Site icon Vistara News

ವಿಸ್ತಾರ TOP 10 NEWS | ಮುರುಘಾ ಶ್ರೀ ಅರೆಸ್ಟ್‌ನಿಂದ ಮೋದಿ ಪ್ರವಾಸದವರೆಗಿನ ಪ್ರಮುಖ ಸುದ್ದಿಗಳಿವು

bangalore rains, Bengaluru Rains, Cervical Cancer Vaccine, hanuman birth place controversy, latest, LPG, Modi speech, muddahanumegowda, murugha sree case, murughashri, Yogi Adityanath Karnataka Visit

ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಗುರುವಾರ ಅನೇಕ ಪ್ರಮುಖ ಘಟನಾವಳಿಗಳು ನಡೆದಿದ್ದು, ಮಠದ ಆವರಣದಲ್ಲೆ ಬಂಧಿಸಲಾಗಿದೆ. ಈಗಾಗಲೆ ಕೇರಳಕ್ಕೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಂಗಳೂರಿಗೆ ಆಗಮಿಸಲಿದ್ದು, ಸರ್ಕಾರಿ ಯೋಜನೆಗಳ ಲೋಕಾರ್ಪಣೆ ಜತೆಗೆ ರಾಜಕೀಯ ಸಂದೇಶವನ್ನೂ ನೀಡುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ʼಕ್ಷೇಮವನʼವನ್ನು ಉತ್ತರ ಪ್ರದೇಶ ಯೋಗಿ ಆದಿತ್ಯನಾಥ ಉದ್ಘಾಟಿಸಿ ಸಿಎಂ ಬೊಮ್ಮಾಯಿಯವರನ್ನು ಶ್ಲಾಘಿಸಿದ್ದಾರೆ, 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಗೆ ಸರ್ಕಾರ ನಾಮಕರಣ ಮಾಡಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಮುರುಘಾಶ್ರೀ ಪ್ರಕರಣ| ದೂರು ದಾಖಲಾಗಿ ಒಂದು ವಾರದ ನಂತರ ಮುರುಘಾಶ್ರೀಗಳನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ.
ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾಶರಣರನ್ನು ಬಂಧಿಸಲಾಗಿದೆ. ಶ್ರೀಗಳನ್ನು ಬಿಗಿ ಭದ್ರತೆ ಮಧ್ಯೆಯೇ ಬಂಧಿಸಲಾಗಿದ್ದು, ಸದ್ಯ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಶ್ರೀಗಳ ವಿರುದ್ಧ ದೂರು ದಾಖಲಾದ ಆರು ದಿನಗಳ ಬಳಿಕ ಅವರನ್ನು ಬಂಧಿಸಲಾಗಿದೆ. ಬಂಧನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.
ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಪ್ರಕರಣವು ಕೆಲವು ದಿನಗಳಿಂದ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಪೋಕ್ಸೊ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾದರೂ ಬಂಧಿಸದ ಕುರಿತು ಆಕ್ರೋಶ ವ್ಯಕ್ತವಾಗಿತ್ತು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
5 ಗಂಟೆ ಸತತ ವಿಚಾರಣೆ ಬಳಿಕ ವಾರ್ಡನ್‌ ರಶ್ಮಿ ಸಾಂತ್ವನ ಕೇಂದ್ರಕ್ಕೆ ಶಿಫ್ಟ್‌, ನಾಳೆ ಮತ್ತೆ ವಿಚಾರಣೆ

2. ಮೋದಿ in Mangaluru | ನಳಿನ್‌ ಕುಮಾರ್‌ ಕಟೀಲು ʼಪುನರ್‌ಪ್ರತಿಷ್ಠಾಪನೆʼ ಘೋಷಿಸುವರೇ ನಮೋ?
ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ೩೮೦೦ ಕೋಟಿ ರೂ. ಮೊತ್ತದ ಪ್ರಮುಖ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಇದಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿರುವ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ಆಗಸ್ಟ್‌ 28ರ ಭಾನುವಾರ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಇದೀಗ ಪ್ರಧಾನಿ ಕಾರ್ಯಕ್ರಮದಲ್ಲಿ ಕಟೀಲ್‌ ಅವರ ಕುರಿತು ಸ್ಪಷ್ಟ ಸಂದೇಶವೊಂದನ್ನು ನೀಡುವ ಮಾತುಗಳಿವೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮೋದಿ ಮಂಗಳೂರಿಗೆ ಬರುತ್ತಿರುವುದು ಯಾಕೆ? ಯಾವ್ಯಾವ ಯೋಜನೆಗಳಿಗೆ ಚಾಲನೆ? ಇಲ್ಲಿದೆ Full details

3. ಬೆಂಗಳೂರಿನ ಸಮಸ್ಯೆಗೆ ಹಿಂದಿನ ಸರ್ಕಾರಗಳೇ ಕಾರಣ: ಸಿಟಿ ರೌಂಡ್ಸ್‌ ನಂತರ ಸಿಎಂ ಬೊಮ್ಮಾಯಿ ಆರೋಪ
ರಾಜಕಾಲುವೆ ಒತ್ತುವರಿ, ರಸ್ತೆ ಗುಂಡಿ ಸೇರಿ ಬೆಂಗಳೂರಿನ ನಾಗರಿಕರನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳಿಗೆ ಈ ಹಿಂದಿನ ಸರ್ಕಾರಗಳ ಆಡಳಿತವೇ ಕಾರಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾಗದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಬೊಮ್ಮಾಯಿ ಮಾತನಾಡಿದರು. ಕಳೆದ 8-10 ವರ್ಷದಲ್ಲಿ ಪೂರ್ತಿ ಬೆಂಗಳೂರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಆಗ ಇಷ್ಟೆಲ್ಲಾ ಸವಾಲುಗಳು ಕೂಡ ಇರಲಿಲ್ಲ. ಆಗ ನಡೆದ ಕೆಲ ಯೋಜನೆಗಳು ಕಳಪೆಯದ್ದಾಗಿವೆ. ಹಿಂದಿನ ಸರ್ಕಾರಗಳು ಭ್ರಷ್ಟಾಚಾದಿಂದ ಕೂಡಿದ ಯೋಜನೆಗಳನ್ನು ರೂಪಿಸಿದ್ದು, ಬಿಬಿಎಂಪಿಯನ್ನು ತಮ್ಮಿಷ್ಟಕ್ಕೆ ನಡೆಸಿಕೊಂಡಿವೆ ಎಂದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಸಿಎಂ ಬೊಮ್ಮಾಯಿಗೆ ಯೋಗಿ ಆದಿತ್ಯನಾಥ ಬಹುಪರಾಕ್‌: ʼಕ್ಷೇಮವನʼದಲ್ಲಿ ಸಿಕ್ಕಿತು ರಾಜಕೀಯ ಸಂದೇಶ!
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸರ್ಕಾರದ ನೇತೃತ್ವ, ನಾಯಕತ್ವದ ವಿಚಾರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಹುಮುಖ್ಯವಾದ ಸಂದೇಶವೊಂದನ್ನು ಬೆಂಗಳೂರಿನಲ್ಲಿ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವಕ್ಕೆ ಅನೇಕ ಬಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ನೆಲಮಂಗಲದ ಬಳಿಯ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಗ್ರಾಮದಲ್ಲಿ ಮಂಜುನಾಥೇಶ್ವರ ನ್ಯಾಚುರೋಪಥಿ ಮತ್ತು ಯೋಗಿಕ್‌ ಸೈನ್ಸಸ್‌ನ ʼಕ್ಷೇಮವನʼ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾಷಣದ ನಡುವೆ ಅನೇಕ ಬಾರಿ ಸಿಎಂ ಬೊಮ್ಮಾಯಿ ಅವರನ್ನು ಶ್ಲಾಘಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಆಂಜನೇಯನ ಜನ್ಮಸ್ಥಳ ಕರ್ನಾಟಕ ಎಂದ ಯೋಗಿ ಆದಿತ್ಯನಾಥ: ʼಕ್ಷೇಮವನʼದಲ್ಲಿ UP ಸಿಎಂ ಹೇಳಿದ್ದೇನು?
ರಾಮಭಕ್ತ ಹನುಮಂತನ ಜನ್ಮಸ್ಥಾನದ ಕುರಿತು ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ಚರ್ಚೆಗಳು ನಡೆದಿರುವಂತೆಯೇ, ಕರ್ನಾಟಕವೇ ಹನುಮನ ಜನ್ಮಸ್ಥಳ ಎಂದು ಅಯೋಧ್ಯೆ ಕ್ಷೇತ್ರವನ್ನೊಳಗೊಂಡ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುದ್ರೆ ಒತ್ತಿದ್ದಾರೆ. ಕರ್ನಾಟಕವನ್ನು ಎಂದಿಗೂ ಸಂಕಟದಲ್ಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದೇ ಕರ್ನಾಟಕದಲ್ಲಿ ಶ್ರೀರಾಮನ ಸಹಾಯಕ್ಕೆ ಹನುಮಂತ ಸಹಾಯಕ್ಕೆ ಬಂದಿದ್ದ. ಹನುಮಂತನ ಸಹಾಯದಿಂದಲೇ ಸೇತುಬಂಧ ನಿರ್ಮಾಣವಾಯಿತು. ಭಾರತದಲ್ಲಿ ರಾಮರಾಜ್ಯ ಸ್ಥಾಪನೆಗೆ ಹನುಮಂತನ ಈ ಕಾರ್ಯವೇ ಆಧಾರವಾಯಿತು ಎಂದು ಶ್ಲಾಘಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Rain News | ಮುಂದಿನ 24 ಗಂಟೆಯಲ್ಲಿ ಮಳೆ ಅಬ್ಬರ; ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್‌!
ರಾಜ್ಯದಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ಮಳೆಗೆ ಪೂರಕ ವಾತಾವರಣ ಇದ್ದು ಇದರ ಪ್ರಭಾವದಿಂದ ರಾಜ್ಯಾದ್ಯಂತ ಮಳೆಯಾಗಲಿದೆ. ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಮಳೆ ಅಬ್ಬರ ಇರಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಬೆಂಗಳೂರಿನಲ್ಲಿ ಮಳೆಯ ಎಫೆಕ್ಟ್‌, ಕಚೇರಿಗೆ ತೆರಳಲು ತಗಲುವ ಸಮಯದಲ್ಲಿ 62% ಏರಿಕೆ!

7. 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಗೆ ನಾಮಕರಣ: ಉದ್ಘಾಟನೆ ದಿನಾಂಕ ಘೋಷಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರಿನ ದೇವನಹಳ್ಳಿಯಲ್ಲಿರುವ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪನೆಯಾಗುತ್ತಿರುವ 108 ಅಡಿ ಎತ್ತರದ ಕಂಚಿನ ಪ್ರತಿಮೆಗೆ ರಾಜ್ಯ ಸರ್ಕಾರ ನಾಮಕರಣ ಮಾಡಿದೆ. 108 ಅಡಿಯ ಪ್ರತಿಮೆಗೆ “ಪ್ರಗತಿಯ ಪ್ರತಿಮೆ” ಎಂದು ನಾಮಕರಣ ಮಾಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದು, ನವೆಂಬರ್‌ 2ರಂದು ಪ್ರಧಾನಿ ಮೋದಿಯವರಿಂದಲೇ ಉದ್ಘಾಟನೆ ಆಗುತ್ತದೆ ಎಂದೂ ತಿಳಿಸಿದ್ದಾರೆ. ಅಮೆರಿಕದಲ್ಲಿರುವ 151 ಅಡಿ ಎತ್ತರದ ಬೃಹತ್‌ ಪ್ರತಿಮೆಗೆ ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ಎಂದು ನಾಮಕರಣ ಮಾಡಲಾಗಿದೆ. ಗುಜರಾತ್‌ನಲ್ಲಿ, ಸರ್ದಾರ್‌ ಪಟೇಲರ 597 ಅಡಿ ಎತ್ತರದ ಪ್ರತಿಮೆಗೆ ಏಕತಾ ಪ್ರತಿಮೆ ಎಂದು ಹೆಸರಿಡಲಾಗಿದೆ. ಹೈದರಾಬಾದ್‌ ಬಳಿ ಇತ್ತೀಚೆಗಷ್ಟೆ ನಿರ್ಮಾಣವಾದ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಗೆ ಸಮಾನತೆಯ ಪ್ರತಿಮೆ ಎಂದು ಹೆಸರಿಡಲಾಗಿದೆ. ಇದೀಗ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಪ್ರಗತಿಯ ಪ್ರತಿಮೆ ಎಂದು ಹೆಸರಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ವಿಸ್ತಾರ Explainer | ಗರ್ಭಕಂಠ ಕ್ಯಾನ್ಸರ್‌ಗೆ ಸ್ವದೇಶಿ ಲಸಿಕೆ, ಇನ್ನಿಲ್ಲ ಸಾವಿನ ಅಂಜಿಕೆ
ಗರ್ಭಕಂಠ ಕ್ಯಾನ್ಸರ್ (Cervical Cancer). ಇದು ಮಹಿಳೆಯರ ಜೀವ ಹಿಂಡುವ ಅರ್ಬುದ ರೋಗ. ಭಾರತದಲ್ಲಿ ವಾರ್ಷಿಕವಾಗಿ 74 ಸಾವಿರ ಮಹಿಳೆಯರ ಸಾವಿಗೆ ಈ ಕ್ಯಾನ್ಸರ್ ಕಾರಣವಾಗಿದೆ. ಈವರೆಗೂ ಈ ಕ್ಯಾನ್ಸರ್ ನಿವಾರಿಸುವ ಸ್ವದೇಶಿ ಔಷಧ, ಲಸಿಕೆಯಾಗಲಿ ಇರಲಿಲ್ಲ. ಆದರೆ, ಇನ್ನು ಮುಂದೆ ಅಂಥ ಕೊರತೆ ಎದುರಾಗುವುದಿಲ್ಲ. ಭಾರತವು ಈ ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆ (Cervical Cancer Vaccine) ಯನ್ನು ಅಭಿವೃದ್ಧಿಪಡಿಸಿದೆ. ಭಾರತೀಯ ವೈದ್ಯ ವಿಜ್ಞಾನದಲ್ಲಿ ಇದೊಂದು ಐತಿಹಾಸಿಕ ಸಾಧನೆಯಾಗಿದೆ. ಸ್ವದೇಶಿಯವಾಗಿ ನಿರ್ಮಿಸಲಾದ ಮೊದಲ ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ(HPV)ಯನ್ನು ಗುರುವಾರ ಲಾಂಚ್ ಮಾಡಲಾಗುತ್ತಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Congress Politics | ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ ಮಾಜಿ ಸಂಸದ ಮುದ್ದಹನುಮೇಗೌಡ; ಮುಂದಿನ ದಾರಿ?
ಮಾಜಿ ಸಂಸದ, ಕಾಂಗ್ರೆಸ್‌ ಹಿರಿಯ ಮುಖಂಡ ಮುದ್ದಹನುಮೇಗೌಡ ಕಾಂಗ್ರೆಸ್‌ ತೊರೆದಿದ್ದಾಗಿ ಅಧಿಕೃತವಾಗಿ (Congress Politics) ಘೋಷಣೆ ಮಾಡಿದ್ದಾರೆ. ಗುರುವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಮುದ್ದಹನುಮೇಗೌಡ ಅವರು ಪಕ್ಷ ತೊರೆಯುವ ಸಂಬಂಧ ಮಾತನಾಡಿದ್ದಾರೆನ್ನಲಾಗಿದೆ. ಬಳಿಕ ಅಲ್ಲಿಂದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಮಗೆ ಪಕ್ಷದಿಂದ ಆದ ಅನ್ಯಾಯಗಳು, ಪಕ್ಷಕ್ಕಾಗಿ ತಾವು ಮಾಡಿದ ತ್ಯಾಗಗಳು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಅಡುಗೆ ಅನಿಲ ಬೆಲೆ ಸಿಲಿಂಡರ್‌ಗೆ 91.50 ರೂ. ಇಳಿಕೆ, ಇಂದಿನಿಂದಲೇ ಜಾರಿ, ಯಾವುದಕ್ಕೆ ಅನ್ವಯ?
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ದರವನ್ನು ೯೧.೫೦ ರೂ. ಇಳಿಸಿವೆ. ಇದು ಸೆಪ್ಟೆಂಬರ್‌ ೧ರಿಂದಲೇ ಜಾರಿಗೆ ಬರಲಿದೆ. ಈ ಮೂಲಕ ತೈಲ ಮಾರುಕಟ್ಟೆ ಕಂಪನಿಗಳು ದೊಡ್ಡದೊಂದು ಕೊಡುಗೆ ನೀಡಿದಂತಾಗಿದೆ.
ಇಂಡೇನ್‌ ಗ್ಯಾಸ್‌ ಕಮರ್ಷಿಯಲ್‌ ೧೯ ಕೆಜಿ ಸಿಲಿಂಡರ್‌ಗೆ ೧,೯೭೬ ರೂ.ನಿಂದ ೧೮೮೫ ರೂ.ಗೆ ಇಳಿದಿದೆ. ಅದೇ ರೀತಿ, ಕೋಲ್ಕೊತಾದಲ್ಲಿ ೨೦೯೫ ರೂ. ಇದ್ದಿದ್ದು ೧೯೯೫ ರೂ.ಗೆ ಇಳಿದಿದೆ. ಮುಂಬಯಿಯಲ್ಲಿ ಇದುವರೆಗೆ ೧೯೩೬ ರೂ. ಇತ್ತು. ಅದೀಗ ೧೮೪೪ ರೂ.ಗೆ ಇಳಿಯಲಿದೆ. ಚೆನ್ನೈಯಲ್ಲಿ ೧೯ ಕೆಜಿ ಕಮರ್ಷಿಯಲ್‌ ಸಿಲಿಂಡರ್‌ ದರ ೨೧೪೧ ರೂ. ಇತ್ತು. ಈಗ ಅದು ೨೦೪೫ ರೂ.ಗೆ ಇಳಿಯಲಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
Oil price | ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಇಳಿಮುಖ, ಪೆಟ್ರೋಲ್-ಡೀಸೆಲ್‌ ದರ ಇಳಿಕೆಯ ನಿರೀಕ್ಷೆ

Exit mobile version