚ್ಚುವ ಕಾರ್ಯಕ್ಕೆ ಕಿಚ್ಚ ಸುದೀಪ್‌ ಸಿದ್ಧ!
ಒಂದು ಕಡೆ ನಟ ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬದ (Sudeep birthday) ಸಂಭ್ರಮ ಕರುನಾಡಿನಾದ್ಯಂತ ಸದ್ದು ಮಾಡುತ್ತಿದೆ. ಮತ್ತೊಂದು ಕಡೆ ಸದ್ದೇ ಇಲ್ಲದೆ ಸಮಾಜಮುಖಿ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ. ಹೌದು, ಗೋ ಸಂಪತ್ತಿನ ಸಂರಕ್ಷಣೆಗಾಗಿ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕಿಚ್ಚ ಸುದೀಪ್‌ ಕೈಜೋಡಿಸಿದ್ದಾರೆ. ಈ ಮೂಲಕ ಅವರು ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಸುದೀಪ್‌ ಅವರನ್ನು ಪುಣ್ಯಕೋಟಿ ರಾಯಭಾರಿಯಾಗಿ ನೇಮಿಸಲಾಗಿದೆ. ಈ ಕುರಿತು ಸಚಿವ ಪ್ರಭು ಬಿ. ಚವ್ಹಾಣ್‌ ಅಧಿಕೃತ ಆದೇಶವನ್ನೂ ಹೊರಡಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version