ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಪಿಎಫ್‌ಐ ಸಂಘಟನೆ ಸಂಚು ರೂಪಿಸಲಾಗಿತ್ತು ಎಂಬ ಅಂಶವನ್ನು ಬಿಹಾರ ಪೊಲೀಸರು ಭೇದಿಸಿದ್ದಾರೆ. ಕರ್ನಾಟಕದ ಕಿಕ್‌ಬಾಕ್ಸಿಂಗ್ ಕ್ರೀಡಾಪಟು ಸ್ಪರ್ಧೆಯ ನಡುವೆಯೇ ಬಿದ್ದ ಹೊಡೆತಕ್ಕೆ ಮೃತಪಟ್ಟಿದ್ದಾರೆ. ನೋಂದಾಯಿತ ಬ್ರ್ಯಾಂಡ್‌ಗಳ ಮೇಲೆ ಶೇ. 5 ಜಿ.ಎಸ್.ಟಿ ತೆರಿಗೆಯನ್ನು ವಿಧಿಸಿರುವುದಕ್ಕೆ ನಾನಾ ರಾಜ್ಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ನಿರ್ಧಾರವನ್ನು ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯ ಅಕ್ಕಿ ಗಿರಣಿದಾರರ ಸಂಘ ಜುಲೈ ೧೫ರಂದು ಪ್ರತಿಭಟನೆಗೆ ಕರೆ ನೀಡಿದೆ ಎಂಬುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಪಿಎಫ್‌ಐ ಸಂಘಟನೆಯಿಂದ ಮೋದಿ ಹತ್ಯೆ ಸಂಚು, ಬಿಹಾರದಲ್ಲಿ ಇಬ್ಬರು ಉಗ್ರರ ಸೆರೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಜುಲೈ 12ರಂದು ಬಿಹಾರಕ್ಕೆ ಭೇಟಿ ನೀಡಿದ್ದಾಗ ಅವರನ್ನು ಹತ್ಯೆ ಮಾಡಲು ಉಗ್ರರು ಸಂಚು ರೂಪಿಸಿದ್ದರು ಎಂಬ ಆತಂಕಕಾರಿ ವಿಚಾರವೀಗ ಬೆಳಕಿಗೆ ಬಂದಿದೆ. ಬಿಹಾರದ ಪಾಟ್ನಾದಲ್ಲಿ ಇಂದು (ಜು.೧೪) ಪೊಲೀಸರು ಶಂಕಿತ ಉಗ್ರರ ಘಟಕವನ್ನು ಭೇದಿಸಿದ್ದಾರೆ. ಅಥರ್ ಪರ್ವೇಜ್ ಮತ್ತು ಎಂಡಿ ಜಲಾಲುದ್ದೀನ್ ಬಂಧಿತ ಶಂಕಿತ ಉಗ್ರರಾಗಿದ್ದಾರೆ. ಇವರಿಂದ ಎರಡು ದಾಖಲೆಗಳನ್ನು, ಪಿಎಫ್‌ಐನ 25 ಕರಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಒಂದು ದಾಖಲೆಯ ಮೇಲೆ ‘2047 India Towards Rule of Islamic India (2047ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾರ್ಪಡಿಸುವುದು)’ ಎಂಬ ತಲೆ ಬರಹ ಇದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
2. Kickboxing Death | ಬೆಂಗಳೂರಿನಲ್ಲಿ ಒಂದೇ ಏಟಿಗೆ ರಿಂಗ್‌ನಲ್ಲೇ ಬಾಕ್ಸರ್ ಸಾವು
ರಾಜ್ಯ ಮಟ್ಟದ Kickboxing ಸ್ಪರ್ಧೆಯ ವೇಳೆ ಸ್ಪರ್ಧಿಯೊಬ್ಬರು ಎದುರಾಳಿಯ ಹೊಡೆತಕ್ಕೆ ತತ್ತರಿಸಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯ ವೇಳೆ ಈ ಘಟನೆ ನಡೆದಿದೆ. ರಿಂಗ್‌ನಲ್ಲೇ ಕೋಮಾ ಸ್ಥಿತಿಗೆ ತಲುಪಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಮೈಸೂರಿನ ೨೪ ವರ್ಷದ ನಿಖಿಲ್ ಸುರೇಶ್ ಮೃತಪಟ್ಟ ಕುಸ್ತಿಪಟು. ಜುಲೈ ೧೦ರಂದು ಈ ಘಟನೆ ನಡೆದಿದ್ದು, ಆಯೋಜಕರು ಸ್ಪರ್ಧಿಯ ಸಾವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
3. ಸರ್ವಾಧಿಕಾರಿ, ಜುಮ್ಲಾಜೀವಿ ಶಬ್ದಗಳು ಅಸಂಸದೀಯ; ಸಂಸತ್ ಕಲಾಪದಲ್ಲಿ ಬಳಕೆ ನಿಷೇಧ
ಜುಲೈ 18ರಿಂದ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭಾ ಕಾರ್ಯಾಲಯ ಒಂದು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸಂಸತ್ ಕಲಾಪದ ವೇಳೆ ಚರ್ಚೆ ನಡೆಸುವಾಗ ಯಾವೆಲ್ಲ ಪದಗಳನ್ನು ಪ್ರಯೋಗ ಮಾಡಬಾರದು ಎಂಬುದನ್ನೂ ಉಲ್ಲೇಖಿಸಲಾಗಿದೆ. ಈ ಶಬ್ದಗಳನ್ನು ‘ಅಸಂಸದೀಯ’ ಎಂದು ವ್ಯಾಖ್ಯಾನಿಸಲಾಗಿದ್ದು, ಈ ಸಲ ಯಾರೂ ಕೂಡ ಸಂಸತ್ತಿನಲ್ಲಿ ಅಧಿವೇಶನದ ವೇಳೆ ಈ ಕೆಳಗಿನ ಶಬ್ದಗಳನ್ನು ಬಳಸುವಂತಿಲ್ಲ. ಮುಖ್ಯವಾಗಿ Jumlajeevi (ಪೊಳ್ಳು ಮಾತುಗಳನ್ನಾಡುವವ), Baal Buddhi (ಬಾಲಿಶ ಬುದ್ಧಿ, Covid Spreader (ಕೊವಿಡ್ ಸೋಂಕು ಹರಡುವವ), Snoopgate (ಅಕ್ರಮ ನಿಗಾ) ಮುಂತಾದ ಪದಗಳನ್ನು ಪಟ್ಟಿ ಮಾಡಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
4. ಅಕ್ಕಿ, ಜೋಳ, ರಾಗಿ ಮೇಲೂ 5% ಜಿಎಸ್‌ಟಿ: ಇದನ್ನು ವಿರೋಧಿಸಿ ನಾಳೆ ಗಿರಣಿ ಬಂದ್
ಜಿಎಸ್‌ಟಿ ಮಂಡಳಿಯ ಇತ್ತೀಚಿನ ಸಭೆಯಲ್ಲಿ ನೋಂದಾಯಿತ ಬ್ರಾಂಡ್ ರಹಿತ ಆಹಾರ ಧಾನ್ಯಗಳಿಗೆ ಶೇ. 5 ಜಿ.ಎಸ್.ಟಿ ತೆರಿಗೆಯನ್ನು ವಿಧಿಸಿರುವುದಕ್ಕೆ ನಾನಾ ರಾಜ್ಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ದೇಶಾದ್ಯಂತ ಜುಲೈ 18ರಂದು ಬರಲಿರುವ ಹೊಸ ನಿಯಮಗಳಿಂದಾಗಿ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಈ ನಿರ್ಧಾರವನ್ನು ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯ ಅಕ್ಕಿ ಗಿರಣಿದಾರರ ಸಂಘ ಜುಲೈ ೧೫ರಂದು ಪ್ರತಿಭಟನೆಗೆ ಕರೆ ನೀಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
5. ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆ ಬಂದ್, ಬಿಜೆಪಿಗೆ ಅವಕಾಶದ ಬಾಗಿಲು ಓಪನ್!
ಚಾಮರಾಜಪೇಟೆ ಮೈದಾನದ ಕುರಿತು ಅನೇಕ ದಿನಗಳಿಂದ ನಡೆಯುತ್ತಿರುವ ವಿವಾದ ಇದೀಗ ಸ್ಪಷ್ಟವಾಗಿ ರಾಜಕೀಯ ತಿರುವು ಪಡೆದಿದೆ. ಮೈದಾನವನ್ನು ಬಿಬಿಎಂಪಿ ಸುಪರ್ದಿಗೆ ಪಡೆದುಕೊಂಡು ಇತರೆ ಸಾಮಾನ್ಯ ಮೈದಾನಗಳಂತೆಯೇ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು ಎಂದು ಜುಲೈ 12ರಂದು ಕರೆ ನೀಡಿದ್ದ ಬಂದ್ ಯಶಸ್ವಿಯಾದ ಹಿನ್ನೆಲೆಯಲ್ಲಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶದ ಬಾಗಿಲು ತೆರೆದಿದೆ. ಅನೇಕ ದಿನಗಳಿಂದ ಚಾಮರಾಜಪೇಟೆ ನಾಗರಿಕರ ಹಿತರಕ್ಷಣ ವೇದಿಕೆ ಹೆಸರಿನಲ್ಲಿ ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ಈ ಸಮಯದಲ್ಲಿ ಬಿಜೆಪಿಯ ಪ್ರಮುಖ ರಾಜಕಾರಣಿಗಳಾರೂ ಇತ್ತ ಕಾಣಿಸಿಕೊಂಡಿರಲಿಲ್ಲ. ಇದೀಗ ಗುರುವಾರದ ದಿಢೀರ್ ಬೆಳವಣಿಗೆಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ. ಸಿ. ಮೋಹನ್ ರಂಗ ಪ್ರವೇಶಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
6. 10 ದಿನ ಬ್ಯಾಗ್ ಬೇಡ, ವರ್ಷ ಪೂರ್ತಿ ಮೊಟ್ಟೆ ಬೇಡ: ಎನ್‌ಇಪಿ ಪಠ್ಯಕ್ರಮ ಕರಡು ಪ್ರಸ್ತಾವನೆ
ಇತ್ತೀಚೆಗಷ್ಟೆ ಶಾಲಾ ಶೂ ಮತ್ತು ಸಾಕ್ಸ್ ವಿಚಾರದಲ್ಲಿ ಭುಗಿಲೆದ್ದಿದ್ದ ವಿವಾದವನ್ನು ಸರ್ಕಾರ ಬಗೆಹರಿಸಿತು ಎಂದುಕೊಳ್ಳುತ್ತಿರುವಾಗಲೆ, ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ಇದೀಗ ಮತೊಮ್ಮೆ ವಿವಾದಕ್ಕೆ ಕಾರಣವಾಗುವ ಮುನ್ಸೂಚನೆ ಲಭಿಸಿದೆ. ಮಧ್ಯಾಹ್ನದ ಬಿಸಿ ಊಟದಿಂದ ಮೊಟ್ಟೆಯನ್ನು ತೆಗೆದುಹಾಕಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ(NEP) ಅನುಗುಣವಾಗಿ ಕಾರ್ಯಪಡೆ ವರದಿಯನ್ನು ನೀಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
7. GOOD NEWS: ಶೀಘ್ರದಲ್ಲಿಯೇ ನಿಮ್ಮ ಹಕ್ಕಾಗಲಿದೆ , ಮೊಬೈಲ್, ಲ್ಯಾಪ್‌ಟಾಪ್, ಟಿ.ವಿ ರಿಪೇರಿ!
ನೀವು ನಿಮ್ಮ ಬೆಲೆಬಾಳುವ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಟಿ.ವಿ ಕೆಟ್ಟಾಗ, ಅದರ ಬಿಡಿಭಾಗಗಳ ದರಗಳನ್ನು ಕೇಳಿಯೇ ಶಾಕ್ ಆಗಿರಬಹುದು. ಅದನ್ನು ಬದಲಿಸಿ ದುರಸ್ತಿಪಡಿಸುವುದು ಹೇಗಪ್ಪಾ ಎಂದು ಚಿಂತಾಕ್ರಾಂತರಾಗಿರಬಹುದು. ಕೆಲವು ಮೊಬೈಲ್‌ಗಳನ್ನು ರಿಪೇರಿ ಮಾಡಲು ಸಾಧ್ಯವೇ ಇಲ್ಲ ಎಂಬಷ್ಟರಮಟ್ಟಿಗೆ ದುಬಾರಿಯಾಗಿ ಜೇಬನ್ನು ಸುಡಬಹುದು. ಆಗ ಅನಿವಾರ್ಯವಾಗಿ ಹೊಸ ಮೊಬೈಲ್ ಖರೀದಿಸಬೇಕಾದ ಸಂದರ್ಭವೇ ಬರಬಹುದು. ಆದರೆ ಇನ್ನು ಮುಂದೆ ಇಂಥ ಬಿಕ್ಕಟ್ಟಿನಿಂದ ನಿಮ್ಮನ್ನು ಪಾರು ಮಾಡಿಸಲು ಶೀಘ್ರದಲ್ಲಿಯೇ ನಿಮ್ಮದಾಗಲಿದೆ “ರಿಪೇರಿ ಮಾಡುವ ಹಕ್ಕುʼ! (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
8. Monkeypox: ದೇಶದ ಮೊದಲ ಪ್ರಕರಣ ಕೇರಳದಲ್ಲಿ ಪತ್ತೆ? ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಕಂಡಿದೆ ಲಕ್ಷಣ
ಕಳೆದ ಮೇ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿ ಇದೀಗ ೨೦ಕ್ಕೂ ದೇಶಗಳಿಗೆ ಹರಡಿರುವ ಮಂಕಿ ಪಾಕ್ಸ್ ವೈರಸ್ ಸಮಸ್ಯೆ ಇದೀಗ ಭಾರತಕ್ಕೂ ಕಾಲಿಟ್ಟಂತೆ ಕಾಣುತ್ತಿದೆ. ವಿದೇಶಕ್ಕೆ ಹೋಗಿ ಮರಳಿ ಬಂದ ಕೇರಳದ ವ್ಯಕ್ತಿಯೊಬ್ಬರಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ಈ ವ್ಯಕ್ತಿಯನ್ನು ಇದೀಗ ಕ್ವಾರಂಟೈನ್‌ಗೆ ಕಳುಹಿಸಲಾಗಿದ್ದು, ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಶೋಧನಾ ಕೇಂದ್ರಕ್ಕೆ ರವಾನಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಇದು ಮಂಕಿ ಪಾಕ್ಸ್ ರೋಗವೇ ಅಲ್ಲವೇ ಎನ್ನುವುದು ನಿರ್ಧಾರವಾಗಲಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
9. ಅಮೃತ್ ಪಾಲ್ ತನಿಖೆ ಸರಿಯಾಗಿ ನಡೆಯುತ್ತಿದೆ ಎಂದು ನಂಬುದು ಹೇಗೆ? ಸಿಐಡಿಗೆ ಹೈಕೋರ್ಟ್ ಪ್ರಶ್ನೆ
ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್‌ಐ) ನೇಮಕ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪಾಲ್ ಅವರನ್ನು ಹತ್ತು ದಿನ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರೂ ಒಮ್ಮೆಯೂ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಲ್ಲ. ಹಾಗಿದ್ದ ಮೇಲೆ ತನಿಖೆ ಸೂಕ್ತ ರೀತಿಯಲ್ಲಿ ನಡೆಯುತ್ತಿದೆ ಎಂದು ನಂಬುವುದಾದರೂ ಹೇಗೆ? ಎಂದು ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ದಳವನ್ನು(ಸಿಐಡಿ) ಹೈಕೋರ್ಟ್ ಗುರುವಾರ ಪ್ರಶ್ನಿಸಿದೆ. ಆರೋಪದಲ್ಲಿ ಬಂದಿತನಾಗಿರುವ ಸಿ.ಎನ್. ಶಶಿಧರ್ ಮತ್ತಿತರರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಿಐಡಿ ಪರ ವಕೀಲರನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಪ್ರಶ್ನಿಸಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
10. Windis Tour | ಕೆರಿಬಿಯನ್ ನಾಡಿಗೂ ಹೋಗಲ್ಲ ವಿರಾಟ್ ಕೊಹ್ಲಿ, ಬುಮ್ರಾಗೂ ರೆಸ್ಟ್
ಮುಂಬಯಿ: ತೊಡೆ ಸಂದು ನೋವಿಗೆ ಒಳಗಾಗಿರುವ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮುಂಬರುವ ಕೆರಿಬಿಯನ್ ನಾಡಿನ (windis tour) ಪ್ರವಾಸದ ಟಿ೨೦ ಸರಣಿಗೆ ಅಲಭ್ಯರಾಗಿದ್ದಾರೆ. ಇದೇ ವೇಳೆ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರಿಗೂ ವಿಶ್ರಾಂತಿ ಕಲ್ಪಿಸಲಾಗಿದೆ. ಜುಲೈ ೨೯ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿ ನಡೆಯಲಿದೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ ಇರದಿರುವುದು ಸದ್ಯದ ಅಚ್ಚರಿಯ ವಿಷಯವಾಗಿದೆ. ಅಂತೆಯೇ ಏಷ್ಯಾ ಕಪ್ ಹಾಗೂ ಟಿ೨೦ ವಿಶ್ವ ಕಪ್ ಇರುವ ಹೊರತಾಗಿಯೂ ವಿರಾಟ್ ಕೊಹ್ಲಿ ಮತ್ತೊಂದು ಬಾರಿ ಸರಣಿಯೊಂದರಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)