Site icon Vistara News

ವಿಸ್ತಾರ TOP 10 NEWS | PFI ಮೇಲೆ ಪೊಲೀಸ್‌ ರೇಡ್‌ನಿಂದ ಆಶಾ ಪಾರೇಖ್‌ಗೆ ಫಾಲ್ಕೆ ಅವಾರ್ಡ್‌ವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 27092022

ಬೆಂಗಳೂರು: ವಿರೋಧಿಗಳ ಹತ್ಯೆ, ಬೆದರಿಕೆ ಸೇರಿ ದೇಶದೊಳಗೆ ಕಾನೂನುಬಾಹಿರ ಚಟುವಟಿಕೆ ತಡೆಯುವ ಸಲುವಾಗಿ ಎನ್‌ಐಎ ಮಾಹಿತಿ ಮೇರೆಗೆ ದೇಶಾದ್ಯಂತ ಪಿಎಫ್‌ಐ ಸಂಘಟನೆ ಮೇಲೆ ಪೊಲೀಸರು ಸಂಘಟಿತವಾಗಿ ಮುಗಿಬಿದ್ದಿದ್ದಾರೆ. ರಾಜ್ಯದಲ್ಲಿ ಹೆಚ್ಚಿನ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರೇಸ್‌ನಿಂದ ಗೆಹ್ಲೋಟ್‌ ಔಟ್‌ ಆಗಿದ್ದಾರೆ, ಹಿರಿಯ ಬಾಲಿವುಡ್‌ ನಟಿ ಆಶಾ ಪಾರೇಖ್‌ಗೆ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ, ಅಂಬಾನಿ ಮನೆ ಕುರಿತು ಕೇಜ್ರಿವಾಲ್‌ ಹೇಳಿಕೆ, ಟಿಪ್ಪು ಸುಲ್ತಾನ್‌ ಕುರಿತು ಕಾಂಗ್ರೆಸ್‌ ರಾಜ್ಯಸಭಾ ಸದಸ್ಯರೊಬ್ಬರ ಟ್ವೀಟ್‌ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಹಿಂಸೆ, ಹಿಂದೂ ಮುಖಂಡರ ಹತ್ಯೆ ಸಂಚು | ಪೊಲೀಸ್‌ ದಾಳಿ, 200ಕ್ಕೂ ಹೆಚ್ಚು PFI ಮುಖಂಡರ ಸೆರೆ
ದೇಶಾದ್ಯಂತ ಮಂಗಳವಾರ ಮುಂಜಾನೆ 200ಕ್ಕೂ ಹೆಚ್ಚು ಕಡೆ ದಾಳಿ ನಡೆಸಿರುವ ಪೊಲೀಸರು, 250ಕ್ಕೂ ಹೆಚ್ಚು ಪಿಎಫ್‌ಐ- ಎಸ್‌ಡಿಪಿಐ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ವಾರ ರಾಷ್ಟ್ರೀಯ ತನಿಖಾ ದಳದಿಂದ ತಮ್ಮ ಮುಖಂಡರ ಬಂಧನ ಪ್ರತಿಭಟಿಸಿ ರಾಷ್ಟ್ರಾದ್ಯಂತ ಹಿಂಸಾತ್ಮಕ ಪ್ರತಿಭಟನೆಗೆ ಪಿಎಫ್‌ಐ ಸಂಚು ಹೂಡಿದೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
7 ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ. ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಅಸ್ಸಾಂ, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಆಯಾ ರಾಜ್ಯ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು. ಪಿಎಫ್‌ಐ ಹಿಂಸಾತ್ಮಕ ಪ್ರತಿಭಟನೆಗಳನ್ನು ಆಯೋಜಿಸುತ್ತಿದೆ. ಎನ್‌ಐಎ, ಇಡಿ, ಪೊಲೀಸ್‌ ಅಧಿಕಾರಿಗಳು, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಪ್ರಮುಖ ಮುಖಂಡರ ಮೇಲೆ ದಾಳಿಗೆ ಪಿಎಫ್‌ಐ ಸಂಚು ನಡೆಸಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ಮಾಹಿತಿ ನೀಡಿದ್ದವು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

2. ರಾಜ್ಯದಲ್ಲೂ ಪಿಎಫ್‌ಐ ಪದಾಧಿಕಾರಿಗಳಿಗೆ ಪೊಲೀಸ್‌ ಶಾಕ್‌: ಎನ್‌ಐಎ ಸೂಚನೆ ಮೇರೆಗೆ ವಿಚಾರಣೆ
ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಾಂತ ಮಂಗಳವಾರ ಮುಂಜಾನೆ ಏಕಕಾಲಕ್ಕೆ ಪಿಎಫ್‌ಐ (PFI) ಸಂಘಟನೆಯ ಜಿಲ್ಲಾಧ್ಯಕ್ಷರು, ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಆಯಾ ಜಿಲ್ಲೆಯ ಸಮೀಪದ ತಹಸೀಲ್ದಾರ್‌ ಹಾಗೂ ದಂಡಾಧಿಕಾರಿಗಳ ಎದುರು ಹಾಜರುಪಡಿಸಿ ಮುಂಜಾಗ್ರತ ಕ್ರಮವಾಗಿ ಅನೇಕ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ರಾಜ್ಯಾದ್ಯಂತ ಪಿಎಫ್‌ಐ ಕಾರ್ಯಕರ್ತರ ವಿಚಾರಣೆ: ಯಾವ್ಯಾವ ರಾಜಕೀಯ ಮುಖಂಡರು ಏನೇನು ಹೇಳಿದರು?

3. Congress President | ಅಧ್ಯಕ್ಷ ರೇಸ್‌ನಿಂದ ಗೆಹ್ಲೋಟ್‌ ಔಟ್‌, ತರೂರ್‌, ಬನ್ಸಾಲ್‌ ಇನ್
ಪಕ್ಷದ ನಾಯಕತ್ವ ಬಿಕ್ಕಟ್ಟು ಶಮನಕ್ಕಾಗಿ ಕಾಂಗ್ರೆಸ್‌ ನೂತನ ಅಧ್ಯಕ್ಷರನ್ನು (Congress President) ಆಯ್ಕೆ ಮಾಡಲು ಚುನಾವಣೆ ನಡೆಸುವ ಮುನ್ನವೇ ಉಂಟಾದ ಬಿಕ್ಕಟ್ಟು ಬಗೆಹರಿಸುವಲ್ಲಿ ಕಾಂಗ್ರೆಸ್‌ ತಾತ್ಕಾಲಿಕವಾಗಿ ಸಫಲವಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ರೇಸ್‌ನಿಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಹಾಗೆಯೇ, ಶಶಿ ತರೂರ್‌ ಹಾಗೂ ಪವನ್‌ ಬನ್ಸಾಲ್‌ ಅವರು ನಾಮಪತ್ರಗಳನ್ನು ತೆಗೆದುಕೊಂಡಿದ್ದು, ಇವರಿಬ್ಬರೇ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. “ನಿಗದಿತ ವೇಳಾಪಟ್ಟಿಯಂತೆಯೇ ಚುನಾವಣೆ ನಡೆಯಲಿದೆ” ಎಂದು ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಚೇರ್ಮನ್‌ ಎಂ. ಮಿಸ್ತ್ರಿ ತಿಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Congress Crisis | ರಾಜಸ್ಥಾನದಲ್ಲಿ ಅವಧಿಪೂರ್ವ ಚುನಾವಣೆಗೆ ಸಿದ್ಧವಾಗುತ್ತಿರುವ ಬಿಜೆಪಿ!

4. Asha Parekh | ಬಾಲಿವುಡ್‌ನ ಸಾರ್ವಕಾಲಿಕ ಪ್ರಭಾವಿ ನಟಿ ಆಶಾ ಪಾರೇಖ್
ಆಶಾ ಪಾರೇಖ್(Asha Parekh). ಭಾರತೀಯ ಸಿನಿಮಾದ ಪ್ರಭಾವಿ ನಟಿ. 1960 ಮತ್ತು 70ರ ದಶಕದಲ್ಲಿ ಬಾಲಿವುಡ್‌ನಲ್ಲಿ ಅಕ್ಷರಶಃ ಮಿಂಚಿದ ಬೆಡಗಿ. ಆಗಿನ ಕಾಲಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಖ್ಯಾತಿ ಅವರದ್ದು. ಆಶಾ ಕೇವಲ ನಟಿಯಾಗಿ ಮಾತ್ರವಲ್ಲದೇ, ನಿರ್ದೇಶಕಿ, ನಿರ್ಮಾಪಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 20 ವರ್ಷಗಳ ಕಾಲ ಯಶಸ್ಸಿನ ಅಲೆಯಲ್ಲಿ ತೇಲಿದರು. ಹಿಂದಿ ಸಿನಿಮಾದ ಸಾರ್ವಕಾಲಿಕ ಪ್ರಭಾವಿ ನಟಿ ಅವರು. ಒಂದು ಪೀಳಿಗೆಯನ್ನು ಸಮ್ಮೋಹನಗೊಳಿಸಿದ ಆಶಾ ಪಾರೇಖ್ ಅವರಿಗೆ ಈಗ 2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ಭಾರತೀಯ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ಇದು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

5. ಎಲೆಕ್ಷನ್‌ ಹವಾ | ಮಂಗಳೂರು | ʼಖಾದರ್‌ʼ ಖಾನ್‌ದಾನ್‌ ಎದುರು ಬಿಜೆಪಿ ಭವಿಷ್ಯ ಮಂಕಾಗಿದೆ, ಪ್ರಯತ್ನ ಜಾರಿಯಲ್ಲಿದೆ
ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಪರಿಚಯದ ʼಎಲೆಕ್ಷನ್‌ ಹವಾʼ ಸರಣಿಯಲ್ಲಿ ಈಗಾಗಲೆ ಮಂಡ್ಯ, ಹುಬ್ಬಳ್ಳಿ-ಧಾರವಾಡ, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಮೀಕ್ಷೆ ನಂತರ ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಸರಣಿ ಆರಂಭ. ಮೊದಲಿಗೆ ʼಮಂಗಳೂರುʼ ವಿಧಾನಸಭಾ ಕ್ಷೇತ್ರದ ಸ್ಥಿತಿಗತಿ.
ಮಂಗಳೂರು ವಿಧಾನಸಭಾ ಕ್ಷೇತ್ರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಇರುವ ಏಕೈಕ ಭದ್ರ ಕೋಟೆ. ಮುಸ್ಲಿಮ್‌ ಮತಗಳೇ ಇಲ್ಲಿ ನಿರ್ಣಾಯಕವಾಗಿರುವ ಕಾರಣ ಕಳೆದ 14 ಚುನಾವಣೆಯಲ್ಲಿ 10 ಬಾರಿ ಮುಸ್ಲಿಂ ಅಭ್ಯರ್ಥಿಗೇ ಜಯವಾಗಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

6. ವಿಧಾನಸೌಧ | ಐವರು ಪದ್ಮ ಪ್ರಶಸ್ತಿ ಪುರಸ್ಕೃತರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪೌರ ಸನ್ಮಾನ
ಐವರು ಪದ್ಮ ಪ್ರಶಸ್ತಿ ಪುರಸ್ಕೃತರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿಧಾನಸೌಧದಲ್ಲಿ ಪೌರ ಸನ್ಮಾನ ನೆರವೇರಿಸಲಾಯಿತು. ಪದ್ಮಭೂಷಣ ಪುರಸ್ಕೃತರಾದ ಸಾಹಿತಿ ಚಂದ್ರಶೇಖರ ಕಂಬಾರ ಹಾಗೂ ಉದ್ಯಮಿ ಕಿರಣ್ ಮಜುಂದಾರ್ ಶಾ, ಪದ್ಮಶ್ರೀ ಪುರಸ್ಕೃತರಾದ ಮಧು ಪಂಡಿತ್ ದಾಸ್, ಪ್ರಕಾಶ್ ಪಡುಕೋಣೆ, ಜೋಗತಿ ಮಂಜಮ್ಮ ಅವರು ಗೌರವ ಸಲ್ಲಿಸಿದರು. ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರಿಗೆ ಪೌರಸನ್ಮಾನ ನಡೆಸಲಾಗಿದೆ.
ಸನ್ಮಾನದ ನಂತರ ಕನ್ನಡದಲ್ಲೇ ಮಾತುಗಳನ್ನಾರಂಭಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಕರ್ನಾಟಕ ನನಗೆ ಮೆಚ್ಚಿನ ರಾಜ್ಯ. ಬೆಂಗಳೂರು ಚಂದದ ಊರು, ಇಲ್ಲಿನ ಶಾಂತಿ ಪ್ರಿಯ ಜನರ ಬಗ್ಗೆ ಜಗತ್ತೇ ಕೊಂಡಾಡುತ್ತಿದೆ ಎಂದಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

7. Livestreame | ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಕಲಾಪ ಲೈವ್ ಸ್ಟ್ರೀಮ್, ನೀವು ನೋಡಬಹುದು!
ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಾಂವಿಧಾನಿಕ ಪೀಠದ ಕಲಾಪಗಳನ್ನು ಲೈವ್ ಸ್ಟ್ರೀಮಿಂಗ್ (Livestreame) ಮಾಡಲಾಗುತ್ತಿದೆ. ಇದು ನ್ಯಾಯಾಲಯದ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಆಗಿದೆ. ಶಿವಸೇನೆಯ ಪ್ರಕರಣವನ್ನು ಸಂವಿಧಾನ ಪೀಠವು ವಿಚಾರಣೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್‍ನ ಸಾಂವಿಧಾನಿಕ ಪೀಠ ಕಲಾಪವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
2018ರ ಸೆಪ್ಟೆಂಬರ್ 27ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಸಾಂವಿಧಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ಲೈವ್ ಟೆಲಿಕಾಸ್ಟ್ ಮ್ತತು ವೆಬ್‌ಕಾಸ್ಟ್‌ನ ಮಹತ್ವದ ಬಗ್ಗೆ ಪ್ರಮುಖ ತೀರ್ಪು ಪ್ರಕಟಿಸಿದ್ದರು. ಈಗ ಸುಪ್ರೀಂ ಕೋರ್ಟ್ ಲೈವ್ ಸ್ಟ್ರೀಮಿಂಗ್ ನಡೆಸುತ್ತಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

8. ಸಿದ್ದರಾಮಯ್ಯಗೆ ಸಿಎಂ ಗಾದಿ ತಪ್ಪಿದಾಗ ಕಣ್ಣೀರು ಹಾಕಿದ್ದು ದೇವೇಗೌಡರ ಮಗ!
2023ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಹಲವು ಲೆಕ್ಕಾಚಾರಗಳನ್ನು ಹಾಕಲು ಕಾರಣವಾಗಿದೆ. ಹೀಗಾಗಿ ಚುನಾವಣೆ ದೃಷ್ಟಿಯಿಂದ ಪ್ರತಿಯೊಂದು ಬೆಳವಣಿಗೆಗೂ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ನಡೆಯುತ್ತಿದೆ. ವಿಧಾನಸೌಧದ ಪಡಸಾಲೆ, ಮೊಗಸಾಲೆಗಳಲ್ಲಿ ಅನೇಕ ಬೆಳವಣಿಗೆಗಳು ನಡೆದವು. ಇವು ಒಂದಕ್ಕೊಂದು ವಿಭಿನ್ನವಾಗಿದ್ದರೂ, ಒಟ್ಟಾರೆ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದವು ಹಾಗೂ ಭವಿಷ್ಯದ ರಾಜಕಾರಣವನ್ನು ಪ್ರಭಾವಿಸಬಲ್ಲವು. ಇಂತಹ ಕೆಲ ಸೂಕ್ಷ್ಮ ಸಂಗತಿಗಳು ಇಲ್ಲಿವೆ.

9. ಟಿಪ್ಪು ಸುಲ್ತಾನ್‌ ಮೂಲ ಹೆಸರು ತಿಪ್ಪೇಸ್ವಾಮಿ! ಕಾಂಗ್ರೆಸ್ ರಾಜ್ಯಸಭೆ ಸದಸ್ಯ‌ ಜಿ.ಸಿ.ಚಂದ್ರಶೇಖರ್ ಹೇಳಿಕೆ
ಟಿಪ್ಪು ಸುಲ್ತಾನ್‌ ಮತಾಂಧತೆಯ ಬಗ್ಗೆ, ಆತನ ಒಳ್ಳೆಯತನದ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇದೆ. ಇದೀಗ ಆತನ ಮೂಲ ಹೆಸರಿನ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಟಿಪ್ಪು ಸುಲ್ತಾನ್‌ ಮೂಲ ಹೆಸರಿನ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ, ಟಿಪ್ಪು ಸುಲ್ತಾನ್‌ನ ಮೂಲ ಹೆಸರು ತಿಪ್ಪೇಸ್ವಾಮಿ. ತಿಪ್ಪೇಸ್ವಾಮಿಯ ವರಪ್ರಸಾದದಿಂದ ಟಿಪ್ಪುಸುಲ್ತಾನ್ ಜನಿಸಿದ್ದರು” ಎಂದಿದ್ದಾರೆ. ಈ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

10. Waqf Property | ಮುಂಬೈನಲ್ಲಿ ವಕ್ಫ್‌ ಆಸ್ತಿ ಕಬಳಿಸಿ ಮನೆ ನಿರ್ಮಿಸಿದರೇ ಅಂಬಾನಿ? ಕೇಜ್ರಿವಾಲ್‌ ಹೇಳಿದ್ದೇನು?
ವಕ್ಫ್‌ ಆಸ್ತಿ (Waqf Property) ಕಬಳಿಕೆ ಸೇರಿ ಹಲವು ವಿಷಯಗಳ ಕುರಿತು ಕರ್ನಾಟಕ, ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಚರ್ಚೆ, ವಿವಾದ ನಡೆಯುತ್ತಿರುವ ಬೆನ್ನಲ್ಲೇ “ಮುಂಬೈನಲ್ಲಿ ಮುಕೇಶ್‌ ಅಂಬಾನಿ ಅವರು ವಕ್ಫ್‌ ಆಸ್ತಿಯಲ್ಲಿ ಅಂಟಿಲಿಯಾ (Antilia) ಮನೆ ನಿರ್ಮಿಸಿಕೊಂಡಿದ್ದಾರೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗಂಭೀರ ಆರೋಪ ಮಾಡಿದ್ದಾರೆ.
ಮುಸ್ಲಿಮರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅರವಿಂದ ಕೇಜ್ರಿವಾಲ್‌ ಮಾತನಾಡಿರುವ ವಿಡಿಯೊ ವೈರಲ್‌ ಆಗಿದೆ. “ನಾವು ತನು ಮನ ಧನದೊಂದಿಗೆ ವಕ್ಫ್‌ ಬೋರ್ಡ್‌ ಜತೆಗಿದ್ದೇವೆ. ದೇಶದಲ್ಲೇ ಶ್ರೀಮಂತರೆನಿಸಿದ ವ್ಯಕ್ತಿಯೊಬ್ಬರ ಮನೆಯನ್ನು ಮುಂಬೈನಲ್ಲಿ ವಕ್ಫ್‌ ಬೋರ್ಡ್‌ ಆಸ್ತಿಯಲ್ಲಿ ನಿರ್ಮಿಸಲಾಗಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಾರಾಷ್ಟ್ರ ಸರ್ಕಾರಕ್ಕೆ ಧೈರ್ಯವಿಲ್ಲ. ನಮ್ಮ ಸರ್ಕಾರವೇನಾದರೂ ಅಲ್ಲಿದ್ದಿದ್ದರೆ ಕ್ರಮ ತೆಗೆದುಕೊಳ್ಳದೆ ಬಿಡುತ್ತಿರಲಿಲ್ಲ” ಎಂದು ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Exit mobile version