Site icon Vistara News

ವಿಸ್ತಾರ TOP 10 NEWS | SDPI ಮೇಲೆ ಆಯೋಗದ ಕಣ್ಣಿನಿಂದ ಭೂತಾನ್‌ ಅಡಕೆ ಆಮದಿಗೆ ಸಮ್ಮತಿವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 29092022

ಬೆಂಗಳೂರು: ಮಳೆ ಹನಿ ನಿಂತರೂ ಮರದ ಹನಿ ನಿಲ್ಲದು ಎಂಬಂತೆ, ಪಿಎಫ್‌ಐ ಬ್ಯಾನ್‌ ನಂತರ ಆ ಸಂಘಟನೆಗೆ ಸಂಬಂಧಿತ ಕಚೇರಿಗಳಿಗೆ ಬೀಗ, ನಾಯಕರ ಬಂಧನ ಮುಂದುವರಿದಿದೆ. ಪಿಎಫ್‌ಐನೊಂದಿಗೆ ಸಂಪರ್ಕ ಹೊಂದಿದ ಆರೋಪದಲ್ಲಿ ಎಸ್‌ಡಿಪಿಐ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ ಎನ್ನಲಾಗುತ್ತಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಆಯೋಜಿಸಿರುವ ಭಾರತ್‌ ಜೋಡೊ ಯಾತ್ರೆ ಚಾಮರಾಜನಗರ ಜಿಲ್ಲೆ ಮೂಲಕ ಶುಕ್ರವಾರ ಕರ್ನಾಟಕವನ್ನು ಪ್ರವೇಶಿಸಲಿದೆ. ಸಾರಿಗೆ ಇಲಾಖೆ ಎಚ್ಚರಿಕೆ ನಂತರವೂ ಖಾಸಗಿ ಬಸ್‌ಗಳು ದರವನ್ನು ಯದ್ವಾತದ್ವ ಹೆಚ್ಚಿಸಿವೆ, ಆಡಕೆ ಆಮದನ್ನು ನಿಷೇಧಿಸುವಂತೆ ಒತ್ತಾಯವಿದ್ದರೂ ಭೂತಾನ್‌ ಅಡಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ, ಗರ್ಭಪಾತದ ಕುರಿತು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆ ಮಹತ್ವದ ಘಟ್ಟ ಮುಟ್ಟಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. PFI banned | ಪಿಎಫ್‌ಐ ಆಯ್ತು, ಈಗ ಎಸ್‌ಡಿಪಿಐ ಮೇಲೆ ಚುನಾವಣಾ ಆಯೋಗ ಕಣ್ಣು?
ದೇಶವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಿದ ಬಳಿಕ, ಅದರ ರಾಜಕೀಯ ವಿಭಾಗವಾದ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ (SDPI) ಮೇಲೆ ಚುನಾವಣಾ ಆಯೋಗ ಹದ್ದಿನಗಣ್ಣು ಇಟ್ಟಿದೆ ಎಂದು ತಿಳಿದುಬಂದಿದೆ.
ಪಿಎಫ್‌ಐ ಹಾಗೂ ಅದರ ಜತೆ ನಿಕಟವಾಗಿರುವ ಹಲವು ಅಂಗಸಂಸ್ಥೆಗಳನ್ನು ನಿಷೇಧಿಸಿರುವ ಪ್ರಕಟಣೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಎಸ್‌ಡಿಪಿಐ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಎರಡೂ ಕಡೆ ಸಕ್ರಿಯವಾಗಿರುವ ಕಾರ್ಯಕರ್ತರ ಕಾನೂನುಪಾಲನಾ ಸಂಸ್ಥೆಗಳು ಕ್ರಮ ತೆಗೆದುಕೊಳ್ಳಲಿವೆ. ಈಗಾಗಲೇ ಹಲವು ಎಸ್‌ಡಿಪಿಐ ಕಾರ್ಯಕರ್ತರ ಮನೆ ಹಾಗೂ ಕಚೇರಿಗಳ ಮೇಲೂ ಪೊಲೀಸ್‌ ದಾಳಿ ನಡೆದಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

2. PFI Banned | ರಾಜ್ಯಾದ್ಯಂತ ಪಿಎಫ್‌ಐ ಕಚೇರಿಗಳಿಗೆ ಬೀಗ, ಜಿಲ್ಲೆಗಳಲ್ಲಿ ಹಲವು ನಾಯಕರಿಗಾಗಿ ಹುಡುಕಾಟ, ಮುಂದುವರಿದ ರಾಜಕೀಯ ಜಟಾಪಟಿ
ಪಾಪ್ಯುಲರ್‌ ಪ್ರಂಟ್‌ ಆಫ್‌ ಇಂಡಿಯಾ ಮತ್ತು ಅದರ ಎಂಟು ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿದ ಬೆನ್ನಿಗೇ ಅವುಗಳಿಗೆ ಸೇರಿದ ಕಚೇರಿಗಳಿಗೆ ಬೀಗ ಜಡಿಯುವ ಪ್ರಕ್ರಿಯೆ ವೇಗ ಪಡೆದಿದೆ. ಜತೆಗೆ ಹಲವಾರು ನಾಯಕರ ಬಂಧನವೂ ನಡೆದಿದೆ. ಈ ನಡುವೆ ಕೆಲವು ನಾಯಕರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ.
ಕೇಂದ್ರ ಸರ್ಕಾರದಿಂದ ಅಧಿಕೃತ ಸೂಚನೆಯನ್ನು ಪಡೆದಿರುವ ರಾಜ್ಯ ಪೊಲೀಸ್‌ ಇಲಾಖೆ ಈಗ ರಾಜ್ಯಾದ್ಯಂತ ಕಾರ್ಯಾಚರಣೆ ಚುರುಕುಗೊಳಿಸಿದೆ. ಬುಧವಾರ ಸಂಜೆಯಿಂದಲೇ ಆರಂಭಗೊಂಡಿದ್ದ ಕಚೇರಿ ಬಂದ್‌, ತಪಾಸಣೆ, ದಾಖಲೆ ಸಂಗ್ರಹ ಕಾರ್ಯಾಚರಣೆ ಗುರುವಾರ ಬೆಳಗ್ಗೆ ಮತ್ತಷ್ಟು ವೇಗ ಪಡೆಯಿತು. ಅದರಲ್ಲೂ ಬೆಂಗಳೂರಿನಲ್ಲಿ ಪ್ರಮುಖ ಕಚೇರಿಗಳಿಗೆ ಗುರುವಾರ ಸೀಲು ಹಾಕುವ ಮೂಲಕ ಕ್ರಮ ಕೈಗೊಳ್ಳಲಾಯಿತು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ರಾಜಕೀಯ ಜಟಾಪಟಿ: ಬಿ.ಕೆ. ಹರಿಪ್ರಸಾದ್‌ ಹಫ್ತಾ ವಸೂಲಿ ಗ್ಯಾಂಗ್‌ ಲೀಡರ್‌, ಕೊತ್ವಾಲ್‌ ರಾಮಚಂದ್ರನ ಶಿಷ್ಯ: ಸಿ.ಟಿ. ರವಿ ವಾಗ್ದಾಳಿ

3. ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಯ ಸ್ವಾಗತ ಫ್ಲೆಕ್ಸ್‌ ಹರಿದು ಹಾಕಿದ ಕಿಡಿಗೇಡಿಗಳು
ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆ ಸೆಪ್ಟೆಂಬರ್‌ ೩೦ರಂದು ಗುಂಡ್ಲುಪೇಟೆಯ ಮೂಲಕ ರಾಜ್ಯವನ್ನು ಪ್ರವೇಶ ಮಾಡಲಿದೆ. ಈ ಯಾತ್ರೆಯ ಸ್ವಾಗತಕ್ಕಾಗಿ ಹಾಕಲಾದ ಫ್ಲೆಕ್ಸ್‌ಗಳನ್ನು ಬುಧವಾರ ರಾತ್ರಿ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಇದರಿಂದಾಗಿ ಸಣ್ಣಮಟ್ಟಿನ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಬರುವ ರಾಹುಲ್‌ ಗಾಂಧಿ ಅವರಿಗೆ ಸ್ವಾಗತ ಕೋರಿದ ಫ್ಲೆಕ್ಸ್‌ಗಳು, ರಾಜ್ಯದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಬ್ಲೇಡ್‌ನಿಂದ ಗೀರಿ ಹರಿದು ಹಾಕಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಭಾರತ್‌ ಜೋಡೋ ಯಾತ್ರೆ | ಕೇರಳ, ಊಟಿ ಕಡೆಗೆ ಹೋಗುವವರು ಗಮನಿಸಿ, ಸಂಚಾರ ಮಾರ್ಗ ಬದಲಾಗಲಿದೆ

4. ಹಬ್ಬದ ವೇಳೆ ಟಿಕೆಟ್‌ ದರ ಹೆಚ್ಚಿಸಿದ್ರೆ ಹುಷಾರ್ ಎಂದ ಸಾರಿಗೆ ಇಲಾಖೆ‌, 30% ಏರಿಕೆಗೆ ಪಟ್ಟುಹಿಡಿದ ಖಾಸಗಿ ಬಸ್‌ ಮಾಲೀಕರು
ಪ್ರತಿ ಬಾರಿಯೂ ಹಬ್ಬಗಳು ಬಂತೆಂದರೆ ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಎರಡು, ಮೂರು, ಕೆಲವೊಮ್ಮೆ ನಾಲ್ಕು ಪಟ್ಟು ಹೆಚ್ಚಿಸುವುದು ಸಾಮಾನ್ಯವೇ ಆಗಿ ಬಿಟ್ಟಿದೆ. ಈ ಬಗ್ಗೆ ಸಾಲು ಸಾಲು ದೂರುಗಳು ಸಾರಿಗೆ ಇಲಾಖೆಗೆ ಬರುತ್ತಲೇ ಇವೆ. ಈ ಬಾರಿಯೂ ಅಂಥಹುದೇ ದೂರು ಬಂದ ಹಿನ್ನೆಲೆಯಲ್ಲಿ ಗುರುವಾರ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್‌ ಮಾಲೀಕರ ಜತೆ ಸಭೆ ನಡೆಸಿ ಹಬ್ಬದ ದಿನಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದರು. ಆದರೆ, ಖಾಸಗಿ ಬಸ್‌ ಮಾಲೀಕರು ಶೇಕಡಾ ೩೦ರಷ್ಟು ಹೆಚ್ಚಿಸಿಯೇ ಸಿದ್ಧ ಎಂದು ಹಠ ಹಿಡಿದಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

5. Navaratri 2022 | ಐದನೇ ದಿನ ಪೂಜಿಸಲ್ಪಡುವ ಸ್ಕಂದ ಮಾತೆ ಯಾರು? ಆಕೆಯನ್ನು ಏಕೆ ಪೂಜಿಸಬೇಕು?
ನವರಾತ್ರಿಯ (Navratri 2022) ಒಂಬತ್ತು ದಿನವೂ ದೇವಿಯ ಒಂದೊಂದು ರೂಪಕ್ಕೆ ಆರಾಧನೆ ನಡೆಯುತ್ತದೆ. ದೇವಿ ದುರ್ಗೆ ದುಷ್ಟರನ್ನು ಸಂಹಾರ ಮಾಡಿ ಶಿಷ್ಠರನ್ನು ಸಂರಕ್ಷಿಸಿದ ಮಾತೆ. ಸೃಷ್ಟಿಯ ರೂಪವೇ ಆಗಿರುವ ತಾಯಿಯನ್ನು ನಮ್ಮಲ್ಲಿನ ದುಷ್ಟ ಆಲೋಚನೆಗಳನ್ನು ಸಂಹರಿಸಿ, ಆಧ್ಯಾತ್ಮದ ದಾರಿಯಲ್ಲಿ ಮುನ್ನೆಡೆಸು ಎಂದು ಈ ನವರಾತ್ರಿಯ ಸಂದರ್ಭದಲ್ಲಿ ಪ್ರಾರ್ಥಿಸಲಾಗುತ್ತದೆ. ಐದನೇ ದಿನ ದೇವಿಯ ಯಾವ ಸ್ವರೂಪವನ್ನು ಪೂಜಿಸಬೇಕು?, ಯಾವ ವರ್ಣದ ವಸ್ತ್ರವನ್ನು ಧರಿಸಬೇಕು? ಎಂಬ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

6. ಭೂತಾನ್‌ನಿಂದ ಬರಲಿದೆ ಹಸಿ ಅಡಕೆ; 17 ಸಾವಿರ ಮೆಟ್ರಿಕ್‌ ಟನ್‌ ಆಮದಿಗೆ ಮುಕ್ತ ಅವಕಾಶ ನೀಡಿದ ಕೇಂದ್ರ
ಭೂತಾನ್‌ನಿಂದ ಪ್ರತಿ ವರ್ಷ 17 ಸಾವಿರ ಮೆಟ್ರಿಕ್‌ ಟನ್‌ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ಈ ಸಂಬಂಧ ಬುಧವಾರ ಅಧಿಸೂಚನೆ ಹೊರಡಿಸಿದೆ. ಅಡಕೆ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ದೇಶದ ಅಡಕೆ ಬೆಳೆಗಾರರು ಒತ್ತಾಯಿಸುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಆಶ್ಚರ್ಯ ಮೂಡಿಸಿದೆ.
ಕನಿಷ್ಠ ಆಮದು ಬೆಲೆಯ (ಎಂಐಸಿ) ಷರತ್ತು ಇಲ್ಲದೇ 17 ಸಾವಿರ ಮೆಟ್ರಿಕ್‌ ಟನ್‌ ಹಸಿ ಅಡಕೆಯನ್ನು ಮುಕ್ತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 2006ರಲ್ಲಿಜಾರಿಗೆ ಬಂದಿದ್ದ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ(ಸಫ್ಟಾ)ದ ಅಡಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

7. Airbags | ಕಾರುಗಳಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯಕ್ಕೆ ಗಡುವು 1 ವರ್ಷ ಮುಂದೂಡಿಕೆ
ಕಾರುಗಳಲ್ಲಿ 6 ಏರ್‌ ಬ್ಯಾಗ್‌ಗಳನ್ನು (Airbags ) ಕಡ್ಡಾಯವಾಗಿಸುವುದಕ್ಕೆ ಸಂಬಂಧಿಸಿದ ಗಡುವನ್ನು ಕೇಂದ್ರ ಸರ್ಕಾರ 1 ವರ್ಷ ಮುಂದೂಡಿದೆ.
ಹೊಸ ಗಡುವಿನ ಪ್ರಕಾರ 2023ರ ಅಕ್ಟೋಬರ್‌ 1 ರಿಂದ ಕಾರುಗಳಲ್ಲಿ 6 ಏರ್‌ ಬ್ಯಾಗ್‌ ಕಡ್ಡಾಯವಾಗಲಿದೆ. ಈ ಹಿಂದೆ 2022ರ ಅಕ್ಟೋಬರ್‌ 1ರ ಗಡುವನ್ನು ವಿಧಿಸಲಾಗಿತ್ತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆಯ ಸಚಿವ ನಿತಿನ್‌ ಗಡ್ಕರಿ ಅವರು ಗುರುವಾರ ಈ ನಿರ್ಧಾರವನ್ನು ಘೋಷಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

8. Legal Abortion | ವಿವಾಹಿತರಿಗೂ ಸುರಕ್ಷಿತ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್‌ ಐತಿಹಾಸಿಕ ಆದೇಶ
ಗರ್ಭಪಾತದ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ವಿವಾಹಿತೆಯರು ಮಾತ್ರವಲ್ಲ, ಎಲ್ಲ ಅವಿವಾಹಿತೆಯರು ಸಹ ಸುರಕ್ಷತೆ ಹಾಗೂ ಕಾನೂನಿನ ಅಡಿಯಲ್ಲಿ (Legal Abortion) ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಮಹಿಳೆಯ ಗರ್ಭಪಾತಕ್ಕೆ ಆಕೆಯು ವಿವಾಹಿತೆಯೋ, ಅಲ್ಲವೋ ಎಂಬುದು ಅಡ್ಡಿಯಾಗಬಾರದು ಎಂದೂ ಆದೇಶ ಹೊರಡಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

9. BPL card | ಇರೋದು ಸರ್ಕಾರಿ ಅಧಿಕಾರ, ತಿನ್ನೋದು ಬಿಪಿಎಲ್‌ ಆಹಾರ; ಈಗ ಇಲಾಖೆಯಿಂದ ₹36 ಲಕ್ಷ ದಂಡ ಪ್ರಹಾರ
ಸರ್ಕಾರಿ ಕೆಲಸ ಇದ್ದರೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬವೆಂದು ತಪ್ಪು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಪಡೆದುಕೊಂಡು ಬಡವರ ಅಕ್ಕಿ ಸೇರಿದಂತೆ ಪಡಿತರ ವ್ಯವಸ್ಥೆಯ ಸಂಪೂರ್ಣ ಫಲವನ್ನು ಉಂಡಿದ್ದ ಸರ್ಕಾರಿ ನೌಕರರಿಗೆ ಆಹಾರ ಇಲಾಖೆ ಅಧಿಕಾರಿಗಳು (BPL card) ದಂಡ ಪ್ರಯೋಗ ಮಾಡಿದ್ದಾರೆ.
ಸರ್ಕಾರವು ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ನೈಜ ಫಲಾನುಭವಿಗಳನ್ನು ಬಿಟ್ಟು ಬೇರೆಯವರ ಪಾಲಾಗುತ್ತಿವೆ. ಕೆಲವು ಸರ್ಕಾರಿ ನೌಕರರು ಬಡವರು ಎಂದು ಸುಳ್ಳು ದಾಖಲೆಯನ್ನು ನೀಡಿ ಪಡಿತರ ಚೀಟಿಯನ್ನು ಪಡೆದುಕೊಂಡಿದ್ದರು. ಬಳಿಕ ರೇಷನ್‌ ಕಾರ್ಡ್‌ ಮೂಲಕ ಪಡಿತರವನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದರು. ಸೂಕ್ತ ಮಾಹಿತಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಕಲೆ ಹಾಕಿ ನೌಕರರಿಂದ 36.73 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

10. Congress President | ಅಧ್ಯಕ್ಷ ಸ್ಥಾನಕ್ಕೆ ದಿಗ್ವಿಜಯ್‌ ಸಿಂಗ್‌ ಸ್ಪರ್ಧೆ ಖಚಿತ, ರಂಗೇರಿದ ಚುನಾವಣೆ ಕಣ
ಆಂತರಿಕ ಬಿಕ್ಕಟ್ಟು, ರಾಜಸ್ಥಾನದಲ್ಲಿ ಬಂಡಾಯ ಸೇರಿ ಹಲವು ನಕಾರಾತ್ಮಕ ಅಂಶಗಳ ಮಧ್ಯೆಯೇ ಕಾಂಗ್ರೆಸ್‌ ನೂತನ ಅಧ್ಯಕ್ಷರ ಆಯ್ಕೆಗೆ ನಡೆಯಲಿರುವ ಚುನಾವಣೆಯು (Congress President) ರಂಗೇರುತ್ತಿದೆ. ಪಕ್ಷದ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಸ್ಪರ್ಧೆ ಖಚಿತವಾಗಿದ್ದು, ಶಶಿ ತರೂರ್‌ ಅವರಿಗೆ ತೀವ್ರ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಹಾಗಾಗಿ, ಅಕ್ಟೋಬರ್‌ ೧೭ರಂದು ನಡೆಯುವ ಚುನಾವಣೆಯು ಕುತೂಹಲ ಮೂಡಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಸೋನಿಯಾ ಕ್ಷಮೆ ಕೋರಿದ ಗೆಹ್ಲೋಟ್, ಎಐಸಿಸಿ ಅಧ್ಯಕ್ಷ ಎಲೆಕ್ಷನ್‌ನಿಂದ ಔಟ್

Exit mobile version